‘ಮನೋಬಲ ಹೆಚ್ಚಿಸಿಕೊಳ್ಳುವ ಮದ್ದು ವಚನ ಸಾಹಿತ್ಯದಲ್ಲಿದೆ’

ಶಹಾಪುರ:

ಧರ್ಮ, ಸಮಾಜ, ರಾಷ್ಟ್ರ ಉಳಿಯಬೇಕಾದರೆ ಅದರ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕು. ಕಲೆ, ಸಾಹಿತ್ಯ, ವೈಚಾರಿಕತೆ, ವೈಜ್ಞಾನಿಕ ಮನೋಭಾವದ ದಟ್ಟ ಛಾಯೆ ೧೨ನೆಯ ಶತಮಾನದ ಶರಣರ ಬದುಕು ಮತ್ತು ಬೋಧನೆಗಳಲ್ಲಿ ಇವೆ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಬಿರಾದಾರ ಹೇಳಿದರು.

ನಗರದ ಬಸವಮಾರ್ಗ ಪ್ರತಿಷ್ಠಾನ ಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರ ನೆನಹಿನಲ್ಲಿ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು – ೧೩೫ ರ ಕಾರ್ಯಕ್ರಮದಲ್ಲಿ ಶರಣ ತತ್ವಗಳ ಅವಶ್ಯಕತೆ ಎಂಬ ವಿಷಯ ಕುರಿತು ಮಾತನಾಡಿದರು.

ಯುವ ಜನತೆ ಇಂದು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಸರಿಯಾದ ಮಾರ್ಗದರ್ಶನವಿಲ್ಲದೆ ಉಡಾಳರ ಬೆನ್ನು ಬಿದ್ದಿದ್ದಾರೆ. ಹಲವಾರು ತಂತ್ರಜ್ಞಾನದ ಗೀಳುಗಳು ಅವರಿಗೆ ಅಂಟಿಕೊಂಡಿವೆ. ೧೨ನೇ ಶತಮಾನದ ಶರಣರ ವಚನಗಳ ಸ್ಪರ್ಶ ಯುವ ಜನತೆಗೆ ದೊರಕಿದರೆ ಅವರೆಲ್ಲ ತಾತ್ವಿಕವಾದ ಬದುಕು ಮತ್ತು ಆರೋಗ್ಯ ಕಟ್ಟಿಕೊಳ್ಳಲು ಸಾಧ್ಯವಿದೆ.

ಚಂದ್ರ ಬಲ, ತಾರಾ ಬಲಕ್ಕಿಂತ ಮುಖ್ಯ ಮನೋಬಲವನ್ನು ಹೆಚ್ಚು ಮಾಡಿಕೊಳ್ಳುವುದು ಇದಕ್ಕೆಲ್ಲ ಮದ್ದು, ಆ ಮದ್ದು ವಚನ ಸಾಹಿತ್ಯದಲ್ಲಿ ಇದೆ.

ವಚನ ಸಾಹಿತ್ಯ ಜ್ಞಾನದ ಆಗರ. ವಚನ ಸಾಹಿತ್ಯದ ಸ್ಪರ್ಶವಾದರೆ ಪಾಶಾಣವೂ ಪರುಷವಾಗಿ ಪರಿವರ್ತಿತವಾಗುತ್ತದೆ. ಮಕ್ಕಳನ್ನು ಲಕ್ಷಗಟ್ಟಲೆ ಖರ್ಚು ಮಾಡಿ ಶಿಕ್ಷಣ ಕೊಡಿಸುತ್ತೇವೆ. ಆದರೆ ಅವರಿಗೆ ಸಂಸ್ಕಾರ ನೀಡುವುದಿಲ್ಲ ಎಂದು ವಿಷಾಧಿಸಿದರು.

ಮುಂದುವರೆದು ಮಾತನಾಡಿದ ಅವರು, ವಿಜ್ಞಾನ ಮತ್ತು ಆಧ್ಯಾತ್ಮ ಜೊತೆಗೂಡಿ ಹೋಗದಿದ್ದರೆ ಆಧ್ಯಾತ್ಮದ ಹೆಸರಿನಲ್ಲಿ ಮೌಢ್ಯ ಸೇರಿಕೊಳ್ಳುತ್ತವೆ. ಧರ್ಮ ಶೋಷಣೆಗೆ ಕಾರಣವಾಗುತ್ತದೆ ಎಂದವರು ಎಚ್ಚರಿಸಿದರು.

ಪ್ರತಿಯೊಬ್ಬರ ಮನೆ ಎಲ್ಲಾ ರೀತಿಯಿಂದ ಅಭಿವೃದ್ಧಿ ಹೊಂದಬೇಕಾದರೆ ವಚನ ಸಾಹಿತ್ಯದ ಓದು ಅನಿವಾರ್ಯ ಎಂದವರು ವಿವರಿಸಿದರು.

ಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕದ ಬರುಡು ನೆಲದಲ್ಲಿ ಶಿಕ್ಷಣವೆಂಬ ಹಸಿರನ್ನು ಹೊರ ಹೊಮ್ಮಿಸಿದ್ದಾರೆ. ಆದ್ದರಿಂದಲೆ ನಮ್ಮ ಭಾಗದ ಜನಗಳು ಡಾಕ್ಟರ್, ಇಂಜನೀಯರ, ಸಾಹಿತಿಗಳು, ರಾಜಕಾರಣಿಗಳು, ಸಮಾಜ ಚಿಂತಕರು ಆಗಲು ಸಾಧ್ಯವಾಗಿದೆ.

ವಿದ್ಯೆ ಮಾತ್ರ ನಮ್ಮನ್ನು ಎಲ್ಲಾ ಶೋಷಣೆಗಳಿಂದ ಮುಕ್ತ ಮಾಡುತ್ತದೆ ಎಂದು ಪೂಜ್ಯರು ಅರಿತ್ತಿದ್ದರಿಂದಲೇ ಶಿಕ್ಷಣಕ್ಕೆ ಮಹತ್ವ ನೀಡಿದರು. ಸಣ್ಣದಾಗಿ ಆರಂಭವಾದ ಶಾಲಾ ಕಾಲೇಜು ವಿಶ್ವ ವಿದ್ಯಾಲಯ ಮಟ್ಟಕ್ಕೆ ಬೆಳೆಸಿದ್ದು ಅವರ ಪರಿಶ್ರಮದ ದ್ಯೂತಕವಾಗಿದೆ ಎಂದು ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮತ್ತೋರ್ವ ಅತಿಥಿ ಡಾ. ಗಂಗಾಧರ ಚಟ್ರಿಕಿ ಮಾತನಾಡಿ, ಜನರ ಮನದ ಮೈಲಿಗೆ ತೊಳೆಯಲು ಬಸವಮಾರ್ಗ ಪ್ರತಿಷ್ಠಾನ ಅಹರ್ನಿಶಿ ಶ್ರಮಿಸುತ್ತಿದೆ. ಜನರ ಮನದ ಗೋಡೆಗೆ ಅಂಟಿದ ಅಂಧಕಾರವನ್ನು ಶರಣ ವಿಚಾರಧಾರೆ ತಿಳಿಸುವ ಮೂಲಕ ಜಾಗೃತಿಯನ್ನುಂಟು ಮಾಡುತ್ತಿದೆ ಎಂದರು.

ಕಲ್ಯಾಣ ಕರ್ನಾಟಕದ ಹಾಸ್ಯ ಕಲಾವಿದ ಬಸವರಾಜ ಮಹಾಮನೆ ಮಾತನಾಡಿ, ಮನುಷ್ಯನಿಗೆ ವಿವೇಕ, ಚಿಂತನೆ ಜೊತೆಗೆ ಆರೋಗ್ಯವೂ ಮುಖ್ಯ. ಮುಕ್ತವಾದ ನಗು ನಮ್ಮೆಲ್ಲರ ಬಿಗುಮಾನಗಳನ್ನು ಕಿತ್ತು ಎಸೆಯುತ್ತದೆ ಎಂದು ಹಲವಾರು ಪ್ರಸಂಗಗಳನ್ನು ಹೇಳಿ, ನೆರೆದ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.

ಆರಂಭದಲ್ಲಿ ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಚೆನ್ನಮಲ್ಲಿಕಾರ್ಜುನ ಗುಂಡಾನೋರ ಮತ್ತು ಫಜಲುದ್ದೀನ ಖಾಜಿ ಕೆಂಭಾವಿ ಪ್ರಾರ್ಥನೆ ಮಾಡಿದರು. ಶೀಲಾದೇವಿ ಓಂಪ್ರಕಾಶ ಮಂಚಲ್ ಸಭೆಯನ್ನು ಉದ್ಘಾಟಿಸಿದರು. ಕೊನೆಯಲ್ಲಿ ಲಕ್ಷಣ ಲಾಳಸಂಗಿ ಶರಣು ಸಮರ್ಪಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ಮನೋಹರ ಅಲಬನೂರ, ಲಿಂಗಣ್ಣ ಯಡ್ರಾಮಿ, ಸಾಲೋಮನ್ ಆಲಫ್ರೆಡ್, ಸುರೇಶ ಅರುಣಿ, ಮರೆಪ್ಪ ಅಣಬಿ, ಶಂಕ್ರಪ್ಪ ನಿವೃತ್ತ ಅಂಚೆ ಅಧಿಕಾರಿ, ಸಂಗಮೇಶ ಬುಚ್ಚಿನ, ಡಾ. ಬಸವರಾಜ ಇಜೇರಿ, ಡಾ. ಗುರುರಾಜ ಹರನೂರ, ಆನೇಗುಂದಿ ಸಿದ್ದಲಿಂಗಪ್ಪ, ಬಸವರಾಜ ಅರುಣಿ, ಬಸವರಾಜ ಹಾದಿಮನಿ, ದೇವಿಂದ್ರ ಮೇಟಿ, ಡಾ. ಬಸವರಾಜ ಹಾದಿಮನಿ, ರೇಖಾ ಹಾದಿಮನಿ, ಸಿದ್ದರಾಮ ಹೊನ್ಕಲ್ ಹಾಗೂ ಡಿ. ದೇವರಾಜ ಅರಸು ಕಾಲೇಜಿನ ನೂರಾರು ಮಕ್ಕಳು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *