ಡಾ.ಕೆ.ಎಸ್. ಬಂಧು ಅವರಿಗೆ ಡಾ. ಬಸವಲಿಂಗ ಪಟ್ಟದ್ದೇವರು ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ:

ಇಲ್ಲಿನ ಶ್ರೀ ಚನ್ನಬಸವಾಶ್ರಮದಲ್ಲಿ ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನ, ಭಾಲ್ಕಿ ವತಿಯಿಂದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಸಾನಿಧ್ಯ ವಹಿಸಿ ಬಾ. ಬಸವಲಿಂಗ ಪಟ್ಟದ್ದೇವರು ಮಾತನಾಡುತ್ತ, ವಿಶ್ವಗುರು ಬಸವಣ್ಣನವರು ಸಮಸಮಾಜ ನಿರ್ಮಾಣ ಮಾಡಿದರು. ಎಲ್ಲರನ್ನು ತಮ್ಮ ಹೃದಯದಲ್ಲಿ ಇಂಬಿಟ್ಟುಕೊಂಡರು. ‘ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ’ ಎಂದು ಎಲ್ಲಾ ಜನಾಂಗದವರನ್ನು ಪ್ರೀತಿಸಿದರು.

ಬಸವಣ್ಣನವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಕ್ಷರಶಃ ಪಾಲಿಸುತ್ತ ಬಂದಿರುವವರು ಡಾ.ಕೆ.ಎಸ್. ಬಂಧು ಅವರು. ನಡೆ-ನುಡಿ ಒಂದಾಗಿಸಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

 ‘ಸದುವಿನಯವೇ ಸದಾಶಿವನ ಒಲುಮೆ’ ಎಂಬ ಅಪ್ಪ ಗುರುಬಸವಣ್ಣನವರ ವಚನದಂತೆ ಅವರ ಜೀವನವಾಗಿದೆ. ಅವರಲ್ಲಿ ತಾಯಿ ಹೃದಯ ಅಡಗಿದೆ. ಶರಣಧರ್ಮದಲ್ಲಿ ತನ್ನ ತಾನು ತಗ್ಗಿಸಿಕೊಳ್ಳುವುದು

ಅತ್ಯಂತ ಮುಖ್ಯವಾದ ಗುಣವಾಗಿದೆ. ಎದುರಿಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಶಿವನ ಸ್ವರೂಪವೆಂದು ಕಂಡು ಗೌರವಿಸುವುದೇ ನಿಜವಾದ ಸದುವಿನಯ. ಅಂತಹ ಸದುವಿನಯವನ್ನು ಚಾಚೂ ತಪ್ಪದೇ ಪಾಲಿಸುತ್ತಿರುವ ಡಾ.ಕೆ.ಎಸ್. ಬಂಧು ಅವರಿಗೆ ಪ್ರಸಕ್ತ ಸಾಲಿನ ಪ್ರಶಸ್ತಿ ದೊರೆತಿರುವುದು ನಮಗೆ ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ ಎಂದು ಆಶೀರ್ವಚನ ನೀಡಿದರು.

ಸಮ್ಮುಖ ವಹಿಸಿದ ಪೂಜ್ಯ ಗುರುಬಸವ ಪಟ್ಟದ್ದೇವರು, ಬುದ್ಧನ ಅಷ್ಟಾಂಗ ಮಾರ್ಗ, ಬಸವಣ್ಣನವರ ಕಾಯಕ ತತ್ವ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಈ ಮೂರು ಮಹನೀಯ‌ರ ತತ್ವಾದರ್ಶಗಳನ್ನು ನಾವು ಡಾ.ಕೆ.ಎಸ್. ಬಂಧು ಅವರಲ್ಲಿ ಕಾಣುತ್ತೇವೆ.

ನಡೆ-ನುಡಿ ಒಂದಾಗಿಸಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ನುಡಿದಂತೆ ನಡೆಯುತ್ತಾರೆ. ಅಂತಹ ಮಹನೀಯರಿಗೆ ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನದ ವತಿಯಿಂದ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ ನೀಡಿರುವುದು ನಮಗೆ ಸಂತಸ ತಂದಿದೆ ಎಂದು ನುಡಿದರು.

ಬೀದರ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಬಿ.ಎಸ್. ಬಿರಾದಾರ ಅವರು ಡಾ.ಕೆ.ಎಸ್. ಬಂಧು ಅವರಿಗೆ ಡಾ. ಬಸವಲಿಂಗ ಪಟ್ಟದ್ದೇವರು ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ಬಂಧು ಅವರು, ಪೂಜ್ಯರ ಆಶೀರ್ವಾದದ ಶಕ್ತಿಯಿಂದ ಇವತ್ತು ನಾನು ಆರೋಗ್ಯವಾಗಿದ್ದು, ಈ ಪ್ರಶಸ್ತಿ ಪಡೆದುಕೊಳ್ಳಲು ಅರ್ಹನಾಗಿದ್ದೇನೆ. ಇದಕ್ಕೆಲ್ಲ ಕಾರಣ ಪೂಜ್ಯರ ಆಶೀರ್ವಾದ ಎಂದು ನುಡಿದರು.

ಅಧ್ಯಕ್ಷತೆಯನ್ನು ಎಂ. ಬಂಡೆಪ್ಪ ಅವರು ವಹಿಸಿಕೊಂಡಿದ್ದರು. ಟಿ.ಎಂ.ಭಾಸ್ಕರ್ ವಿಶ್ರಾಂತ ಕುಲಪತಿಗಳು, ಜಾನಪದ ವಿಶ್ವವಿದ್ಯಾಲಯ, ಶಿಗ್ಗಾವಿ, ಜೈರಾಜ ಖಂಡ್ರೆ, ಬಸವರಾಜ ನಂದಿ, ಡಾ. ಗವಿಸಿದ್ಧಪ್ಪ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು.

ಬಸವಗುರುಪೂಜೆ ಸ್ವರೂಪಾ ಬಂಡೆಪ್ಪ ಬಳತೆ ಅವರಿಂದ ನಡೆಯಿತು. ಪ್ರಾಸ್ತಾವಿಕವಾಗಿ ಡಾ. ಮಕ್ತುಂಬಿ ಮಾತನಾಡಿದರು. ಅನುಭವಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿ ದೀಕ್ಷಾ ತಂದೆ ಸಂತೋಷ ಅವರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜೀವನ ದರ್ಶನ ಮಾಡಿಕೊಟ್ಟರು. ದೀಪಕ ಠಮಕೆ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *