ಚಿತ್ರದುರ್ಗ:
ಶಿಕ್ಷಣ, ಕನ್ನಡ ಭಾಷೆ, ಸಾಮಾಜಿಕ ಸಮಾನತೆ, ಬಸವತತ್ವ ಹಾಗೂ ಕರ್ನಾಟಕ ಏಕೀಕರಣ – ಈ ಎಲ್ಲ ಕ್ಷೇತ್ರಗಳಲ್ಲಿ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರು ಸಲ್ಲಿಸಿದ ಸೇವೆ ಅನನ್ಯ ಮತ್ತು ಚಿರಸ್ಮರಣೀಯ.
ಕನ್ನಡದ ಉಳಿವಿಗಾಗಿ ನಿಜಾಮನ ಆಡಳಿತದ ನಿರ್ಬಂಧಗಳ ನಡುವೆಯೂ ಶಿಕ್ಷಣದ ಮೂಲಕ ಹೋರಾಡಿದ ಅವರು, ತಮ್ಮ ಬದುಕಿನ ಮೂಲಕವೇ ಬಸವತತ್ವವನ್ನು ಸಾಕಾರಗೊಳಿಸಿದ ಮಹಾನ್ ಶರಣರಾಗಿದ್ದಾರೆ ಎಂದು ಡಾ. ಜಿ.ವಿ. ಮಂಜುನಾಥ ಅವರು ಅಭಿಪ್ರಾಯಪಟ್ಟರು.

ನಗರದ ಮುರುಘಾಮಠದಲ್ಲಿ ಶುಕ್ರವಾರ ನಡೆದ “ಅನುಭಾವ ಶ್ರಾವಣ ಶರಣ ಚಿಂತನ”ಮಾಲಿಕೆಯಲ್ಲಿ ಅವರು ಉಪನ್ಯಾಸ ನೀಡಿದರು.
ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರು 1936ರಲ್ಲಿಯೇ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ನಾರಾಯಣಖೇಡ ತಾಲೂಕಿನ ಮೊರ್ಗಿ ಗ್ರಾಮದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು.
ಶಿಕ್ಷಣ ಸಂಸ್ಥೆಯನ್ನು ನಡೆಸಲು ಪ್ರಸಾದ ನಿಲಯವನ್ನೂ ಆರಂಭಿಸಿ, ಮುಷ್ಟಿ ಫಂಡ್ನ ನೆರವಿನಿಂದ ಶಾಲೆ ಮತ್ತು ಪ್ರಸಾದ ನಿಲಯವನ್ನು ಸುಸೂತ್ರವಾಗಿ ನಡೆಸಿದರು. ಬಳಿಕ ಭಾಲ್ಕಿ ಹಾಗೂ ಬೀದರನಲ್ಲಿಯೂ ಶಾಲಾ-ಕಾಲೇಜುಗಳನ್ನು ಆರಂಭಿಸಿ, ಅವುಗಳಿಗೆ ಸಿದ್ಧರಾಮೇಶ್ವರರು, ಅಕ್ಕಮಹಾದೇವಿಯಂತಹ ಶರಣರ ಹೆಸರುಗಳನ್ನು ಇಟ್ಟಿದ್ದು ಅವರ ಶರಣತತ್ವದ ಬದ್ಧತೆಗೆ ಸಾಕ್ಷಿಯಾಗಿದೆ.
ಪಟ್ಟದ್ದೇವರು ಬಿತ್ತಿದ ಈ ಶಿಕ್ಷಣದ ಬೀಜ ಇಂದು ಭೀಮಣ್ಣ ಖಂಡ್ರೆ ಹಾಗೂ ಅವರ ಕುಟುಂಬದವರ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆದು, ಅನೇಕ ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನಪ್ರಸಾರ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಅಂದಿನ ಹೈದರಾಬಾದಿನ ನಿಜಾಮನ ಆಳ್ವಿಕೆಯಲ್ಲಿ ಈ ಭಾಗದಲ್ಲಿ ಕನ್ನಡ ಕಲಿಸುವುದೇ ಅಪರಾಧವಾಗಿದ್ದರೂ, ಪಟ್ಟದ್ದೇವರು ಕನ್ನಡದ ಉಳಿವಿಗಾಗಿ ಧೈರ್ಯದಿಂದ ಹೋರಾಡಿದರು. ಶಾಲೆಯ ಹೊರಗೆ ಉರ್ದು ನಾಮಫಲಕ ಅಳವಡಿಸಿ, ಒಳಗೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡದ ಜ್ಯೋತಿಯನ್ನು ಬೆಳಗಿಸಿದರು. ಹೀಗಾಗಿ ಅವರು “ಕನ್ನಡದ ಪಟ್ಟದ್ದೇವರು”ಎಂದೇ ಖ್ಯಾತರಾದರು.
ಕನ್ನಡ ಭಾಷೆಯ ಮೇಲಿನ ಅವರ ಪ್ರೀತಿ ಕೇವಲ ಅಭಿಮಾನವಾಗಿರದೆ, ಕನ್ನಡಿಗರ ಅಸ್ಮಿತೆಯ ರಕ್ಷಣೆಯ ಹೋರಾಟವಾಗಿತ್ತು. ಪಟ್ಟದ್ದೇವರ ಬಸವತತ್ವದ ಆಚರಣೆಯೂ ಅನುಕರಣೀಯವಾಗಿತ್ತು.
ಹಿಂದಿನ ತೆಲಂಗಾಣ ರಾಜ್ಯದ ನಾರಾಯಣಖೇಡ ತಾಲೂಕಿನ ನಾಗೂರು ಗ್ರಾಮದ ಹನುಮಾನ್ ದೇವಾಲಯದಲ್ಲಿ ನಡೆದ ಶಿವಾನುಭವ ಗೋಷ್ಠಿಯ ಸಂದರ್ಭದಲ್ಲಿ ಎಲ್ಲರೂ ಪ್ರಸಾದ ಸ್ವೀಕರಿಸಿದರೂ, ದಲಿತರು ಮಾತ್ರ ಮುಂದೆ ಬರಲು ಹಿಂದೇಟು ಹಾಕಿದರು. ಆಗ ಪಟ್ಟದ್ದೇವರು, “ನೀವು ಬಂದು ಪ್ರಸಾದ ಸ್ವೀಕರಿಸದೆ ಹೋದರೆ ನಾನು ಇಲ್ಲಿಂದ ಕದಲುವುದಿಲ್ಲ”ಎಂದು ದೃಢವಾಗಿ ನಿಂತರು. ಕೊನೆಗೆ ದಲಿತರೆಲ್ಲರೂ ಬಂದು ದೇವಾಲಯದ ಜಗಲಿ ಕಟ್ಟೆಯ ಮೇಲೆ ಕುಳಿತಿದ್ದ ಪೂಜ್ಯರಿಂದ ಪ್ರಸಾದ ಸ್ವೀಕರಿಸಿದರು. ಇದರಿಂದ ಕೆಲ ಮೇಲ್ವರ್ಗದವರು ಅಸಮಾಧಾನಗೊಂಡಾಗ, ಪಟ್ಟದ್ದೇವರು ಅಣ್ಣನವರ “ಇವನಾರವ, ಇವನಾರವ…” ಎಂಬ ವಚನದ ಆಶಯವನ್ನು ತಿಳಿಸಿ, ಬಸವತತ್ವದ ನಿಜವಾದ ಅರ್ಥವನ್ನು ಮನವರಿಕೆ ಮಾಡಿಕೊಟ್ಟರು.
ಅಷ್ಟೇ ಅಲ್ಲದೆ, ಪೂಜಾ ಕೊಠಡಿಯ ಸೇವಾ ಕಾರ್ಯಗಳಲ್ಲಿಯೂ ದಲಿತರನ್ನು ಒಳಗೊಳ್ಳಿಸುವ ಮೂಲಕ ಸಮಾನತೆ, ಸಹೋದರತ್ವ ಮತ್ತು ಕಾಯಕದ ಬಸವತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರು.
ಕರ್ನಾಟಕ ಏಕೀಕರಣದ ಹೋರಾಟದಲ್ಲಿಯೂ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ಪಾತ್ರ ಮಹತ್ವದ್ದಾಗಿದೆ. ಸಂಯುಕ್ತ ಕರ್ನಾಟಕ ಸಂಘವನ್ನು ರಚಿಸಿ, ಭೀಮಣ್ಣ ಖಂಡ್ರೆ ಮತ್ತು ಸಿದ್ದಲಿಂಗಪ್ಪ ಕಾಕನಡೆ ಅವರ ನೇತೃತ್ವದಲ್ಲಿ ಅಖಂಡ ಬೀದರ ಜಿಲ್ಲೆ ಕರ್ನಾಟಕದಲ್ಲಿಯೇ ಉಳಿಯಬೇಕೆಂಬ ಹೋರಾಟಕ್ಕೆ ಅವರು ಬಲ ತುಂಬಿದರು.

ಅಂದಿನ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಅಖಂಡ ಬೀದರ ಜಿಲ್ಲೆಯ ಕೆಲವು ಭಾಗಗಳು ಮಾತ್ರ ಕರ್ನಾಟಕದಲ್ಲಿ ಉಳಿದರೂ, ಅವು ಕರ್ನಾಟಕದೊಂದಿಗೆ ಉಳಿಯಲು ಪಟ್ಟದ್ದೇವರು ಸೇರಿದಂತೆ ಹೋರಾಟಗಾರರು ನಡೆಸಿದ ನಿರಂತರ ಪ್ರಯತ್ನವನ್ನು ಮರೆಯಲಾಗದು.
ಮುರುಘಾ ಮಠದ ಖಾಸಾ ಶಾಖಾ ಮಠವಾದ ಗುರುಮಠಕಲ್ನ ಪೂಜ್ಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಶ್ರೀಮಠದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತಿರುವುದರ ಹಿಂದೆ ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳವರ ಪರಿಶ್ರಮ ಮತ್ತು ಕಾಳಜಿ ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
ಬೇರೆ ಬೇರೆ ಮಠಗಳ ಪೂಜ್ಯ ಸ್ವಾಮೀಜಿಗಳವರ ಸ್ಮರಣೆ ಹಾಗೂ ಅವರ ವಿಚಾರಧಾರೆಗಳನ್ನು ಇಲ್ಲಿ ಸ್ಮರಿಸುತ್ತಿರುವುದು ಮುರುಘಾಮಠದ ವೈಶಿಷ್ಟ್ಯವಾಗಿದೆ; ಇಂತಹ ಪರಂಪರೆ ಬಹುಶಃ ಮುರುಘಾಮಠದಲ್ಲಿ ಮಾತ್ರ ಕಂಡುಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪೂಜ್ಯ ಬಸವ ಮುರುಘೇಂದ್ರ ಸ್ವಾಮಿಗಳವರು, ಹೊಳಲ್ಕೆರೆಯ ಒಂಟಿ ಕಂಬದ ಮುರುಘಾಮಠದ ಪೂಜ್ಯ ತಿಪ್ಪೇರುದ್ರ ಸ್ವಾಮಿಗಳವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
