ಕೊಪ್ಪಳ ಜಿಲ್ಲೆ ಬಸವಶಕ್ತಿ ಶಿಬಿರ: ಎರಡನೇ ದಿನದ ವರದಿ
ತಾವರಗೇರಾ
ಎರಡನೆಯ ದಿನದ ಬಸವ ಶಕ್ತಿ ಶಿಬಿರದಲ್ಲಿ ಬಸವ ಸಂಘಟನೆಗಳ ಸಾಮಾಜಿಕ ಬಾಧ್ಯತೆ, ರಾಜಕೀಯ ಪ್ರಜ್ಞೆ ಹಾಗೂ ನೂತನ ಅನುಭವ ಮಂಟಪಗಳ ಬಗ್ಗೆ ಮಹತ್ವಪೂರ್ಣ ಚರ್ಚೆ ನಡೆಯಿತು.
‘ನಾಡು, ನುಡಿಗೆ ಬಸವ ಸಂಘಟನೆಗಳು ಸ್ಪಂದಿಸಲಿ’ ವಿಷಯದ ಮೇಲೆ ಚರ್ಚೆ ಆರಂಭಿಸಿದ ಕೊಪ್ಪಳದ ಹಣಮೇಶ ಕಲ್ಮಂಗಿ ಬಸವಭಕ್ತರು ಲಿಂಗಪೂಜೆಗೆ ಕೊಡುವ ಆದ್ಯತೆಯನ್ನು ಸಮಾಜದ ಒಳಿತಿಗೆ ದುಡಿಯಲೂ ಕೊಡಬೇಕೆಂದು ಕರೆ ನೀಡಿದರು.
ಕನ್ನಡ ಲಿಂಗಾಯತರ ಮಾತೃ ಹಾಗೂ ಧರ್ಮ ಭಾಷೆ. ಇಂದು ಕನ್ನಡಕ್ಕೆ ಹಲವಾರು ಆತಂಕಗಳು ಎದುರಾಗಿದ್ದರೂ ಕೆಲವು ಕನ್ನಡ ಸಂಘಟನೆಗಳು ಮಾತ್ರ ಭಾಷೆಗಾಗಿ ಹೋರಾಡುತ್ತಿವೆ. ಇವರ ಜೊತೆ ಬಸವ ಸಂಘಟನೆಗಳು ಕಡ್ಡಾಯವಾಗಿ ಕೈಜೋಡಿಸಿ, ಹೋರಾಡಬೇಕು.

ಹಾಗೆಯೆ ಇಂದು ಸಂವಿಧಾನ, ಪ್ರಜಾಪ್ರಭುತ್ವ ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ. ಪ್ರಜಾಪ್ರಭುತ್ವ ದುರ್ಬಲವಾದರೆ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಎಂದು ಬಸವ ಸಂಘಟನೆಗಳು ಅರಿಯಬೇಕು.
ಕೋಮುವಾದ ವಿರೋಧಿಸಿ, ಸಮಾಜದಲ್ಲಿ ಸಾಮರಸ್ಯ ಮೂಡಿಸುವುದೂ ಬಸವ ಸಂಘನೆಗಳ ಕರ್ತವ್ಯ, ಎಂದು ಹೇಳಿದರು.
ಪ್ರಜಾಪ್ರಭುತ್ವ ದುರ್ಬಲವಾದರೆ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ
ಚರ್ಚೆಯನ್ನು ವಿಸ್ತರಿಸಿದ ಅಮರೇಶಪ್ಪ ಗಡಿಹಳ್ಳಿ ಅವರು ಬಸವಶಕ್ತಿಗೆ ಅರ್ಥ ಬರಬೇಕಾದರೆ ಬಸವ ಸಂಘಟನೆಗಳು ನಾಡು, ನುಡಿಗೆ ಸ್ಪಂದಿಸಬೇಕು.
ಕನ್ನಡವನ್ನು ಶ್ರೀಮಂತಗೊಳಿಸಲು ಬಸವಾದಿ ಶರಣರು ಶ್ರಮಿಸಿದರು. ಆ ಕೆಲಸವನ್ನು ಬಸವ ಸಂಘಟನೆಗಳು ಮುಂದುವರೆಸಬೇಕು.

ಇಂದು ಕನ್ನಡ ರಾಜ್ಯೋತ್ಸವವನ್ನು ಶಾಲಾ, ಕಾಲೇಜುಗಳು, ಕನ್ನಡ ಸಂಘಟನೆಗಳು ಆಚರಿಸುತ್ತಿವೆ. ಬಸವ ಸಂಘಟನೆಗಳು ಕನ್ನಡ ರಾಜ್ಯೋತ್ಸವವನ್ನು ಬಸವ ಜಯಂತಿಯಷ್ಟೇ ಸಂಭ್ರಮದಿಂದ ಆಚರಿಸಬೇಕು, ಎಂದು ಹೇಳಿದರು.
ಧಾರವಾಡದ ಸಿ ಜಿ ಪಾಟೀಲ ಬಸವ ಸಂಘಟನೆಗಳಿಗೆ ರಾಜಕೀಯ ಪ್ರಜ್ಞೆ, ಪ್ರಭಾವ ವಿಷಯದ ಚರ್ಚೆ ಆರಂಭಿಸಿದರು.
ಬಸವ ಸಂಘಟನೆಗಳಿಗೆ ಅಂಚಿನ, ಮುಂಚಿನ ರಾಜಕೀಯ ಎರಡೂ ಅಗತ್ಯವಿದೆ. ಅಂಚಿನ ರಾಜಕೀಯವೆಂದರೆ ಬೂತ್ ಮಟ್ಟದಲ್ಲಿ ಕನಿಷ್ಠ 5-10% ಮತಗಳನ್ನು ಕ್ರೋಡೀಕರಿಸುವುದು. ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲು ಈ ಕೆಲಸ ಮಾಡುವುದು ಅನಿವಾರ್ಯ.

ಮುಂಚಿನ ರಾಜಕೀಯವೆಂದರೆ ಚುನಾವಣೆ ನಂತರವೂ ಅಧಿಕಾರಸ್ಥರ ಸಂಪರ್ಕದಲ್ಲಿದ್ದುಕೊಂಡು ಅವರ ಮೇಲೆ ಒತ್ತಡ ತರುವಂತಹ ಕೆಲಸ ಮಾಡುವುದು. ಈ ಕೆಲಸ ಸರಿಯಾಗಿ ಮಾಡಿದ್ದರೆ ಡಿ. ಕೆ. ಶಿವಕುಮಾರ್ ಪದೇ ಪದೇ ಪಂಚಪೀಠಗಳ ಕ್ಷಮೆ ಕೇಳುತ್ತಿರಲಿಲ್ಲ, ಎಂದು ಹೇಳಿದರು.
ಚರ್ಚೆಯನ್ನು ವಿಸ್ತರಿಸಿದ ಗದಗದ ಬಸು ಸೂಳಿಭಾವಿ ತಡವಾಗಿಯಾದರೂ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆಯ ಬಗ್ಗೆ ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ರಾಜಕೀಯ ಪ್ರಜ್ಞೆಯ ವಿವಿಧ ಆಯಾಮಗಳ ಬಗ್ಗೆ ವಿವರಿಸುತ್ತಾ ಯುವಕರಲ್ಲಿ ಬಸವ ಪ್ರಜ್ಞೆ ಜಾಗೃತವಾದರೆ ಆರೆಸ್ಸೆಸ್ ಅನ್ನು ಎಲ್ಲಿಡಬೇಕೋ ಅಲ್ಲಿಡಬಹುದೆಂದು ಹೇಳಿದರು.

ಬಸವಶಕ್ತಿ ಕಾರ್ಯಕ್ರಮವಾಗಿ ನಡೆದ ಅನುಭವ ಮಂಟಪ ಜಾಗೃತಿ ಶಿಬಿರದಲ್ಲಿ ಕೊಪ್ಪಳದ ರಾಜೇಶ ಸಸಿಮಠ ಹಾಗೂ ಗದಗದ ಅಶೋಕ ಬರಗುಂಡಿ ಮಾತನಾಡಿದರು.
ಬಸವಣ್ಣ ಒಂಬತ್ತು ವರ್ಷ ಶ್ರಮದಿಂದ ಕಟ್ಟಿದ ಅನುಭವ ಮಂಟಪ ಉಳಿಸಿಕೊಳ್ಳುವ ಜವಾಬ್ದಾರಿ ನಾಡಿನ ಬಸವ ಅನುಯಾಯಿಗಳ ಮೇಲಿದೆ, ಎಂದು ರಾಜೇಶ ಸಸಿಮಠ ಹೇಳಿದರು.

ಮುಂದಿನ ವರ್ಷ ಲೋಕಾರ್ಪಣೆಯಾಗುವ ನೂತನ ಅನುಭವ ಮಂಟಪದ ನಿರ್ವಹಣೆಯನ್ನು ಸರಕಾರದ ಮೇಲೆ ಬಿಟ್ಟರೆ ಏನಾಗುವುದೆಂದು ಕೂಡಲಸಂಗಮ ನೋಡಿ ಕಲಿಯಬೇಕು. ಅಲ್ಲಿ 22 ವರ್ಷಗಳಿಂದ ಬಸವ ಸಂಶೋಧನಾ ಕೇಂದ್ರದಲ್ಲಿ ಒಂದೂ ಕಾರ್ಯಕ್ರಮ ನಡೆದಿಲ್ಲ. ಸಿಖ್ಖರು ತಮ್ಮ ಸುವರ್ಣಮಂದಿರವನ್ನು ನಿರ್ವಹಿಸುತ್ತಿರುವ ರೀತಿಯನ್ನು ಬಸವಾನುಯಾಯಿಗಳು ಅನುಸರಿಸಬೇಕೆಂದು.
ನೂತನ ಅನುಭವ ಮಂಟಪದ ನಿರ್ವಹಣೆಗಾಗಿ ಹಳ್ಳಿ ಹಳ್ಳಿಗಳಲ್ಲಿ ಸ್ವಯಂಸೇವಕರ ಪಡೆ ಕಟ್ಟಬೇಕು. 365 ಸಂಘಟನೆಗಳನ್ನು ಗುರುತಿಸಿ ವರ್ಷದಲ್ಲಿ ಒಂದೊಂದು ದಿನ ಒಂದೊಂದು ಸಂಘಟನೆಗೆ ನಿರ್ವಹಣೆಯ ಜವಾಬ್ದಾರಿ ಕೊಡಬೇಕೆಂದು ಹೇಳಿದರು.

ಅನುಭವ ಮಂಟಪವನ್ನು ಸೈದ್ಧಾಂತಿಕವಾಗಿ ಸಂರಕ್ಷಿಸಿಕೊಳ್ಳುವ ಬಗ್ಗೆಯೂ ಗಮನ ಕೊಡಬೇಕು.
“ನೂತನ ಅನುಭವ ಮಂಟಪದ ಮೇಲೆ ಬಸವಭಕ್ತರು ಕಣ್ಣು ಬಿಟ್ಟರೆ ಆನಂದ. ವೈದಿಕರು ಕೆಂಗಣ್ಣು ಬಿಟ್ಟರೆ ಗೋವಿಂದ, ಎಂದು ರಾಜೇಶ ಸಸಿಮಠ ಹೇಳಿದರು.
ನಂತರ ಮಾತನಾಡಿದ ಅಶೋಕ ಬರಗುಂಡಿ ಅವರು ನೂತನ ಅನುಭವ ಮಂಟಪದ ಹಿನ್ನಲೆ, ಗೊರುಚ ಸಮಿತಿಯ ಶಿಫಾರಸು, ಕಟ್ಟಡದ ಸ್ವರೂಪ, ಯೋಜನೆಯ ಮಹತ್ವವನ್ನು ವಿವರವಾಗಿ ತಿಳಿಸಿದರು.


ಕಾರ್ಯಕ್ರಮದಲ್ಲಿ ಜೆಎಲ್ಎಂನ ಎಸ್ ಎಂ ಜಾಮದಾರ್ ಬರೆದಿರುವ, ಗೊರುಚ ಅವರ ಪ್ರಸ್ತಾವನೆವಿರುವ ‘ನೂತನ ಅನುಭವ ಮಂಟಪ – ಸ್ಥಾವರವಾಗದೆ ಜಂಗಮವಾಗಲಿ’ ಪುಸ್ತಕ ಲೋಕಾರ್ಪಣೆಯಾಯಿತು.

ಬೇಗ ಜಾಗ್ರತ್ತರಾಗೀ ಮುಂದೆ ನಡೆಯರಿ