ಅನುಭಾವ ಶ್ರಾವಣ: ಶರಣರ ಚಿಂತನ ಮಾಲಿಕೆ
ಚಿತ್ರದುರ್ಗ:
೧೨ನೇ ಶತಮಾನದ ಅನುಭವ ಮಂಟಪವು ಚರ್ಚೆಯ ಜಾಗ ಅಷ್ಟೇ ಅಲ್ಲ ಅದು ಬದುಕನ್ನು ಕಲಿಸುವ ಪಾಠಶಾಲೆಯಾಗಿತ್ತು.
ಕಾಯಕ ಮಾಡಿದ ಕೈಗಳು ಪವಿತ್ರವಾಗಲಿ, ದಾಸೋಹ ಮಾಡಿದ ಹೃದಯಗಳು ಶ್ರೀಮಂತವಾಗಲಿ, ಸತ್ಯ ಮಾತನಾಡಿದ ನಾಲಿಗೆ ಪಾವನವಾಗಲಿ, ಮಾನವೀಯತೆಯಿಂದ ಬದುಕಿದ ಜೀವನ ಸಾರ್ಥಕವಾಗಲಿ ಎನ್ನುವ ಸಂದೇಶವನ್ನು ಸಾರುತ್ತ ಶರಣರ ತತ್ವಾದರ್ಶಗಳನ್ನು ಮನೆಮನೆಗೆ ತಲುಪಿಸಲು ಕಲಬುರ್ಗಿ ಶರಣಬಸವೇಶ್ವರರು ಕಾರ್ಯನಿರ್ವಹಿಸಿದರೆಂದು ಉಪನ್ಯಾಸಕ ಡಾ. ಶಿವಣ್ಣ ಕಟ್ಟೆಮನೆ ಹೇಳಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವೇಶ್ವರ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯಲ್ಲಿ ಕಲಬುರ್ಗಿ ಶರಣಬಸವೇಶ್ವರರ ಕುರಿತು ಮಾತನಾಡುತ್ತಿದ್ದರು.
ಕಲಬುರ್ಗಿ ಶರಣಬಸವೇಶ್ವರರು ಕ್ರಿ.ಶ. ೧೭೪೬ರಲ್ಲಿ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ಅರಳಗುಂಡಗಿ ಗ್ರಾಮದಲ್ಲಿ ತಂದೆ ಮಲಕಪ್ಪಾ, ತಾಯಿ ಸಂಗಮ್ಮ ಅವರ ಮಗನಾಗಿ ಜನಿಸಿದರು. ಇವರು ಬಾಲ್ಯದಲ್ಲಿ ಗುರುಗಳು ಕಲಿಸಿದ ಎಲ್ಲಾ ವಿದ್ಯೆಗಳನ್ನು ಚೆನ್ನಾಗಿ ಕಲಿತರು. ಮರುಳಸಿದ್ದ ದೇವರ ಕಡೆಯಿಂದ ದೀಕ್ಷೆ ಪಡೆದು ಲಿಂಗಾಯತ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು.
ಬ್ರಿಟೀಷರು ಮತ್ತು ಶ್ರೀಮಂತರು ಜನಸಾಮಾನ್ಯರ ಮೇಲೆ ಜೀತಪದ್ಧತಿಯನ್ನು ಮಾಡುತ್ತಿದ್ದರು. ಬ್ರಿಟೀಷರ ಶಿಕ್ಷಣದಿಂದ ವಂಚಿತರಾದ ಬಸಪ್ಪನವರು ೨೦೦ ವಚನಗಳನ್ನು ರಚಿಸಿ ಕಲಬುರ್ಗಿ ಜಿಲ್ಲೆ ಸುತ್ತ ಬರಿಗಾಲಿನಲ್ಲಿ ಓಡಾಡಿಕೊಂಡು ಬಸವತತ್ವ ಮತ್ತು ವಚನಗಳನ್ನು, ಪುರಾಣ ಪ್ರವಚನವನ್ನು ಜನರಿಗೆ ತಿಳಿಸುತ್ತ, ಶಿಕ್ಷಣ, ಜ್ಞಾನ ಪಡೆಯಲು, ಮೂಢನಂಬಿಕೆ, ಕಂದಾಚಾರ ಕೂಪದಿಂದ ಹೊರಬರಲು ಪ್ರೇರಣೆ ನೀಡಿದರು.
ಹಸಿದವರಿಗೆ ಅನ್ನದಾಸೋಹ, ಲಿಂಗಾಯತ ಸಂಸ್ಥೆಯ ಮೂಲಕ ಶಿಕ್ಷಣ ಜ್ಞಾನ, ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಸೇವೆಯ ಮೂಲಕ ಸತ್ಯ, ಧರ್ಮ, ಭಕ್ತಿಯಿಂದ ಸರಳ ಜೀವನ ನಡೆಸುತ್ತ ಸಮಾಜದಲ್ಲಿದ್ದ ಮೌಢ್ಯ ಕಂದಾಚಾರದ ವಿರುದ್ಧ ಜಾಗೃತಿ ಮೂಡಿಸಿದ್ದು ಕಲಬುರ್ಗಿ ಶರಣಬಸವೇಶ್ವರರ ಸಾಧನೆಯಾಗಿದೆ ಎಂದು ಹೇಳಿದರು.

ಅವಿಭಕ್ತ ಕುಟುಂಬದಿಂದ ನೊಂದು ತನಗೆ ಬಂದ ಕರಕಿ ಹೊಲ ಅಂದರೆ ಬರಡು ಭೂಮಿಯನ್ನು ಹದಮಾಡಿ, ಬಿತ್ತಿ ಬೆಳೆದು ತನ್ನ ಪತ್ನಿ ಮಹಾದೇವಮ್ಮ ಮತ್ತು ಶಿಷ್ಯರಾದ ದೊಡ್ಡಪ್ಪಗೌಡರು ಸೇರಿ ಹಸಿವು ನರಕಕ್ಕಿಂತ ಕೆಟ್ಟದು ಎಂದು ತಿಳಿದು ಅನ್ನ ಮತ್ತು ಜ್ಞಾನದ ದಾಹ ನೀಗಿಸಿದ ಬಡವರ ಸೂರ‍್ಯ ಕಲಬುರ್ಗಿ ಬಸಪ್ಪನವರು.
ತನ್ನ ಹೊಲದಲ್ಲಿ ಜೋಳವನ್ನು ಬಿತ್ತಿ ಪ್ರಾಣಿ, ಪಕ್ಷಿಗಳು ತಿನ್ನಲು ಹಾಗೆ ಬಿಡುತ್ತಿದ್ದರು. ಕುಡಿಯಲು ನೀರಿನ ಕಟ್ಟೆಯನ್ನು ಕಟ್ಟಿಸಿ ಪ್ರಾಣಿಪಕ್ಷಿಗಳ ಉಳಿವಿಗಾಗಿ ಸಾಕ್ಷಿಯಾದರು. ಬಸಪ್ಪ ಸ್ವಾಮಿಯವರು ಸ್ವಾರ್ಥ ಮನೋಭಾವವಿಲ್ಲದೆ ತನ್ನ ಶಿಷ್ಯನಾದ ದೊಡ್ಡಪ್ಪಗೌಡರನ್ನು ಸಮನಾಗಿ ಕಾಣುತ್ತಿದ್ದರು.
ಇಂದಿಗೂ ಕಲ್ಬುರ್ಗಿ ಶರಣಬಸವೇಶ್ವರ ದೇವಸ್ಥಾನದಲ್ಲಿ ಗುರುಶಿಷ್ಯರ ವಿಗ್ರಹ ಎರಡು ತಲೆ ಒಂದೇ ದೇಹದಲ್ಲಿರುವುದನ್ನು ಕಾಣಬಹುದಾಗಿದೆ. ಕ್ರಿ.ಶ. ೧೮೨೨ರಲ್ಲಿ ಅವರು ಲಿಂಗೈಕ್ಯರಾದರು. ಅವರ ನೆನಪಿಗೆ ರಥೋತ್ಸವ ಜಾತ್ರೆ ಪ್ರತಿವರ್ಷ ನಡೆಯುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಾನಾಮಡುಗು ಶರಣಾರ್ಯರ ಬಗೆಗೆ ವಿಷಯಾವಲೋಕನ ಮಾಡಿದ ಸ್ಥಳೀಯ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರೂ ಆದ ಕೆ.ಎಂ. ವೀರೇಶ ಅವರು, ಕಲಬುರ್ಗಿ ಶರಣಬಸವೇಶ್ವರರಂತೆ ದಾಸೋಹದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದವರಾಗಿದ್ದಾರೆ. ಇವರು ಸುಮಾರು ೧೭ನೇ ಶತಮಾನದವರೆಂದು ತುಮಕೂರು ಜಿಲ್ಲೆಯ ಸಿದ್ಧರಬೆಟ್ಟದಿಂದ ಚಿತ್ರದುರ್ಗಕ್ಕೆ ಬಂದು ಆಗಿನ ಮುರುಘಾ ಪರಂಪರೆಯ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳವರ ಕೃಪಾದೃಷ್ಟಿಗೆ ಬಿದ್ದು, ಅವರ ಆಧ್ಯಾತ್ಮ ಸಾಧನೆಯನ್ನು ನೋಡಿ ಶಿಷ್ಯರಾಗಿ ನಂತರ ಅವರಿಂದ ಲಿಂಗದೀಕ್ಷೆಯನ್ನು ಪಡೆದು ನಂತರ ಹಿಂದಿನ ಬಳ್ಳಾರಿ ಜಿಲ್ಲೆಯ ಈಗಿನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಆಸುಪಾಸಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಜನರಿಗೆ ಆಧ್ಯಾತ್ಮದ ಕುರಿತಾದ ಬಸವಾದಿ ಶಿವಶರಣರ ಮೌಲ್ಯಗಳನ್ನು ಪ್ರಚಾರ ಮಾಡುತ್ತ ಸಾಗುತ್ತಿರುತ್ತಾರೆ.
ತಮ್ಮ ಜೀವಿತದ ಅಂತ್ಯಕಾಲದಲ್ಲಿ ಈಗಿನ ಕಾನಮಡುಗಿನಲ್ಲಿ ಲಿಂಗೈಕ್ಯರಾಗುತ್ತಾರೆ. ಅಂದು ಶರಣಾರ್ಯರು ಕಂತೆಭಿಕ್ಷೆ ಮಾಡಿ ಭಕ್ತರಿಗೆ ದೇಹದ ಹಸಿವನ್ನು ಇಂಗಿಸುವ ಕೆಲಸ ಮಾಡುತ್ತಾರೆ. ಈ ದಾಸೋಹವನ್ನು ಅಲ್ಲಿ ಕೆಲವರು ಯಾವುದೇ ಕಾಯಕ ಮಾಡದೆ ಪ್ರಸಾದವನ್ನು ಊಟ ಮಾಡಿ ಹೋಗುತ್ತಿರುತ್ತಾರೆ. ಆದರೆ ಅವರ ಹೊಲದಲ್ಲಿ ಬಿತ್ತಿದ ಬೆಳೆಗಳು ತೆನೆಯಾಗಿ ಇನ್ನೇನು ಕಟಾವು ಮಾಡುವ ಸಂದರ್ಭಕ್ಕೆ ಒಣಗಿ ಹೋಗುತ್ತಿದ್ದವಂತೆ. ಹೀಗಾಗುತ್ತಿರುವುದಕ್ಕೆ ಕಾರಣ ಕೇಳಲು ಶರಣಾರ್ಯರ ಬಳಿ ಭಕ್ತರು ಬಂದಾಗ ನೀವುಗಳು ಯಾವುದೇ ಬೆವರು ಸುರಿಸಿ ದುಡಿದು ಉಣ್ಣುವ ಬದಲು ಹೀಗೆ ಶರಣಪ್ಪನ ಮಠಕ್ಕೆ ಬಂದು ಊಟ ಮಾಡುತ್ತಿರುವುದಕ್ಕೆ ಈ ರೀತಿಯಾಗುತ್ತಿರಬಹುದೆಂಬ ಶರಣರ ಮಾತಿಗೆ ಮನ್ನಣೆ ನೀಡಿದ ಜನರು ಮುಂದೆ ತಾವು ಬೆಳೆದ ಯಾವುದೇ ದವಸ ಧಾನ್ಯವನ್ನು ೫ ಮೊರದಷ್ಟನ್ನು ಶರಣಪ್ಪನ ಮಠಕ್ಕೆ ಅರ್ಪಿಸುವುದನ್ನು ರೂಢಿ ಮಾಡಿಕೊಂಡ ಮೇಲೆ ಬೆಳೆ ಹಾನಿಯಾಗುವುದು ತಪ್ಪಿದ ಉದಾಹರಣೆ ಅಂದರೆ ಯಾರೂ ಸಹ ದುಡಿಯದೇ ತಿಂದರೆ ಅದು ಸಾರ್ಥಕ್ಯವಾಗುವುದಿಲ್ಲ ಎನ್ನುವ ತತ್ವ ಅಡಗಿದೆ.
ಒಮ್ಮೆ ಪ್ರಸಾದ ನಡೆದಿರುತ್ತದೆ. ಆ ಮಠದಲ್ಲಿ ಪ್ರತಿಯೊಬ್ಬರಿಗೂ ತುಪ್ಪ ನೀಡುವ ವಾಡಿಕೆ. ಅಂದಿನ ಪಂಕ್ತಿಗೆ ತುಪ್ಪ ಕಡಿಮೆಯಾಯಿತೆಂಬ ಸುದ್ದಿ ತಿಳಿಯುತ್ತದೆ. ಚಡಪಡಿಸಿದಂತೆ ಆತಂಕಕ್ಕೆ ಒಳಗಾದಂತೆ ಕಂಡುಬಂದ ಅವರು, ಅಗೋ ನೋಡಿರಿ ಆ ಬಾವಿಯಲ್ಲಿ ತುಪ್ಪ ಇದೆ ತುಂಬಿಕೊಂಡು ತಗಂಡು ಬನ್ನಿ ಎನ್ನುತ್ತಾರೆ. ಭಕ್ತರು ಬಕೆಟ್‌ನಲ್ಲಿ ತುಂಬುತ್ತಾರೆ. ಅದು ತುಪ್ಪವೇ ಆಗಿತ್ತು ಎನ್ನುವ ಪ್ರತೀತಿಯೂ ಜನರ ಬಾಯಲ್ಲಿದೆ ಎನ್ನುವ ಐತಿಹ್ಯವನ್ನು ನೆನೆದರು.
ಹೀಗೆ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮಾನಸಕ್ಕೆ ತಿಳಿಸುತ್ತ ಸಾಗುತ್ತಿರುತ್ತಾರೆ. ನಂತರ ಬಂದ ಶ್ರೀಗಳವರು ಮೂಲ ಶರಣಾರ್ಯರ ತತ್ವಾದರ್ಶಗಳನ್ನು ಬಿತ್ತುತ್ತ ಸಾಗಿ ೨ನೇ ಪೀಠಾಧಿಪತಿಗಳ ಕಾಲಕ್ಕೆ ದಾಸೋಹದ ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಇದರಿಂದಾಗಿ ಆ ಭಾಗದಲ್ಲಿ ಶೇ. ೧೦೦ಕ್ಕೆ ೯೦ಷ್ಟು ಜನ ಪ್ರತಿ ಮನೆಗಳಲ್ಲಿ ಒಬ್ಬಿಬ್ಬರು ಸರ್ಕಾರಿ ಇಲ್ಲವೆ ಅನುದಾನಿತ ಶಾಲೆಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ.
ಅಲ್ಲಿ ಅಧ್ಯಯನ ಮಾಡಿದ ಹೆಸರಾಂತ ವಕೀಲರು, ಸಾಹಿತಿಗಳೂ ಆದ ಕೋ. ಚೆನ್ನಬಸಪ್ಪ, ಸಾಹಿತಿ ವೃಷಭೇಂದ್ರಸ್ವಾಮಿ ಮತ್ತಿತರ ಅನೇಕರು ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡಿದ್ದಾರೆಂದು, ಅವರ ಇನ್ನೊಂದು ಶಾಖೆ ಜಗಳೂರು ತಾಲ್ಲೂಕು ದೊಣೆಹಳ್ಳಿಯಲ್ಲಿಯೂ ಇವರ ತೋರುಗದ್ದುಗೆ ಇದೆ ಎಂಬಿತ್ಯಾದಿ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಅನೇಕ ಧರ್ಮಗಳಿವೆ. ಆ ಧರ್ಮಗಳ ನಿಯಮಗಳನ್ನು ಯಥಾವತ್ತಾಗಿ ಅನುಸರಿಸುತ್ತಾರೆಯೋ ಎಂದು ಪ್ರಶ್ನಿಸಿದ ಶ್ರೀಗಳು, ನಮಗೆ ಬಸವಾದಿ ಶಿವಶರಣರ ಮಾರ್ಗ ಆಚರಣೆಗೆ ಅತ್ಯಂತ ಸುಲಭಮಾರ್ಗ. ಅವರ ತತ್ವಗಳಲ್ಲಿ ಸಂವಿಧಾನ ತತ್ವಗಳಿವೆ. ಅವುಗಳ ಅನುಸರಣೆ ಅಗತ್ಯ. ಬುದ್ಧ ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಜಾಗತಿಕ ಮೌಲ್ಯಗಳನ್ನು ನೀಡಿದ್ದಾರೆಂದರು.
ಸಮಾರಂಭದ ಸಮ್ಮುಖ ವಹಿಸಿದ್ದ ಮತ್ತೋರ್ವ ಶ್ರೀಗಳಾದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಕಲಬುರ್ಗಿ ಹಾಗೂ ಕಾನಾಮಡುಗು ಶರಣರು ಮಾನವೀಯ ಹಿನ್ನೆಲೆಯಲ್ಲಿ ಈ ನಾಡಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಆ ದಾಸೋಹ ಭಾವ ಅನುಕರಣೀಯ ಎಂದರು.
ಹೊಳಲ್ಕೆರೆಯ ಶ್ರೀ ತಿಪ್ಪೇರುದ್ರ ಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸಂಘಟನೆ ಸಮಾಜಗಳ ಪದಾಧಿಕಾರಿಗಳಾದ ಗಾಯತ್ರಿ ಶಿವರಾಂ, ಡಾ. ಯಶೋದರ, ಡಾ. ರವಿಕುಮಾರ, ಕಸವನಹಳ್ಳಿ ಶಿವಣ್ಣ, ಬಸವರಾಜ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಎಸ್.ಜೆ.ಎಂ. ಐಟಿಐ ಹಾಗೂ ಎಸ್.ಜೆ.ಎಂ. ಚಿತ್ರಕಲಾ ಶಾಲೆಯವರ ನಿರ್ವಹಣೆಯಲ್ಲಿ ನಡೆದ ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ, ಈರ್ವರ ಶರಣರ ಗೀತೆಗಳನ್ನು ಹಾಡಿದರು. ಪ್ರಾಚಾರ್ಯ ಬೋರೇಶ ಸ್ವಾಗತಿಸಿದರು. ಮತ್ತೋರ್ವ ಪ್ರಾಚಾರ್ಯ ಕಣ್ಮೇಶ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.
