ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 16
ಅದು ನಿಮಿತ್ತದಲಿಷ್ಟಲಿಂಗವೆ
ಮೊದಲು ಬೇಹುದು ನಿತ್ಯ ನಿರ್ಮಲ
ಪದವ ಪಡೆದಿಹೆನೆಂಬ ಪಾವನ ಬುದ್ಧಿವಂತಂಗೆ
ಹೃದಯದೊಳಗಾ ಪ್ರಾಣಲಿಂಗದ
ಹದನನರಿವೊಡೆ ಸಚ್ಚಿದಾನಂ
ದದಲಿ ನಿಲುವೊಡೆ ಮುಖ್ಯವಿದು
ಮಾಯೆಗೆ ಬಂಧಿತನಾದ ಜೀವಿಯು ಅನೇಕ ಜನ್ಮಗಳಲ್ಲಿ ಅನೇಕ ದೇಹಗಳನ್ನು ಧರಿಸುತ್ತಾ ಸಂಸಾರದ ಚಕ್ರದಲ್ಲಿ ಸುತ್ತುತ್ತಿರುತ್ತಾನೆ. ದೇಹ ಬದಲಾಗುತ್ತದೆ; ಕಾಲ ಬದಲಾಗುತ್ತದೆ; ಪರಿಸ್ಥಿತಿಗಳು ಬದಲಾಗುತ್ತವೆ. ಆದರೆ ಜೀವಿಯೊಳಗಿನ ಅಜ್ಞಾನ, ವಾಸನೆ, ಕರ್ಮಬಂಧನಗಳು ಅವನನ್ನು ಮತ್ತೆ ಮತ್ತೆ ಅದೇ ಸಂಸಾರಚಕ್ರಕ್ಕೆ ಎಳೆಯುತ್ತವೆ. ದೇಹವಿರುವವರೆಗೆ ಕರ್ಮವನ್ನು ಮಾಡಲೇಬೇಕಾಗುತ್ತದೆ. ಮಾಡಿದ ಕರ್ಮಕ್ಕೆ ಅನುಗುಣವಾಗಿ ಪುಣ್ಯ–ಪಾಪಗಳ ಬಂಧನವೂ ಉಂಟಾಗುತ್ತದೆ. ಪುಣ್ಯದ ಫಲವಾಗಿ ಮಾನವಜನ್ಮ ದೊರೆತರೂ, ಮಾನವನಾಗಿ ಹುಟ್ಟಿದ ಮೇಲೆ ತನ್ನ ಬುದ್ಧಿಯನ್ನು ದುರ್ವಾಸನೆಗಳ ಬಂಧನದಿಂದ ಮುಕ್ತಗೊಳಿಸುವುದು ಸುಲಭವಲ್ಲ. ಹಿಂದಿನ ಜನ್ಮಗಳ ಅನುಭವಗಳು, ಸಂಸ್ಕಾರಗಳು ಮತ್ತು ವಾಸನೆಗಳು ಅವನ ಮನಸ್ಸಿನಲ್ಲಿ ಅಜ್ಞಾನದ ನೆರಳನ್ನು ಮೂಡಿಸುತ್ತವೆ. ಈ ಅಜ್ಞಾನವನ್ನು ಅರಿತು, ಅದರ ಬಂಧನದಿಂದ ಹೊರಬರಬೇಕೆಂಬ ದೃಢಸಂಕಲ್ಪ ಮೂಡುವ ಕ್ಷಣವೇ ಆತ್ಮಸಾಧನೆಯ ನಿಜವಾದ ಆರಂಭ. ಶರಣರ ವಚನಗಳಲ್ಲಿ ಪೂರ್ವಜನ್ಮ-ಪುನರ್ಜನ್ಮಗಳ ಕುರಿತಾದ ಚಿಂತನೆಗಳು ಭಾರತೀಯ ಇತರ ದರ್ಶನಗಳಿಗಿಂತ ಭಿನ್ನವಾಗಿವೆ. ಇತರ ಧರ್ಮಗಳಲ್ಲಿ ಪುನರ್ಜನ್ಮ ಸಿದ್ಧಾಂತ ಇದೆ. ಆದರೆ ಲಿಂಗಾಯತರು ಲಿಂಗಸಾಧನೆಯ ಮೂಲಕ ಲಿಂಗಾಂಗ ಸಾಮರಸ್ಯ ಸಾಧಿಸಿದರೆ, ಅವರಿಗೆ ಪುನರ್ಜನ್ಮವೆಂಬುದಿಲ್ಲ. ಹಾಲಿನಲ್ಲಿ ಸಕ್ಕರೆ ಬೆರೆತಂತೆ, ಮರಳಿ ಭವಜನ್ಮಕ್ಕೆ ಬರಲಾರರು. ಇದನ್ನು ಲಿಂಗಾಯತರ ಅಂತ್ಯಕ್ರಿಯೆ ಸಂದರ್ಭದಲ್ಲಿಯೂ ಜಂಗಮರು ಹೇಳುವ ‘ಗುರುಲಿಂಗ ಜಂಗಮದ ಗುಪ್ತಭಕ್ತಿಯ ಮಾಡಿ…. ಮರಳಿ ಈ ಜನ್ಮಕ್ಕೆ ಬರಬಾರದೆಂದು ರಜತಪುಷ್ಪ ಅರ್ಪಿಸುವ’ ನುಡಿಗಳು ಇದಕ್ಕೆ ಅಪೂರ್ವ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ಗುರುಕಾರುಣ್ಯಕ್ಕೆ ಅಪಾರವಾದ ಮಹತ್ವ ದೊರೆಯುತ್ತದೆ. ಗುರುದೇವರ ಕೃಪೆಯಿಲ್ಲದೆ ಸಾಧಕನಿಗೆ ತನ್ನ ಸ್ಥೂಲ ದೇಹದ ಆಚೆಯಿರುವ ಸೂಕ್ಷ್ಮ ತತ್ತ್ವದ ಅರಿವು ಸುಲಭವಾಗಿ ಸಾಧ್ಯವಾಗುವುದಿಲ್ಲ. ಸ್ಥೂಲ ದೇಹವನ್ನು ಆಶ್ರಯಿಸಿಕೊಂಡು ಅದರೊಳಗೆ ಅಡಗಿರುವ ಸೂಕ್ಷ್ಮ ಚೈತನ್ಯವನ್ನು ಅರಿಯಬೇಕು. ದೇಹವು ಕೇವಲ ಮಾಂಸ–ರಕ್ತಗಳಿಂದ ಕೂಡಿದ ಒಂದು ಜಡ ಆವರಣವಲ್ಲ; ಅದರೊಳಗೆ ಜೀವಚೈತನ್ಯದ ಜ್ಯೋತಿ ಪ್ರಕಾಶಿಸುತ್ತಿದೆ. ಆ ಚೈತನ್ಯವನ್ನು ಅನುಭವಿಸುವುದೇ ಆತ್ಮಸಾಧನೆಯ ಮೂಲ ಉದ್ದೇಶ.
ಇಲ್ಲಿ ಗುರುದೀಕ್ಷೆಯ ಮಹತ್ವ ಸ್ಪಷ್ಟವಾಗುತ್ತದೆ. ಗುರುವಾದವನು ಸಾಧಕನ ದೇಹದೊಳಗಿನ ನಿಷ್ಕಳಂಕ ಚೈತನ್ಯವನ್ನು ಇಷ್ಟಲಿಂಗದ ಮೂಲಕ ಹೊರಗಣ ಅನುಭವಕ್ಕೆ ತಂದುಕೊಡುತ್ತಾನೆ. “ಇದು ಪ್ರಾಣಲಿಂಗ; ಇದನ್ನು ನಿನ್ನ ಪ್ರಾಣವೆಂದು ತಿಳಿದು, ದೇಹದಿಂದ ಬೇರ್ಪಡಿಸದೆ ಶಿವಾಭೇದ ಭಾವದಿಂದ ಸೇವಿಸು” ಎಂಬ ಗುರೂಪದೇಶವು ಸಾಧಕನ ಸಾಧನೆಯ ದಿಕ್ಕನ್ನೇ ಬದಲಿಸುತ್ತದೆ. ಈ ಕ್ಷಣದಿಂದ ಇಷ್ಟಲಿಂಗವು ಅವನಿಗೆ ಬರೀ ಕೈಯಲ್ಲಿ ಧರಿಸುವ ಲಿಂಗವಾಗದೆ, ಅವನ ಅಂತರಂಗದ ಜೀವಚೈತನ್ಯದ ಪ್ರತಿಬಿಂಬವಾಗುತ್ತದೆ. ಗುರುವು ಅನುಗ್ರಹಿಸಿದ ಇಷ್ಟಲಿಂಗವನ್ನು ಕರಪೀಠದಲ್ಲಿ ಸ್ಥಾಪಿಸಿಕೊಂಡು, ದೃಷ್ಟಿಯನ್ನು ಅದರ ಮೇಲೆ ನೆಟ್ಟು, ಚಂಚಲವಾಗದ ಮನಸ್ಸಿನಿಂದ ಪೂಜಿಸುವುದು ಸಾಧಕನ ನಿತ್ಯಸಾಧನೆಯಾಗುತ್ತದೆ.
ಇಷ್ಟಲಿಂಗವನ್ನು ಹೊರಗೆ ಪೂಜಿಸುವುದರ ಜೊತೆಗೆ ಅದರ ಅಂತರಂಗಾರ್ಥವನ್ನು ಅರಿಯುವುದು ಅತ್ಯಂತ ಅಗತ್ಯ. ಲಿಂಗವು ತನ್ನ ಸ್ವರೂಪದ ಪ್ರತೀಕವೆಂದು ಭಾವಿಸಿ, ಅದರಲ್ಲಿ ಮನಸ್ಸನ್ನು ಲೀನಗೊಳಿಸುವಾಗ ಸಾಧಕನ ಚಿತ್ತ ಕ್ರಮೇಣ ಏಕಾಗ್ರವಾಗುತ್ತದೆ. ಹೊರಗಿನ ದೃಷ್ಟಿ ಒಳಮುಖವಾಗುತ್ತದೆ; ಚಂಚಲ ಮನಸ್ಸು ಸ್ಥಿರಗೊಳ್ಳುತ್ತದೆ; ಸ್ಥಿರವಾದ ಮನಸ್ಸು ಧ್ಯಾನದತ್ತ ಸಾಗುತ್ತದೆ; ಧ್ಯಾನವು ಧಾರಣೆಯಾಗಿ, ಧಾರಣೆಯು ಸಮಾಧಿಯತ್ತ ಕರೆದೊಯ್ಯುತ್ತದೆ. ಹೀಗಾಗಿ ಇಷ್ಟಲಿಂಗೋಪಾಸನೆಯು ಕೇವಲ ಪೂಜಾಕ್ರಮವಲ್ಲ; ಅದು ಯೋಗಸಾಧನೆಯ ಒಂದು ಅಂತರಂಗ ಪ್ರಕ್ರಿಯೆಯೂ ಆಗುತ್ತದೆ.
ಈ ಸಾಧನೆಯ ಮುಂದಿನ ಹಂತವೇ ಪ್ರಾಣಲಿಂಗದ ಅನುಭವ. ಬಾಹ್ಯ ಇಷ್ಟಲಿಂಗದಲ್ಲಿ ನೆಟ್ಟ ದೃಷ್ಟಿ ಕ್ರಮೇಣ ಅಂತರಂಗದ ಪ್ರಾಣಚೈತನ್ಯದತ್ತ ಸಾಗುತ್ತದೆ. ಸಾಧಕನಿಗೆ ತನ್ನ ಹೃದಯಾಕಾಶದಲ್ಲಿಯೇ ಶಿವಚೈತನ್ಯ ಪ್ರಕಾಶಿಸುತ್ತಿದೆ ಎಂಬ ಅನುಭವ ಮೂಡುತ್ತದೆ. ಆಗ ಲಿಂಗವು ಹೊರಗಿರುವ ಒಂದು ಪೂಜ್ಯವಸ್ತುವಾಗಿರದೆ, ತನ್ನೊಳಗೆ ಸದಾ ಪ್ರಕಾಶಿಸುವ ಶಿವತತ್ತ್ವವಾಗಿ ಅನುಭವಕ್ಕೆ ಬರುತ್ತದೆ. ಈ ಅನುಭವದಲ್ಲಿ ಪೂಜಕ ಮತ್ತು ಪೂಜ್ಯರ ನಡುವಿನ ಅಂತರ ನಿಧಾನವಾಗಿ ಕರಗತೊಡಗುತ್ತದೆ.
ಈ ಸ್ಥಿತಿಯನ್ನು ಸೂಚಿಸುವಂತೆ ಚಾಮರಸನ ಕಾವ್ಯದಲ್ಲಿ ಭಾವಲಿಂಗದ ಪರಿಕಲ್ಪನೆಯೂ ಮುಖ್ಯವಾಗುತ್ತದೆ. ಇಷ್ಟಲಿಂಗದ ಬಾಹ್ಯ ಆರಾಧನೆಯಿಂದ ಪ್ರಾಣಲಿಂಗದ ಅಂತರಂಗ ಅರಿವಿಗೆ, ಅಲ್ಲಿಂದ ಭಾವಲಿಂಗದ ಅನುಭವಕ್ಕೆ ಸಾಗುವ ಸಾಧನಾ ಕ್ರಮವು ಶಿವಯೋಗದ ಆಂತರಿಕ ಪಥವನ್ನು ಸೂಚಿಸುತ್ತದೆ. ಸಾಧಕನು ಲಿಂಗವನ್ನು ಹೊರಗೆ ಕಾಣುವುದರಿಂದ ಆರಂಭಿಸಿ, ಅದನ್ನು ತನ್ನ ಪ್ರಾಣದಲ್ಲಿ ಅನುಭವಿಸಿ, ಅಂತಿಮವಾಗಿ ತನ್ನ ಭಾವದಲ್ಲಿಯೇ ಶಿವಸ್ವರೂಪವಾಗಿ ಅನುಭವಿಸುವ ಹಂತಕ್ಕೆ ಏರುತ್ತಾನೆ. ಹೀಗಾಗಿ ಇಷ್ಟಲಿಂಗೋಪಾಸನೆಯು ಹೊರಗಿನಿಂದ ಒಳಕ್ಕೆ, ರೂಪದಿಂದ ಅರೂಪಕ್ಕೆ, ಪೂಜೆಯಿಂದ ಅನುಭವಕ್ಕೆ ಮತ್ತು ದ್ವೈತದಿಂದ ಅಭೇದದತ್ತ ಸಾಗುವ ಆಧ್ಯಾತ್ಮಿಕ ಪಯಣವಾಗಿದೆ.
ಈ ಪಯಣದಲ್ಲಿ ದೀಕ್ಷೆ ಪಡೆದ ಸಾಧಕನಿಗೆ ತನ್ನ ದೇಹವೇ ಸಾಧನಕ್ಷೇತ್ರವಾಗುತ್ತದೆ. ದೇಹವನ್ನು ತ್ಯಜಿಸುವುದಲ್ಲ; ದೇಹದೊಳಗಿನ ಚೈತನ್ಯವನ್ನು ಅರಿಯುವುದೇ ಉದ್ದೇಶ. ಸ್ಥೂಲ ದೇಹದೊಳಗೆ ಸೂಕ್ಷ್ಮ ದೇಹವಿದೆ; ಸೂಕ್ಷ್ಮ ದೇಹದೊಳಗೆ ಪ್ರಾಣಚೈತನ್ಯವಿದೆ; ಆ ಪ್ರಾಣಚೈತನ್ಯದ ಆಳದಲ್ಲಿ ಶಿವತತ್ತ್ವವಿದೆ. ಈ ತತ್ತ್ವವನ್ನು ಅರಿಯಲು ಇಷ್ಟಲಿಂಗವು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ದೇಹವನ್ನು ನಿರಾಕರಿಸುವ ಬದಲು ದೇಹವನ್ನೇ ಶಿವಾನುಭವದ ಸಾಧನವಾಗಿ ಪರಿವರ್ತಿಸುವುದು ಲಿಂಗೋಪಾಸನೆಯ ವೈಶಿಷ್ಟ್ಯ.
ಇಷ್ಟಲಿಂಗೋಪಾಸನೆಯ ಮತ್ತೊಂದು ಮುಖ್ಯ ಅಂಶವೆಂದರೆ ಭೋಗಕ್ಕೂ ಮೊದಲು ಲಿಂಗಕ್ಕೆ ಅರ್ಪಿಸುವ ಭಾವನೆ. ಸಾಧಕನು ತನ್ನ ಬದುಕಿನಲ್ಲಿ ದೊರೆಯುವ ಪ್ರತಿಯೊಂದು ಅನುಭವವನ್ನೂ ಮೊದಲು ಶಿವನಿಗೆ ಸಮರ್ಪಿಸಿ, ನಂತರ ಅದನ್ನು ಶಿವಪ್ರಸಾದವೆಂದು ಸ್ವೀಕರಿಸಬೇಕು. ಊಟವಾಗಲಿ, ಸಂಪತ್ತಾಗಲಿ, ಕಾಯಕವಾಗಲಿ, ಜೀವನದ ಸುಖ–ದುಃಖಗಳಾಗಲಿ—ಎಲ್ಲವೂ ಶಿವಾರ್ಪಣೆಯಾದಾಗ ಬದುಕಿನ ದೃಷ್ಟಿಕೋನವೇ ಬದಲಾಗುತ್ತದೆ. “ನಾನು ಅನುಭವಿಸುತ್ತಿದ್ದೇನೆ” ಎಂಬ ಅಹಂಕಾರ ಕ್ಷೀಣಿಸಿ, “ಶಿವಪ್ರಸಾದವನ್ನು ಸ್ವೀಕರಿಸುತ್ತಿದ್ದೇನೆ” ಎಂಬ ಪ್ರಸಾದಬುದ್ಧಿ ಮೂಡುತ್ತದೆ. ಇದೇ ದಾಸೋಹದ ಆಂತರಿಕ ನೆಲೆ.
ಇದರಿಂದ ಇಷ್ಟಲಿಂಗಪೂಜೆ ಬರೀ ದೇವರ ಮುಂದೆ ಮಾಡುವ ಒಂದು ನಿತ್ಯಕರ್ಮವಾಗದೆ, ಬದುಕಿನ ಪ್ರತಿಯೊಂದು ಕ್ಷಣವನ್ನೂ ಪಾವನಗೊಳಿಸುವ ಜೀವನದರ್ಶನವಾಗುತ್ತದೆ. ಬೆಳಿಗ್ಗೆ ಪೂಜೆ ಮಾಡಿ, ಉಳಿದ ದಿನವನ್ನು ಲಿಂಗವಿಸ್ಮೃತಿಯಲ್ಲಿ ಕಳೆಯುವುದು ಈ ತತ್ತ್ವದ ಉದ್ದೇಶವಲ್ಲ. ಪೂಜೆಯ ಸಮಯದಲ್ಲಿ ಅನುಭವಿಸಿದ ಶಿವಚೈತನ್ಯವನ್ನು ಕಾಯಕದಲ್ಲಿ, ಮಾತಿನಲ್ಲಿ, ಸಂಬಂಧಗಳಲ್ಲಿ, ಸಮಾಜಸೇವೆಯಲ್ಲಿ ಮತ್ತು ದಾಸೋಹದಲ್ಲಿ ಮುಂದುವರಿಸುವುದೇ ನಿಜವಾದ ಲಿಂಗಾನುಸಂಧಾನ. ಈ ಕಾರಣದಿಂದಲೇ ಲಿಂಗಾಯತ ಧರ್ಮದಲ್ಲಿ ಕಾಯಕ ಮತ್ತು ದಾಸೋಹಗಳು ಕೇವಲ ಸಾಮಾಜಿಕ ನೀತಿಗಳಲ್ಲ; ಅವು ಶಿವಭಕ್ತಿಯ ಪ್ರಾಯೋಗಿಕ ರೂಪಗಳಾಗಿವೆ.
ಶಿವಾನುಭವಿಗಳ ಸತ್ಸಂಗದಲ್ಲಿ ಕಾಲ ಕಳೆಯುವುದು, ಅವರ ಅನುಭವವಚನಗಳನ್ನು ಆಲಿಸುವುದು, ಅವರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಭಕ್ತಿಯ ಬೆಳವಣಿಗೆಗೆ ಪೂರಕ. ಇದಕ್ಕೆ ವಿರುದ್ಧವಾಗಿ ಕೇವಲ ಲೋಕದ ಮೆಚ್ಚುಗೆಯನ್ನು ಪಡೆಯುವುದಕ್ಕಾಗಿ ನೋಂಪಿ–ವ್ರತಗಳನ್ನು ಆಚರಿಸುವುದು, ತೋರಿಕೆಯ ಧಾರ್ಮಿಕತೆಯಲ್ಲಿ ತೊಡಗುವುದು, ಜನರಿಂದ ಹೊಗಳಿಸಿಕೊಳ್ಳಲು ಬಯಸುವುದು ಇಷ್ಟಲಿಂಗಭಕ್ತಿಯ ಅಂತರಂಗ ಸ್ವರೂಪಕ್ಕೆ ವಿರುದ್ಧವಾದುದು. ನಿಜವಾದ ಸಾಧಕನು ತೆಗಳಿಕೆಗೆ ಕುಗ್ಗುವುದಿಲ್ಲ; ಹೊಗಳಿಕೆಗೆ ಹಿಗ್ಗುವುದಿಲ್ಲ. ಅವನ ಮನಸ್ಸು ಎರಡರಲ್ಲಿಯೂ ಸಮವಾಗಿರುತ್ತದೆ. ಪ್ರಶಂಸೆ ಬಂದಾಗ ಅಹಂಕಾರಕ್ಕೆ ಒಳಗಾಗದೆ, ನಿಂದೆ ಬಂದಾಗ ಮನಸ್ಸನ್ನು ಕಳೆದುಕೊಳ್ಳದೆ ಸಮತ್ವದಲ್ಲಿ ನಿಲ್ಲುವುದು ಶಿವಭಕ್ತಿಯ ಒಂದು ಪ್ರಮುಖ ಲಕ್ಷಣ.
ಈ ಸಮತ್ವವೇ ಮುಂದೆ ಮನಸ್ಸಿನ ನಿರ್ಮಲತೆಗೆ ದಾರಿ ಮಾಡಿಕೊಡುತ್ತದೆ. ಕೋಪ, ದರ್ಪ, ಮತ್ಸರ ಮುಂತಾದ ಮನೋವಿಕಾರಗಳು ನಿಧಾನವಾಗಿ ಕ್ಷೀಣಿಸಿದಾಗ ಮನಸ್ಸು ಒಳಮುಖವಾಗುತ್ತದೆ. ಹಸಿವು, ಬಾಯಾರಿಕೆ, ನಿದ್ರೆ ಮುಂತಾದ ದೈಹಿಕ ಅಗತ್ಯಗಳಿಗೂ ಅತಿಯಾದ ಪ್ರಾಮುಖ್ಯತೆ ನೀಡದೆ, ಮನಸ್ಸನ್ನು ನಿರಂತರವಾಗಿ ಶಿವಾನುಸಂಧಾನದತ್ತ ಕೊಂಡೊಯ್ಯುವ ಪ್ರಯತ್ನ ಸಾಧಕನಲ್ಲಿ ಬೆಳೆಯಬೇಕು. ಅನಾವಶ್ಯಕವಾದ ವಿಷಯಾಸಕ್ತಿಗಳನ್ನು ಬಿಟ್ಟು, ಇಷ್ಟಲಿಂಗದ ಸ್ಮರಣೆ ಮತ್ತು ಅನುಸಂಧಾನದಲ್ಲಿ ಮನಸ್ಸನ್ನು ಸ್ಥಿರಗೊಳಿಸುವುದೇ ಸಾಧನೆಯ ನಿಜವಾದ ಉದ್ದೇಶ.
ಇಷ್ಟಲಿಂಗಸೇವೆಯ ಅನುಭವವು ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿದಾಗ, ಸಾಧಕನಿಗೆ ಪ್ರಾಣಲಿಂಗವೆಂಬ ಅಂತರಂಗ ನಿಧಿಯನ್ನು ಹುಡುಕಲು ಒಂದು ಹೊಸ ದೃಷ್ಟಿ ದೊರೆಯುತ್ತದೆ. ಸಾಮಾನ್ಯ ಕಣ್ಣಿಗೆ ಕಾಣುವುದು ಬಾಹ್ಯಲಿಂಗ; ಸಾಧನೆಯ ಕಣ್ಣಿಗೆ ಗೋಚರಿಸುವುದು ಪ್ರಾಣಲಿಂಗ. ಇಷ್ಟಲಿಂಗದ ಮೂಲಕ ಬಾಹ್ಯದಿಂದ ಅಂತರಂಗಕ್ಕೆ ಸಾಗುವ ಈ ಪರಿವರ್ತನೆಯೇ ಲಿಂಗೋಪಾಸನೆಯ ಮಹತ್ವದ ಘಟ್ಟ.
ಬಸವಣ್ಣನವರು ಪ್ರಭುದೇವರ ಮುಂದೆ ವಿನಯದಿಂದ ಪ್ರಶ್ನಿಸುತ್ತಾರೆ—ಗುರುದೇವರು ಉಪದೇಶಿಸಿದ ಮಾರ್ಗವನ್ನು ಕೇಳಿ ತಿಳಿದುಕೊಂಡರೆ ಸಾಕೇ? ಅದನ್ನು ಜೀವನದಲ್ಲಿ ಕ್ರಮಬದ್ಧವಾಗಿ ಆಚರಿಸಬೇಕೇ? ಮರಣದವರೆಗೂ ಸಾಧನೆಯಲ್ಲಿ ತೊಡಗಿಕೊಂಡರೆ ಮಾತ್ರ ಈ ಸಾಧನೆ ಪರಿಪೂರ್ಣವಾಗುವುದೇ? ಎಂಬ ಪ್ರಶ್ನೆಗಳು ಅವರ ಅಂತರಂಗದ ಪ್ರಾಮಾಣಿಕತೆಯನ್ನು ತೋರಿಸುತ್ತವೆ.
ಇಲ್ಲಿ ಪ್ರಭುದೇವರ ಉತ್ತರವು ಇಷ್ಟಲಿಂಗಭಕ್ತಿಯ ಮೂಲತತ್ತ್ವವನ್ನು ಸ್ಪಷ್ಟಪಡಿಸುತ್ತದೆ. ಕೇಳುವುದರಿಂದ ಮಾತ್ರ ಜ್ಞಾನ ಬರುವುದಿಲ್ಲ; ತಿಳಿದುಕೊಂಡದ್ದನ್ನು ಬದುಕಿನಲ್ಲಿ ಆಚರಿಸಿದಾಗ ಮಾತ್ರ ಅದು ಅನುಭವಜ್ಞಾನವಾಗುತ್ತದೆ. ಈ ವಿಚಾರವನ್ನು ಸರಳವಾದ ಉದಾಹರಣೆಯ ಮೂಲಕ ಗ್ರಹಿಸಬಹುದು. ಈಜುವ ಕಲೆಯನ್ನು ತಿಳಿಯದೆ ಕೇವಲ ಈಜುವ ಜ್ಞಾನವನ್ನು ಕುರಿತು ಪುಸ್ತಕ ಓದುವುದರಿಂದ ಈಜಲು ಸಾಧ್ಯವಿಲ್ಲ. ಈಜುವವರನ್ನು ನೋಡಿದರೆ, ಅವರ ಮಾತು ಕೇಳಿದರೆ, ಈಜಿನ ತಂತ್ರವನ್ನು ಅರ್ಥಮಾಡಿಕೊಂಡರೆ ಜ್ಞಾನ ದೊರೆಯಬಹುದು; ಆದರೆ ನೀರಿಗೆ ಇಳಿದು ಈಜಿದಾಗ ಮಾತ್ರ ಆ ಜ್ಞಾನವು ಅನುಭವವಾಗುತ್ತದೆ. ಅದೇ ರೀತಿ ಇಷ್ಟಲಿಂಗಭಕ್ತಿಯ ಮಾರ್ಗವನ್ನು ಕೇಳಿ, ಓದಿ, ಚರ್ಚಿಸಿ ತಿಳಿದುಕೊಂಡರೂ ಅದನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳದೆ ನಿಜವಾದ ಭಕ್ತನಾಗಲು ಸಾಧ್ಯವಿಲ್ಲ.
ಇದಕ್ಕಾಗಿಯೇ ಪ್ರಭುದೇವರು ಜ್ಞಾನ ಮತ್ತು ಕ್ರಿಯೆಗಳ ಸಮನ್ವಯವನ್ನೇ ಮುಕ್ತಿಯ ಮಾರ್ಗವೆಂದು ಪ್ರತಿಪಾದಿಸುತ್ತಾನೆ. ಜ್ಞಾನವಿಲ್ಲದ ಆಚರಣೆ ಅಂಧಾನುಕರಣವಾಗಬಹುದು; ಆಚರಣೆಯಿಲ್ಲದ ಜ್ಞಾನ ಕೇವಲ ಬೌದ್ಧಿಕ ಸಂಗ್ರಹವಾಗಬಹುದು. ಜ್ಞಾನವು ಕ್ರಿಯೆಯೊಂದಿಗೆ ಸೇರಿದಾಗ ಮಾತ್ರ ಅದು ಆತ್ಮಪರಿವರ್ತನೆಯ ಶಕ್ತಿಯಾಗುತ್ತದೆ. ಇಷ್ಟಲಿಂಗದ ಮಹಿಮೆಯನ್ನು ತಿಳಿದುಕೊಳ್ಳುವುದು ಮೊದಲ ಹಂತ; ಅದನ್ನು ನಿತ್ಯಾನುಸಂಧಾನದಲ್ಲಿ ಅನುಭವಿಸುವುದು ಎರಡನೆಯ ಹಂತ; ಆ ಅನುಭವವನ್ನು ತನ್ನ ಕಾಯಕ, ನಡತೆ, ಮಾತು ಮತ್ತು ಮನೋಭಾವಗಳಲ್ಲಿ ವ್ಯಕ್ತಗೊಳಿಸುವುದು ಮೂರನೆಯ ಹಂತ.
ಈ ಸಂದರ್ಭದಲ್ಲಿ ಬಸವಣ್ಣನವರ ವಿನಯಭಾವ ವಿಶೇಷವಾಗಿ ಗಮನಾರ್ಹ. ಪ್ರಭುದೇವರ ಉಪದೇಶವನ್ನು ಕೇಳಿದ ಬಸವಣ್ಣನು ತನ್ನನ್ನು ತಾನು ಮಹಾಭಕ್ತನೆಂದು ಭಾವಿಸದೆ, ಇನ್ನಷ್ಟು ಆಳವಾದ ಶಿವಾನುಭವವನ್ನು ಪಡೆಯಲು ಮಾರ್ಗದರ್ಶನ ಕೋರುತ್ತಾನೆ. ಅವರ ಭಕ್ತಿಯ ಸೌಂದರ್ಯವು ಇದೇ. ನಿಜವಾದ ಭಕ್ತಿಗೆ ಅಹಂಕಾರವಿರುವುದಿಲ್ಲ; “ನಾನು ತಿಳಿದಿದ್ದೇನೆ” ಎಂಬ ಭಾವಕ್ಕಿಂತ “ಇನ್ನಷ್ಟು ತಿಳಿಯಬೇಕಾಗಿದೆ” ಎಂಬ ವಿನಯವೇ ಇರುತ್ತದೆ.
ಇದೇ ಅಂತರಂಗ ಭಕ್ತಿಯನ್ನು ಬಸವಣ್ಣನವರ ಪ್ರಸಿದ್ಧ ವಚನ—
“ಹೊನ್ನಿನೊಳಗೊಂದೊರೆಯನು,
ವಸ್ತ್ರದೊಳಗೊಂದೆಳೆಯನು,
ಧಾನ್ಯದೊಳಗಣುಮಾತ್ರವನು
ಎನಗೆ ಅಥವಾ ಎನ್ನವರಿಗೆ ಇರಲಿ ಎಂದು ಆಶಿಸಿ ಬಂದ ಜಂಗಮನ
ಮನಿಸದೆ ಅತಿಗಳೆದನಾದರೆ
ನಾನು ನಿನ್ನ ಪಾದಕ್ಕೆ ಬಹುದೂರನಾಗುತ್ತೇನೆ.”
ಎಂಬ ಭಾವದಲ್ಲಿ ಕಾಣಬಹುದು.
ಈ ವಚನದ ಅಂತರಂಗದಲ್ಲಿ ದಾಸೋಹದ ಮಹತ್ವವೂ, ಭಕ್ತಿಯ ಪರೀಕ್ಷೆಯೂ ಅಡಗಿವೆ. ಚಿನ್ನದೊಳಗೆ ಅಡಗಿರುವ ಸೂಕ್ಷ್ಮತೆಯಂತೆ, ವಸ್ತ್ರದೊಳಗಿನ ಎಳೆಯಂತೆ, ಧಾನ್ಯದೊಳಗಿನ ಅಣುವಿನಂತೆ—ತನ್ನಲ್ಲಿರುವ ಅಲ್ಪವಾದದ್ದನ್ನೂ ಅಗತ್ಯವಿರುವವರಿಗೆ ಹಂಚಬೇಕು ಎಂಬ ಮನೋಭಾವ ಇಲ್ಲಿ ವ್ಯಕ್ತವಾಗುತ್ತದೆ. ಜಂಗಮನು ಬಂದು ಏನನ್ನಾದರೂ ಕೇಳಿದಾಗ, “ಇದು ನನ್ನದು; ಇದನ್ನು ನಾನು ಉಳಿಸಿಕೊಳ್ಳಬೇಕು” ಎಂಬ ಸ್ವಾರ್ಥದಿಂದ ಅವನನ್ನು ನಿರ್ಲಕ್ಷಿಸಿದರೆ, ಅದು ಕೇವಲ ಜಂಗಮನ ಅವಮಾನವಲ್ಲ; ತನ್ನದೇ ಶಿವಭಕ್ತಿಯ ಅವಮಾನ. ಏಕೆಂದರೆ ಲಿಂಗಾಯತ ಪರಂಪರೆಯಲ್ಲಿ ಜಂಗಮನು ಶಿವತತ್ತ್ವದ ಚಲನಶೀಲ ಪ್ರತಿನಿಧಿಯಾಗಿ ಕಾಣುತ್ತಾನೆ.
ಹೀಗಾಗಿ ಬಸವಣ್ಣನವರ ಭಕ್ತಿಯಲ್ಲಿ ಲಿಂಗಪೂಜೆ ಮತ್ತು ದಾಸೋಹ ಪರಸ್ಪರ ಬೇರ್ಪಟ್ಟಿಲ್ಲ. ಲಿಂಗದ ಮುಂದೆ ಸಲ್ಲಿಸುವ ಭಕ್ತಿ, ಜಂಗಮನ ಮುಂದೆ ವ್ಯಕ್ತವಾಗುವ ದಾಸೋಹದಲ್ಲಿ ಸಾರ್ಥಕವಾಗುತ್ತದೆ. ಕೈಯಲ್ಲಿ ಲಿಂಗವನ್ನು ಧರಿಸಿ, ಹೃದಯದಲ್ಲಿ ಶಿವನನ್ನು ನೆನೆದು, ಕಾಯಕದಿಂದ ಸಂಪಾದಿಸಿ, ದಾಸೋಹದಿಂದ ಹಂಚಿಕೊಳ್ಳುವ ಜೀವನವೇ ನಿಜವಾದ ಇಷ್ಟಲಿಂಗಭಕ್ತಿಯ ಜೀವನ.
ಚಾಮರಸನು ಈ ವಚನವನ್ನು ತನ್ನ ಕಾವ್ಯದಲ್ಲಿ ಷಟ್ಪದಿಯ ಮೂಲಕ ಸಾಕ್ಷೀಕರಿಸಿರುವುದು ಅತ್ಯಂತ ಅರ್ಥಪೂರ್ಣ.
ಪ್ರಭುದೇವರು ಬಸವಣ್ಣನಿಗೆ ನೀಡುವ ಉಪದೇಶದಲ್ಲಿ ಇಷ್ಟಲಿಂಗೋಪಾಸನೆಯ ಅಂತಿಮ ಗುರಿ ಕೇವಲ ಬಾಹ್ಯ ಪೂಜಾಕ್ರಮವನ್ನು ನೆರವೇರಿಸುವುದಲ್ಲ; ಅದರ ಮೂಲಕ ಸಾಧಕನ ಅಂತರಂಗದಲ್ಲಿ ‘ನಾನು’ ಮತ್ತು ‘ನನ್ನದು’ ಎಂಬ ಭ್ರಮೆಯನ್ನು ಕಳೆಯುವುದು ಮುಖ್ಯವೆಂಬ ತತ್ತ್ವ ಸ್ಪಷ್ಟವಾಗುತ್ತದೆ. ಜಗತ್ತಿನಲ್ಲಿರುವ ಎಲ್ಲವೂ ಪರಮಾತ್ಮನದೇ ಎಂಬ ಅರಿವು ಮೂಡಿದಾಗ, ವ್ಯಕ್ತಿಯ ಸ್ವಾಮಿತ್ವದ ಭಾವನೆ ಕ್ರಮೇಣ ಕರಗುತ್ತದೆ. ಚಿನ್ನ, ಬೆಳ್ಳಿ, ಧನ, ಧಾನ್ಯ, ದೇಹ, ಮನಸ್ಸು, ಬಂಧುಬಳಗ—ಇವೆಲ್ಲವೂ ತನ್ನದೇ ಎಂದುಕೊಳ್ಳುವ ಮನೋಭಾವವೇ ಬಂಧನಕ್ಕೆ ಕಾರಣ. ಆದ್ದರಿಂದ ಸಾಧಕನು ಮೊದಲು ತನ್ನ ಅಹಂಕಾರವನ್ನು ಲಿಂಗಕ್ಕೆ ಅರ್ಪಿಸಬೇಕು.
ಅಲ್ಲಮಪ್ರಭು ಬಸವಣ್ಣನನ್ನು ಪ್ರಶ್ನಿಸುವ ಸಂದರ್ಭದಲ್ಲಿ ಇದೇ ವಿಚಾರವನ್ನು ಮತ್ತೊಂದು ದೃಷ್ಟಿಯಿಂದ ವಿವರಿಸುತ್ತಾನೆ. “ಮೇರುಗಿರಿಗಳೆಲ್ಲವೂ ಪ್ರಮಥರೊಡವೆ; ರಜತಗಿರಿಗಳೆಲ್ಲವೂ ಪುರಾತರೊಡವೆ; ಚತುರ್ದಶ ಭುವನವೆಲ್ಲವೂ ಲಿಂಗದೊಡವೆ; ತನುವು–ಮನ–ಧನಗಳೆಲ್ಲವೂ ನಮ್ಮ ಗುಹೇಶ್ವರಲಿಂಗದ ಸೊತ್ತು” ಎಂಬ ಭಾವದ ಮೂಲಕ ಇಡೀ ವಿಶ್ವವೇ ಶಿವನಿಗೆ ಸೇರಿದುದೆಂದು ಪ್ರತಿಪಾದಿಸಲಾಗುತ್ತದೆ. ಹೀಗಿರುವಾಗ ಮನುಷ್ಯನು ತನ್ನ ದೇಹ, ಮನಸ್ಸು ಅಥವಾ ಸಂಪತ್ತಿನ ಮೇಲೆ ‘ಇದು ನನ್ನದು’ ಎಂಬ ಅಧಿಕಾರವನ್ನು ಹೇಗೆ ಸ್ಥಾಪಿಸಬಲ್ಲನು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.
ಈ ತತ್ತ್ವವನ್ನು ಪ್ರಭುದೇವರು ಬಸವಣ್ಣನಿಗೆ ಅತ್ಯಂತ ಸೂಕ್ಷ್ಮವಾಗಿ ಮನದಟ್ಟು ಮಾಡಿಸುತ್ತಾನೆ. ಬಸವಣ್ಣನು “ನಾನು ನನ್ನ ದೇಹವನ್ನು ಕೊಡುತ್ತೇನೆ, ನನ್ನ ಮನಸ್ಸನ್ನು ಕೊಡುತ್ತೇನೆ, ನನ್ನ ಧನವನ್ನು ಕೊಡುತ್ತೇನೆ” ಎಂದು ಹೇಳುತ್ತಾನೆ. ಆದರೆ ಪ್ರಭುದೇವರು, ‘ನಾನು’ ಎಂದು ಹೇಳುತ್ತಿರುವ ಆ ವ್ಯಕ್ತಿ ಯಾರು? ‘ನನ್ನ ದೇಹ’, ‘ನನ್ನ ಮನಸ್ಸು’, ‘ನನ್ನ ಧನ’ ಎಂದು ಹೇಳುವ ಈ ವಸ್ತುಗಳನ್ನು ನಿನಗೆ ಕೊಟ್ಟವರು ಯಾರು? ಎಂಬ ಮೂಲಭೂತ ಪ್ರಶ್ನೆಯನ್ನು ಮುಂದಿಡುತ್ತಾನೆ. ಈ ಪ್ರಶ್ನೆಯೇ ಆತ್ಮವಿಚಾರದ ಆರಂಭ.
ಹೀಗಾಗಿ ಇಲ್ಲಿ ‘ನಾನು’ ಎಂಬ ಅಹಂಕಾರ ಮತ್ತು ‘ನನ್ನದು’ ಎಂಬ ಮಮಕಾರ—ಈ ಎರಡನ್ನೂ ತ್ಯಜಿಸುವುದೇ ಇಷ್ಟಲಿಂಗೋಪಾಸನೆಯ ಅಂತರಂಗ ಉದ್ದೇಶ ಎಂಬುದು ವ್ಯಕ್ತವಾಗುತ್ತದೆ. ಇಷ್ಟಲಿಂಗವನ್ನು ಹೊರಗೆ ಧರಿಸಿ ಪೂಜಿಸುವುದರ ಜೊತೆಗೆ, ಅದರ ಮೂಲಕ ತನ್ನೊಳಗಿನ ಚೈತನ್ಯವನ್ನು ಅರಿತುಕೊಳ್ಳಬೇಕು. ಲಿಂಗವು ಸಾಧಕನ ಹೃದಯದಲ್ಲಿರುವ ಚೈತನ್ಯದ ಸಂಕೇತ. ಆದ್ದರಿಂದ ಲಿಂಗೋಪಾಸನೆಯ ಅಂತಿಮ ಫಲವಾಗಿ ಸಾಧಕನಲ್ಲಿ ‘ನಾನು ಶಿವನಿಂದ ಬೇರೆ’ ಎಂಬ ದ್ವೈತಭಾವವೂ, ‘ಇದು ನನ್ನದು’ ಎಂಬ ಮಮಕಾರವೂ ನಾಶವಾಗಬೇಕು.
ಚಾಮರಸನ ವಿಶೇಷತೆ ಇಲ್ಲಿಯೇ ಗೋಚರಿಸುತ್ತದೆ. ಅವನು ಕೇವಲ ಪ್ರಭುದೇವರ ಚರಿತ್ರೆಯನ್ನು ಹೇಳುವುದಿಲ್ಲ; ಲಿಂಗಧಾರಣೆ, ಇಷ್ಟಲಿಂಗಪೂಜೆ, ಪ್ರಾಣಲಿಂಗಾನುಸಂಧಾನ, ಭಾವಲಿಂಗಾನುಭವ ಮತ್ತು ಆತ್ಮಸಾಕ್ಷಾತ್ಕಾರ ಇವುಗಳ ಪರಸ್ಪರ ಸಂಬಂಧವನ್ನು ತನ್ನ ಕಾವ್ಯದ ಮೂಲಕ ವಿವರಿಸುತ್ತಾನೆ. ಬಾಹ್ಯ ಇಷ್ಟಲಿಂಗಪೂಜೆ ಅಂತರಂಗದ ಪ್ರಾಣಲಿಂಗದ ಅನುಸಂಧಾನಕ್ಕೆ ದಾರಿಯಾಗಬೇಕು. ಆ ಅನುಸಂಧಾನವು ಕ್ರಮೇಣ ಧ್ಯಾನ, ಧಾರಣೆ ಮತ್ತು ಸಮಾಧಿಯಂತಹ ಯೋಗಾನುಭವಕ್ಕೆ ಪರಿವರ್ತಿತವಾಗುತ್ತದೆ.
ಈ ಹಿನ್ನೆಲೆಯಲ್ಲಿ ‘ನಾನು’ ಎಂಬ ಭಾವವನ್ನು ತ್ಯಜಿಸುವುದು ಎಂದರೆ ವ್ಯಕ್ತಿತ್ವವನ್ನು ನಾಶಪಡಿಸುವುದಲ್ಲ; ವ್ಯಕ್ತಿಯೊಳಗಿನ ಅಹಂಕಾರ–ಮಮಕಾರಗಳನ್ನು ನಿವಾರಿಸಿ, ತನ್ನ ನಿಜಸ್ವರೂಪವನ್ನು ಶಿವಸ್ವರೂಪವಾಗಿ ಅರಿಯುವುದು. ತನ್ನ ದೇಹವನ್ನು ಶಿವನ ಸಾಧನವೆಂದು, ತನ್ನ ಮನಸ್ಸನ್ನು ಶಿವಚಿಂತನೆಯ ಕ್ಷೇತ್ರವೆಂದು, ತನ್ನ ಸಂಪತ್ತನ್ನು ದಾಸೋಹದ ಸಾಧನವೆಂದು ಮತ್ತು ತನ್ನ ಬದುಕನ್ನು ಶಿವಸೇವೆಯ ಮಾರ್ಗವೆಂದು ತಿಳಿದುಕೊಂಡಾಗ ಮಾತ್ರ ಇಷ್ಟಲಿಂಗೋಪಾಸನೆ ಸಾರ್ಥಕವಾಗುತ್ತದೆ.
ಬಸವಣ್ಣನು “ಭಕ್ತಿಯ ಅನುಭವದ ನಿಜಸ್ವರೂಪವನ್ನು ನನಗೆ ಸಂಪೂರ್ಣವಾಗಿ ತಿಳಿಯುವಂತೆ ಬೇರೆ ಯಾವ ರೀತಿಯಲ್ಲಾದರೂ ಬೋಧಿಸು” ಎಂದು ಪ್ರಭುದೇವರನ್ನು ವಿನಂತಿಸುತ್ತಾನೆ. ಬಸವಣ್ಣನ ಈ ಆಂತರಿಕ ಹಂಬಲವನ್ನು ಅರಿತ ಪ್ರಭುದೇವನು, ಭಕ್ತಿಯ ಸ್ವರೂಪವನ್ನು ಮಾತುಗಳಿಂದ ಮಾತ್ರ ತಿಳಿಸುವುದಕ್ಕಿಂತ ಇಷ್ಟಲಿಂಗದ ಸಕೀಲ ಸಾಧನೆಯ ಮೂಲಕ ಅದನ್ನು ಅನುಭವಿಸಬೇಕು ಎಂದು ಉಪದೇಶಿಸುತ್ತಾನೆ. ಖಡ್ಗವನ್ನು ಹಿಡಿದು ಅಭ್ಯಾಸ ಮಾಡಿದ ನಂತರವೇ ರಣರಂಗದಲ್ಲಿ ಶತ್ರುವನ್ನು ಸೋಲಿಸಲು ಸಾಧ್ಯವಾಗುವಂತೆ, ಇಷ್ಟಲಿಂಗದ ಸಾಧನೆಯನ್ನು ಮೊದಲು ಶ್ರದ್ಧೆ, ನಿಯಮ ಮತ್ತು ನಿರಂತರ ಅಭ್ಯಾಸದಿಂದ ಆಚರಿಸಿದಾಗ ಮಾತ್ರ ಶಿವಭಕ್ತಿಯ ನಿಜಸ್ವರೂಪವನ್ನು ಸುಲಭವಾಗಿ ಅರಿಯಲು ಸಾಧ್ಯ ಎಂಬುದು ಪ್ರಭುದೇವನ ಮಾತಿನ ಸಾರ.
ಪ್ರಭುದೇವನ ಉಪದೇಶದಲ್ಲಿ ಮತ್ತೊಂದು ಮಹತ್ವದ ವಿಚಾರವೆಂದರೆ ಗುರು–ಲಿಂಗ–ಜಂಗಮದ ತತ್ತ್ವಸಂಬಂಧ. ಸಾಧಕನು ಪ್ರೀತಿಯಿಂದ ಇಷ್ಟಲಿಂಗಪೂಜೆಯಲ್ಲಿ ನಿರಂತರವಾಗಿ ತೊಡಗಿ, ತನ್ನ ದೇಹದೊಳಗೆ ಅಡಗಿರುವ ಗುರುಲಿಂಗ ಜಂಗಮಕ್ಕೆ ತನ್ನನ್ನೇ ಸಮರ್ಪಿಸಲು ಸಮರ್ಥನಾದಾಗ, ಹೊರಮುಖವಾಗಿ ಚಲಿಸುವ ಇಂದ್ರಿಯಗಳ ಪ್ರವೃತ್ತಿ ನಿಧಾನವಾಗಿ ನಿವೃತ್ತಿಯಾಗುತ್ತದೆ. ದೇಹದ ಕರಣಗಳು ಲಿಂಗದ ಕಿರಣಗಳಂತೆ ಪರಿಣಮಿಸುತ್ತವೆ; ಮನಸ್ಸು ಪ್ರಾಣಲಿಂಗದ ಕಡೆಗೆ ಆಕರ್ಷಿತವಾಗುತ್ತದೆ; ಕ್ರಮೇಣ ಮಾಯೆಯ ಮಸುಕು ದೂರವಾಗುತ್ತದೆ. ಹೀಗಾಗಿ ಬಾಹ್ಯ ಇಂದ್ರಿಯಜೀವನದಿಂದ ಅಂತರಂಗದ ಚೈತನ್ಯಜೀವನದ ಕಡೆಗೆ ಸಾಧಕನ ಪ್ರಯಾಣ ಆರಂಭವಾಗುತ್ತದೆ.
ಚಾಮರಸನು ಇಲ್ಲಿ ಒಂದು ಮಹತ್ವದ ಎಚ್ಚರಿಕೆಯನ್ನೂ ನೀಡುತ್ತಾನೆ. ಬಾಹ್ಯ ಇಷ್ಟಲಿಂಗಪೂಜೆಯಲ್ಲಿಯೇ ನಿಂತುಬಿಡಬಾರದು; ಅದರ ಫಲವಾಗಿ ಸ್ವಾಯತ್ತಲಿಂಗ ಅಥವಾ ಪ್ರಾಣಲಿಂಗದ ಅನುಭವವನ್ನು ಪಡೆಯಬೇಕು. ಹೂವು–ಪತ್ರೆಗಳಿಗಾಗಿ ಗಿಡಗಳನ್ನು ನಾಶಪಡಿಸಿ, ನೀರಿಗಾಗಿ ಜಲಾಶಯಗಳನ್ನು ಬರಿದು ಮಾಡಿ, ಪೂಜೆಯ ಉಪಚಾರಕ್ಕಾಗಿ ಪ್ರಕೃತಿಯನ್ನು ಹಾಳುಮಾಡುವುದು ನಿಜವಾದ ಶಿವೋಪಾಸನೆಯಲ್ಲ. ಬಾಹ್ಯ ಆಯತಲಿಂಗಪೂಜೆ ಸಾಧನೆಯ ಆರಂಭಿಕ ಹಂತ; ಆದರೆ ಅದರ ಉದ್ದೇಶ ಮನಸ್ಸಿನೊಳಗಿನ ಸ್ವಾಯತ್ತಲಿಂಗವನ್ನು ಅರಿಯುವುದು. ಈ ದೃಷ್ಟಿಯಿಂದ ಚಾಮರಸನ ಭಕ್ತಿತತ್ತ್ವದಲ್ಲಿ ಬಾಹ್ಯಾಚಾರಕ್ಕಿಂತ ಅಂತರಂಗಾನುಭವಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತದೆ.
ಸ್ವಾಯತ್ತಲಿಂಗದ ಅನುಭವಕ್ಕೆ ಸಾಧಕನು ತನ್ನ ದೇಹ–ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬೇಕು. ತೆಗಳುವಿಕೆ, ಬಿಕ್ಕಳಿಕೆ, ಆಕಳಿಕೆ, ಕೆಮ್ಮು, ಆಲಸ್ಯ, ತೂಕಡಿಕೆ, ನಿದ್ರೆ, ಕನಸು, ಕಳವಳ ಮೊದಲಾದ ದೈಹಿಕ–ಮಾನಸಿಕ ಅಡ್ಡಿಗಳನ್ನು ಗೆಲ್ಲಬೇಕು. ಹಸಿವು, ಬಾಯಾರಿಕೆ ಮೊದಲಾದ ಉಪಟಳಗಳಿಗೆ ಅಂಜದೆ, ಪಂಚೇಂದ್ರಿಯಗಳ ವಶಕ್ಕೆ ಸಿಲುಕದೆ, ಯೋಗಸಾಧಕನಂತೆ ಸ್ಥಿರಚಿತ್ತನಾಗಬೇಕು. ಈ ಮೂಲಕ ಚಾಮರಸನು ಶಿವಭಕ್ತಿಯನ್ನು ಕೇವಲ ಭಾವನಾತ್ಮಕ ಅನುಭವವನ್ನಾಗಿ ಮಾಡದೆ, ದೇಹ, ಇಂದ್ರಿಯ, ಮನಸ್ಸು ಮತ್ತು ಚೈತನ್ಯದ ಶಿಸ್ತಿನ ಸಾಧನೆಯಾಗಿ ನಿರೂಪಿಸುತ್ತಾನೆ.
“ಶಿವಭಕ್ತಿಯ ಹಾದಿಗೆ ತನುವೇ ಕೀಲು” ಎಂಬ ಮಾತು ಈ ಭಾಗದ ಪ್ರಮುಖ ತಾತ್ಪರ್ಯವನ್ನು ಹಿಡಿದಿಡುತ್ತದೆ. ದೇಹವನ್ನು ನಿರ್ಲಕ್ಷಿಸಿ ಆತ್ಮಸಾಧನೆ ಸಾಧ್ಯವಿಲ್ಲ. ದೇಹವೇ ಸಾಧನೆಯ ಸಾಧನವಾಗಿರುವುದರಿಂದ ಅದನ್ನು ಪವಿತ್ರವಾಗಿ ಕಾಪಾಡಬೇಕು. ಮಾಂಸ, ಮಜ್ಜೆ, ರಕ್ತ, ಮಲಮೂತ್ರಗಳಿಂದ ಕೂಡಿದ ದೇಹವೆಂದು ಅದನ್ನು ಕೀಳಾಗಿ ಕಾಣದೆ, ಶಿವನು ವಾಸಿಸುವ ಪವಿತ್ರ ಸಾಧನವೆಂದು ಭಾವಿಸಿ ಲಿಂಗೋಪಾಧಿಯಲ್ಲಿ ಜೋಪಾನವಾಗಿ ಬಳಸಬೇಕು. ರೋಗಗಳನ್ನು ಗೆದ್ದು, ಶೀತೋಷ್ಣಾದಿ ದ್ವಂದ್ವಗಳನ್ನು ಸಹಿಸಿ, ನಿಂದೆ–ಸ್ತುತಿಗಳನ್ನು ಸಮನಾಗಿ ಸ್ವೀಕರಿಸಿ, ಪಂಚೇಂದ್ರಿಯಗಳಿಂದ ಹೊರಗೆ ಚಂಚಲವಾಗುವ ಮನಸ್ಸನ್ನು ಒಳಮುಖಗೊಳಿಸಿದಾಗ ಮಾತ್ರ ದೇಹದೊಳಗಿನ ಲಿಂಗದೇವನ ಅನುಭವ ಸಾಧ್ಯವಾಗುತ್ತದೆ.
ಇದರ ನಂತರ ಚಾಮರಸನು ಭಕ್ತಿಯ ಅತ್ಯಂತ ಸೂಕ್ಷ್ಮವಾದ ಹಂತವನ್ನು ನಿರೂಪಿಸುತ್ತಾನೆ. ಲಿಂಗದೇವನು ಅನುಭವಕ್ಕೆ ಸಿಗದಿದ್ದರೆ ಭಕ್ತಿರತಿ ಉಂಟಾಗುವುದಿಲ್ಲ; ಭಕ್ತಿರತಿಯಿಲ್ಲದೆ ಘನಾನುಭವ ಸಾಧ್ಯವಿಲ್ಲ; ಘನದಲ್ಲಿ ಸಮರಸತೆ ದೊರೆಯದೆ ಮುಕ್ತಿ ಸಾಧ್ಯವಿಲ್ಲ. ಸಂಸಾರಬಂಧನಕ್ಕೂ, ಲಿಂಗಾಂಗಸಾಮರಸ್ಯಕ್ಕೂ ಮೂಲ ಕಾರಣವಾದ ಮನಸ್ಸನ್ನೇ ಮೊದಲು ಗೆದ್ದು ಸಾಧಿಸಬೇಕು. ಮನಸ್ಸು ಸ್ವವಶವಾದಾಗ ಮಾತ್ರ ಭಕ್ತಿಯ ನಿಜಸ್ವರೂಪ ಬೆಳೆಯುತ್ತದೆ.
ಚಾಮರಸನು ಇಷ್ಟಲಿಂಗೋಪಾಸನೆಯ ಮುಂದಿನ ಹಂತವಾದ ಮನೋನಿಗ್ರಹ, ಪ್ರಾಣನಿಗ್ರಹ, ದೃಷ್ಟಿಯೋಗ, ಬಿಂದುಸಾಧನೆ ಮತ್ತು ತ್ರಿವಿಧ ಲಿಂಗಾನುಭವದ ಅತ್ಯಂತ ಸೂಕ್ಷ್ಮವಾದ ಯೋಗತತ್ತ್ವವನ್ನು ನಿರೂಪಿಸುತ್ತಾನೆ. ಪ್ರಭುದೇವರು ಬಸವಣ್ಣನಿಗೆ ಇಷ್ಟಲಿಂಗಭಕ್ತಿಯ ಮಾರ್ಗವನ್ನು ಬೋಧಿಸಿದ ನಂತರ, ಭಕ್ತಿಯು ಕೇವಲ ಬಾಹ್ಯ ಆಚರಣೆಯಾಗಿ ಉಳಿಯದೆ ಅಂತರಂಗದ ಅನುಭವವಾಗಿ ಪರಿಪಕ್ವವಾಗಬೇಕಾದರೆ ಸಾಧಕನು ತನ್ನ ಮನಸ್ಸು, ಪ್ರಾಣ ಮತ್ತು ದೃಷ್ಟಿಯನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ವಿವರಿಸುತ್ತಾನೆ.
ಕುದುರೆಯ ಕಡಿಯಾಳದ ಹಗ್ಗವನ್ನು ಬಿಗಿಯಾಗಿ ಹಿಡಿದು ಕುದುರೆಯನ್ನು ನಿಯಂತ್ರಿಸುವ ಸವಾರನಂತೆ, ಸಾಧಕನು ಇಂದ್ರಿಯಗಳ ದ್ವಾರದಿಂದ ಹೊರಮುಖವಾಗಿ ಓಡಾಡುವ ಮನಸ್ಸನ್ನು ಧೈರ್ಯದಿಂದ ತಡೆದು ನಿಲ್ಲಿಸಬೇಕು. ಮನಸ್ಸೇ ಮಾಯೆಯ ರೂಪದಲ್ಲಿ ಹೊರಗಿನ ವಿಷಯಗಳ ಕಡೆಗೆ ಓಡುತ್ತಾ ಸಾಧಕನನ್ನು ಲಿಂಗಾನುಭವದಿಂದ ದೂರ ಮಾಡುತ್ತದೆ. ಆದ್ದರಿಂದ ಇಂದ್ರಿಯಗಳ ಚಂಚಲತೆಯನ್ನು ನಿಯಂತ್ರಿಸಿ ಮನಸ್ಸನ್ನು ಒಳಮುಖಗೊಳಿಸುವುದು ಭಕ್ತಿಸಾಧನೆಯ ಪ್ರಮುಖ ಹಂತವಾಗಿದೆ.
ಆದರೆ ಮನಸ್ಸಿನ ನಿಯಂತ್ರಣ ಮಾತ್ರ ಸಾಕಾಗುವುದಿಲ್ಲ. ಚಾಮರಸನ ನಿರೂಪಣೆಯಲ್ಲಿ ಮನಸ್ಸು ಪ್ರಾಣವಾಯುವಿನೊಂದಿಗೆ ಅತ್ಯಂತ ನಿಕಟವಾಗಿ ಸಂಬಂಧ ಹೊಂದಿದೆ. ಪ್ರಾಣವಾಯು ದೇಹದೊಳಗೆ ಸಂಚರಿಸುತ್ತಾ ಮನಸ್ಸಿನ ಚಂಚಲತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರಾಣವಾಯುವಿನ ಚಲನೆಯನ್ನು ನಿಯಂತ್ರಿಸಿದಾಗ ಮನಸ್ಸೂ ಸ್ಥಿರವಾಗುತ್ತದೆ. ಪ್ರಾಣದ ಚಲನೆಯನ್ನು ನಿಲ್ಲಿಸಲು ಅಥವಾ ಸಮಸ್ಥಿತಿಗೆ ತರಲು ದೃಷ್ಟಿಯನ್ನು ಸ್ಥಿರಗೊಳಿಸಬೇಕು.
ಚಾಮರಸನು ಈ ಅನುಭವವನ್ನು ಪದ್ಯದ ಮೂಲಕ ಅತ್ಯಂತ ಸುಂದರವಾಗಿ ಸೂಚಿಸುತ್ತಾನೆ:
“ಆಲಿ ನಿಂದೊಡೆ ಸುಳಿದು ಸೂಸುವ
ಗಾಳಿ ನಿಲ್ಲುವುದು, ಗಾಳಿ ನಿಲೆ ಮನ
ಮೇಲೆ ನಿಲ್ಲುವುದು, ಮನವು ನಿಂದೊಡೆ ಬಿಂದು ನಿಂತುಹುದು…”
ಇಲ್ಲಿ ‘ಗಾಳಿ’ ಎಂದರೆ ಪ್ರಾಣವಾಯು; ‘ಮನ’ ಎಂದರೆ ಚಂಚಲ ಮನಸ್ಸು; ‘ಬಿಂದು’ ಎಂದರೆ ಸಾಧನೆಯ ಸೂಕ್ಷ್ಮ ಚೈತನ್ಯಸ್ಥಿತಿ. ಪ್ರಾಣದ ಚಲನೆ ನಿಂತಾಗ ಮನಸ್ಸು ಸ್ಥಿರವಾಗುತ್ತದೆ; ಮನಸ್ಸು ಸ್ಥಿರವಾದಾಗ ಬಿಂದು ಸ್ಥಿರವಾಗುತ್ತದೆ. ಬಿಂದು ಸ್ಥಿರವಾದಾಗ ಮಾಯೆಯ ಪ್ರಭಾವ ಕ್ಷೀಣಿಸಿ, ಸಾಧಕನೊಳಗೆ ನಿಜವಾದ ಆತ್ಮಜ್ಞಾನೋದಯವಾಗುತ್ತದೆ. ಈ ಸ್ಥಿತಿಯನ್ನೇ ಚಾಮರಸನು ಶಿವಯೋಗದ ದಾರಿಯೆಂದು ಸೂಚಿಸುತ್ತಾನೆ.
ಇಷ್ಟಲಿಂಗದಲ್ಲಿ ದೃಷ್ಟಿಯನ್ನು ಸ್ಥಿರಗೊಳಿಸಿದಾಗ ಮನೋಮಾರುತಗಳ ಚಂಚಲತೆ ಕ್ರಮೇಣ ಶಮನಗೊಳ್ಳುತ್ತದೆ. ಮನಸ್ಸು ಮತ್ತು ಪ್ರಾಣ ಸ್ಥಿರವಾದಾಗ ಸಾಧಕನೊಳಗೆ ಒಂದು ‘ಬಿಂದು’ ಉದಯಿಸುತ್ತದೆ. ಚಾಮರಸನ ವಿವರಣೆಯಲ್ಲಿ ಈ ಬಿಂದು ಕೇವಲ ಭೌತಿಕ ಬಿಂದುವಲ್ಲ; ಅದು ಸಾಧಕನ ಅಂತರಂಗದಲ್ಲಿ ಉದಯಿಸುವ ಚೈತನ್ಯದ ಕೇಂದ್ರ. ಲಿಂಗದ ಸ್ಮರಣೆಯಲ್ಲಿ ನೆಟ್ಟ ಮನಸ್ಸು, ಪ್ರಾಣಾಯಾಮ ಮತ್ತು ಏಕಾಗ್ರತೆಯಿಂದ ಪಕ್ವಗೊಂಡಾಗ ಈ ಬಿಂದು ಪ್ರಕಾಶಮಾನವಾಗುತ್ತದೆ. ಈ ಪ್ರಕಾಶವೇ ಸಾಧಕನ ನಿಜವಾದ ಅರಿವಿನ ಉದಯಕ್ಕೆ ಕಾರಣವಾಗುತ್ತದೆ.
ಈ ಬಿಂದುವು ದೇಹದೊಳಗೆ ವ್ಯಾಪಿಸುವ ಚೈತನ್ಯದ ಸಂಕೇತವಾಗುತ್ತದೆ. ರಸಾನುಭವದ ಮೂಲಕ ಅದು ದೇಹದ ಆಂತರಿಕ ಚೈತನ್ಯವನ್ನು ಜಾಗೃತಗೊಳಿಸುತ್ತದೆ. ಆದ್ದರಿಂದ ಸಾಧಕನು ತನುವಿನ ಸ್ವರೂಪ, ಮನಸ್ಸಿನ ಸ್ವರೂಪ, ಪ್ರಾಣದ ಸ್ವರೂಪ ಮತ್ತು ಬಿಂದುವಿನ ಸ್ವರೂಪವನ್ನು ವಿವೇಕದಿಂದ ಅರಿತು, ಅವುಗಳ ಪರಸ್ಪರ ಸಂಬಂಧವನ್ನು ಅನುಭವಿಸಬೇಕು. ಹೀಗೆ ತ್ರಿವಿಧ ಲಿಂಗದ ಅನುಭವದ ಮೂಲಕ ಸಾಧಕನು ಕ್ರಮೇಣ ಮಹಾಘನಲಿಂಗದ ಅನುಭವದ ಕಡೆಗೆ ಸಾಗುತ್ತಾನೆ.
ಇಲ್ಲಿ ಇಷ್ಟಲಿಂಗ–ಪ್ರಾಣಲಿಂಗ–ಭಾವಲಿಂಗ ಎಂಬ ತ್ರಿವಿಧ ಲಿಂಗತತ್ತ್ವವೂ ಮುಖ್ಯವಾಗುತ್ತದೆ. ಸಾಧಕನು ತನ್ನ ವಿಷಯವಾಸನೆಗಳನ್ನೆಲ್ಲ ಲಿಂಗದ ಮುಂದೆ ಅರ್ಪಿಸಿ, ಅವುಗಳನ್ನು ಪ್ರಸಾದಭಾವದಿಂದ ಸ್ವೀಕರಿಸುವ ಹಂತಕ್ಕೆ ಬಂದಾಗ, ತನ್ನ ತನುವಿನಲ್ಲಿರುವ ಸಂಸಾರದ ವಾಸನೆಗಳು ಕ್ಷೀಣಿಸುತ್ತವೆ. ವಿಷಯಭೋಗದ ಮನೋಭಾವವು ಶಿವಪ್ರಸಾದದ ಭಾವಕ್ಕೆ ಪರಿವರ್ತಿತವಾಗುತ್ತದೆ. ಈ ಪರಿವರ್ತನೆಯೇ ಸಾಧಕನನ್ನು ಮಹಾಘನಲಿಂಗದ ಅನುಭವಕ್ಕೆ ಕೊಂಡೊಯ್ಯುತ್ತದೆ.
ಇದರ ಮೂಲಕ ಚಾಮರಸನು ಒಂದು ಮಹತ್ವದ ಆಧ್ಯಾತ್ಮಿಕ ಸತ್ಯವನ್ನು ಪ್ರತಿಪಾದಿಸುತ್ತಾನೆ: ಬಾಹ್ಯ ಇಷ್ಟಲಿಂಗವು ಅಂತರಂಗದ ಪ್ರಾಣಲಿಂಗದ ಅರಿವಿಗೆ ದಾರಿ; ಪ್ರಾಣಲಿಂಗದ ಅನುಭವವು ಭಾವಲಿಂಗದ ಅರಿವಿಗೆ ದಾರಿ; ತ್ರಿವಿಧ ಲಿಂಗಾನುಭವವು ಅಂತಿಮವಾಗಿ ಮಹಾಘನಲಿಂಗದ ಸಮರಸಾನುಭವಕ್ಕೆ ದಾರಿ. ಹೀಗಾಗಿ ಲಿಂಗೋಪಾಸನೆಯ ಪ್ರಗತಿ ಹೊರಗಿನಿಂದ ಒಳಗೆ, ರೂಪದಿಂದ ಅರೂಪಕ್ಕೆ, ಆಚರಣೆಯಿಂದ ಅನುಭವಕ್ಕೆ ಮತ್ತು ಅನುಭವದಿಂದ ಐಕ್ಯಕ್ಕೆ ಸಾಗುತ್ತದೆ.
ಪ್ರಭುದೇವರು ಇಲ್ಲಿಗೆ ನಿಲ್ಲದೆ ಸಾಧಕನಿಗೆ ಮತ್ತೊಂದು ಮುಖ್ಯವಾದ ಸೂಚನೆಯನ್ನು ನೀಡುತ್ತಾನೆ. ಅಂತರಂಗದ ಅಧಿಪತ್ಯವನ್ನು ಪಡೆಯಲು ಅನುಭವವು ದೇಹದಲ್ಲಿ ಗಾಢವಾಗಿ ಅಳವಡಿಕೊಳ್ಳುವವರೆಗೆ ನಿರಂತರ ಸಾಧನೆ ಮಾಡಬೇಕು. ಕ್ಷಣಿಕವಾದ ಅನುಭವವನ್ನು ಅಂತಿಮ ಸಾಕ್ಷಾತ್ಕಾರವೆಂದು ಭಾವಿಸಬಾರದು. ಅನುಭವವು ಗಾಢವಾಗುತ್ತಾ ಮೇಲ್ಮುಖವಾಗಿ ಪ್ರವಹಿಸುವ ಸ್ಥಿತಿಯನ್ನು ಸಾಧಕನು ಗಮನಿಸಬೇಕು. ಇದಕ್ಕಾಗಿ ದೀರ್ಘಕಾಲ ನಿಯಮಬದ್ಧವಾದ ಸಾಧನೆ, ದೃಢನಿಶ್ಚಯ ಮತ್ತು ನಿರಂತರ ಅನುಷ್ಠಾನ ಅಗತ್ಯ.
ಇಲ್ಲಿ ಪ್ರಭುದೇವನ ಗುರುಸ್ವರೂಪವೂ ಅತ್ಯಂತ ಮಹತ್ವ ಪಡೆಯುತ್ತದೆ. ಸಾಧಕನು ತನ್ನ ಸಾಧನೆಯಲ್ಲಿ ಪಡೆದ ಅನುಭವದ ಹಂತಗಳನ್ನು ತಿಳಿದುಕೊಳ್ಳಲು, ಅವುಗಳಲ್ಲಿ ಉಂಟಾಗಬಹುದಾದ ಅಡಚಣೆಗಳನ್ನು ನಿವಾರಿಸಿಕೊಳ್ಳಲು ಮತ್ತು ಮುಂದಿನ ದಿವ್ಯಾನುಭವದ ಮಾರ್ಗವನ್ನು ಅರಿಯಲು ಗುರುವಿನ ಕರುಣೆ ಮತ್ತು ಮಾರ್ಗದರ್ಶನ ಅನಿವಾರ್ಯ. ಆದ್ದರಿಂದ ಪ್ರಭುದೇವರು ಲೋಕಕಲ್ಯಾಣಕ್ಕಾಗಿ ತೆರಳುವ ಮೊದಲು ಸಾಧಕರಿಗೆ, “ನಿಮ್ಮ ಅನುಭವವು ಪಕ್ವವಾದ ನಂತರ ಮತ್ತೆ ನಿಮ್ಮ ಬಳಿಗೆ ಬಂದು, ನಿಮ್ಮ ನಿಜವಾದ ಅನುಭವದ ಮುಂದಿನ ಹಂತಕ್ಕೆ ಬೇಕಾದ ಮಾರ್ಗವನ್ನು ತಿಳಿಸುತ್ತೇನೆ” ಎಂಬ ಭರವಸೆಯನ್ನು ನೀಡುತ್ತಾನೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
