ಗಜೇಂದ್ರಗಡ:
ತಾಲೂಕಿನ ಉಣಚಗೇರಿಯ ಅಕ್ಕಿ ಲೇಔಟ್‌ನಲ್ಲಿ ಗಂಗಮ್ಮ ಮತ್ತು ಸಂಗಪ್ಪ ಬೆನ್ನೂರ ಶರಣ ದಂಪತಿ ನಿರ್ಮಿಸಿದ “ಬಸವ ಬೆಳಕು” ನೂತನ ಮನೆಯ ಗುರುಪ್ರವೇಶ ಕಾರ್ಯಕ್ರಮ ಈಚೆಗೆ ಬಸವತತ್ವದ ಸರಳ ಹಾಗೂ ಅರ್ಥಪೂರ್ಣ ವಿಧಿವಿಧಾನಗಳೊಂದಿಗೆ ನಡೆಯಿತು.
ಇಳಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಅಪ್ಪಗಳವರು ಹಾಗೂ ಶಿರೂರ ಮಹಾಂತ ತೀರ್ಥದ ಪೂಜ್ಯ ಡಾ. ಬಸವಲಿಂಗ ಮಹಾಸ್ವಾಮಿಗಳ ಸನ್ನಿಧಾನ ಮತ್ತು ಗಂಗಾವತಿಯ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಕೆ. ಪಂಪಣ್ಣ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.

ಮನೆಯ ಸಮೀಪದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯ ಗ್ರಂಥಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕುಟುಂಬಸ್ಥರು, ಬಂಧು-ಮಿತ್ರರು ಬಸವಣ್ಣನವರ ಭಾವಚಿತ್ರ ಮತ್ತು ವಚನ ಗ್ರಂಥಗಳನ್ನು ತಲೆಯ ಮೇಲೆ ಹೊತ್ತು, ವಚನ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿ ನೂತನ ಮನೆಗೆ ತಂದರು.
ಮೊದಲಿಗೆ ನೂತನ ಮನೆಯ ಮುಂಭಾಗದಲ್ಲಿ ಸಂಗಪ್ಪ ದೊಡ್ಡಪ್ಪ ಬೆನ್ನೂರ ಅವರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು.

ಬಸವಣ್ಣನವರ ಭಾವಚಿತ್ರ ಮತ್ತು ವಚನ ಗ್ರಂಥಗಳೊಂದಿಗೆ ಮನೆಯೊಳಗೆ ಪ್ರವೇಶಿಸಿ ಸಭಾಂಗಣದಲ್ಲಿ ಅವನ್ನು ಸ್ಥಾಪಿಸಲಾಯಿತು. ನೆರೆದ ಕುಟುಂಬಸ್ಥರು, ಬಂಧು ಮಿತ್ರರೆಲ್ಲರೂ ಒಟ್ಟಾಗಿ ಬಸವಾದಿ ಶರಣರ ಐದು ವಚನಗಳ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಗಂಗಾವತಿಯ ಕೆ. ಪಂಪಣ್ಣ ಹಾಗೂ ಬಳಗದವರು ವಚನ ಪಠಣ ಹಾಗೂ ಗಾಯನದ ಮೂಲಕ ಎಲ್ಲ ಧಾರ್ಮಿಕ ಕ್ರಿಯೆಗಳನ್ನು ನಡೆಸಿದರು.

ಪೂಜ್ಯದ್ವಯರಾದ ಡಾ. ಮಹಾಂತಪ್ಪಗಳು, ಡಾ. ಬಸವಲಿಂಗ ಸ್ವಾಮೀಜಿ ಅನುಭಾವ ನೀಡುತ್ತ, ಲಿಂಗಾಯತರಾದ ನಾವುಗಳು ನಮ್ಮ ಶರಣರು ಕೊಡಮಾಡಿದ ಅತ್ಯಮೂಲ್ಯ ವಚನ ಸಾಹಿತ್ಯವನ್ನು ಓದಿ ಅರಿತುಕೊಳ್ಳಬೇಕು. ಅದರಿಂದ ಮೌಢ್ಯ, ಕಂದಾಚಾರಗಳನ್ನು ಮನೆ-ಮನಗಳಿಂದ ದೂರಮಾಡಿಕೊಳ್ಳಬೇಕು.
ಮನೆಯ ಸದಸ್ಯರೆಲ್ಲ ಪ್ರತಿನಿತ್ಯ ಲಿಂಗಪೂಜೆ ಮಾಡಿಕೊಂಡು, ಎಲ್ಲರ ಒಳಿತು ಬಯಸುತ್ತ ಶಾಂತಿ, ನೆಮ್ಮದಿ, ಸಂತಸದಿಂದ ಬಾಳ ಸಾಗಿಸಬೇಕೆಂದರು.

ಕಾರ್ಯಕ್ರಮದಲ್ಲಿ ಬಸವಾನಂದ ದೇವರು, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು ಸಂಘಟನೆಗಳ ಮುಖಂಡರಾದ ಕಳಕಯ್ಯ ಸಾಲಿಮಠ, ಶರಣಪ್ಪ ಹಡಪದ, ಕಳಕಪ್ಪ ಪತಂಗರಾಯ, ಬಸವರಾಜ ಚೋಳಿನ, ಸುರೇಶ ಚೋಳಿನ, ಬಸವರಾಜ ಕೊಟಗಿ, ಬಸವರಾಜ ಹೂಗಾರ, ರವಿ ಗಡೇದವರ, ರವಿ ಹಾಸಿಗಲ್ಲ, ಎಸ್. ಎಸ್. ವಾಲಿ, ಬಸವರಾಜ ವಾಲಿ, ಸಾಗರ ವಾಲಿ, ಕುಮಾರ ಅಕ್ಕಿ, ಗುರುಲಿಂಗಯ್ಯ ಓದಸುಮಠ, ಬಸವರಾಜ ಅಂಗಡಿ, ಬಳೂಟಗಿ ಗ್ರಾಮದ ಶರಣೆಯರು, ಬಸವ ಬಳಗದ ಸದಸ್ಯರು, ಬಂಧು-ಮಿತ್ರರು, ಗ್ರಾಮಸ್ಥರು ಭಾಗವಹಿಸಿ ಬೆನ್ನೂರ ಕುಟುಂಬಕ್ಕೆ ಶುಭಕೋರಿದರು.
