‘ವೈಚಾರಿಕತೆ ಬೆಳೆಸಲು ನಾಗರಪಂಚಮಿ ಬದಲು ಬಸವಪಂಚಮಿ ಆಚರಿಸಿ’

ತಾವರಗೇರಿಯಲ್ಲಿ ‘ಬಸವ ಪಂಚಮಿ-ವೈಚಾರಿಕ ಚಿಂತನೆ’ ಕಾರ್ಯಕ್ರಮ

ತಾವರಗೇರಾ:

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಬಸವ ಪಂಚಮಿ-ವೈಚಾರಿಕ ಚಿಂತನೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.

ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬುದ್ಧ ವಿಹಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹಾಗೂ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಉಪನ್ಯಾಸ ಕಾರ್ಯಕ್ರಮವನ್ನು ಬುದ್ಧ ವಿಹಾರ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾದ ಡಾ. ಎರ್ರಿಸ್ವಾಮಿ ಹೆಚ್. ವಿಶೇಷ ಉಪನ್ಯಾಸ ನೀಡಿದರು.

21ನೇ ಶತಮಾನಕ್ಕೆ ಕಾಲಿಟ್ಟರೂ ದೇಶದಲ್ಲಿ ಮೂಢನಂಬಿಕೆ, ಕಂದಾಚಾರಗಳು ಜನರನ್ನು ಮಾನಸಿಕ ಗುಲಾಮಗಿರಿಗೆ ತಳ್ಳುತ್ತಿದೆ. ವೈಜ್ಞಾನಿಕ ಮನೋಭಾವವು ಮನುಷ್ಯನನ್ನು ಬಿಡುಗಡೆಗೊಳಿಸಿ ಕ್ರಿಯಾಶೀಲವಾಗಿರುವಂತೆ ಕೆಲಸ ಮಾಡುತ್ತದೆ.

ವೈಚಾರಿಕ ಚಿಂತನೆಯು ಪ್ರತಿಯೊಬ್ಬರ ಜೀವನಕ್ರಮವಾದಾಗ ಮಾತ್ರ ಸಾಮಾಜಿಕ ಹಾಗೂ ಆರ್ಥಿಕ ಜೀವನ ಸುಧಾರಿಸಲು ಸಹಕಾರಿಯಾಗುತ್ತದೆ.

ಧಾರ್ಮಿಕ ಹಬ್ಬ ಆಚರಣೆಗಳ ಮೂಲಕ ಮೌಢ್ಯತೆ, ಕಂದಾಚಾರ, ಮೂಢನಂಬಿಕೆಗಳಂತಹ ಅವೈಜ್ಞಾನಿಕ ಆಚರಣೆಗಳು ಜನರ ನಂಬಿಕೆಗಳಾಗಿ ಧಾರ್ಮಿಕ ಶೋಷಣೆಗೆ ಮೂಲ ಕಾರಣವಾಗಿದೆ. ಇಂದಿನ ಜೆನ್ ಜೀ ಜನರೇಷನ್ ಯುಗದ ನವ ಯುವಸಮೂಹವು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಸಾಮಾಜಿಕ ಆಗುಹೋಗುಗಳ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಸಾಮಾಜಿಕ ಜವಾಬ್ದಾರಿಯನ್ನು ಕೈಗೊಳ್ಳಬೇಕಿದೆ.

12 ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ವೈಚಾರಿಕ ಕ್ರಾಂತಿ ಸಮಸಮಾಜದ ನಿರ್ಮಾಣಕ್ಕೆ, ಕಾಯಕ ಶ್ರಮದ ಮೂಲಕ ಅಂದಿನ ಶೋಷಕ ವ್ಯವಸ್ಥೆಯ ವಿರುದ್ಧ ವೈಚಾರಿಕ ಕ್ರಾಂತಿ ನಡೆಸಿದರು.

ಅವರ ವಚನಗಳ ಸಾರಾಂಶವನ್ನು ಅರ್ಥೈಸಿಕೊಂಡು ಅದನ್ನು ಜೀವನದ ಆಚರಣೆಗೆ ಒಳಪಡಿಸಬೇಕಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲಾಲಸಾಬ್ ಉಪನ್ಯಾಸಕರು, ನಾಗರ ಪಂಚಮಿಯ ಬದಲಾಗಿ ಬಸವ ಪಂಚಮಿ ಆಚರಣೆಯು ಒಂದು ವೈಚಾರಿಕ ಕಾರ್ಯಕ್ರಮವಾಗಿದ್ದು, ಇದರ ಉದ್ಧೇಶ ಜನರಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕ ಚಿಂತನೆಯನ್ನು ಜಾಗೃತಗೊಳಿಸುವುದಾಗಿದೆ.

ಆ ನಿಟ್ಟಿನಲ್ಲಿ ಬುದ್ಧ, ಬಸವ ಅಂಬೇಡ್ಕರ್, ಗಾಂಧಿ, ಜ್ಯೋತಿಬಾ ಫುಲೆ, ಪೆರಿಯಾರ್, ನಾರಾಯಣ ಗುರು ಅವರು ಸಾಮಾಜಿಕ ಚಳವಳಿ ನಡೆಸಿ ವೈಚಾರಿಕ ದಾರಿಯನ್ನು ಹಾಕಿಕೊಟ್ಟಿದ್ದಾರೆ, ಅಂತಹ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ವಿದ್ಯಾರ್ಥಿ, ಯುವಜನರು ಜೀವನದಲ್ಲಿ ಅಳವಡಿಸಿಕೊಂಡು ಅವರ ದಾರಿಯಲ್ಲಿ ಸಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಯಮನೂರಪ್ಪ ಪ್ರಭಾರ ಪ್ರಾಂಶುಪಾಲರು ಮಾತನಾಡಿ, ಬಸವ ಪಂಚಮಿ ವೈಚಾರಿಕ ಚಿಂತನೆ ಕಾರ್ಯಕ್ರಮ. ಇಂದಿನ ಶೋಷಣೆ ವ್ಯವಸ್ಥೆಯ ವಿರುದ್ಧ ಒಂದು ಪ್ರಬಲ ವೈಚಾರಿಕ ಜಾಗೃತಿ ಮೂಡಿಸುವ ಚಳುವಳಿಯಾಗಿ ಎಲ್ಲರನ್ನು ಒಳಗೊಂಡು ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯ ಹಾಗೂ ಮಾನವ ಬಂಧುತ್ವವನ್ನು ವೈಜ್ಞಾನಿಕ ತಳಹದಿಯ ಮೇಲೆ ಕಟ್ಟುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ರಾಘವೇಂದ್ರ ರೆಡ್ಡಿ, ಶಶಿಕಲಾ, ಏಜಾಜ್ ಹುಸೇನ್, ಗುರುರಾಜ ಮಾಲೀಪಾಟೀಲ, ವಿಜಯಕುಮಾರ ಹಾಗೂ ಮಾನವ ಬಂಧುತ್ವ ವೇದಿಕೆ ಕುಷ್ಟಗಿ ತಾಲೂಕು ಘಟಕದ ಸಂಚಾಲಕರಾದ ಬೆಟ್ಟಪ್ಪ ಯತ್ನಟ್ಟಿ ವಕೀಲರು, ಮಹಿಳಾ ಬಂಧುತ್ವ ವೇದಿಕೆ ತಾಲೂಕು ಘಟಕದ ಸಂಚಾಲಕರಾದ ಗೌರಮ್ಮ, ಕಾಲೇಜಿನ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *