‘ಇಷ್ಟಲಿಂಗ ಒಳಗಿನ ಅರಿವನ್ನು ಜಾಗೃತಗೊಳಿಸುವ ಕುರುಹು’

ಬಸವ ಮೀಡಿಯಾ
ಬಸವ ಮೀಡಿಯಾ

ಬೆಕ್ಕಿನಕಲ್ಮಠದಲ್ಲಿ ‘ವಚನಗಳಲ್ಲಿ ಜೀವನ ಕೌಶಲ್ಯಗಳು’ ಉಪನ್ಯಾಸ ಕಾರ್ಯಕ್ರಮ

ಶಿವಮೊಗ್ಗ:

ದೇವರು ಬಹುಜನರು ತಿಳಿದುಕೊಂಡಿರುವಂತೆ ಕಲ್ಲು, ಮಣ್ಣು, ಮರ ಅಥವಾ ಹೊರಗಿನ ವಸ್ತುಗಳಲ್ಲಿ ಇಲ್ಲ. ಮನುಷ್ಯ ತನ್ನೊಳಗಿನ ಅರಿವು ಮತ್ತು ಚೈತನ್ಯವನ್ನು ಜಾಗೃತಗೊಳಿಸಿಕೊಂಡಾಗ ಅಲ್ಲಿಯೇ ದೈವತ್ವವನ್ನು ಕಂಡುಕೊಳ್ಳಲು ಸಾಧ್ಯ ಎಂದು ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ ಹೇಳಿದರು.

ಶಿವಮೊಗ್ಗದ ಹೊರವಲಯದಲ್ಲಿರುವ ಯಲವಟ್ಟಿ ಗ್ರಾಮದ ಬೆಕ್ಕಿನಕಲ್ಮಠದಲ್ಲಿ ನಡೆದ “ವಚನಗಳಲ್ಲಿ ಜೀವನ ಕೌಶಲ್ಯಗಳು” ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಚನಕಾರರು, ದೇವರನ್ನು ಹೊರಗೆ ಹುಡುಕುವ ಬದಲು ಮನುಷ್ಯನ ಅಂತರಂಗವನ್ನು ಅರಿತುಕೊಳ್ಳುವಂತೆ ಹಾಗೂ ತನ್ನೊಳಗಿನ ಸತ್ಯ ಮತ್ತು ಚೈತನ್ಯವನ್ನು ಕಂಡುಕೊಳ್ಳುವಂತೆ ಸಂದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಷ್ಟಲಿಂಗವು ಕೇವಲ ಪೂಜಿಸುವ ವಸ್ತುವಲ್ಲ, ಮನುಷ್ಯನೊಳಗಿನ ಅರಿವನ್ನು ಜಾಗೃತಗೊಳಿಸಿಕೊಳ್ಳುವ ಕುರುಹು ಮತ್ತು ಆತ್ಮಾವಲೋಕನದ ಸಂಕೇತವಾಗಿದೆ ಎಂದು ಅವರು ವಿವರಿಸಿದರು.

ಶರಣರ ವಚನಗಳು ಕೇವಲ ಧಾರ್ಮಿಕ ವಿಚಾರಗಳನ್ನು ಪ್ರತಿಪಾದಿಸುವ ಸಾಹಿತ್ಯವಾಗಿರದೆ, ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಅಗತ್ಯವಾದ ಜೀವನ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಕಲಿಸುವ ಮಾರ್ಗದರ್ಶಕ ಸಾಹಿತ್ಯವಾಗಿವೆ. ಕಾಯಕ, ದಾಸೋಹ, ಸಮಾನತೆ, ಸತ್ಯ, ಪ್ರಾಮಾಣಿಕತೆ, ಆತ್ಮವಿಶ್ವಾಸ ಮತ್ತು ಮಾನವೀಯತೆಯಂತಹ ವಚನಕಾರರ ಮೌಲ್ಯಗಳು ಇಂದಿನ ಬದುಕಿಗೂ ಅತ್ಯಂತ ಪ್ರಸ್ತುತವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದಲ್ಲಿಯೂ ಆರೋಗ್ಯಕರ ಬದಲಾವಣೆ ತರಲು ಸಾಧ್ಯ ಎಂದು ಡಾ. ಮಂಜುನಾಥ ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರು ಹಾಗೂ ರೋಟರಿ ಗೌರ್ನರ್ ಪ್ರೊ. ಎ.ಎಸ್. ಚಂದ್ರಶೇಖರ ಮಾತನಾಡಿ, ಇಷ್ಟಲಿಂಗದ ವೈಜ್ಞಾನಿಕ ಮಹತ್ವವನ್ನು ವಿವರಿಸಿದರು. ಇಷ್ಟಲಿಂಗವು ಕೇವಲ ಧಾರ್ಮಿಕ ಸಂಕೇತವಲ್ಲದೆ, ಏಕಾಗ್ರತೆ ಮತ್ತು ಆತ್ಮಾವಲೋಕನಕ್ಕೆ ಪ್ರೇರಣೆ ನೀಡುವ ಸಾಧನೆಯಾಗಿದೆ.

ಇಷ್ಟಲಿಂಗದ ಪರಿಕಲ್ಪನೆಯಲ್ಲಿರುವ ವೈಜ್ಞಾನಿಕ ಹಾಗೂ ಮನೋವೈಜ್ಞಾನಿಕ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಕ್ಕಿನಕಲ್ಮಠದ ಪೂಜ್ಯ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ, ಮನುಷ್ಯನ ಬದುಕಿನಲ್ಲಿ ಬಾಹ್ಯ ಜ್ಞಾನಕ್ಕಿಂತ ಅಂತರಂಗದ ಅರಿವಿಗೆ ಹೆಚ್ಚಿನ ಮಹತ್ವವಿದೆ ಎಂದರು.

“ನಮ್ಮೊಳಗಿನ ಅರಿವೇ ನಮಗೆ ಗುರು”ಎಂಬ ಸತ್ಯವನ್ನು ಬಸವೇಶ್ವರರು ತಮ್ಮ ಚಿಂತನೆ ಮತ್ತು ಬದುಕಿನ ಮೂಲಕ ಅತ್ಯಂತ ಸುಂದರವಾಗಿ ತೋರಿಸಿಕೊಟ್ಟಿದ್ದಾರೆ.

ಮನುಷ್ಯ ತನ್ನೊಳಗಿನ ಅರಿವನ್ನು ಜಾಗೃತಗೊಳಿಸಿಕೊಂಡು ಸತ್ಯ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಮಾರ್ಗದಲ್ಲಿ ಸಾಗಿದಾಗ ಜೀವನ ಸಾರ್ಥಕವಾಗುತ್ತದೆ. ಬಸವಣ್ಣನವರ ಈ ಒಳಜಾಗೃತಿಯ ಸಂದೇಶ ಇಂದಿನ ಸಮಾಜಕ್ಕೂ ದಾರಿದೀಪವಾಗಿದೆ ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರಾದ ಜಗದೀಶ ಹಾಗೂ ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಗಣಪತಿ ಮಾತನಾಡಿದರು.

ದಾಸೋಹಿಗಳಾದ ಯಲವಟ್ಟಿ ಗ್ರಾಮದ ಲೋಕೇಶಪ್ಪ ಅವರು ಸ್ವಾಗತಿಸಿದರು. ಶಿಕ್ಷಕ ಹಾರನಹಳ್ಳಿ ಕರಿಬಸವಯ್ಯ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *