ಐತಿಹಾಸಿಕ ಬಸವೇಶ್ವರ ಜಾತ್ರೆ ಪಲ್ಲಕ್ಕಿ ಉತ್ಸವದೊಂದಿಗೆ ಆರಂಭ

ಬಸವರಾಜ ನಂದಿಹಾಳ
ಬಸವರಾಜ ನಂದಿಹಾಳ

ಬಸವನಬಾಗೇವಾಡಿ

ಶ್ರಾವಣ ಮಾಸದಲ್ಲಿ ಆ.31 ರಿಂದ ಸೆ.4 ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಪಟ್ಟಣದ ಆರಾಧ್ಯದೇವ ಬಸವೇಶ್ವರರ ಐತಿಹಾಸಿಕ ಜಾತ್ರಾಮಹೋತ್ಸವವು ಸೋಮವಾರ ಸಾಂಪ್ರದಾಯಿಕ ಮೂಲನಂದೀಶ್ವರ ಪಲ್ಲಕ್ಕಿ ಉತ್ಸವಕ್ಕೆ ಅಪಾರ ಭಕ್ತರ ಬಸವ ಜಯಘೋಷದೊಂದಿಗೆ ಚಾಲನೆ ದೊರಕಿ, ಪಲ್ಲಕ್ಕಿ ಉತ್ಸವವು ಭಕ್ತಿ ಭಾವದೊಂದಿಗೆ ಸಂಭ್ರಮ, ಸಡಗರದಿಂದ ನಡೆಯಿತು.

ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದಲ್ಲಿ ಮೂಲನಂದೀಶ್ವರ ದೇವರಿಗೆ ಬೆಳಿಗ್ಗೆ ರುದ್ರಾಭಿಷೇಕ ನೆರವೇರಿದ ನಂತರ ಮೂಲನಂದೀಶ್ವರ ದೇವರಿಗೆ ಜಾತ್ರೆಯ ಅಂಗವಾಗಿ ಬೆಳ್ಳಿ ಅಲಂಕಾರ, ವಿಶೇಷ ಪೂಜೆಯನ್ನು ಅರ್ಚಕರಾದ ಗೌರಿಶಂಕರ ಚರಂತಿಮಠ, ವಿಶ್ವನಾಥ ಕಾಳಹಸ್ತೇಶ್ವರಮಠ ನೆರವೇರಿಸಿದರು.

ಬೆಳಗಿನ ಜಾವ ಮೂರು ಗಂಟೆಯಿಂದಲೇ ರಾಜ್ಯದ ವಿವಿಧ ಜಿಲ್ಲೆ, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ಅಭಿಷೇಕ ಮಾಡಿಸಿ ಭಕ್ತಿಭಾವ ಸಮರ್ಪಿಸಿದರು. ಅಪಾರ ಪ್ರಮಾಣದ ಭಕ್ತರು ದೇವಸ್ಥಾನದ ಸುತ್ತಲೂ ದೀಡ್ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಿದರು. ಕೆಲವರು ದೇವರಿಗೆ ಎಲೆ ಪೂಜೆ ಮಾಡಿಸಿದರು.

ಸಂಪ್ರದಾಯದಂತೆ ದೇವಸ್ಥಾನದಿಂದ ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು, ಪಟ್ಟಣದ ಹಿರಿಯರು, ಮುಖಂಡರು, ಬಸವಭಕ್ತರು ವಿರಕ್ತಮಠಕ್ಕೆ ತೆರಳಿ ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿ, ಶಿವಾನಂದ ಈರಕಾರ ಮುತ್ಯಾ ಅವರನ್ನು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ವಿವಿಧ ವಾದ್ಯಮೇಳದೊಂದಿಗೆ ಬರಮಾಡಿಕೊಂಡರು.

ನಂತರ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಮಾಜಿಸಚಿವ, ಶಾಸಕ ಶಿವಾನಂದ ಪಾಟೀಲ ಅವರು ಹಿರಿಯರ ಸಮ್ಮುಖದಲ್ಲಿ ದೇವಸ್ಥಾನದಲ್ಲಿದ್ದ ಬೆಳ್ಳಿ ನಂದಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಕಟ್ಟೆಯವರೆಗೆ ತೆಗೆದುಕೊಂಡು ಬಂದು, ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಬೆಳ್ಳಿ ಉತ್ಸವ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ನೆರವೇರಿದ ನಂತರ ಭಕ್ತರ ಜಯಘೋಷದೊಂದಿಗೆ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರಕಿತು.

ಶಾಸಕ ಶಿವಾನಂದ ಪಾಟೀಲ ಅವರು ದೇವಸ್ಥಾನದ ಆವರಣ ದಾಟುವವರೆಗೂ ಪಲ್ಲಕ್ಕಿ ಹೊತ್ತು ಸಾಗಿದರು.
ನಂತರ ಪಲ್ಲಕ್ಕಿಯು ಸಂಪ್ರದಾಯದಂತೆ ಶಿವಪ್ಪ ಮೋದಿ ಅವರ ಮನೆಗೆ ತೆರಳಿ ಐತಿಹಾಸಿಕ ಹೋರಿಮಟ್ಟಿ ಗುಡ್ಡದ ದೇವಸ್ಥಾನದ ಕಳಸಕ್ಕೆ ಪೂಜೆ ಸಲ್ಲಿಸಿದ ನಂತರ ನಿಡಗುಂದಿ ಮನೆತನದವರು ಕಳಸ ಹೊತ್ತುಕೊಂಡ ನಂತರ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಅಗಸಿ, ಬಸವೇಶ್ವರ ವೃತ್ತ, ಇಂಗಳೇಶ್ವರ ರಸ್ತೆ ಮಾರ್ಗವಾಗಿ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ಅಪಾರ ಭಕ್ತರೊಂದಿಗೆ ತೆರಳಿತು.

ಹೋರಿಮಟ್ಟಿ ಗುಡ್ಡಕ್ಕೆ ಪಲ್ಲಕ್ಕಿ ಉತ್ಸವ ತೆರಳಿದ ನಂತರ ಗುಡ್ಡದಲ್ಲಿ ಶಿವಾನಂದ ಈರಕಾರ ಮುತ್ಯಾ ಅವರಿಗೆ ಈ ವರ್ಷದ ಹೇಳಿಕೆಗಳು ಜರುಗಿದವು. ನಂತರ ಬಸವನಹಟ್ಟಿ ಗ್ರಾಮಕ್ಕೆ ತೆರಳಿದ ಗ್ರಾಮಸ್ಥರು ಪಲ್ಲಕ್ಕಿ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿಯು ಬುತ್ತಿ ಬಸವಣ್ಣ ದೇವಸ್ಥಾನಕ್ಕೆ ಬರುತ್ತಿದ್ದಂತೆ ಭಕ್ತರು ಪಲ್ಲಕ್ಕಿ ಹೊತ್ತು ಭಕ್ತಿ ಭಾವ ಮೆರೆದರು.

ಕೆಲ ಭಕ್ತರು ಪಲ್ಲಕ್ಕಿ ಮುಂದೆ ಉರುಳುಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಿದರು. ಇದೇ ಸಂದರ್ಭದಲ್ಲಿ ಕೊಟ್ರಶೆಟ್ಟಿ ಮನೆತನದವರು ಮನೆಯಿಂದ ತಂದಿದ್ದ ಕಿಚಡಿ, ಭಾನ, ಚಟ್ನಿ, ಚಪಾತಿ, ಕುಂಬಳಕಾಯಿ, ಪಲ್ಯೆ ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನು ಭಕ್ತರಿಗೆ ದಾಸೋಹ ಸೇವೆಗೈದರು.

ನಂತರ ಪಲ್ಲಕ್ಕಿಗೆ ವಾಡೇದ ಅವರ ತೋಟಕ್ಕೆ ಆಗಮಿಸಿದ ನಂತರ ಭಕ್ತರು ಪೂಜೆ ಸಲ್ಲಿಸಿದರು. ಸಂಜೆ ಪಲ್ಲಕ್ಕಿಯು ಪಟ್ಟಣದ ಕಂಬಿಕಟ್ಟೆಗೆ ಆಗಮಿಸುತ್ತಿದ್ದಂತೆ ಅಪಾರ ಸಂಖ್ಯೆಯ ಭಕ್ತಸಮೂಹ ಬಸವ ಜಯಘೋಷದೊಂದಿಗೆ ಭವ್ಯವಾಗಿ ಸ್ವಾಗತಿಸಿಕೊಂಡರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಆಕರ್ಷಕ ಸಿಡಿಮದ್ದು ಜನಮನಸೂರೆಗೊಂಡಿತು. ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರದಿಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕಲಾತಂಡಗಳ ಮೆರಗು ಪಲ್ಲಕ್ಕಿ ಉತ್ಸವದಲ್ಲಿ ಭಟ್ಕಳದ ಝಂಡಾ ಮೇಳ, ಕೊಣ್ಣೂರಿನ ರಾಯಣ್ಣ ಮಹಿಳಾ ಕಲಾತಂಡದ ಡೊಳ್ಳು, ಸಾಂಗಲಿಯ ಝಾಂಜಾ ಮೇಳ, ಸಾರವಾಡದ ವಿವಿಧ ಗೊಂಬೆಗಳು, ಕೊಬನೂರಿನ ಕರಡಿಮಜಲು, ಬಸವನಬಾಗೇವಾಡಿಯ ಶ್ರೀಗುರು ಬ್ಯಾಂಜೋ ಬ್ರಾಸ್ ಬ್ಯಾಂಡ್, ಸೇರಿದಂತೆ ವಿವಿಧ ಕಲಾತಂಡಗಳು, ವಾದ್ಯಮೇಳಗಳು, ಗಜರಾಜ ಉತ್ಸವಕ್ಕೆ ಮೆರಗು ತಂದವು.

ಪಲ್ಲಕ್ಕಿ ಉತ್ಸವ ಹೋರಿಮಟ್ಟಿಗೆ ಗುಡ್ಡಕ್ಕೆ ತೆರಳಿದ ನಂತರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅಪಾರ ಭಕ್ತರು ಆಗಮಿಸಿದ್ದರಿಂದ ದರ್ಶನ ಪಡೆಯಲು ಕಾಯುವಂತಾಯಿತು. ಇದರಿಂದ ಚಿಕ್ಕಮಕ್ಕಳು ವಿಪರೀತ ಸೆಖೆಯಿಂದ ತಾಪತ್ರಯ ಅನುಭವಿಸುವಂತಾಯಿತು. ದೇವಸ್ಥಾನದಲ್ಲಿ ಪ್ಯಾನ್ ವ್ಯವಸ್ಥೆ ಮಾಡಬೇಕಾಗಿತ್ತು ಎಂಬ ಮಾತು ಕೇಳಿ ಬಂದಿತು.

ಪಲ್ಲಕ್ಕಿ ಉತ್ಸವದಲ್ಲಿ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರ ಆಯುಕ್ತ ಗುರುನಾಥ ದಡ್ಡೆ, ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ, ವಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ, ವಿವಿಧ ಸಂಘ-ಸಂಸ್ಥೆಯ ಮುಖ್ಯಸ್ಥರು, ಮುಖಂಡರಾದ ಭರತು ಅಗರವಾಲ, ಬಸವರಾಜ ಹಾರಿವಾಳ, ಚಂದ್ರಶೇಖರಗೌಡ ಪಾಟೀಲ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ರವಿಗೌಡ ಚಿಕ್ಕೊಂಡ, ವಿನುತ ಕಲ್ಲೂರ, ಸುರೇಶಗೌಡ ಪಾಟೀಲ, ರವಿ ರಾಠೋಡ, ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಮಲ್ಲಿಕಾರ್ಜುನ ನಾಯಕ, ಜಟ್ಟಿಂಗರಾಯ ಮಾಲಗಾರ, ರವಿ ಪಟ್ಟಣಶೆಟ್ಟಿ, ಮಹಾಂತೇಶ ಹಂಜಗಿ, ವ್ಹಿ.ಬಿ.ಮರ್ತುರ, ರಾಜೇಂದ್ರ ಪತ್ತಾರ, ಅನಿಲ ದುಂಬಾಳಿ, ಮೀರಾಸಾಬ ಕೊರಬು, ರಮೇಶ ಯಳಮೇಲಿ, ಸಂಗಯ್ಯ ಒಡೆಯರ, ಜಗದೀಶ ಕೊಟ್ರಶೆಟ್ಟಿ, ಉಮೇಶ ಹಾರಿವಾಳ, ಡಾ.ಬಸವರಾಜ ಕೋಟಿ, ಬಸವರಾಜ ರಾಯಗೊಂಡ, ಸಂಗಯ್ಯ ಕಾಳಹಸ್ತೇಶ್ವರಮಠ, ಶಿವಲಿಂಗಯ್ಯ ತೆಗ್ಗಿನಮಠ, ಸಂಗನಗೌಡ ಚಿಕ್ಕೊಂಡ, ಹರೀಶ ಅಗರವಾಲ, ಸಂಗನಬಸು ಪೂಜಾರಿ, ಬಸವರಾಜ ಪೂಜಾರಿ, ಬಸವರಾಜ ಅವಟಿ, ಅಮರ ಗಾಯಕವಾಡ, ಭದ್ರು ಮಣ್ಣೂರ, ರವಿ ನಾಯ್ಕೋಡಿ, ವಿ.ಬಿ.ಮರ್ತುರ, ನೀಲು ನಾಯಕ, ಸುಭಾಸ ಗಾಯಕವಾಡ,ಬಸವರಾಜ ಚೌರಿ ಸೇರಿದಂತೆ ಅಪಾರ ಪ್ರಮಾಣದ ಜನಸ್ತೋಮ ಭಾಗವಹಿಸಿತ್ತು.

ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ ವಿವೇಕ ಬಿಗ್ರೇಡ್ ಸೇರಿದಂತೆ ವಿವಿಧ ಯುವಕರು ಭಕ್ತರಿಗೆ ಪ್ರಸಾದ ಸೇವೆ ಸಲ್ಲಿಸಿದರು. ವಿವೇಕ ಬಿಗ್ರೇಡ್ ವಿಶೇಷವಾಗಿ ಮಾದಲಿ, ಮಸಾಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದರು. ಪಿಐ ಗುರುನಾಥ ದಾಶ್ಯಾಳ ಅವರು ದೇವಸ್ಥಾನದ ದ್ವಾರಬಾಗಿಲು ಮುಂಭಾಗ ಟ್ರಾಫಿಕ್ ಸಮಸ್ಯೆಯಾಗದಂತೆ ಸೂಕ್ತ ಕ್ರಮ ತೆಗೆದುಕೊಂಡಿದ್ದರು. ದೇವಸ್ಥಾನದ ಮುಖ್ಯದ್ವಾರದ ಮುಂಭಾಗ ವಾಹನಗಳ ನಿಲುಗಡೆಯಾಗದಂತೆ ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಜೊತೆಗೆ ಅಂಗಡಿ ಮಳಿಗೆಯ ಮೇಲೆ ಹಾಕಲಾಗಿದ್ದ ಶಾಮಿಯಾನದಲ್ಲಿ ಕುಳಿತ ಪೊಲೀಸ್ ಸಿಬ್ಬಂದಿಗಳು ದ್ವಾರ ಬಾಗಿಲು ಮುಂದೆ ವಾಹನಗಳನ್ನು ನಿಲ್ಲಿಸಿದಂತೆ ನಿಗದಿ ಪಡಿಸಿದ ಸ್ಥಳದಲ್ಲಿ ಮಾತ್ರ ತಮ್ಮ ವಾಹನಗಳನ್ನು ನಿಲ್ಲಿಸುವಂತೆ ಧ್ವನಿವರ್ದಕ ಮೂಲಕ ಹೇಳುತ್ತಿರುವುದು ಕಂಡುಬಂತು.

ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಸ್ ಹೊರವಲಯದ ರಸ್ತೆಯ ಮಾರ್ಗವಾಗಿ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಇಲಾಖೆಯಿಂದ ದ್ರೋಣ್ ಕ್ಯಾಮರಾ ವ್ಯವಸ್ಥೆ ಮಾಡಿರುವದು ಕಂಡು ಬಂದಿತು.

ದೇವಸ್ಥಾನದ ದರ್ಶನ ಪಡೆದುಕೊಂಡ ನಂತರ ಜನತೆ ಜಾತ್ರೆಯಲ್ಲಿ ತಮಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *