ಬಸವಣ್ಣನವರ ವಚನಗಳಲ್ಲಿ ‘ಕಾಯಕ’ ಇಲ್ಲವೇ?

ವಿನಯ ಶಿರಹಟ್ಟಿಮಠ
ವಿನಯ ಶಿರಹಟ್ಟಿಮಠ

ಬಸವಣ್ಣ ಕಮ್ಯುನಿಸ್ಟನೂ ಅಲ್ಲ, ಬಂಡವಾಳಶಾಹಿಯೂ ಅಲ್ಲ. ಅವರೊಬ್ಬ ಶರಣ.

ಬೆಂಗಳೂರು

ಇತ್ತೀಚೆಗೆ ಒಂದು ವಾದ ಸುತ್ತಾಡುತ್ತಿದೆ.

ಅದರ ಸಾರಾಂಶ ಸರಳ — ಬಸವಣ್ಣನವರು ಬರೆದದ್ದು “ಕಾಯವೇ ಕೈಲಾಸ”, “ಕಾಯಕವೇ ಕೈಲಾಸ” ಅಲ್ಲ. ಆ ಎರಡನೆಯ ನುಡಿಗಟ್ಟು ಆಯ್ದಕ್ಕಿ ಮಾರಯ್ಯ ಮತ್ತು ಮನಸಂದ ಮಾರಿತಂದೆಯವರದು; ಹಾಗಿದ್ದೂ ಅದನ್ನು ಬಸವಣ್ಣನವರ ತಲೆಗೆ ಕಟ್ಟುತ್ತಿರುವುದು ಅವರನ್ನು “ಮಾರ್ಕ್ಸ್‌ವಾದಿ ನಾಯಕ” ಎಂದು ಬಿಂಬಿಸುವ ಹುನ್ನಾರ.

ಪದಗಳ ಲೆಕ್ಕಾಚಾರದ ಮಟ್ಟಿಗೆ ಈ ವಾದದ ಮೊದಲ ಅರ್ಧ ನಿಜ. ಆದರೆ ವಚನ ಸಾಹಿತ್ಯವನ್ನು ಪದಕೋಶದ ಎಣಿಕೆಯಿಂದ ಅಳೆಯುವವರು ಶರಣ ಚಳವಳಿಯ ಉಸಿರನ್ನೇ ತಪ್ಪಿಸಿಕೊಳ್ಳುತ್ತಾರೆ.

ಎರಡನೆಯ ಅರ್ಧ — “ಆದ್ದರಿಂದ ಕಾಯಕ ತತ್ತ್ವಕ್ಕೂ ಬಸವಣ್ಣನಿಗೂ ಸಂಬಂಧವಿಲ್ಲ” ಎಂಬ ತೀರ್ಮಾನ — ಇತಿಹಾಸಕ್ಕೂ ತತ್ತ್ವಕ್ಕೂ ಎರಡಕ್ಕೂ ಮಾಡುವ ಅನ್ಯಾಯ.

ಆಯ್ದಕ್ಕಿ ಮಾರಯ್ಯನವರು ಯಾರು?

ಬೀದಿಯಲ್ಲಿ ಚೆಲ್ಲಿದ ಅಕ್ಕಿ ಆಯ್ದು ಬದುಕಿದವರು. ಅವರ ಬಾಯಲ್ಲಿ “ಕಾಯಕವೇ ಕೈಲಾಸ” ಎಂಬ ಮಾತು ಹುಟ್ಟಿದ್ದು ಆಕಸ್ಮಿಕವಲ್ಲ. ದುಡಿಮೆಯ ಬೆವರಿನಿಂದ ಬಂದ ಮಾತನ್ನು ದುಡಿಯುವವನೇ ಹೇಳಬೇಕು; ಅದೇ ಶರಣ ಪರಂಪರೆಯ ಸೊಗಸು. ಆದರೆ ಆ ಅಕ್ಕಿ ಆಯುವವನನ್ನು ಅನುಭವ ಮಂಟಪದ ಪೀಠದ ಮೇಲೆ ಕೂರಿಸಿ, ಅವನ ಮಾತಿಗೆ ಶಾಸ್ತ್ರದ ಘನತೆ ಕೊಟ್ಟ ವ್ಯವಸ್ಥೆಯನ್ನು ಕಟ್ಟಿದವರು ಯಾರು?

ಆ ಪ್ರಶ್ನೆಗೆ ಇತಿಹಾಸ ಕೊಡುವ ಉತ್ತರ ಒಂದೇ — ಬಸವಣ್ಣ.

ವಾಕ್ಯ ಮಾರಯ್ಯನದು, ವೇದಿಕೆ ಬಸವಣ್ಣನದು. ಚಳವಳಿಯ ನಾಯಕನಿಗೆ ಆ ಚಳವಳಿಯ ಘೋಷವಾಕ್ಯವನ್ನು ಆರೋಪಿಸುವುದು ಚಾರಿತ್ರಿಕ ತಪ್ಪಲ್ಲ, ಅದು ನಾಯಕತ್ವದ ಸ್ವೀಕಾರ. ಗಾಂಧಿ “ಸತ್ಯಾಗ್ರಹ” ಎಂಬ ಪದವನ್ನು ಸ್ವತಃ ಸೂಚಿಸಲಿಲ್ಲ — ಸ್ಪರ್ಧೆಯೊಂದರಲ್ಲಿ ಮಗನ್‌ಲಾಲ್ ಸೂಚಿಸಿದ್ದನ್ನು ತಿದ್ದಿ ಒಪ್ಪಿಕೊಂಡರು. ಹಾಗೆಂದು ಸತ್ಯಾಗ್ರಹಕ್ಕೂ ಗಾಂಧಿಗೂ ಸಂಬಂಧವಿಲ್ಲ ಎನ್ನುವವರನ್ನು ನಾವು ಏನೆನ್ನಬೇಕು?

“ಇದೇ ಪಂಚಿಂಗ್ ಲೈನ್ ಆಗಿದ್ದರೆ ಎಲ್ಲ ಶರಣರ ವಚನಗಳಲ್ಲೂ ಇರಬೇಕಿತ್ತಲ್ಲವೇ?” ಎಂಬುದು ಆ ಪೋಸ್ಟಿನ ಇನ್ನೊಂದು ಪ್ರಶ್ನೆ.

ಇದೇ ತರ್ಕವನ್ನು ಹಿಡಿದು ನೋಡಿ — “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬ ಸಾಲು ಬಸವಣ್ಣನವರ ಒಂದೇ ವಚನದಲ್ಲಿದೆ. ಹಾಗಾದರೆ ಸ್ಥಾವರ–ಜಂಗಮ ವಿವೇಚನೆ ಲಿಂಗಾಯತ ತತ್ತ್ವವೇ ಅಲ್ಲವೆ?

ವಚನಕಾರರು ಘೋಷಣೆಗಳನ್ನು ಸಾಮೂಹಿಕವಾಗಿ ಪುನರುಚ್ಚರಿಸುವ ಪಕ್ಷದ ಕಾರ್ಯಕರ್ತರಲ್ಲ. ಪ್ರತಿಯೊಬ್ಬ ಶರಣನೂ ತನ್ನ ಅಂಕಿತ, ತನ್ನ ಕಸುಬು, ತನ್ನ ಅನುಭಾವದ ಭಾಷೆಯಲ್ಲಿ ಮಾತನಾಡಿದವನು. ಒಂದೇ ಮಾತು ಎಲ್ಲರ ಬಾಯಲ್ಲಿ ಇಲ್ಲದಿರುವುದೇ ವಚನ ಸಾಹಿತ್ಯದ ಪ್ರಾಮಾಣಿಕತೆಗೆ ಸಾಕ್ಷಿ.

ಕಾಯದಿಂದ ಕಾಯಕಕ್ಕೆ

ಕಾಯ ಮತ್ತು ಕಾಯಕವನ್ನು ಬೇರ್ಪಡಿಸುವುದು ಸಾಧ್ಯವೇ?

ಸ್ನೇಹಿತ ಜನಮೇಜಯ ಉಮರ್ಜಿಯವರ ನಿಜವಾದ ದೌರ್ಬಲ್ಯ ಇರುವುದು ಇಲ್ಲಿ. ಕಾಯ ಒಂದು, ಕಾಯಕ ಇನ್ನೊಂದು ಎಂಬಂತೆ ಎರಡನ್ನೂ ಕತ್ತರಿಸಿ ಇಡಲಾಗಿದೆ. ಆದರೆ ಶರಣ ದೇಹತತ್ತ್ವದ ಪ್ರಕಾರ ಕಾಯ ಎಂಬುದು ಪ್ರತಿಮೆಯಲ್ಲ, ಅದು ಕ್ರಿಯಾಶೀಲ ದೇಗುಲ.

ಕೈಲಾಸ ಎಂದರೆ ಶಿವನ ಸಾನ್ನಿಧ್ಯವಿರುವ ಜಾಗ. ಶರಣನ ಕಾಯ ಕೈಲಾಸವಾಯಿತೆಂದರೆ ಆ ದೇಹದ ಪ್ರತಿ ಚಲನೆಯೂ ಶಿವನ ಸಾನ್ನಿಧ್ಯದಲ್ಲೇ ನಡೆಯುತ್ತದೆ ಎಂದರ್ಥ. ಆ ಕೈ ಎತ್ತಿದರೆ ಪೂಜೆ, ಆ ಕಾಲು ನಡೆದರೆ ಪಾವನ, ಆ ನಾಲಿಗೆ ನುಡಿದರೆ ಶಿವತತ್ತ್ವ. ಈ ಮಾತನ್ನು ಬೇರೆ ಯಾರೂ ಹೇಳಿಲ್ಲ — ಸ್ವತಃ ಬಸವಣ್ಣನವರೇ ವಚನದಲ್ಲಿ ಹೇಳಿದ್ದಾರೆ.

ನಡೆದದ್ದು ಪಾವನ, ನುಡಿದದ್ದು ಶಿವತತ್ತ್ವ ಎಂದ ಮೇಲೆ ಆ ದೇಹ ದುಡಿದದ್ದು ಮಾತ್ರ ಅಪವಿತ್ರವಾಗಿ ಉಳಿಯುತ್ತದೆಯೇ? ನಿದ್ರೆಯನ್ನೇ ಜಪ ಎಂದವರು ಬೆವರನ್ನು ಮಾತ್ರ ಹೊರಗಿಟ್ಟರೇ?

ಸೋಮಾರಿಯ ದೇಹ ಎಂದೂ ಕೈಲಾಸವಾಗುವುದಿಲ್ಲ. ಪರರ ದುಡಿಮೆಯ ಮೇಲೆ ಕುಳಿತು ತಿನ್ನುವವನ ಕಾಯ ಶಿವಸಾನ್ನಿಧ್ಯದ ಕ್ಷೇತ್ರವಾಗುವುದಿಲ್ಲ. ಕಾಯ ಶಿವಮಯವಾದಾಗ ಅದರಿಂದ ಹೊರಡುವ ಕ್ರಿಯೆ ಸಹಜವಾಗಿಯೇ ಕಾಯಕವಾಗುತ್ತದೆ. ಇದು ಅರ್ಥವನ್ನು ಎಳೆದು ತಿರುಚಿದ್ದಲ್ಲ, ತತ್ತ್ವದ ಸ್ವಾಭಾವಿಕ ಬೆಳವಣಿಗೆ.

ಕಾಯ ನಿಂತ ನೀರಾದರೆ ಕಾಯಕ ಹರಿಯುವ ತೊರೆ; ಎರಡನ್ನೂ ಬೇರ್ಪಡಿಸಿದರೆ ಒಂದು ಕೊಳೆಯುತ್ತದೆ, ಇನ್ನೊಂದು ಬತ್ತುತ್ತದೆ.

ಮಾರ್ಕ್ಸ್‌ವಾದದ ಭಯದಿಂದ ಕಾಯಕ ಬಿಟ್ಟುಕೊಡಬೇಕೆ?

ಈಗ ಸ್ನೇಹಿತ ಜನಮೇಜಯ ಉಮರ್ಜಿ ಅವರ ಪೋಸ್ಟಿನ ನಿಜವಾದ ಆತಂಕಕ್ಕೆ ಬರೋಣ.
ಬಸವಣ್ಣನನ್ನು “ಭಾರತದ ಮೊದಲ ಕಮ್ಯುನಿಸ್ಟ್” ಎಂದು ಕರೆಯುವ ಪ್ರವೃತ್ತಿಯನ್ನು ವಿರೋಧಿಸುವುದು ನ್ಯಾಯವೇ.

ಆ ಸಮೀಕರಣ ಖಂಡಿತ ತಪ್ಪು. ಆದರೆ ಆ ತಪ್ಪನ್ನು ಸರಿಪಡಿಸಲು ಆಯ್ಕೆ ಮಾಡಿಕೊಂಡ ದಾರಿ ಅಪಾಯಕಾರಿ. ಎದುರಾಳಿ ನಮ್ಮ ಆಸ್ತಿಯನ್ನು ಕದಿಯುತ್ತಿದ್ದಾನೆಂದು ಆ ಆಸ್ತಿಯನ್ನೇ ಸುಟ್ಟುಹಾಕುವುದು ಬುದ್ಧಿವಂತಿಕೆಯಲ್ಲ.

ಕಾಯಕ ಮತ್ತು ಶ್ರಮಿಕ ವರ್ಗಸಿದ್ಧಾಂತದ ನಡುವಿನ ಅಂತರವನ್ನು ಸ್ಪಷ್ಟವಾಗಿ ಹೇಳಿಬಿಡ್ತಿನಿ.

ಮಾರ್ಕ್ಸ್ ಶ್ರಮವನ್ನು ನೋಡಿದ್ದು ಆರ್ಥಿಕ ಸಂಬಂಧವಾಗಿ. ಅಲ್ಲಿ ದುಡಿಮೆ ಎಂಬುದು ಮಾಲೀಕ ಮತ್ತು ಕಾರ್ಮಿಕನ ನಡುವಿನ ಜಗಳ, ಹೆಚ್ಚುವರಿ ಮೌಲ್ಯದ ಲೆಕ್ಕ, ವರ್ಗಸಂಘರ್ಷದ ಆಯುಧ. ಅದರ ಗುರಿ ಬಾಹ್ಯ ವ್ಯವಸ್ಥೆಯ ಪಲ್ಲಟ. ಅಲ್ಲಿ ದೇವರಿಲ್ಲ, ಆತ್ಮಶುದ್ಧಿಯಿಲ್ಲ, ದಾನದ ಸ್ಥಾನವಿಲ್ಲ.

ಶರಣರ ಕಾಯಕ ಹಾಗಲ್ಲ. ಅಲ್ಲಿ ದುಡಿಮೆ ಮುಗಿಯುವುದು ಸಂಬಳದಲ್ಲಿ ಅಲ್ಲ, ದಾಸೋಹದಲ್ಲಿ. ಗಳಿಸಿದ್ದನ್ನು ಕೂಡಿಡುವುದೇ ಪಾಪ. ದೇಹದ ಮೇಲಿರುವ ಇಷ್ಟಲಿಂಗವೇ ಆ ದುಡಿಮೆಯ ಸಾಕ್ಷಿ. ಆಯ್ದಕ್ಕಿ ಲಕ್ಕಮ್ಮ ತನ್ನ ಗಂಡ ಒಂದು ಹಿಡಿ ಹೆಚ್ಚು ಅಕ್ಕಿ ತಂದದ್ದಕ್ಕೇ “ಇದು ಆಸೆಯ ಫಲ” ಎಂದು ಹಿಂದಕ್ಕೆ ಚೆಲ್ಲಿಸಿದಳು. ಯಾವ ಟ್ರೇಡ್ ಯೂನಿಯನ್ನಿನಲ್ಲಿ ಈ ಕಥೆ ಸಾಧ್ಯ?

ಮಾರ್ಕ್ಸ್‌ವಾದಿ ಹೆಚ್ಚು ಕೂಲಿ ಕೇಳುತ್ತಾನೆ; ಶರಣ ಹೆಚ್ಚು ಬಂದದ್ದನ್ನೂ ಬೇಡವೆನ್ನುತ್ತಾನೆ. ಇವೆರಡು ಒಂದೇ ಆಗುವುದು ಹೇಗೆ?

“ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು” ಎಂಬ ಮಾರಯ್ಯನ ಮಾತು ಕಾರ್ಮಿಕ ಘೋಷಣೆಯೇ? ಗುರುವಿನ ದರ್ಶನಕ್ಕಿಂತ, ಲಿಂಗಪೂಜೆಗಿಂತ ದುಡಿಮೆಯನ್ನು ಮೇಲಿಟ್ಟ ಈ ಮಾತು ಜಗತ್ತಿನ ಯಾವ ಭೌತವಾದಿ ಸಿದ್ಧಾಂತದಲ್ಲೂ ಇಲ್ಲ. ಇಲ್ಲಿ ದುಡಿಮೆಯನ್ನು ಪೂಜೆಗಿಂತ ಮೇಲಿಟ್ಟದ್ದಲ್ಲ — ದುಡಿಮೆಯನ್ನೇ ಪೂಜೆಯಾಗಿ ಪರಿವರ್ತಿಸಿದ್ದು. ಈ ಸೂಕ್ಷ್ಮ ಗೊತ್ತಾದರೆ ಮಾರ್ಕ್ಸ್‌ವಾದದ ಆರೋಪ ತಾನಾಗಿಯೇ ಉದುರಿಬೀಳುತ್ತದೆ.

ಎಡಪಂಥೀಯ ವ್ಯಾಖ್ಯಾನವನ್ನು ಸೋಲಿಸಲು ನಾವು ಕಾಯಕವನ್ನು ಕೈಬಿಡಬೇಕಿಲ್ಲ. ಅದನ್ನು ಸರಿಯಾಗಿ ವ್ಯಾಖ್ಯಾನಿಸಿದರೆ ಸಾಕು. ಕಾಯಕದ ಬೆನ್ನಿಗೆ ದಾಸೋಹವಿದೆ, ದಾಸೋಹದ ಬೆನ್ನಿಗೆ ಜಂಗಮವಿದೆ, ಜಂಗಮದ ಬೆನ್ನಿಗೆ ಇಷ್ಟಲಿಂಗವಿದೆ ಎಂದು ಹೇಳಿದ ಕ್ಷಣ ಈ ತತ್ತ್ವವನ್ನು ಯಾವ ರಾಜಕೀಯ ಪಕ್ಷವೂ ತನ್ನ ಬಾವುಟದ ಕೆಳಗೆ ಎಳೆದೊಯ್ಯಲಾರದು.

ಶರಣರ ಚಳವಳಿ ಅಕ್ಷರ ಎಣಿಸಿ ಬೆಳೆದದ್ದಲ್ಲ. ಅದು ಜಾತಿಯ ಗೋಡೆ ಒಡೆದು, ದೇವಾಲಯದ ಬೀಗ ಮುರಿದು, ದುಡಿಯುವ ಕೈಗಳಿಗೆ ದೇವರನ್ನು ಕಟ್ಟಿಕೊಟ್ಟ ಬೆಂಕಿ. ಆ ಬೆಂಕಿಗೆ ಕಿಡಿ ಹೊತ್ತಿಸಿದ ಮನುಷ್ಯನಿಂದ, ಆ ಬೆಂಕಿಯಲ್ಲಿ ಬೆಳಗಿದ ಮಾತನ್ನು ಬೇರ್ಪಡಿಸಲು ಹೊರಟರೆ ಉಳಿಯುವುದು ಇತಿಹಾಸವಲ್ಲ, ಬರೀ ವ್ಯಾಕರಣ.

ಬಸವಣ್ಣ ಕಮ್ಯುನಿಸ್ಟನೂ ಅಲ್ಲ, ಬಂಡವಾಳಶಾಹಿಯೂ ಅಲ್ಲ. ಅವರು ಶರಣ. ಅವರ ಕಾಯ ಕೈಲಾಸವಾಗಿತ್ತು, ಅವರ ಕಾಯಕ ದಾಸೋಹವಾಗಿತ್ತು, ಅವರ ದಾಸೋಹ ಜಗತ್ತಿಗೇ ಮಾದರಿಯಾಗಿತ್ತು. ಆ ಮೂರನ್ನೂ ಒಟ್ಟಿಗೆ ಓದುವವನಿಗೆ ಮಾತ್ರ ಅನುಭವ ಮಂಟಪ ಅರ್ಥವಾಗುತ್ತದೆ. ಬಿಡಿಸಿ ಓದುವವನಿಗೆ ವಚನಗಳ ಪದಪಟ್ಟಿ ಮಾತ್ರ ಸಿಗುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
2 Comments
  • ಬಹಳ ಸ್ಪಷ್ಟವಾಗಿ, ಅತ್ಯಂತ ಪರಿಣಾಮಕಾರಿಯಾಗಿ “ಕಾಯಕವೇ ಕೖಲಾಸ” ಘೋಷಣೆಗೂ ಬಸವಣ್ಣನಿಗೂ ಇರುವ ತಾದಾತ್ಮ್ಯ ವಿವರಿಸಿದ್ದೀರಿ. ವಚನಗಳಲ್ಲಿ ಅಕ್ಷರವಷ್ಟನ್ನೇ ಗಮನಿಸಿದವರಿಗೆ ವಚನಗಳ ನಿಜ ಆಶಯ ಅರಿವಿಗೆ ಬರಲಾರದು.

  • ಕಾಯಕದ ಕುರಿತು ಬಸವಣ್ಣನವರ ವಚನಗಳು

    ದೇವಸಹಿತ ಭಕ್ತ ಮನೆಗೆ ಬಂದಡೆ
    ಕಾಯಕವಾವುದೆಂದು ಬೆಸಗೊಂಡೆನಾದಡೆ
    ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ! ತಲೆದಂಡ !
    ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
    ನಿಮ್ಮ ರಾಣಿವಾಸದಾಣೆ. 453

    ಗುರು ಉಪದೇಶ ಮಂತ್ರವೈದ್ಯ, ಜಂಗಮ ಉಪದೇಶ ಶಸ್ತ್ರವೈದ್ಯ ನೋಡಾ,
    ಭವರೋಗವ ಕಳೆವ ಪರಿಯ ನೋಡಾ.
    ಕೂಡಲಸಂಗನ ಶರಣರ ಅನುಭಾವ
    ಮಡಿವಾಳನ ಕಾಯಕದಂತೆ. 654

    ಕೋಡಗವೇಡಿಸಬೇಡೆಂದಡೆ ಮಾಣದಯ್ಯಾ,
    ತೋಡುವ ಹೆಗ್ಗಣ ಮಾಳಿಗೆ ಎಂದಡೆ ಮಾಣದಯ್ಯ,
    ಗಾಡಿಗ ದೂಷಕನವರವರನಾಡುವುದೆ ನೇಮ.
    ಕೂಡಲಸಂಗಮದೇವಾ, ಇದವರ ಕಾಯಕವಯ್ಯಾ. 1164

    ಗುರುಲಿಂಗಜಂಗಮದ ಹೆಸರಿನಿಂದ ಕಾಯಕವ ಮಾಡಿ,
    ಗುರು ಚರಕೆ ವಂಚಿಸಿ,
    ತಾಯಿ ತಂದೆ, ಬಂಧುಬಳಗ, ಹೆಂಡತಿ, ಒಡಹುಟ್ಟಿದವರು
    ಎಂದು ಸಮಸ್ತಪದಾರ್ಥವ ಚಾಗೆಯ ಮಾಡುವನೊಬ್ಬ
    ಭಕ್ತದ್ರೋಹಿ ನೋಡಾ, ಕೂಡಲಸಂಗಮದೇವಾ. 1172

    ಆಯ್ದಕ್ಕಿ ಮಾರಯ್ಯ ಅವರ ಕುರಿತು..

    ನಾ ನಡೆವುದೆಲ್ಲಾ ಅನಾಚಾರ, ನಾ ನುಡಿವುದೆಲ್ಲಾ ಅವಿಚಾರ,
    ನಡೆನುಡಿ ಶುದ್ಧವಿಲ್ಲದ ಅಪವಿತ್ರನ ತಂದು
    ನಿಮ್ಮೊಕ್ಕುದನಿಕ್ಕಿ ಸಲಹಿದಿರಾಗಿ, ಎನಗಿನ್ನಾವ ಭಯವೂ ಇಲ್ಲ.
    ಕೂಡಲಸಂಗಮದೇವರು ಸಾಕ್ಷಿಯಾಗಿ,
    ಆಯ್ದಕ್ಕಿಯ ಮಾರಯ್ಯನ ಮನೆಯ ಮಗ ನಾನು. 1236

    (ಸುನೀಲ ಸಾಣಿಕೊಪ್ಪ ನ್ಯಾಯವಾದಿ ಬೆಳಗಾವಿ)

Leave a Reply

Your email address will not be published. Required fields are marked *