ಚಿತ್ರದುರ್ಗ:
ಗುರು ಕರುಣೆಯೊಂದಿದ್ದರೆ ಸಾಧಿಸಲು ಅಸಾಧ್ಯವಾದದ್ದು ಯಾವುದು ಇಲ್ಲ ಎಂದು ಜಗತ್ತಿಗೆ ಸಾಧಿಸಿ ತೋರಿಸಿದವರು ಮೈಲಾರದ ಬಸವಲಿಂಗ ಶರಣರು ಎಂದು ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಯಶೋಧರ ಜಿ.ಎನ್.ಅಭಿಪ್ರಾಯಪಟ್ಟರು.

ಅವರು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ೧೭ದಿನದ ಅನುಭಾವ ಶ್ರಾವಣ, ಶರಣರ ಚಿಂತನ ಮಾಲಿಕೆಯ ಕಾರ್ಯಕ್ರಮದಲ್ಲಿ ನಗರದ ಗುಮಾಸ್ತ ಕಾಲೋನಿಯ ಶರಣ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಚಿತ್ರದುರ್ಗ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ಮೈಲಾರದ ಬಸವಲಿಂಗ ಶರಣರ ಜೀವನ ಸಾಧನೆ ಹಾಗೂ ವ್ಯಕ್ತಿತ್ವ ಅವಲೋಕನ ಕಾರ್ಯಕ್ರಮದಲ್ಲಿ ವಿಷಯಾವಲೋಕನ ಮಾಡುತ್ತಿದ್ದರು.
ಮೈಲಾರ ಕ್ಷೇತ್ರ ಐತಿಹಾಸಿಕವಾಗಿ ಧಾರ್ಮಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದ ಸುಕ್ಷೇತ್ರ. ಅಂತಹ ಪ್ರಸಿದ್ಧ ಪುಣ್ಯಕ್ಷೇತ್ರದಲ್ಲಿ ಜನಿಸಿದ ಬಸವಲಿಂಗ ಶರಣರು ಮೂಲದಲ್ಲಿ ವ್ಯಾಪಾರ ಪ್ರವೃತ್ತಿಯರು. ಈಗಲೂ ಅವರ ಮನೆ ಮೈಲಾರದ ಮುಖ್ಯ ಬೀದಿಯಲ್ಲಿ ಇರುವುದನ್ನು ಕಾಣಬಹುದಾಗಿದೆ.
ಬಸವಪ್ಪ ಶೆಟ್ಟಿ ಎಂದು ನಾಮಂಕಿತರಾಗಿದ್ದ ಬಸವಲಿಂಗ ಶರಣರು ಶಿವಯೋಗ ಸಾಧನೆಯಿಂದ ಶರಣರಾದವರು. ತನ್ನ ವ್ಯಾಪಾರ ವೃತ್ತಿಯೊಡನೆ ಅಂತರಂಗದ ಶುದ್ದಿಗಾಗಿ ಶಿವಯೋಗವನ್ನು ಕೈಗೊಂಡವರು. ನಿತ್ಯ ಜೀವನದಲ್ಲಿ ಲಿಂಗಾರ್ಚನೆಯನ್ನು ಮಾಡುತ್ತಲೇ ತನ್ನ ವ್ಯಾಪಾರದಲ್ಲಿ ಅತ್ಯಂತ ನಿಷ್ಠೆ ಶ್ರದ್ಧೆ ಪ್ರಾಮಾಣಿಕತೆಯನ್ನು ಮೆರೆದವರು. ಇಂಥವರಿಗೆ ಹಾಲವರ್ತಿಯ ಮಹಾಗುರುಗಳಾದ ಚೆನ್ನವೀರ ಮಹಾಶರಣರಿಂದ ಗುರುದೀಕ್ಷೆ ಮಾರ್ಗದರ್ಶನ ದೊರೆತದ್ದು ಅವರ ಅಂತರಂಗದ ಸಾಧನೆಗೆ ಮಹತ್ವದ ಹೆಜ್ಜೆಯಾಯಿತು.
ಶೈವ ಮತ್ತು ವೈಷ್ಣವ ಧರ್ಮದ ಇತಿಮಿತಿಗಳನ್ನು ಅರ್ಥ ಮಾಡಿಕೊಂಡ ಬಸವಲಿಂಗ ಶರಣರು ಇವೆರಡ್ಕಕಿಂತಲೂ ಭಿನ್ನವಾದ ವಿಶಿಷ್ಟವಾದ ಲಿಂಗಾಯತ ಧರ್ಮದ ಆಚರಣೆಯ ಕ್ರಮಬದ್ಧತೆಯನ್ನು ಕುರಿತು ದಿಕ್ಸೂಚಿಯಾದವರು ಎಂದು ಹೇಳಿದರು.
ಅಷ್ಟಾಂಗ ಯೋಗವದು ಬಲು ಕಷ್ಟವೆಲೋ ಮಗನೇ ಎಂದು ಇಷ್ಟಲಿಂಗವನ್ನು ಸೃಷ್ಟಿಸುತ ಕರಕಿತ್ತಾ ಶ್ರೇಷ್ಠ ಶ್ರೀ ಗುರುವೇ ಕೃಪೆಯಾಗು ಎಂದು ಅಷ್ಟಾಂಗ ಯೋಗದ ಇತಿಮಿತಿಗಳನ್ನು ತಿಳಿಸುತ್ತಲೇ ಪರಮಶಿವಯೋಗದ ಮಹತ್ವವನ್ನು ಸಾರಿ ಹೇಳಿದವರು.
ಗುರುವಿನ ಮಹತ್ವವನ್ನು ಕುರಿತು ಅವರ ಪ್ರಸಿದ್ಧ ಗ್ರಂಥವಾದ ಗುರು ಕರಣ ತ್ರಿವಿಧಿಯಲ್ಲಿ ಗುರುವಿನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿ ಹೇಳಿದವರು ಬಸವಲಿಂಗ ಶರಣರು.
ಶರಣರ ಇನ್ನುಳಿದ ಕೃತಿಗಳಾದ ಷಟ್ಸ್ಥಲ ವೀರಶೈವ ನಿರಾಭಾರಿ ಸಿದ್ಧಾಂತ, ಇದೊಂದು ಸೂತ್ರರೂಪದಲ್ಲಿರುವ ಪ್ರಕರಣ ಗ್ರಂಥ.
ಲಿಂಗಾಯತ ಧರ್ಮದ ಷಟ್ಸ್ಥಲಗಳನ್ನು ಕುರಿತು ಅಷ್ಟಾವರಣ, ಪಂಚಾಚಾರ, ಧರ್ಮಚಾರಗಳನ್ನು ಕುರಿತು ಹೇಳಿದ ಕೃತಿ.
ಮತ್ತೊಂದು ಷಟ್ಸ್ಥಲ ಶಿವಾನಾನುಭವ ಎಂಬ ಕಂದಪದ್ಯಗಳಿಂದ ಕೂಡಿದ ಕೃತಿ, ಶಿವಾನುಭವ ದರ್ಪಣ ಅವರ ಮತ್ತೊಂದು ಕೃತಿ, ಲಿಂಗಪೂಜಾ ವಿಧಾನ ಅವರ ಇನ್ನೊಂದು ಕೃತಿ. ಇದರಲ್ಲಿ ಲಿಂಗಾಯತರಾದವರು ಶಿವಯೋಗದಲ್ಲಿ, ಲಿಂಗನಿರೀಕ್ಷಣೆಯಲ್ಲಿ ಹೇಗೆ ತೊಡಗಬೇಕು ಎಂಬುದನ್ನು ಅತ್ಯಂತ ಭಕ್ತಿಭಾವದಲ್ಲಿ ಹೇಳಿದ್ದಾರೆ.
ಅಲ್ಲದೆ ಅನೇಕ ಬಿಡಿ ಬಿಡಿ ವಚನಗಳನ್ನು ರಚಿಸಿ ಸ್ವರ ವಚನಗಳನ್ನಾಗಿಸಿ ಒಂದು ಕಿರುಹೊತ್ತಿಗೆ ರೂಪದಲ್ಲಿ ಹೊರತಂದಿದ್ದಾರೆ. ಈ ಎಲ್ಲ ಸಾಹಿತ್ಯ ಸಾಧನೆ ಅನುಭಾವದ ಮೂಲಕ ಸಮಾಜಕ್ಕೆ ಅವರು ನೀಡಿದ ಸಂದೇಶ ಇಂದಿಗೂ ಕೂಡ ಪ್ರಸ್ತುತವಾದದ್ದು ಎಂದು ಸ್ಮರಿಸಿಕೊಂಡರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡುತ್ತ, ಈ ಜಗತ್ತಿನಲ್ಲಿ ಗುರುಶಿಷ್ಯ ಪರಂಪರೆ ಬಹಳ ಮಹತ್ವ ಪಡೆದುಕೊಂಡಿದೆ. ಹೆಸರೇಳುತ್ತಾ ಹೋದರೆ ದೊಡ್ಡ ಪಟ್ಟಿ ಬೆಳೆಯುತ್ತದೆ. ಈ ಕಾರಣಕ್ಕಾಗಿ ತತ್ವಜ್ಞಾನಕ್ಕೆ ಹೆಚ್ಚಿನ ಬಲ ಬಂತು. ಪ್ರತಿಯೊಬ್ಬರಿಗೂ ಗುರು ಲಭ್ಯವಾಗೋದು ವಿರಳ. ಗುರು ಅಂದರೆ ಕೇವಲ ವೇಷಭೂಷಣ ಅಲಂಕರಿಸಿದವರು ಎನ್ನುವ ಪ್ರಜ್ಞೆಯಿಂದ ಹೊರಬಂದು ಅರಿವಿನಿಂದ ಆಚರಣೆ ಮಾಡುವ, ಬದುಕಿನುದ್ದಕ್ಕೂ ಆ ಅರಿವಿನ ಬುತ್ತಿಯನ್ನು ಹಂಚುತ್ತ ಸಾಗುವವನು ಗುರುವೇ ಆಗಿದ್ದಾನೆ.
ಅಂತಹ ಗುರುಬಲದಿಂದ ತ್ರಿಪದಿಗಳನ್ನು ರಚಿಸಿದವರು ಮೈಲಾರ ಬಸವಲಿಂಗ ಶರಣರು. ಅವರು ರಚಿಸಿರುವ ೩೩೩ ತ್ರಿಪದಿಗಳನ್ನು ಪ್ರತಿನಿತ್ಯ ಪಠಣ ಮಾಡುತ್ತಿದ್ದವರು ಪಾಂಡೋಮಟ್ಟಿ ವಿರಕ್ತಮಠದ ಹಿಂದಿನ ಚೆನ್ನಬಸವ ಸ್ವಾಮೀಜಿ ಅವರು. ನಿತ್ಯವೂ ಚಾಚೂತಪ್ಪದೆ ಪೂಜಾ ಸಮಯದಲ್ಲಿ ಹೇಳುತಿದ್ದರು.

ನಾವು ಮುರುಘಾಮಠದ ಗುರುಕುಲದಲ್ಲಿ ಸಾಧಕರಾಗಿದ್ದಾಗ ಈ ತ್ರಿಪದಿಗಳನ್ನು ಕಲಿಸುತ್ತಿದ್ದರು. ಇದರೊಂದಿಗೆ ಸಂಶೋಧಕರಾಗಿದ್ದ ಪಿ.ಎಂ. ಗಿರಿರಾಜು ಅವರು ಸಿದ್ಧರಾಮ ಯೋಗಾಂಗ ತ್ರಿವಿಧಿಯನ್ನು ನಮಗೆ ಕಲಿಸಲು ಪ್ರಾರಂಭಿಸಿದರು. ಮೈಲಾರ ಬಸವಲಿಂಗ ಶರಣರ ಈ ಗುರುಕರುಣ ತ್ರಿವಿಧಿ ಗುರುವಿನ ಮಹತ್ವ ಕುರಿತಾಗಿ ರಚಿತಗೊಂಡಿವೆ.
ಹಾಗಾಗಿಯೇ ಮಠಗಳ ಸ್ವಾಮಿಗಳು ತಮ್ಮ ತಮ್ಮ ಗುರುವನ್ನು ಸ್ಮರಿಸುವ ಸಲುವಾಗಿ ಈ ತ್ರಿವಿಧಿಗಳನ್ನು ಬಳಸುವುದುಂಟು.
ಇಂತಹ ಗುರುವನ್ನು ಪಡೆದ ಅನೇಕ ಶಿಷ್ಯರು ಅವರನ್ನು ನೆರಳಾಗಿ ಹಿಂಬಾಲಿಸಿದ್ದಾರೆ.
ಧಾರವಾಡದ ಅಂದಿನ ಮೃತ್ಯುಂಜಯಪ್ಪಗಳು ಧಾರವಾಡದ ಮುರುಘಾಮಠಕ್ಕೆ ನೇಮಕ ಮಾಡುವ ಸಂದರ್ಭದಲ್ಲಿ ನಾನು ಮುರುಘೇಂದ್ರ ಶಿವಯೋಗಿಗಳನ್ನು ಬಿಟ್ಟು ಯಾವ ಮಠಕ್ಕೂ ಹೋಗುವುದಿಲ್ಲವೆನ್ನುತ್ತಾರೆ. ಮತ್ತೆ ಅವರ ಶಿಷ್ಯರಾದ ಮಹಾಂತಪ್ಪಗಳಿಗೆ ಚಿತ್ರದುರ್ಗದ ಜಯವಿಭವ ಶ್ರೀಗಳ ನಂತರ ಪೀಠಾಧ್ಯಕ್ಷರಾಗಲು ಅವಕಾಶ ಬಂದಾಗ ನಾನು ಮೃತ್ಯುಂಜಯಪ್ಪಗಳ ಸೇವೆ ಬಿಟ್ಟು ಎಲ್ಲಿಗೂ ಹೋಗಲಾರೆ ಎನ್ನುತ್ತಾರೆ.
ಹೋಗಲಿ ನೀವು ಯಾರ ಹೆಸರನ್ನಾದರೂ ಸೂಚಿಸುತ್ತೀರಾ ಎಂದಾಗ ಕಾಶಿಯಲ್ಲಿ ಅಧ್ಯಯನ ಮಾಡಿ ಬಂದಿದ್ದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರರ ಹೆಸರನ್ನು ಸೂಚಿಸುತ್ತಾರೆ. ಹೀಗೆ ಎಂತೆಂತಹ ಗುರುಶಿಷ್ಯ ಪರಂಪರೆ ಆಗಿಹೋಗಿವೆ.
ರಾಮಕೃಷ್ಣ ಪರಮಹಂಸರು ಸ್ವಾಮಿವಿವೇಕಾನಂದರು ಅವರಿಬ್ಬರ ನಡುವೆ ಅಪರೂಪದ ಸಂಬಂಧವಿದ್ದುದನ್ನು ಸ್ಮರಿಸಬಹುದು.
ಮುರುಘಾಮಠವು ಸಾರ್ವಜನಿಕವಾಗಿ ಅನೇಕ ಕೆಲಸಗಳನ್ನು ಅಂದಿನಿಂದ ಮಾಡುತ್ತ ಗಂದಿದೆ. ಈಗ ಅನುಭಾವ ಶ್ರಾವಣ ಹೆಸರಿನಲ್ಲಿ ನಾಡಿನಲ್ಲಿ ಆಗಿಹೋದ ಪುಣ್ಯಪುರುಷರ ಸ್ಮರಣೆ ನಡೆದಿದೆ. ಹೀಗೆ ಹತ್ತು ಹಲವು ಸಮಾಜೋಧಾರ್ಮಿಕ ಕಾರ್ಯಗಳು ನಡೆದಿವೆ. ಮುಂಬರುವ ಶರಣಸಂಸ್ಕೃತಿ ಉತ್ಸವವು ಜನಪರ ಆಶಯಗಳೊಂದಿಗೆ ನಡೆಸಲು ಸಿದ್ಧತೆ ನಡೆದಿದೆ. ನೀವೆಲ್ಲರೂ ಬನ್ನಿ ಎಂದು ಆಮಂತ್ರಣ ನೀಡಿದರು.
ಸಮಾರಂಭದ ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಗುರು ಲಿಂಗ ಜಂಗಮ ತತ್ವವನ್ನು ಸಾರಿದವರು ಮೈಲಾರ ಬಸವಲಿಂಗ ಶರಣರು. ಅವರು ಬಳ್ಳಾರಿ ಜಿಲ್ಲೆಯ ಹಾಲುವರ್ತಿ ವಿರಕ್ತಮಠದ ಚನ್ನವೀರಸ್ವಾಮಿಗಳವರ ಶಿಷ್ಯರು. ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮತ್ತು ೨೫ ಸಾವಿರ ವಚನಗಳನ್ನು ಓದಲು ಸಾಧ್ಯವಾಗದೇ ಇರುವವರು ಮೈಲಾರ ಬಸವಲಿಂಗ ಶರಣರ ರಚನೆಯ ೩೩೩ ತ್ರಿವಿಧಗಳನ್ನಾದರೂ ಓದಬಹುದು. ಅಷ್ಟೊಂದು ಮೌಲ್ಯ ಈ ತ್ರಿವಿಧಗಳಲ್ಲಿ ಅಡಗಿದೆ ಎಂದರು.

ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶೈಲಜಾಬಾಬು ಅವರು ಮಾತನಾಡುತ್ತ, ಬಸವಾದಿ ಶರಣರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಶಿವಯೋಗ ಸಾಧನೆಯನ್ನು ಮಾಡುವುದರಿಂದ ನಾವು ದೃಢತೆ ಹೊಂದಬಹುದಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶರಣಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ. ವೀರಭದ್ರಸ್ವಾಮಿ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಕಾರ್ಯದರ್ಶಿ ಜಯಶೀಲ ವೀರಣ್ಣ ಹಾಗೂ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ವಿವಿಧ ಸಮಾಜ ಸಂಘಟನೆಗಳ ಪ್ರಮುಖರಾದ ಎಸ್. ಷಣ್ಮುಖಪ್ಪ, ಜಯದೇವಮೂರ್ತಿ, ಮಲ್ಲಿಕಾರ್ಜುನಪ್ಪ, ನಾಗರಾಜ ಸಂಗಂ, ಎಸ್. ವೀರೇಶ, ಮುಂಬಯಿ ಶಿವಪ್ರಕಾಶ, ಶಿವಾನಂದಪ್ಪ, ಸಿ.ಎಂ. ಚಂದ್ರಪ್ಪ, ಗುತ್ತಿನಾಡು ಪ್ರಕಾಶ, ಬಸವರಾಜ ಕಟ್ಟಿ, ಬಸವರಾಜಯ್ಯ, ಇಂದಿರಾ ಜಯದೇವಮೂರ್ತಿ, ಮಹಾಂತಮ್ಮ, ಶೈಲಜಾ ವಿಜಯಕುಮಾರ, ಹೇಮಲತಾ, ಅನಿತಾ ಮುರುಘೇಶ, ಕವಿತಾ ಪಂಪಾಪತಿ, ಗೀತಾ ಕೊಟ್ರೇಶ, ಸಬಿತಾ, ಕವಿತಾ ವಿನಯ್, ವಸಂತ ಪ್ರಕಾಶ, ಶಿವಲೀಲಾ ಶಿವಾನಂದ ಮತ್ತಿತರರು ಭಾಗವಹಿಸಿದ್ದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ ಮೈಲಾರ ಬಸವಲಿಂಗರು ರಚಿಸಿರುವ ಗೀತೆಯನ್ನು ಹಾಡಿದರು. ಜಿ.ಟಿ. ನಂದೀಶ ಸ್ವಾಗತಿಸಿದರು. ಶಿಕ್ಷಕಿ ಗೀತಾ ರುದ್ರೇಶ ನಿರೂಪಿಸಿದರು. ಜಯಶೀಲ ವೀರಣ್ಣ ಶರಣು ಸಮರ್ಪಣೆ ಮಾಡಿದರು. ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ತೋಟಪ್ಪ ಉತ್ತಂಗಿ ಅವರು ವಚನಗೀತೆಗಳನ್ನು ಹಾಡಿದರು.
