ಕಲಬುರಗಿಯಲ್ಲಿ ವಿಭಾಗ ಮಟ್ಟದ ವಚನ ಸಾಹಿತ್ಯ ಸಮ್ಮೇಳನ

ಯುವಕರಿಗೆ ವಚನ ಸಾಹಿತ್ಯ ದರ್ಶನ ಅಗತ್ಯ: ನೆಲೋಗಿ ಶ್ರೀ

ಕಲಬುರಗಿ:

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಅಕಾಡೆಮಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ವಿಭಾಗ ಮಟ್ಟದ ಪ್ರಥಮ‌ ವಚನ ಸಾಹಿತ್ಯ ಸಮ್ಮೇಳನ ಭಾನುವಾರ ನಡೆಯಿತು.

ನೆಲೋಗಿ ವಿರಕ್ತಮಠದ ಪೂಜ್ಯ ಸಿದ್ಧಲಿಂಗ ಸ್ವಾಮಿಗಳು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ವಚನ ಸಾಹಿತ್ಯ ಊಹೆ, ಕಲ್ಪನೆಯ ಸಾಹಿತ್ಯ ಅಲ್ಲ. ವಚನ ಸಾಹಿತ್ಯ ಜನಮಾನಸದಲ್ಲಿ ಬೇರೂರಿದ ಸಾಹಿತ್ಯ. ಶರಣರ ಅನುಭಾವದ ಮಾತುಗಳು ವಚನಗಳಾಗಿ ಬಂದವು. ವಚನ ಆತ್ಮವಿಮರ್ಶೆಯ ಅನುಭಾವದ ಸಾಹಿತ್ಯ. ಕೇವಲ ವಚನಾಭಿಮಾನಿಗಳಾಗದೆ ವಚನಾನುಯಾಯಿಗಳಾಗಬೇಕು. ಬಸವ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ಕಲ್ಬುರ್ಗಿಯವರು ಬಸವತತ್ವಕ್ಕಾಗಿ ಬಲಿಯಾದ ಹುತಾತ್ಮರಾದರು ಎಂದು ಸ್ಮರಿಸಿದರು.

ಯುವಕರಿಗೆ ವಚನ ಸಾಹಿತ್ಯದ ದರ್ಶನ ಮಾಡಿಸುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಉಂಟು ಮಾಡಬೇಕು ಎಂದರು.

ಸಮ್ಮೇಳನ ಉದ್ಘಾಟಿಸಿದ ಹಿರಿಯ ಲೇಖಕಿ ಡಾ. ಜಯದೇವಿ ಗಾಯಕವಾಡ, ಜನಸಾಮಾನ್ಯರಿಗೆ ಮಾತಾಡುವ ಶಕ್ತಿ ಕೊಟ್ಟಂತಹ ಬಸವಾದಿ ಶರಣರ ವಚನ ಸಾಹಿತ್ಯ ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವ ಹುಟ್ಟುಹಾಕಿದ ಸಾಹಿತ್ಯವೇ ವಚನವಾಗಿದೆ.

ಸಮಾಜ ತಿದ್ದುವ ವಚನಕಾರರು ಅಸ್ಪೃಶ್ಯತೆ ಮೆಟ್ಟಿನಿಂತು ಸಮ ಸಮಾಜ ಕಟ್ಟಿಕೊಟ್ಟವರೇ ಶರಣರು. ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದ್ದು ಶರಣರ ಅನುಭವ ಮಂಟಪ ಹಾಗೂ ವೈಚಾರಿಕ ಚಳವಳಿಯಾಗಿದೆ.

ಕಾಯಕ ಮತ್ತು ದಾಸೋಹಗಳ ಪರಿಕಲ್ಪನೆ ಜಗತ್ತಿಗೆ ಕೊಟ್ಟವರು ಶರಣರಾಗಿದ್ದಾರೆ ಎಂದರು.

ಸಾರಂಗಮಠದ ಪೂಜ್ಯ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಮಾಜಿ ಮೇಯರ್ ಶರಣಕುಮಾರ ಮೋದಿ, ಗುಲಬರ್ಗ ವಿವಿ ನಿವೃತ್ತ ಗ್ರಂಥಪಾಲಕ ಡಾ. ಗಣಪತಿ ಸಿಂಧೆ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ, ಉದ್ಯಮಿ ರವಿ ವಿಭೂತಿ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಮುಡುಬಿ ಗುಂಡೇರಾವ, ಜಿ.ಜಿ. ವಣಿಕ್ಯಾಳ ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು.

ಗಮನ ಸೆಳೆದ ಗೋಷ್ಠಿ:

ವಚನ ಸಾಹಿತ್ಯ ಮತ್ತು ಸಂವಿಧಾನ ಕುರಿತು ಪತ್ರಕರ್ತ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ವಚನ ಸಾಹಿತ್ಯವು ಭಾರತೀಯ ಸಂವಿಧಾನದಂತೆ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳನ್ನು ಸಾರುವ ಪವಿತ್ರ ಗ್ರಂಥವಾಗಿದೆ. ಅಂದಿನ ಅನುಭವ ಮಂಟಪವೇ ಇಂದಿನ ಪಾರ್ಲಿಮೆಂಟ್ ಎಂದು ಹೇಳಿದರು.

ವಚನ ಸಾಹಿತ್ಯ ಮತ್ತು ಮಹಿಳಾ ಸಂವೇದನೆ ಕುರಿತು ಡಾ. ವಿದ್ಯಾವತಿ ಬಲ್ಲೂರ ಮಾತನಾಡಿ, ಮಹಿಳಾ ಧೋರಣೆ, ಹೆಣ್ತನ ಇರುವುದಕ್ಕೆ ಮಹಿಳಾ ಸಂವೇದನೆ ಎಂದು ಕರೆಯಬಹುದು. ಮೇಲು ಕೀಳು ಅಸಮಾನತೆ, ತಮ್ಮ ಮೇಲಾಗುವ ಅನ್ಯಾಯ ತಾರತಮ್ಯ ಭಾವನೆ ಕುರಿತು ವಚನಗಳನ್ನು ಬರೆದರು. ಅಬಲೆ, ಕೀಳು ಭಾವನೆ ಬಿಟ್ಟು ಮಹಿಳಗೆ ಘನತೆಯ ಬದುಕು ಒದಗಿಸಿದರು ಎಂದರು.

ಹೋರಾಟಗಾರ ಮರಿಯಪ್ಪ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಆನಂದ ಪಾಟೀಲ ಕೊರಳ್ಳಿ, ಬಸವರಾಜ ಸಾಗರ, ನೀಲಕಂಠ ಕಣ್ಣಿ, ಬಸವರಾಜ ಮೊರಬದ, ಸಿದ್ಧಲಿಂಗ ಬಾಳಿ ಉಪಸ್ಥಿತರಿದ್ದರು. ಎನಗೊಲಿದ ವಚನ ಎಂಬ ಆಧುನಿಕ ವಚನ ವಾಚನ ಗೋಷ್ಠಿಯಲ್ಲಿ ಅನೇಕ ಹಿರಿಯ ಕವಿಗಳು ತಮ್ಮ ಸ್ವರಚಿತ ಆಧುನಿಕ ವಚನಗಳು ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು. ಹಿರಿಯ ಲೇಖಕಿ ಡಾ. ಶೋಭಾದೇವಿ ಚೆಕ್ಕಿ ಅಧ್ಯಕ್ಷತೆ ವಹಿಸಿದ್ದರು.

ಬಸವರಾಜ ಕೋನೆಕ್, ಡಾ. ಎಸ್.ಎಸ್. ಪಾಟೀಲ ವೇದಿಕೆ ಮೇಲಿದ್ದರು.

ಸಮಾರೋಪ ನುಡಿ:

ಸಮಾರೋಪ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ, ವಚನ ಚಳವಳಿಗೆ ದೇವರ ದಾಸಿಮಯ್ಯ ಭೂಮಿಕೆಯಾದರು. ಕಲ್ಯಾಣದಲ್ಲಿ ಅದು ಫಲ ನೀಡಿತು. ದೇವರನ್ನು ಹುಡುಕುವ, ತೋರಿಸುವ ಹೊಸ ಕ್ರಮವನ್ನು ಶರಣರು ತೋರಿಸುವ ಕೆಲಸ ಮಾಡಿದರು.  ಶರಣರ ಆಶಯಗಳು ಬಡವರ, ದಲಿತರ ಉದ್ಧಾರಕ್ಕಾಗಿ, ಶ್ರಮಿಸಿದರು ಎಂದರು.

ತೊನಸನಹಳ್ಳಿ ಅಲ್ಲಮಪ್ರಭು ಪೀಠದ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅಪ್ಪಾರಾವ ಅಕ್ಕೋಣೆ, ರವೀಂದ್ರ ಶಾಬಾದಿ, ವೀರೇಶ ಬೋಳಶೆಟ್ಟಿ ಮಾತನಾಡಿದರು. ಅನೇಕರಿಗೆ ಕಾಯಕ ರತ್ನಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *