ಕಾರ್ಯಕ್ರಮದಲ್ಲಿ ಡಾ. ಎಂ.ಎಂ. ಕಲಬುರ್ಗಿ ಸ್ಮರಣೆ
ಅಣ್ಣಿಗೇರಿ:
ಮಧ್ಯ ಕರ್ನಾಟಕದ ಆಮ್ಲಜನಕ ಕಣಜ, ಅಪೂರ್ವ ಔಷಧೀಯ ಸಸ್ಯಗಳ ತಾಣ, ಉತ್ತರ ಕರ್ನಾಟಕದ ಸಹ್ಯಾದ್ರಿ ಎನಿಸಿದ ಕಪ್ಪತಗುಡ್ಡವನ್ನು ಗಣಿಗಾರಿಕೆ ಮಾಫಿಯಾದಿಂದ ಮುಕ್ತಗೊಳಿಸಲು, ಹಾಗೂ ಈ ಭಾಗದಲ್ಲಿ ರೈತರ ಬದುಕನ್ನು ಸರ್ವನಾಶ ಮಾಡಲಿದ್ದ ಪೋಸ್ಕೋ ಕಂಪನಿಯನ್ನು ಈ ನೆಲದಿಂದ ಓಡಿಸಿದ ಮಹಾನ್ ಚೇತನ ಗದಗ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಎಂದು ಉಪನ್ಯಾಸಕ ಬಿ.ಡಿ. ನಲವಡಿ ಸ್ಮರಿಸಿದರು.
ಸ್ಥಳೀಯ ಬಸವ ಕೇಂದ್ರ ಹಾಗೂ ಅಣ್ಣಿಗೇರಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಆಶ್ರಯದಲ್ಲಿ ತೋಂಟದಾರ್ಯ ಮಠದಲ್ಲಿ ಜರುಗಿದ ಶರಣ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಗದಗ ತೋಂಟದಾರ್ಯ ಮಠದ ಪೀಠಾಧಿಪತಿಯಾದ ನಂತರ ಸ್ವತಃ ರೈತರಾಗಿದ್ದ ಸಿದ್ಧಲಿಂಗ ಶ್ರೀಗಳು ಶ್ರೀಮಠಕ್ಕೆ ಸೇರಿದ ಡಂಬಳದ ಜಮೀನನ್ನೇ ತಮ್ಮ ಪ್ರಯೋಗ ಶಾಲೆಯನ್ನಾಗಿಸಿದರು. ಸ್ವತಃ ಬಾವಿ ತೋಡಲು ಮುಂದಾಗಿ ಅದರಲ್ಲಿ ಯಶಸ್ವಿಯಾದರು. ಮಿಶ್ರ ಬೆಳೆ ಬೆಳೆಯುವ, ತೋಟಗಾರಿಕೆ ಮಾಡುವ ಮೂಲಕ ಬರಡಾಗಿದ್ದ ಭೂಮಿಯನ್ನು ಹಸಿರುಮಯವಾಗಿಸಿ ಮಠಕ್ಕೆ ಆರ್ಥಿಕ ಶಕ್ತಿ ತುಂಬಿದರು.
ಡಂಬಳದಲ್ಲಿ ಪ್ರಥಮ ಗೋಶಾಲೆ ಪ್ರಾರಂಭಿಸಿದ, ರೈತ ಸಂಪರ್ಕ ಕೇಂದ್ರಕ್ಕಾಗಿ ಜಮೀನು ದಾನ ಮಾಡಿದ ಕೀರ್ತಿ ಸಿದ್ಧಲಿಂಗ ಶ್ರೀಗಳಿಗೆ ಸಲ್ಲಬೇಕು ಎಂದರು.
ಪ್ರಾಚಾರ್ಯರಾದ ಎಸ್. ಎಸ್. ಹರ್ಲಾಪೂರ ಸಿದ್ದಲಿಂಗ ಶ್ರೀಗಳ ಹಾಗೂ ಖ್ಯಾತ ಸಂಶೋಧಕ ಡಾ. ಎಂ. ಎಂ. ಕಲಬುರ್ಗಿ ಅವರ ಅವಿನಾವಭಾವ ಸಂಬಂಧ ಕುರಿತು ಮಾತನಾಡಿ, ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ಮುಖ್ಯ ಎಂದು ನಂಬಿದ ಕಲಬುರ್ಗಿ ಅವರು ಗೆಲುವು ದೀವಳಿಗೆ, ಸೋಲು ಶಿವರಾತ್ರಿ, ಮರಣವೇ ಮಹಾನವಮಿ ಎಂದು ತಿಳಿದು ನಡೆದವರು ಎಂದರು.

ನಾನು ಸೂರ್ಯ ಚಂದ್ರರ ಜೊತೆ ಬದುಕಲು ಹುಟ್ಟಿದ್ದೇನೆ. ಕನ್ನಡ ಮತ್ತು ಬಸವಣ್ಣ ನನ್ನ ಪ್ರಾಣ ಜೀವಾಳ ಎಂದು ಬದುಕಿದ ಅವರನ್ನು ಮೂಲಭೂತವಾದಿಗಳು ಹತ್ಯೆ ಮಾಡಿದರು. ಆದರೆ ಅವರು ಕಲಬುರ್ಗಿಯವರನ್ನು ಕೊಂದಿರಬಹುದು ಆದರೆ ಅವರ ಅಮೋಘ ವಿಚಾರಗಳನ್ನಲ್ಲ ಎಂದು ಹೇಳಿದರು.
ನಿಂಗಮ್ಮ ಹೂಗಾರ ವಿದ್ಯಾಲಯದ ವಿದ್ಯಾರ್ಥಿನಿಯರಾದ ಸಾಕ್ಷಿ ಹರ್ಲಾಪೂರ ಹಾಗೂ ಸಂಗಡಿಗರು ಡಾ. ಎಂ. ಎಂ. ಕಲಬುರ್ಗಿ ಅವರ ಜೊತೆ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು ಎಂಬ ರೂಪಕವನ್ನು ಅಭಿನಯಿಸಿ ಎಲ್ಲರ ಗಮನ ಸೆಳೆದರು.

ಹಿರಿಯ ಪತ್ರಕರ್ತ ವೀರೇಶ ಶಾನುಭೋಗರ ಅಧ್ಯಕ್ಷತೆ ವಹಿಸಿದ್ದರು. ತುಳಜಾ ಪಾಟೀಲ ಸಂಗಡಿಗರು ವಚನ ಪಾರಾಯಣ ಮಾಡಿದರು. ಸಾವಿತ್ರಿ ಹರ್ಲಾಪೂರ ಪ್ರಸಾದ ಸೇರಿದಂತೆ ಕಾರ್ಯಕ್ರಮದ ದಾಸೋಹವನ್ನು ನೆರವೇರಿಸಿದರು. ವಿ. ಎಂ. ಹಿರೇಮಠ ನಿರೂಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
