ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
ಸಾಣೇಹಳ್ಳಿ:
ಇಲ್ಲಿನ ಶ್ರೀಮಠದಲ್ಲಿ ನಡೆದ ಮಾಸಿಕ ಇಷ್ಟಲಿಂಗ ದೀಕ್ಷೆ ಸಂಸ್ಕಾರದ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು; ಲಿಂಗಾಯತ ಧರ್ಮವು ಹುಟ್ಟಿನಿಂದ ಬರುವುದಲ್ಲ, ಬದಲಿಗೆ ಬಸವಾದಿ ಶರಣರ ತತ್ವ-ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಸ್ಕಾರದಿಂದ ಬರುತ್ತದೆ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಶರಣರು ನೀಡಿದ ಬೆಳಕು ಇಡೀ ಮಾನವ ಕುಲಕ್ಕೆ ದಾರಿದೀಪವಾಗಿದೆ. ಬಾಹ್ಯ ದೇವಾಲಯಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ ಮತ್ತು ಮೂಢನಂಬಿಕೆಗಳನ್ನು ನಿರಾಕರಿಸಿದ ಬಸವಣ್ಣನವರು, “ದೇಹವೇ ದೇಗುಲ” ಎನ್ನುವ ಮೂಲಕ ದೇವರನ್ನು ಪ್ರತಿಯೊಬ್ಬರ ಅಂಗೈಗೆ ಇಷ್ಟಲಿಂಗದ ರೂಪದಲ್ಲಿ ತಂದುಕೊಟ್ಟರು.
ಇಷ್ಟಲಿಂಗ ನಿಷ್ಠೆ, ಕಾಯಕ ಶ್ರದ್ಧೆ ಹಾಗೂ ದಾಸೋಹ ಪ್ರವೃತ್ತಿ — ಈ ಮೂರನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು. ಕಾಯಕದಲ್ಲಿ ನಿರತರಾದಾಗ ಮತ್ತು ದುಡಿತದ ಫಲವನ್ನು ಸಮಾಜದ ಹಿತಕ್ಕಾಗಿ ಬಳಸಿದಾಗ ಮಾತ್ರ ಜೀವನಕ್ಕೆ ಸಾರ್ಥಕತೆ ದೊರೆಯುತ್ತದೆ.

ಪಂಚಾಚಾರ, ಅಷ್ಟಾವರಣ ಮತ್ತು ಷಟ್ಸ್ಥಲಗಳ ಅರಿವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಜಾತಿ, ಲಿಂಗ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದೇ ನಿಜವಾದ ಶಿವಾಚಾರ.
ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡುವುದೇ ದೀಕ್ಷೆ. ವೇಧಾ, ಕ್ರಿಯಾ ಹಾಗೂ ಮಂತ್ರ ದೀಕ್ಷೆಗಳ ಮೂಲಕ ಮನುಷ್ಯನು ದೈವೀ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಾಗರಾಜ ಹೆಚ್. ಎಸ್. ಅವರು ವಚನಗಳನ್ನು ಹೇಳಿಕೊಟ್ಟರು. ಸಿರಿಮಠ ಹಾಗೂ ಧನಂಜಯ ಅವರು ಇಷ್ಟಲಿಂಗ ದೀಕ್ಷೆಯ ಪೂಜಾ ವ್ಯವಸ್ಥೆಗಳನ್ನು ನೆರವೇರಿಸಿಕೊಟ್ಟರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
