ರಾಯಚೂರಿನಲ್ಲಿ ಹುತಾತ್ಮ ಕಲಬುರ್ಗಿ, ನುಲಿಯ ಚಂದಯ್ಯ ಸ್ಮರಣೆ ಕಾರ್ಯಕ್ರಮ

ರಾಯಚೂರು:

ನಗರದ ಬಸವ ಕೇಂದ್ರದಲ್ಲಿ ಕಾಯಕಯೋಗಿ ಶರಣ ನೂಲಿಯ ಚಂದಯ್ಯ ಹಾಗೂ ಹುತಾತ್ಮ ಡಾ. ಎಂ. ಎಂ. ಕಲಬುರ್ಗಿ ಅವರ ಸ್ಮರಣೆ ಕಾರ್ಯಕ್ರಮ ನಡೆಯಿತು.

ನಾಗೇಶ್ವರಪ್ಪ ಎಎಸ್ಐ ಅವರು ಮಾತನಾಡಿ, ನೂಲಿ ಚಂದಯ್ಯನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮ. ಹುಲ್ಲಿನಿಂದ ಹಗ್ಗ ಹೊಸೆವ ಕಾಯಕದ ಇವರು ಕಾಯಕ ಕಲ್ಪವೃಕ್ಷವಾಗಿದ್ದರೆಂದರು.

ಡಾ. ಪ್ರಿಯಾಂಕಾ ಗದ್ವಾಲ ಮಾತನಾಡಿ, ಚಂದಯ್ಯ ಅವರು ತಮ್ಮ ನಿಜ ಕಾಯಕ ನಿಷ್ಠೆಯಿಂದ, ನಿರ್ಭೀತ ವಿಚಾರ ಸರಣಿಯಿಂದ, ನಿರ್ಮಲವಾದ ನಡೆ-ನುಡಿಗಳಿಂದ, ನಿರಾಂಕಾರ ವೃತ್ತಿಯಿಂದ, ನಿಷ್ಕಲ್ಮಶ ಜೀವನದಿಂದ ನಿಜದ ರೂಪಾಗಿ ನಿಶ್ಶೇಷ ಕೀರ್ತಿಗಳಿಸಿದ್ದಾರೆ ಎಂದರು.

ಪಾರ್ವತಿ ಪಾಟೀಲ ಅವರು ಮಾತನಾಡುತ್ತಾ, ಬಸವಣ್ಣನವರು ಉಳವಿ ಕ್ಷೇತ್ರದಲ್ಲಿ ಲಿಂಗೈಕ್ಯರಾದ ನಂತರ ನೂಲಿ ಚಂದಯ್ಯನವರು ಶರಣೆ ಅಕ್ಕನಾಗಲಾಂಬಿಕೆಯ ರಕ್ಷಣೆಯ ಭಾರವನ್ನು ಹೊತ್ತು, ಅವರೊಡನೆ ವಚನ ಸಾಹಿತ್ಯ ಮತ್ತು ಶರಣತತ್ವ ಪ್ರಚಾರ ಮಾಡುತ್ತಾ, ಪ್ರವಾಸ ಮಾಡಿದ ಶರಣರಲ್ಲಿ ಒಬ್ಬರು.

ಅಕ್ಕನಾಗಮ್ಮನವರೊಡನೆ ಚಿಕ್ಕಮಗಳೂರು ಜಿಲ್ಲೆಯ ಎಣ್ಣೆಹೊಳೆಗೆ ಬಂದು ಶರಣತತ್ವ ಪ್ರಚಾರದಲ್ಲಿ ತೊಡಗಿದರು. ಶರಣೆ ಅಕ್ಕನಾಗಮ್ಮನವರು ಲಿಂಗೈಕ್ಯರಾದ ನಂತರ ಮುಂದೆ ಪದ್ಮಾವತಿ (ನೂಲೆನೂರು) ಗ್ರಾಮಕ್ಕೆ ಬಂದು ಲಿಂಗೈಕರಾಗಿದ್ದು ಅಲ್ಲಿ ಅವರ ಸ್ಮಾರಕವಿದೆ ಎಂದರು.

ಸಿ.ಬಿ. ಪಾಟೀಲ ವಕೀಲರು ಮಾತನಾಡಿ, ಚಂದಯ್ಯನವರು ಉನ್ನತಮಟ್ಟದ ಶಿವಜ್ಞಾನವನ್ನು ಪಡೆದ ನಂತರ ತಮ್ಮ ವೃತ್ತಿಯನ್ನು ಕಾಯಕವನ್ನಾಗಿ ಮಾಡಿಕೊಂಡು, ಗುರು, ಲಿಂಗ, ಜಂಗಮದ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದರಿಂದಲೇ ಅವರಿಗೆ ಕಾಯಕಯೋಗಿ ಎಂದು ಹೆಸರು ಬಂದಿತೆಂದರು.

ಜೆ. ಬಸವರಾಜ ವಕೀಲರು, ಮಾತನಾಡಿ ಡಾ. ಎಂ.ಎಂ. ಕಲಬುರ್ಗಿಯವರು ಸಿಂದಗಿ ತಾಲೂಕಿನ ಗುಬ್ಬೇವಾಡದಲ್ಲಿ ಜನಿಸಿದವರು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರಾಗಿ, ಮುಖ್ಯಸ್ಥರಾಗಿ ಮತ್ತು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಪ್ರಾಮಾಣಿಕ, ನಿಷ್ಠೆಯಿಂದ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

ಅವರು ಸಾಹಿತಿಗಳಾಗಿ, ಶಿಲಾಶಾಸನ ಸಂಶೋಧಕರಾಗಿ, ಅಮೂಲ್ಯವಾದ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸುವುದರೊಂದಿಗೆ, ಅವರ ಸಂಶೋಧನಾ ಲೇಖನ ಸಂಗ್ರಹವೇ “ಮಾರ್ಗ (ಸಂಪುಟ 4)” ಹಾಗೂ ಕರ್ನಾಟಕ ಘನ ಸರ್ಕಾರ ಪ್ರಕಟಿಸಿದ 15 ವಚನ ಸಂಪುಟಗಳನ್ನು ವ್ಯವಸ್ಥಿತ ರೀತಿಯಲ್ಲಿ ಬರೆದಿದ್ದಾರೆ.

ಅವರಿಗೆ ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನ ಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ ಹೀಗೆ ಅವರು ಜೀವನವನ್ನು ಪೂರ್ತಿಯಾಗಿ ಸಮಾಜ ಸೇವೆಗಾಗಿ ಮುಡುಪಾಗಿಟ್ಟ ಮಹಾನ್ ಸಾಧಕ.

ಕಟುಸತ್ಯವನ್ನು ಹೇಳಿದ್ದಕ್ಕೆ, ಪ್ರಕಟಿಸಿದ್ದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರದಿಂದ 2015, ಆಗಸ್ಟ್ 30ರಂದು ಅವರ ನಿವಾಸದಲ್ಲಿ ದುಷ್ಟರ ಗುಂಡಿಗೆ ಬಲಿಯಾಗಿ ಹುತಾತ್ಮರಾಗಿದರು. ಅವರ ಅಪಾರವಾದ ಸಾಹಿತ್ಯ, ಸಂಶೋಧನಾ ವಿಚಾರಗಳು ಪ್ರತಿಯೊಬ್ಬರ ಮನದಾಳದಲ್ಲಿ ಸ್ಥಿರವಾಗಿ ನೆಲೆಸಿದೆ ಎಂದರು.

ಬಸವ ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು, ನೂಲಿ ಚಂದಯ್ಯನವರ ಕಾಯಕ ಮಹತ್ವ ಮತ್ತು ಡಾ. ಎಂ.ಎಂ. ಕಲಬುರ್ಗಿ ಅವರು ವಚನ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತಾ ಅಧ್ಯಕ್ಷೀಯ ನುಡಿಗಳನ್ನಾಡಿದರು.

ವಚನ ಗಾಯನವನ್ನು ನಾಗೇಶ್ವರಪ್ಪ ನಡೆಸಿಕೊಟ್ಟರು, ಸಾಮೂಹಿಕ ಬಸವ ಪ್ರಾರ್ಥನೆಯನ್ನು ಪಾರ್ವತಿ ಪಾಟೀಲ ಮಾಡಿಸಿದರು. ಬಸವರಾಜ ಕುರುಗೋಡ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ನರಸಪ್ಪ ಫತೇಪುರ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *