ಮಾಯೆಯ ಆಕರ್ಷಣೆಗೆ ಒಳಗಾಗದಿರಿ ಎಂದು ಸಾರಿದಮುಪ್ಪಿನ ಷಡಕ್ಷರಿಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಮುಪ್ಪಿನ ಷಡಕ್ಷರದೇವರ ಜೀವನ ಹಾಗೂ ಸಾಧನೆಯ ಅವಲೋಕನ

ಚಿತ್ರದುರ್ಗ:

ಭಗವಂತನನ್ನು ನಾವು ನಮ್ಮಲ್ಲಿ ಹುಡುಕಿಕೊಳ್ಳಬೇಕು. ಮನಸ್ಸು ಪರಿಶುದ್ಧವಾಗಿದ್ದು ನಂಬಿಕೆಯಿಂದ ನೋಡಿದಾಗ ಮಾತ್ರ ನಮಗೆ ದರ್ಶನ ಸಾಧ್ಯವಾಗುತ್ತದೆ ಎಂದು ಚಿತ್ರದುರ್ಗ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಶಿಕ್ಷಕಿ ಕೆ. ಉಷಾ ಯುವರಾಜ್ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿರುವ ಅನುಭಾವ ಶ್ರಾವಣದ ೧೮ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಪ್ಪಿನ ಷಡಕ್ಷರಿಗಳ ಜೀವನ ಹಾಗೂ ಸಾಧನೆ ಕುರಿತು ಮಾತನಾಡಿದರು.

ಸಮಾಜದಲ್ಲಿ ಮೇಲು ಕೀಳೆಂಬುದಿಲ್ಲ, ಸಿರಿತನವೆಂಬುದು ಕನಸಿನಂತೆ ಯಾವ ಸಮಯದಲ್ಲಿ ಆದರೂ ಆ ಕನಸಿನಿಂದ ಎಚ್ಚರವಾಗಬಹುದು. ಅದು ಮಾಯೆಯಂತೆ ಆ ಮಾಯೆಯ ಬಗ್ಗೆ ಆಕರ್ಷಿತರಾಗದೆ ದೇಹವನ್ನೇ ದೇವಾಲಯ ಮಾಡಿಕೊಂಡು ಮೋಕ್ಷ ಸಾಧನೆ ಮಾಡಬೇಕೆಂದು ಜಗತ್ತಿಗೆ ಸಾರಿದ ಮಹಾನ್ ಅನುಭಾವಿ ಮುಪ್ಪಿನ ಷಡಕ್ಷರಿಗಳು ಎಂದರು.

ಮೈಸೂರು ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಬಳಿ ಇರುವ ಶಂಭುಲಿಂಗನ ಬೆಟ್ಟದಲ್ಲಿ ನಿಜಗುಣ ಶಿವಯೋಗಿಗಳ ಸಮಕಾಲೀನರಾಗಿದ್ದವರು ಎಂದು ತಿಳಿದುಬರುತ್ತದೆ. ಅಲ್ಲಿ ಮುಪ್ಪಿನ ಷಡಕ್ಷರಿಗಳು ತಪಸ್ಸು ಮಾಡಿದರೆಂದು ಹೇಳುವ ಮುಪ್ಪಿನ ಷಡಕ್ಷರಿಗಳ ಗವಿಯು ಇದೆ. ಇವರು ತಮ್ಮ ವೈಯಕ್ತಿಕ ವಿಚಾರವನ್ನು ಎಲ್ಲಿಯೂ ಹೇಳದೆ ಎರಗಂಬಳಿಯ ಸಿದ್ಧ ತಮ್ಮ ಗುರುವೆಂದು ತಿಳಿಸಿದ್ದಾರೆ.

ಜಗತ್ತಿಗೆ ನಾನು ಎಂಬುದು ಮಾಯೆ, ಗುರುವೇ ಅಂತಿಮವೆಂದು ಸಾರಿದ್ದಾರೆ. ಕವಿ, ಚರಿತೆಕಾರರು ಇವರ ಕೃತಿಗಳ ಕುರಿತು ಶಿವಾಷ್ಟಕ, ಶಿವಯೋಗಾಷ್ಟಕ ಎಂದು ಹೇಳುತ್ತಾರೆ. ಇವು ಇವರು ಷಡಕ್ಷರಿ ಎಂಬ ಅಂಕಿತದಲ್ಲಿ ಹಾಡಿರುವ ಸ್ವರವಚನಗಳೇ ಆಗಿವೆ. ಇವೆಲ್ಲವೂ ತತ್ವಪದಗಳಾಗಿದ್ದು ಒಟ್ಟಾರೆ ಸುಭೋದ ಸಾರ ಎಂದು ಪ್ರಸಿದ್ಧಿ ಪಡೆದಿವೆ. ಈ ಹೆಸರನ್ನು ಇಟ್ಟವರು ಇದರ ಸಂಗ್ರಹಕರಾದ ಹರ್ಡೇಕರ್ ಮಂಜಪ್ಪನವರು.

ಇವುಗಳನ್ನು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಮುಪ್ಪಿನ ಷಡಕ್ಷರಿಗಳ ಕೈವಲ್ಯ ಪದಗಳು ಎಂಬ ಹೆಸರಿನಲ್ಲಿ ಸಂಪಾದಿಸಿದ್ದಾರೆ ಎಂದರು.

ಮುಪ್ಪಿನ ಷಡಕ್ಷರಿಗಳವರ ಪದಗಳಲ್ಲಿ ಕಾಯಮೋಹವನ್ನು ಮರೆಯಬೇಕು ಸಿರಿ ಸಂಪತ್ತಿಗೆ ಆಕರ್ಷಿತರಾಗಬಾರದು ಸಾವು ಖಚಿತ ನಡುವಿನ ಜೀವನದ ಮಾಯೆಯ ಆಕರ್ಷಣೆಗೆ ಒಳಗಾಗಬಾರದು ಎಂದು ಜಗತ್ತಿಗೆ ಸಾರಿದರು.

ಅಲ್ಲದೆ ಮೇಲು-ಕೀಳು ಬಡವ ಶ್ರೀಮಂತ ಎಂಬ ಅಸಮಾನತೆಗಳನ್ನು ಹೋಗಲಾಡಿಸಲು ಸೇತುವೆಯಾಗ ಹೊರಟವರು ಮುಪ್ಪಿನ ಷಡಕ್ಷರಿಗಳು. ಅಂಗ-ಅಂಗಾಂಗದ ಆಕರ್ಷಣೆ ಬಾಹ್ಯಾಡಂಬರದ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯ ಇರುವ ಈ ಕಾಲಘಟ್ಟದಲ್ಲಿ ಮುಪ್ಪಿನ ಷಡಕ್ಷರಿಗಳು ಇವೆಲ್ಲವುಗಳನ್ನು ಮೀರಿದ ಬದುಕನ್ನು ಬದುಕಿ ಪ್ರಸ್ತುತರೆನಿಸಿದ್ದಾರೆ.

ಬಾಹ್ಯ ಆಡಂಬರದ ಜೀವನ ಬಾಹ್ಯ ಆಕರ್ಷಣೆಯ ಜೀವನದಿಂದ ಬಹುದೂರ ಸಾಗಿ ಬಂದ ಸಮಾಜಕ್ಕೆ ಶ್ರೀಮಠ ಅನುಭವ ಶ್ರಾವಣ: ಶ್ರವಣ ಚಿಂತನ ಮಾಲಿಕೆ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿ ನಮ್ಮನ್ನು ಹಿಂತಿರುಗಿ ನೋಡುವಂತೆ ಮಾಡಿರುವುದಕ್ಕೆ ನಾವು ಕೃತಜ್ಞರಾಗೋಣ ಎಂದು ತಿಳಿಸಿದರು.

ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಅವರು, ಯಾವುದು ನಮ್ಮ ಕಣ್ಣಿಗೆ ಮೋಸ ಮಾಡುತ್ತದೆಯೋ ಅದುವೇ ಮಾಯೆ. ಮಾಯೆಯಿಂದ ಹೊರಬಂದವರು ಜ್ಞಾನಿಗಳಾಗುತ್ತಾರೆಂದು ಸಮಾಜಕ್ಕೆ ಸಾರಿದವರು ಶ್ರೀ ಮುಪ್ಪಿನ ಷಡಕ್ಷರಿಗಳು.

ಸಿದ್ಧಲಿಂಗೇಶ್ವರ ಗುರುಗಳ ಬಳಿ ಮುಪ್ಪಿನ ಷಡಕ್ಷರಿಯವರು ದೀಕ್ಷೆ ಪಡೆದುಕೊಂಡರು. ಮನಸ್ಸು ಶುದ್ಧವಾಗಿದ್ದರೆ ನಮ್ಮಲ್ಲೇ ಪರಶಿವನ ದರ್ಶನವಾಗುತ್ತದೆ. ಬೇರೆಯವರ ಬಗ್ಗೆ ಚಿಂತಿಸಿದರೆ ನಮ್ಮ ಜೀವನ ಹಾಳಾಗುತ್ತದೆ. ನಮ್ಮ ಜೀವನದ ಬಗ್ಗೆ ತಲೆ ಕೆಡಿಸಿಕೊಂಡರೆ ಜೀವನ ಸುಗಮವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ದಾಸೋಹಿಗಳಾದ ನಾಗರಾಜ ಸಂಗಮ್ ಮಾತನಾಡಿ, ಯುವಜನತೆ ಮತ್ತು ಮಕ್ಕಳಾದಿಯಾಗಿ ನಡತೆಯಲ್ಲಿ ಹಿಂದಿನ ಸಂಸ್ಕೃತಿಯನ್ನು ಅನುಸರಿಸುತ್ತಿಲ್ಲ. ಹಾಗಾಗಿ ಮಂದಿನ ಸಮಾಜ ಸರಿದಾರಿಯಲ್ಲಿ ಸಾಗಬೇಕಿದ್ದರೆ ಈಗಿನ ಯುವಜನತೆ ಸಂಸ್ಕೃತಿ, ಸನ್ನಡತೆ, ಇಂತಹ ಅನುಭಾವ ಶ್ರಾವಣದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅರಿವು ಮೂಡುತ್ತದೆಂದು ಸಲಹೆ ನೀಡಿದರು.

ಸಮಾರಂಭದಲ್ಲಿ ವಿವಿಧ ಸಮಾಜ, ಸಂಘಟನೆಗಳ ಪದಾಧಿಕಾರಿಗಳಾದ ಎಸ್. ವೀರೇಶ, ಮಲ್ಲಿಕಾರ್ಜುನಪ್ಪ, ಬಸವರಾಜ ಕಟ್ಟಿ, ಕಸವನಹಳ್ಳಿ ಶಿವಣ್ಣ, ಗಾಯತ್ರಿ ಶಿವರಾಂ, ಉಪನ್ಯಾಸಕ ಶಿವಕುಮಾರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್.ಜೆ.ಎಂ. ನರ್ಸಿಂಗ್ ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಸಮಾರಂಧಕ್ಕೆ ಜಮುರಾ ಕಲಾವಿದ ಉಮೇಶ ಪತ್ತಾರ ಮುಪ್ಪಿನ ಷಡಕ್ಷರಿಗಳ ತತ್ವಪದಗಳನ್ನು ಹಾಡಿದರು. ಎಸ್.ಜೆ.ಎಂ. ನರ್ಸಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸವಿತಾ ಸ್ವಾಗತಿಸಿದರು. ಪ್ರಕಾಶ ಕಾರ್ಯಕ್ರಮ ನಿರೂಪಿಸಿ, ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *