ಕಂಪ್ಲಿ:
ದೇವರು-ಧರ್ಮ ಹೊರಗಡೆ ಇಲ್ಲ ಅವು ನಮ್ಮ ಅಂತರಂಗದಲ್ಲೇ ಇವೆ ಎಂದು ರಾಯಚೂರು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಪಿ. ರುದ್ರಪ್ಪ ಅವರು ಅಭಿಪ್ರಾಯಪಟ್ಟರು.
ನಿಜವಾದ ಬಸವತತ್ವವನ್ನು ತಿಳಿದುಕೊಂಡಾಗ ದೇವರು, ಧರ್ಮ ಹೊರಗಡೆ ಇಲ್ಲ ನಮ್ಮ ಅಂತರಂಗದ ಅನುಭಾವದ ಬೆಳಕಿನಲ್ಲಿಯೇ ಎಲ್ಲವೂ ಸಿದ್ಧಿಸುತ್ತದೆ ಎಂದು ಬಸವಾದಿ ಪ್ರಮಥರು ನಮಗೆ ತೋರಿಸಿಕೊಟ್ಟು ಹೋಗಿದ್ದಾರೆ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ರಾಷ್ಟ್ರೀಯ ಬಸವದಳ ಸಂಘಟನೆಗಳ ಸಹಯೋಗದಲ್ಲಿ ಬಿ. ವೀರಣ್ಣ ನಿವೃತ್ತ ಶಿಕ್ಷಕರ ಮನೆಯಲ್ಲಿ ಏರ್ಪಡಿಸಿದ್ದ ವಚನ ಶ್ರಾವಣ-೨೦೨೬ರ ಅಂಗವಾಗಿ ಮನೆ – ಮನಗಳಿಗೆ ವಚನ ಸಂದೇಶ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಕೆ. ರವೀಂದ್ರನಾಥ ಅವರು ಮಾತನಾಡಿ “ವಚನ ಸಾಹಿತ್ಯದ ತತ್ವಗಳು ಇಡೀ ಮನುಕುಲದ ಉದ್ಧಾರಕ್ಕಾಗಿ ಇರುವ ಕಾರಣದಿಂದ ಅವುಗಳ ಸಂಗ್ರಹ ಮತ್ತು ಅಧ್ಯಯನ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದು ವಿಜಯನಗರ ಪರಿಸರದ ಶರಣ ಸಾಹಿತ್ಯ ಮತ್ತು ಲಿಂಗಾಯತ ಅಧ್ಯಯನ ಪರಂಪರೆಯನ್ನು ಕುರಿತು ತಿಳಿಸಿದರು.
ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿರುವ ಪ್ರತಿ ಕಾರ್ಯಕ್ರಮದಲ್ಲಿ ಶಿವಶರಣರ ಎರಡು ವಚನಗಳ ಪ್ರವಚನ ಮತ್ತು ವಿದ್ವಾಂಸರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶಾರದಾ ಜಗನ್ನಾಥ ಹಿರೇಮಠ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ವರದಿಗಾರರಾದ ಬಂಗಿ ದೊಡ್ಡಮಂಜುನಾಥ, ಹೊಸಪೇಟೆ ಬಸವ ಬಳಗದ ಬಸವಕಿರಣ, ವಿಜಯನಗರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಮಾವಿನಳ್ಳಿ ಬಸವರಾಜ, ಹೇಮಯ್ಯಸ್ವಾಮಿ, ಬಿ.ಎಂ. ಪುಷ್ಪ, ರಶ್ಮಿ ಕಲ್ಗುಡಿ, ಡಾ. ಸುನೀಲ, ಸಿಂಧನೂರಿನ ಹೆಚ್. ಜಿ. ಹಂಪಣ್ಣ ಮುಂತಾದವರು ಉಪಸ್ಥಿತರಿದ್ದರು.
