ಮುಂಡರಗಿ:
‘ಯಾರು ಇಷ್ಟಲಿಂಗವನ್ನು ಧರಿಸಿ, ಬಸವಾದಿ ಶರಣರ ವಚನಗಳನ್ನು ಒಪ್ಪಿಕೊಂಡು ಬದುಕುವರೋ ಅವರೆಲ್ಲ ಲಿಂಗಾಯತರಾಗಿದ್ದಾರೆ. ಇಷ್ಟಲಿಂಗದ ತತ್ವವನ್ನು ಲಿಂಗಾಯತರಾದವರೆಲ್ಲ ಅರಿತು ನಡೆಯಬೇಕು. ಬಸವಾದಿ ಶರಣರು ಸಾರಿರುವ ಸಮಾನತೆಯ ತತ್ವವನ್ನು ನಾವೆಲ್ಲರೂ ಆಚರಣೆಗೆ ತರಬೇಕು’ಎಂದು ತಂಗಡಗಿಯ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ನುಡಿದರು.

ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲ್ಲೂಕು ಘಟಕವು ಈಚೆಗೆ ಇಲ್ಲಿನ ಪುರಸಭೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಸವಾದಿ ಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
‘ಹಡಪದ ಸಮಾಜವು ಅಸಂಘಟಿತವಾಗಿದ್ದು, ಸಮಾಜದ ಇನ್ನಾದರೂ ಸಂಘಟಿತಗೊಳ್ಳಬೇಕು. ಸರ್ವ ಸಮಾಜದವರೊಂದಿಗೆ ಸದಾ ಉತ್ತಮ ಒಡನಾಟ ಇಟ್ಟುಕೊಂಡಿರುವ ಹಡಪದ ಸಮಾಜದವರು ಕಾಯಕ ಪ್ರೇಮಿಗಳಾಗಿದ್ದು, ಶಾಂತಿ ಪ್ರೀಯರಾಗಿದ್ದಾರೆ. ಸಮಾಜದ ತಂದೆ-ತಾಯಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ, ಶರಣ ಸಂಸ್ಕಾರ ನೀಡಬೇಕು.
ಕಾಯಕ ಮಾಡುವುದರ ಮೂಲಕವೇ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ’ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ‘ಲಿಂಗಾಯತ ಧರ್ಮ ಉಳಿಯಬೇಕೆಂದರೆ ಲಿಂಗಾಯತ ಉಪ ಪಂಗಡಗಳಲ್ಲಿ ಇರುವವರೆಲ್ಲ ಕಡ್ಡಾಯವಾಗಿ ಲಿಂಗಧರಿಸಬೇಕು. ಯಾರು ಲಿಂಗ ಧರಿಸುತ್ತಾರೋ ಅವರೆಲ್ಲ ಲಿಂಗಾಯತರು. ಲಿಂಗ ಧರಿಸಿದವರೆಲ್ಲರನ್ನೂ ಸಮಾಜ ಸಮಾನತೆಯಿಂದ ಕಾಣಬೇಕು’ಎಂದರು.
ಸಾನಿಧ್ಯ ವಹಿಸಿದ್ದ ಡೋಣಿ ನಂದಿವೇರಿ ಮಠದ ಪೂಜ್ಯ ಶಿವಕುಮಾರ ಸ್ವಾಮಿಗಳು ಮಾತನಾಡಿ, ‘ಶರಣರ ವಚನಗಳು ಬೆಳಕಿನೆಡೆಗೆ ತೆಗೆದುಕೊಂಡು ಹೋಗುತ್ತವೆ. ೧೨ ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ ಅವರಂತಹ ಶರಣರಲ್ಲಿ ಹಡಪದ ಅಪ್ಪಣ್ಣ ಅಪ್ಪಟ ನಿಜಸುಖಿಯಾಗಿ ತಮ್ಮ ವಚನಗಳ ಮೂಲಕ ಶ್ರೇಷ್ಠತೆ ಹೊಂದಿದ್ದರು’ ಎಂದರು.
ಹಡಪದ ಅಪ್ಪಣ್ಣ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಹಡಪದ ಅದ್ಯಕ್ಷತೆ ವಹಿಸಿದ್ದರು. ಎ.ವಿ. ಪ್ರಭು ಸಂಪಾದಕತ್ವದ ‘ನಿಜಸುಖಿ ಹಡಪದ ಅಪ್ಪಣ್ಣ’ ವಚನ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಹಡಪದ ಅಪ್ಪಣ್ಣ ಸಂಸ್ಥಾನಮಠದ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ವೈದ್ಯ ಡಾ. ವೀರೇಶ ಹಂಚಿನಾಳ ಅವರಿಗೆ ನಿಜಸುಖಿ ಹಡಪದ ಅಪ್ಪಣ್ಣ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಶಿವಶರಣ ಹಡಪದ ಅಪ್ಪಣ್ಣ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಹಡಪದ ಸ್ವಾಗತಿಸಿದರು. ಪಂಚಾಕ್ಷರಿ ಹಡಪದ ಕಾರ್ಯಕ್ರಮ ನಿರೂಪಿಸಿದರು.
ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ದೇವು ಹಡಪದ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮೋಹನ ಚಂದಪ್ಪನವರ, ಗಂಗಾಧರ ಎಮ್ಮಿಗನೂರ, ಸುರೇಶ ಹಡಪದ ಇದ್ದರು.
ಇದೇ ಸಂದರ್ಭದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣ ವೃತ್ತದ ನಾಮಫಲಕ ಅನಾವರಣಗೊಳಿಸಲಾಯಿತು.
ಮೋಹನ ಚಂದಪ್ಪನವರ, ವಿ.ಎಸ್. ಘಟ್ಟಿ, ಪ್ರಕಾಶ ಸಜ್ಜನರ, ಡಾ. ಬಿ.ಎಸ್. ಮೇಟಿ, ಎಚ್.ಡಿ. ಪೂಜಾರ, ಎಂ.ಎಸ್. ಬಾವಿಮನಿ, ಎಲ್ಲಪ್ಪ ಹೊಂಬಳಗಟ್ಟಿ, ಗಂಗಾಧರ ಎಮ್ಮಿಗನೂರ ಮತ್ತು ನೂರಾರು ಜನ ಲಿಂಗಾಯತ ಹಡಪದ ಸಮಾಜ ಬಾಂಧವರು ಉಪಸ್ಥಿತರಿದ್ದರು.
