ಬೆಂಗಳೂರು :
ಕಲ್ಯಾಣ ಬಡಾವಣೆಯ ಬಸವ ಬೆಳಕು ತಂಡದ ಸದಸ್ಯರು ವಚನ ನವರಾತ್ರಿ ಹಾಗೂ ವಚನ ವಿಜಯದಶಮಿ ಕಾರ್ಯಕ್ರಮಗಳನ್ನು ಈ ವರ್ಷವೂ ಅರ್ಥಪೂರ್ಣವಾಗಿ ನಡೆಸಿದರು. ಕಳೆದ ಐದು ವರ್ಷಗಳಿಂದ ಇಂಥ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ವಚನ ನವರಾತ್ರಿಯ ಅಂಗವಾಗಿ ಒಂಬತ್ತು ದಿನಗಳ ಕಾಲ 9 ಬಸವಾದಿ ಶರಣೆಯರಾದ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಹಡಪದ ಲಿಂಗಮ್ಮ, ಗುಡ್ಡಾಪುರದ ದಾನಮ್ಮ, ಬೊಂತಾದೇವಿ, ದೀಪದ ಗೋಗ್ಗವ್ವೆ, ಸೂಳೆ ಸಂಕವ್ವೆ ಹಾಗೂ ಮೋಳಿಗೆ ಮಹಾದೇವಿ ಅವರ ಜೀವನ ಚರಿತ್ರೆ, ಅವರು ಬರೆದ ವಚನಗಳ ಪರಿಚಯ ಮಾಡಲಾಯಿತು.


ಪ್ರತಿದಿನ ಬಸವ ಬಳಗದ ಮಕ್ಕಳಿಂದ ಹಾಗೂ ಬಡಾವಣೆಯ ವಿವಿಧ ತಂಡಗಳಿಂದ ವಚನ ಗಾಯನ ಏರ್ಪಡಿಸಲಾಯಿತು. ಹಿಂದೂಸ್ತಾನಿ ಸಂಗೀತ ವಿದ್ವಾಂಸರಾದ ಡಾ. ಪಂಚಾಕ್ಷರಯ್ಯ ಬಿ. ಹಿರೇಮಠ ಅವರು ವಚನ ಗಾಯನ ನೆರವೇರಿಸಿಕೊಟ್ಟರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಬಸವ ತತ್ವ ಚಿಂತಕರಾದ ಶಂಕರಪ್ಪ ಬೇವೂರ, ಹಸಿವಿಗೆ ಅಂಬಲಿ ಮುದ್ದು ಬಸುರೆಗೆ ಶಿಶು ಮುದ್ದು ಬಿಸಿಲಿಗೆ ಕೊಡೆ ಮುದ್ದು ಈ ವಸುದೆಗೆ ಬಸವಣ್ಣನೇ ಮುದ್ದು ಸರ್ವಜ್ಞ ಎಂಬ ವಚನದಂತೆ ಇಂದು ವಿಶ್ವವೇ ವಿಶ್ವಗುರು ಬಸವಣ್ಣನವರ ವಿಚಾರಗಳನ್ನು ತಿಳಿದುಕೊಳ್ಳುವ ತವಕ ಹೆಚ್ಚಾಗುತ್ತಿದೆ ಎಂದರು.

ಅಂದು ಬಸವ ಕಲ್ಯಾಣದಲ್ಲಿ ಆರಂಭವಾದ ಜಗತ್ತಿಗೆ ಬೆಳಕನ್ನು ನೀಡುವ ವಚನ ಸಾಹಿತ್ಯವನ್ನು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅಂತಹ ಶ್ರೀಮಂತ ಸಂಸ್ಕೃತಿ ಕಲ್ಯಾಣ ಬಡಾವಣೆಯಲ್ಲಿ ಸಾಕಾರಗೊಳ್ಳುತ್ತಿರುವುದು ತುಂಬಾ ಸಂತಸ ತಂದಿದೆ ಎಂದರು.

ವಚನ ವಿಜಯ ದಶಮಿಯ ದಿನ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಪವಾಡ ಬಸವಣ್ಣ ದೇವರಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿ ನೆರೆದಿದ್ದ ನೂರಾರು ಶರಣ ಶರಣೆಯರಿಗೆ ಆಶೀರ್ವಾದದ ನುಡಿಗಳನ್ನಾಡುತ್ತ, ಮುಂದಿನ ಬಸವ ಜಯಂತಿಯಲ್ಲಿ ಸಿಕ್ಕಿರುವ ಬಸವಣ್ಣನವರ ಎಲ್ಲಾ ವಚನಗಳನ್ನೂ ಅಭ್ಯಾಸ ಮಾಡಿ, ಬಸವ ಮಂಟಪದಲ್ಲಿ ಪ್ರಸ್ತುತಪಡಿಸಲು ಬಸವ ಭಕ್ತರಿಗೆ ಸೂಚಿಸಿದರು.

ವಿಶ್ವದ ಶ್ರೇಷ್ಠ ಸಾಹಿತ್ಯವಾದ ವಚನವನ್ನು ತಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಕಲಿಸಿಕೊಡಿ. ನಾವು ನೀವೆಲ್ಲರೂ ಕೂಡಿ ಶರಣ ಸಂಸ್ಕೃತಿಯನ್ನು ಶ್ರೀಮಂತ ಗೊಳಿಸೋಣ ಎಂದು ತಿಳಿಸಿದರು.
ಶರಣ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಕಲ್ಯಾಣ ಬಡಾವಣೆಯ ಬಸವ ಭಕ್ತರೊಂದಿಗೆ ತಾನು ಸದಾ ಇರುತ್ತೇನೆಂದು ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಕಲ್ಯಾಣ ಬಡಾವಣೆಯ ಬಸವಭಕ್ತರು ಬಸವಣ್ಣನ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಬೀದಿಗಳಲ್ಲಿ ಪಥಸಂಚಲನ ಮಾಡಿದರು. ಸಾನಿಧ್ಯ ವಹಿಸಿದಂತಹ ಸಿದ್ದಲಿಂಗ ಮಹಾಸ್ವಾಮಿಗಳು ಭಕ್ತರೊಂದಿಗೆ ಹೆಜ್ಜೆ ಹಾಕಿದರು.

ಸಮಾಜದ ಹಿರಿಯರಾದ ಚನ್ನಮಲ್ಲಯ್ಯ, ಚಂದ್ರಶೇಖರಯ್ಯ, ಮಲ್ಲಿಕಾರ್ಜುನಯ್ಯ, ಬಸವರಾಜು, ಕೃಪಾಶಂಕರ, ಸುಭಾಷಚಂದ್ರ ಭೋಸ್, ಅನು ಚಂದ್ರಕಾಂತ, ಕಾತ್ಯಾಯನಿ ಸುಭಾಷ, ರೂಪ ಪ್ರಸಾದ, ಸ್ವರ್ಣಲತಾ ಗಂಗಾಧರಯ್ಯ, ತೇಜಸ್ವಿನಿ ಮಲ್ಲಿಕಾರ್ಜುನ, ದಿವಾಕರ್ ಹಾಗೂ ಪ್ರಸನ್ನ ಪಂಚಾಕ್ಷರಯ್ಯ ಮತ್ತಿತರರು ಉಪಸ್ಥಿತರಿದ್ದರು.
