ಸೆಪ್ಟೆಂಬರ್ 14ರ ಸಂಜೆ ಬಾಹ್ಯಾಕಾಶದಲ್ಲಿ ಅಪರೂಪದ ಖಗೋಳ ಘಟನೆ
ನಾಲತವಾಡ:
ಗಣೇಶ ಚತುರ್ಥಿಯ ದಿನ ಚಂದ್ರನ ದರ್ಶನ ಮಾಡಿದವರು ಅನಗತ್ಯ ಅಪವಾದಕ್ಕೆ ಗುರಿಯಾಗುತ್ತಾರೆ ಎಂಬ ಮೌಢ್ಯವನ್ನು ಪಾಲಿಸಿಕೊಂಡು ಬರಲಾಗಿದೆ.

ಸ್ಥಳೀಯ ಬಸವ ಕೇಂದ್ರದ ಪದಾಧಿಕಾರಿಗಳು, ಸದಸ್ಯರು ಸೋಮವಾರ ಸಂಜೆ ಚೌತಿಯ ದಿನ ಚಂದ್ರನನ್ನು ನೋಡುವ ಮೂಲಕ ಹಳೆಯ ಕಾಲದಿಂದ ನಡೆದುಕೊಂಡು ಬಂದಿರುವ ಮೂಢನಂಬಿಕೆ, ಅಂಧಶ್ರದ್ಧೆಯ ರೂಢಿಗೆ ಸೆಡ್ಡು ಹೊಡೆದರು.
ಈ ಹಿಂದೆ ಸಂಘಟನೆ ಗ್ರಹಣ ಕಾಲದಲ್ಲಿ ಗರ್ಭಿಣಿಯರಿಗೆ, ವೈಜ್ಞಾನಿಕ ಮನೋಭಾವ ಹೊಂದಿದವರಿಗೆ ಊಟ-ಉಪಹಾರದ ವ್ಯವಸ್ಥೆ ಮಾಡಿತ್ತು. ಸದ್ಯ ಚಂದ್ರ, ಶುಕ್ರ ಗ್ರಹಗಳನ್ನು ಒಟ್ಟಿಗೆ ನೋಡಿ ಬಾನಂಗಳದಲ್ಲಿ ನಡೆದ ಅಪರೂಪದ ಸುಂದರ ವಿಸ್ಮಯಕ್ಕೆ ಸಾಕ್ಷಿಯಾದರು.

ಈ ಕಾರ್ಯಕ್ರಮದ ವೇಳೆ ಶಂಭುಲಿಂಗಪ್ಪ ದುದ್ದಗಿ, ಅನಿತಾ ದುದ್ದಗಿ, ರಾಜಶೇಖರ ಜಾವೂರ, ಶ್ರೀಶೈಲ ಹೂಗಾರ, ಜಯಪ್ರಕಾಶ ನೂಲಿನವರ, ಅಂಕಿತಾ ದುದ್ದಗಿ, ವಿನುತಾ ನೂಲಿನವರ, ಬಸವರಾಜ ಹಾದಿಮನಿ, ರಾಜು ಹಾದಿಮನಿ, ಎ.ಎಚ್. ಖಾಜಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.
ಅಪರೂಪದ ಖಗೋಳ ಘಟನೆ
2026ರ ಸೆಪ್ಟೆಂಬರ್ 14ರ ಚೌತಿಯಂದೇ, ‘ಚಂದ್ರನ ಗುಪ್ತ ಕ್ರಿಯೆ’ ಎಂಬ ಅಪರೂಪದ ಖಗೋಳ ಘಟನೆ ಸಂಭವಿಸಿತು.
ಆಕಾಶ ಪ್ರಿಯರನ್ನು ಸೆಳೆದ ಈ ಘಟನೆಯಲ್ಲಿ ಚಂದ್ರ ಮತ್ತು ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ ಪರಸ್ಪರ ಮುಖಾಮುಖಿಯಾದವು.
ಸಂಜೆಯ ವೇಳೆಗೆ ಮಧ್ಯ ಮತ್ತು ದಕ್ಷಿಣ ಭಾರತದಾದ್ಯಂತ, ಪಶ್ಚಿಮ ಆಕಾಶದಲ್ಲಿ ಅರ್ಧಚಂದ್ರ ಹಾಗೂ ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ ಒಂದೇ ಕಡೆ ಕಂಗೊಳಿಸುವ ದೃಶ್ಯ ಕಾಣಿಸಿತು.
ಚಂದ್ರನು ಶುಕ್ರ ಗ್ರಹದ ನೇರ ಪಥದಲ್ಲಿ ಹಾದುಹೋದ ಕಾರಣ, ಶುಕ್ರ ಗ್ರಹವು ತಾತ್ಕಾಲಿಕವಾಗಿ ಚಂದ್ರನ ಮರೆಯಲ್ಲಿ ಕಣ್ಮರೆಯಾಯಿತು. ಭಾರತೀಯ ಕಾಲಮಾನ ಸಂಜೆ 5:22 ಕ್ಕೆ ಚಂದ್ರನ ಹಿಂದೆ ಮರೆಯಾದ ಶುಕ್ರ ಗ್ರಹವು, ನಂತರ ಸಂಜೆ 6:18 ರ ಸುಮಾರಿಗೆ ಮತ್ತೆ ಪ್ರತ್ಯಕ್ಷವಾಯಿತು.
ಆದರೆ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಹಬ್ಬ ಇದ್ದ ಕಾರಣಕ್ಕೆ ಅನೇಕ ಜನರು ಇದನ್ನು ನೋಡಲು ಹಿಂದೇಟು ಹಾಕಿದರು.

ಇದು ಶರಣರ ವೈಜ್ಞಾನಿಕ ನಡವಳಿಕೆ. ಒಳ್ಳೆಯ ಬೆಳವಣಿಗೆ. ಸಾವಿರಾರು ವರ್ಷದಿಂದ ಚೌತಿಯಂದು ಚಂದ್ರನನ್ನು ನೋಡಬಾರದು ಎಂದು ನಂಬಿಕೊಂಡು ಬಂದಿರುವ ಈ ನಂಬಿಕೆಗಳಿಂದ ಜನಸಮೂಹವನ್ನು ಹೊರತರುವುದು ಅಷ್ಟೊಂದು ಸುಲಭದ ವಿಷಯವಲ್ಲ. ಇಂತಹ ನಂಬಿಕೆಗಳೇ ಹಿಂದೂ ಧರ್ಮದ ತಳಹದಿಗಳು. ಕೇವಲ ಭಯದ ಆಧಾರದಲ್ಲಿ ದೇವರು ಮತ್ತು ಧರ್ಮವನ್ನು ಕಟ್ಟಿ ಸಾಮಾನ್ಯ ಜನರನ್ನು ಭಯಭೀತರಾಗಿಸಿ ಮೌಢ್ಯಕ್ಕೆ ತಳ್ಳಲಾಗುತ್ತಿದೆ. ಇತ್ತೀಚಿನ ಯುವಕರೂ ಗಣಪತಿ ಹಬ್ಬದ ಹೆಸರಿನಲ್ಲಿ ಮೋಜು ಮಸ್ತಿಗೆ ಉಪಯೋಗಿಸಿಕೊಳ್ಳುವುದು, ಒತ್ತಾಯಕಪೂರ್ವಕವಾಗಿ ಹೆದರಿಸಿ ಬೆದರಿಸಿ ಹಣ ವಸೂಲು ಮಾಡುವುದು, ಅಸಭ್ಯ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಕಾಣುತ್ತಿದ್ದೇವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷವು ಕೋಮುದ್ವೇಷವನ್ನು ಹೆಚ್ಚಿಸಿ ಯುವಕರನ್ನು ಸೆಳೆಯುವುದು ಮತ್ತು ಧರ್ಮದ ಹೆಸರಿನಲ್ಲಿ ಮತಗಳನ್ನು ಸೆಳೆಯುವ, ಸಮಾಜದಲ್ಲಿ ವೈಷಮ್ಯವನ್ನು ಬಿತ್ತುವ ಕೆಲಸವನ್ನು ಸತತವಾಗಿ ಮಾಡುವುದರ ಮೂಲಕ ಸಾಮಾಜಿಕ ಆರೋಗ್ಯವನ್ನೇ ಹಾಳುಮಾಡುತ್ತಿದೆ.
ಮಣ್ಣಿನ ಗಣಪತಿ, ಮೂರ್ತಿ ಪೂಜೆ, ಕುಡಿತ ಕುಣಿತ ಚಂದಾ ವಸೂಲಿ ಮಾಡುವ ಮಕ್ಕಳ ಪಾಡು ದೇವರೇ ಗತಿ!!!