ಬೀದರ:
ಮಕ್ಕಳಿಗೆ ಧರ್ಮ, ಸಂಸ್ಕೃತಿ, ನ್ಯಾಯ, ನೀತಿ ಉಳ್ಳ ಶಿಕ್ಷಣ ಕಲಿಸುವುದು ತುಂಬಾ ಅವಶ್ಯಕವಾಗಿದೆ ಎಂದು ಹುಮನಾಬಾದ ತಹಸೀಲ್ದಾರ್ ಜಗದೀಶ ಎಸ್. ಚೌರ ಅವರು ನುಡಿದರು.
ಬೀದರ ಬಸವಕೇಂದ್ರ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶರಣ ತತ್ವ್ತ ದರ್ಶನದ ಪ್ರವಚನ ಸಮಾರೋಪದಲ್ಲಿ ಮಾತನಾಡುತ್ತಿದ್ದರು.
ಗುರು ಶಿಷ್ಯ ಸಂಬಂಧ ಚೆನ್ನಾಗಿರಬೇಕು. ಶಿಕ್ಷಕ ಹುದ್ದೆ ಅತ್ಯಂತ ಪವಿತ್ರವಾಗಿದೆ. ಎಲ್ಲಿಲ್ಲದ ಗೌರವ ಶಿಕ್ಷಕರಿಗೆ ಲಭಿಸುತ್ತದೆ. ಅನೇಕ ಮಕ್ಕಳು ಇಂದು ಮೊಬೈಲ್ ಬಳಕೆಯಿಂದ ಹಾಳಾಗುತ್ತಿದ್ದಾರೆ, ಶಿಕ್ಷಕರು ಹಾಗೂ ಪಾಲಕರು ಸೇರಿಯೆ ಇದಕ್ಕೆ ಕಡಿವಾಣ ಹಾಕಬೇಕೆಂದು ಸಲಹೆ ನೀಡಿದರು.
ಇಂಜಿನಿಯರ್ ಹಾವಶೆಟ್ಟಿ ಪಾಟೀಲ ಮುಖ್ಯ ಅತಿಥಿಗಳಾಗಿ ವರ್ಷವಿಡಿ ಕೆಲಸ/ ಗಳಿಕೆ ಎಂಬಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರಿಗೆ ಶ್ರಾವಣ ಮಾಸ ಇದು ಪವಿತ್ರವಾಗಿದೆ. ಒಂದು ತಿಂಗಳು ಕಾಲ ಶ್ರವಣ ಮಾಡಿದರೆ ನಮ್ಮ ಎಲ್ಲ ನಕಾರಾತ್ಮಕ ಭಾವನೆಗಳಿಗೆ ನಿಜವಾದ ಉತ್ತರ ದೊರಕುತ್ತದೆಂದು ಹೇಳಿದರು.
ಯುವ ಬಸವ ಕೇಂದ್ರದ ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ ಅಧ್ಯಕ್ಷತೆ ವಹಿಸಿ, ಬಸವ ಕೇಂದ್ರದ ಸಂಸ್ಥೆ ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನೂರಾರು ಯುವಕರಿಗೆ ನೈತಿಕ ಮೌಲ್ಯದ ಶಿಕ್ಷಣ ನೀಡಿದೆ. ಇಂದು ೨೫ ವಿವಿಧ ಹಂತದ ಶಿಕ್ಷಕರಿಗೆ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಮೊನ್ನೆ ತಾನೆ ನಿವೃತ್ತರಾದ ಬಾಲಾಜಿ ಬಿರಾದಾರ ದಂಪತಿಗಳಿಗೆ ಹಾಗೂ ದಾಸೋಹ ಸೇವೆಗೈದ ಹೇಡೆ ಸರೋಜನಿ ಚೆನ್ನಬಸವ ಅವರ ದಾಸೋಹ ಸೇವೆಗೆ ಗೌರವಿಸಲಾಯಿತು.
ಬೇಲೂರಿನ ಗುರು ಬಸವೇಶ್ವರ ಸಂಸ್ಥಾನದ ಪೂಜ್ಯ ಡಾ. ಪ್ರಭು ಮಹಾಂತಸ್ವಾಮಿಗಳು ಆಶೀರ್ವಚನ ನೀಡುತ್ತ, ಶರಣರ ವಿಚಾರದಿಂದ ನಮ್ಮ ಸರ್ವಾಂಗೀಣ ಬದುಕು ಹಸನಾಗುತ್ತದೆ. ನಾವು ಯಾರ ಹಲ್ಲಾಗಿರಬಾರದು ಆದರೆ ಬಾಯಾಗಿರಬೇಕು.
ಗುರು ಲಿಂಗ ಜಂಗಮರ ಸೇವೆ ನಿರಂತರವಾಗಿರಲಿ. ನಮ್ಮ ಆಚಾರ ವಿಚಾರ ಕೇವಲ ಶ್ರಾವಣ ಮಾಸಕ್ಕೆ ಸೀಮಿತವಾಗಿರದೆ ನಿರಂತರ ಶರಣರ ವಿಚಾರದಲ್ಲಿ ತೊಡಗಿಸಿ ಕೊಳ್ಳಬೇಕೆಂದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ ಶಿವಶಂಕರ ಟೋಕರೆ, ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸೋಮಶೇಖರ ಪಾಟೀಲ, ಉಮೇಶ ಪಾಟೀಲ, ಶೀಲಾವತಿ ಶೀಲವಂತ, ರಾಜಮ್ಮ ಚಿಕಪೇಟ್ ಉಪಸ್ಥಿತರಿದ್ದರು.
ಅಶ್ವಿನಿ ರಾಜಕುಮಾರ ಸ್ವಾಮಿ ವಚನ ಸಂಗೀತ ನಡೆಸಿಕೊಟ್ಟರೆ, ಡಾ. ವಿದ್ಯಾವತಿ ಬಲ್ಲೂರ ಸ್ವಾಗತಿಸಿದರು. ಶಿವಪುತ್ರಪ್ಪ ಪಾಟೀಲ ನಿರೂಪಣೆ ಮಾಡಿದರೆ ಉಮೇಶ ಪಾಟೀಲ ಶರಣು ಸಮರ್ಪಿಸಿದರು.
