ಪಟೇಲರ ದೂರದಷ್ಟಿ, ದೃಢ ನಿರ್ಧಾರ ಯುವ ಪೀಳಿಗೆಗೆ ಮಾದರಿ: ಬಸವಲಿಂಗ ಪಟ್ಟದ್ದೇವರು

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಭಾಲ್ಕಿ:

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಧೀಮಂತ ನಾಯಕತ್ವ, ದೂರದೃಷ್ಟಿ, ದೃಢ ನಿರ್ಧಾರದ ಫಲವಾಗಿ ಕಲ್ಯಾಣ ಕರ್ನಾಟಕ (ಹಿಂದಿನ ಹೈದರಾಬಾದ್ ಕರ್ನಾಟಕ) ಪ್ರದೇಶವು ಭಾರತದೊಂದಿಗೆ ವಿಲೀನಗೊಂಡಿತು ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ, ಡಾ. ಶೀಲಾ, ಡಾ.ಸಿದ್ದರಾಮ ಪ್ರಾಯೋಜಿತ ಪ್ರತಿಭಾ ಶಾಂತಾಬಾಯಿ ಬಸವಪ್ಪ ಆಲೂರು ಪ್ರತಿಭಾ ಪಾರಿತೋಷಕ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ನಿಜಾಮನ ಖಾಸಗಿ ಸೈನ್ಯವಾಗಿದ್ದ ರಜಾಕಾರರು ಖಾಸಿಂ ರಿಜ್ವಿಯ ನಾಯಕತ್ವದಲ್ಲಿ ಜನರ ಮೇಲೆ ತೀವ್ರ ದೌರ್ಜನ್ಯ, ಲೂಟಿ ಮತ್ತು ಕೊಲೆಗಳನ್ನು ನಡೆಸುತ್ತಿದ್ದರು.

ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಭಾರತದ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಾಯ್ ಪಟೇಲ್ ಅವರು ಹೈದರಾಬಾದ್ ಭಾರತದ ಒಳಗೆ ಕ್ಯಾನ್ಸರ್ ಇದ್ದಂತೆ, ಇದನ್ನು ಶಸ್ತ್ರಚಿಕಿತ್ಸೆಯ ಮೂಲಕವೇ ಗುಣಪಡಿಸಬೇಕು ಎಂದು ದೃಢವಾಗಿ ನಂಬಿದ್ದರು ಎಂದು ತಿಳಿಸಿದರು.

ಪ್ರಾರ್ಥನೆ, ಧ್ಯಾನ, ಪೂಜೆಯಲ್ಲಿ ನಂಬಿಕೆ ಇರಬೇಕು. ಕಷ್ಟದಲ್ಲಿದ್ದಾಗ ದೇವರ ಪ್ರಾರ್ಥನೆ ಮಾಡಿದಾಗ ದೇವರು ಯಾವುದೋ ರೂಪದಲ್ಲಿ ಸಹಾಯಕ್ಕೆ ಬರುತ್ತಾನೆ ಎಂಬುದು ತಿಳಿದುಕೊಳ್ಳಬೇಕು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮುಂದೆ ಬರಲು ಸದಾ ಪ್ರೇರೇಪಿಸಬೇಕು. ಪ್ರಾಮಾಣಿಕತೆಗೆ ಪ್ರೋತ್ಸಾಹಿಸಬೇಕು. ತಪ್ಪನ್ನು ಸಹ ಮನ್ನಿಸಿ ತಿದ್ದಿ, ಬುದ್ಧಿ ಹೇಳಬೇಕು ಎಂದು ಹೇಳಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು.

ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ವಸತಿ ವಿಭಾಗದ ಮುಖ್ಯಸ್ಥೆ ಜಯಕ್ಕಾ ಗಾಂವ್ಕರ್ ಇದ್ದರು. ಮಧುಕರ ಗಾಂವ್ಕರ್ ನಿರೂಪಿಸಿದರು.

*ಪ್ರತಿಭಾ ಪಾರಿತೋಷಕ, ಉತ್ತಮ ಸೇವಾ ಪ್ರಶಸ್ತಿ ವಿತರಣೆ*

ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಸಾಕ್ಷಿ ಹಣಮಂತ ಮಾನೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿದ್ಯಾರ್ಥಿನಿಯರಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಸ್ಪೂರ್ತಿ ಸಂತೋಷ ಇನಾಮತೆ ಅವರಿಗೆ ಡಾ. ಶೀಲಾ, ಡಾ. ಸಿದ್ದರಾಮ ಪ್ರಾಯೋಜಿತ ಪ್ರತಿಭಾ ಶಾಂತಾಬಾಯಿ ಬಸವಪ್ಪ ಆಲೂರು ಪ್ರತಿಭಾ ಪಾರಿತೋಷಕ ಹಾಗೂ ಕರಡ್ಯಾಳದ ಸ್ವದೇಶಿ ದತ್ತು ಕೇಂದ್ರದ ಮೇಲ್ವಿಚಾರಕಿ ಮಹಾಲಕ್ಷ್ಮಿ ಕೃಷ್ಣ ಕರಿಮಣಿ ಅವರಿಗೆ ಉತ್ತಮ ಸೇವಾ ಪ್ರಶಸ್ತಿ, ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

*ಆದರ್ಶ ರೈತರಿಗೆ ಸನ್ಮಾನ:*

ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಸುಲ್ತಾನಬಾದವಾಡಿಯ ಕಿಶನ್ ಉಮಾಕಾಂತ ಮೇಕ್ರೆ, ಭಾಲ್ಕಿಯ ರಾಹುಲ್ ಓಂಪ್ರಕಾಶ ಪಾಟೀಲ, ಮಂಠಾಳದ ಅವಿನಾಶ ಪರಮಾ ದಂಪತಿಯನ್ನು ಸತ್ಕರಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *