‘ವಚನ ಚಳುವಳಿಯ ಆಶಯ ಉಳಿಸುವ ಪ್ರಯತ್ನದಲ್ಲಿ ಮಾಚಿದೇವರು ಅಗ್ರಗಣ್ಯರು’

ಬಸವ ಮೀಡಿಯಾ
ಬಸವ ಮೀಡಿಯಾ

ಮಡಿವಾಳ ಮಾಚಿದೇವರ ಜಯಂತಿ

ಚಿತ್ರದುರ್ಗ:

ಹನ್ನೆರಡನೇ ಶತಮಾನದಲ್ಲಿ ಕೇವಲ ಧರ್ಮಾಚರಣೆ, ತತ್ವಬೋಧನೆಯ ಕೆಲಸ ಆಗಲಿಲ್ಲ. ಅಲ್ಲಿ ಬಹುದೊಡ್ಡ ಕಾಯಕ ಚಳುವಳಿಯೇ ನಡೆಯಿತು.

ಪ್ರತಿಯೊಬ್ಬರೂ ಅಲ್ಲಿ ಕಾಯಕ ಮಾಡಲೇಬೇಕಿತ್ತು. ಬೆವರಿನ ಶ್ರಮದಿಂದಲೇ ಉಣ್ಣುವ ಸಂಸ್ಕೃತಿಯನ್ನು ಹುಟ್ಟು ಹಾಕಿದರು.

ಶರಣ ಚಳುವಳಿಯಲ್ಲಿ ವಚನ ಸಂಸ್ಕೃತಿಯನ್ನು, ವಚನಗಳನ್ನು ಉಳಿಸಿದ ಕೀರ್ತಿ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಸ್ಮರಿಸಿಕೊಂಡರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಮಡಿವಾಳ ಮಾಚಿದೇವರ ಶರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಅನುಭವ ಮಂಟಪದಲ್ಲಿ ಬಸವಾದಿ ಶಿವಶರಣರು ಕಂದಾಚಾರ, ಅಸಮಾನತೆ, ಲಿಂಗ ಅಸಮಾನತೆ, ಅಂತರ್ಜಾತಿ ವಿವಾಹ, ದೇವರ ಪರಿಕಲ್ಪನೆ ಹೀಗೆ ನೂರಾರು ವಿಷಯಗಳನ್ನು ಶರಣರು ಚರ್ಚಿಸುತ್ತಿದ್ದರು. ಅಂತರ್ಜಾತಿ ವಿವಾಹ ಕ್ರಾಂತಿಗೆ ಕಾರಣವಾಯಿತು. ಶೋಷಣೆಯ ವಿರುದ್ಧ ಮೆಟ್ಟಿನಿಂತ ಶರಣರನ್ನು ಹತ್ಯೆ ಮಾಡಲಾಯಿತು. ತನ್ನ ಪ್ರಾಣವನ್ನು ಬಲಿಕೊಟ್ಟಾದರೂ ಸಮಸಮಾಜ ಅರ್ಥಾತ್ ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ರಚಿಸಿದ ಅಮೂಲ್ಯ ವಚನಸಾಹಿತ್ಯ ಹಾಳಾಗಲು ಬಿಡಬಾರದೆಂಬ ಆಶಯದಿಂದ ಶತೃಗಳಿಂದ ಉಳಿಸುವ ಪ್ರಯತ್ನ ಮಾಡಿದ ಶರಣರಲ್ಲಿ ಮಾಚಿದೇವರು ಅಗ್ರಗಣ್ಯರಲ್ಲಿ ಒಬ್ಬರಾಗಿದ್ದಾರೆಂದರು.

ಅಂತಹ ಶರಣರ ಶೂನ್ಯಪೀಠ ಪರಂಪರೆಯಲ್ಲಿ ಆಗಿಹೋದವರನ್ನು ನೆನೆಯಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂತಹ ದಿನವೇ ಬರಲಿ ಉದಾರಹಣೆಗೆ ಇಂದು ಗಣಪತಿ ಹಬ್ಬ ಆದರೂ ಜಯಂತಿ ನಿಂತಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಒಂದಷ್ಟು ಜನ ಬರುವುದು ಕಡಿಮೆಯಾಗಿರಬಹುದು ಆದರೆ ನಿಲ್ಲಬಾರದೆಂಬ ಕಾರಣಕ್ಕೆ ವಿವಿಧ ಸಮಾಜದ ಬಂಧುಗಳೊಟ್ಟಿಗೆ ಜಯಂತಿ ಆಚರಣೆ ನಡೆದಿದೆ ಎಂದು ನುಡಿದರು.

ಮಡಿವಾಳ ಮಾಚಿದೇವರ ಶರಣರ ಬಗ್ಗೆ ವಿಷಯಾವಲೋಕನ ಮಾಡಿದ ಚಿತ್ರದುರ್ಗದ ಕವಿ, ಲೇಖಕರೂ ಆದ ಹೆಚ್. ಆನಂದಕುಮಾರ ಮಾತನಾಡಿ, ಅನುಭವ ಮಂಟಪದ ಕಲ್ಯಾಣ ಪುರಕ್ಕೆ ವಿಜಯಪುರ ಜಿಲ್ಲೆಯಿಂದ ಮಡಿವಾಳ ಮಾಚಿದೇವರು ಆಗಮಿಸುತ್ತಾರೆ. ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳದ ಕಠಿಣ ನಿಲುವಿನ, ಮೃದು ಮನದ, ಶಿವಶರಣರನ್ನು ಕಂಡರೆ ವಿನಯ ತೋರಿಸುತ್ತಿದ್ದ ಮಾಚಿದೇವರು ಸಮಾಜಕ್ಕೆ ಎಚ್ಚರ ಎನ್ನುವ ನೂರಾರು ವಚನಗಳನ್ನು ರಚಿಸಿದ್ದಾರೆ.

ತಾನು ಮಡಿ ಮಾಡಿ ತಂದ ಬಟ್ಟೆಗಳನ್ನು ಮೈಗಳ್ಳರು, ಲೋಭಿಗಳು, ಪೋಲಿಗಳು ಮುಟ್ಟಬಾರದೆಂಬ ಧೀರೋದಾತ್ತ ನಿಲುವಿನವರಾಗಿದ್ದರು. ಮಹಾಗಣಾಚಾರಿ ಪ್ರವೃತ್ತಿಯವರು. ಶರಣರ ಕೆಲಸಕ್ಕೆ ಅಡ್ಡಿಪಡಿಸಿದವರನ್ನು ಸುಮ್ಮನೆ ಬಿಡುವ ಪ್ರವೃತ್ತಿಯವರಲ್ಲ ಮಾಚಿದೇವರು. ಹಾಗೆಯೇ ಮಾಚಿದೇವರು ಅರಸೊತ್ತಿಗೆಗೂ ಸವಾಲಾಗಿದ್ದರು. ಅರಸರು ಮೇಲಲ್ಲ, ಅಗಸತನ ಕೀಳಲ್ಲ ಎನ್ನುವಂತಹ ಶೋಷಣೆಯ ವಿರುದ್ಧ ಹೋರಾಟ ಮಾಡಿದರೆಂದು ತಿಳಿಸಿದರು.

ಅನುಭವ ಮಂಟಪ ಎನ್ನುವ ಬೃಹತ್ ಪರಾಮರ್ಶೆಯ ಆಲಯವನ್ನು ಪ್ರವೇಶ ಮಾಡಬೇಕಾದರೆ ಮಾಚಿದೇವರ ಅಪ್ಪಣೆ ಬೇಕಿತ್ತು. ಅನುಭವ ಮಂಟಪ ಎನ್ನುವ ಸಾವಿರ ದೀಪದ ಜ್ಞಾನದ ಮನೆಯಲ್ಲಿ ಮಾಚಿದೇವರದ್ದು ಜ್ಞಾನ ಭಂಡಾರಿಗಳನ್ನು ಅನುಭವ ಸಾಂದ್ರತೆಯುಳ್ಳವರನ್ನು ಪರಾಮರ್ಶಿಸುವ ಕೆಲಸವಾಗಿತ್ತು. ಅವರು ಯಾರನ್ನೂ ಹಾಗೆಯೇ ಬಿಟ್ಟವರಲ್ಲ. ಅರಸರ ಬಟ್ಟೆಗಳನ್ನು ಮಡಿ ಮಾಡಲು ಒಪ್ಪಲಿಲ್ಲ. ಹೆದರಿಸಿ ಬೆದರಿಸಿದರೂ ಬಿಜ್ಜಳ ಇತರ ಅರಸರ ಬಟ್ಟೆಗಳನ್ನು ತೊಳೆಯಲು ಇಷ್ಟಪಡಲಿಲ್ಲ. ನಮ್ಮ ಶರಣರ ಬಟ್ಟೆಯನ್ನಷ್ಟೇ ಶುಚಿಗೊಳಿಸುವುದಾಗಿ ಹೇಳುತ್ತಿದ್ದರು.

ನಾನು ಶಿವಶರಣರ ಕಾಯಕದವನು. ಅರಸರು ಪ್ರಭುಗಳಲ್ಲಿ ಸಕಲ ಭೋಗ, ಸಕಲ ಲೋಲಾಪ್ತತೆಗಳಿರುತ್ತವೆ. ಹಾಗಾಗಿ ಕಾಯಕ ಜೀವಿಗಳ ಹೊರತಾಗಿ ಯಾರದೇ ಬಟ್ಟೆ ಮುಟ್ಟುವುದಿಲ್ಲವೆಂದು ಕಡಕ್ ಆಗಿ ಹೇಳಿದರು. ಇದು ಪ್ರಭುತ್ವದ ವಿರುದ್ಧ ಸಾರಿದ ಮಹಾಯುದ್ಧವೆಂದೇ ಹೇಳಬೇಕು.

ವಚನ ಸಾಹಿತ್ಯ ಉಳಿಸುವ ಕಲ್ಯಾಣ ಕ್ರಾಂತಿಯ ಹೋರಾಟದಲ್ಲಿ ವಚನ ಸಂರಕ್ಷಕರಾಗಿ ಚೆನ್ನಬಸವಣ್ಣನವರ ಜತೆಗೂಡಿ ಅರಸ ಸೋವಿದೇವನೊಂದಿಗೆ ಹೋರಾಡಿದರು. ಬಸವಣ್ಣನವರ ಸಮಾಜ ಸುಧಾರಣೆಯ ಕೆಲಸದಲ್ಲಿ ಮಾಚಿದೇವರದು ಬಹುಮುಖ್ಯಪಾತ್ರ ಎಂದು ಹೇಳಿದ ಅವರು, ಬಸವಣ್ಣನವರು ಮಾಚಿದೇವರನ್ನು ಕುರಿತು ಸ್ವಯಂಜ್ಞಾನಿ ಎಂಬುದಾಗಿ ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ ಎಂಬಿತ್ಯಾದಿ ಅನೇಕ ಉದಾಹರಣೆ ಸಹಿತ ವಿಷಯಗಳನ್ನು ಮಂಡನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರಾಮಪ್ಪ ಸೇರಿದಂತೆ ಪ್ರಕಾಶ್ ಎನ್., ನಿಂಗಪ್ಪ ಎನ್., ರಂಗಪ್ಪ, ಜಯಣ್ಣ, ರುದ್ರಮುನಿಯಪ್ಪ, ಚೈತ್ರ, ಮಾಚಿದೇವ ಮಲಿಗೆಮ್ಮ ಮಹಿಳಾ ಸಂಘದ ಅಧ್ಯಕ್ಷೆ ರಂಗಮ್ಮ, ಕಾರ‍್ಯದರ್ಶಿ ಸುಲೋಚನಮ್ಮ, ಮಾಜಿ ನಗರಸಭಾಧ್ಯಕ್ಷ ಹೆಚ್.ಸಿ. ನಿರಂಜನಮೂರ್ತಿ, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಡಾ. ದೊಡ್ಡಮಲ್ಲಯ್ಯ, ಬಸವರಾಜ ಕಟ್ಟಿ, ವಕೀಲರಾದ ಎನ್.ಬಿ. ವಿಶ್ವನಾಥ, ಪ್ರಾಚಾರ್ಯ ಸತೀಶ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *