ಅಕ್ಕಮಹಾದೇವಿ ತಾಯಿಯ ವಚನ ವಿಶ್ಲೇಷಣೆ
ಗುಳೇದಗುಡ್ಡ:
ಬಸವ ಕೇಂದ್ರದ ವತಿಯಿಂದ ಶನಿವಾರ ಗುರುಭಾಯಿ ಶಿವಾನಂದ ಕುಂದರಗಿ ಅವರ ಮನೆಯಲ್ಲಿ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ನಡೆಯಿತು.
ಅಕ್ಕಮಹಾದೇವಿ ತಾಯಿಯವರ ಈ ಕೆಳಗಿನ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು,
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನಾ?
ಪ್ರೊ. ಶ್ರೀಕಾಂತ ಗಡೇದವರು ಈ ವಚನವನ್ನು ಚಿಂತನೆ ಬೈಯುತ್ತಾ, “ಅಕ್ಕಮಹಾದೇವಿ ತಾಯಿಯವರು ಸಂಸಾರದಿಂದ ಸಿಡಿದೆದ್ದ ಜ್ಯೋತಿ ಎಂಬ ಹೊಗಳಿಕೆಗೆ ಪಾತ್ರರಾದವರು. ಕನ್ನಡ ಸಾಹಿತ್ಯದಲ್ಲಿ ಮೊದಲ ಕವಿಯಿತ್ರಿ ಎಂದು ಕರೆಸಿಕೊಂಡವರು. ಅಷ್ಟೇ ಅಲ್ಲ ಅವರ ವಚನಗಳು ಇಂದಿಗೂ ಸ್ತ್ರೀ ಸಮಾನತೆಯನ್ನು ಸಾರುವ ದೀಪ ಸ್ತಂಭಗಳಾಗಿವೆ. ನದಿ ಮರ ಪಶು ಪಕ್ಷಿಗಳು ಪರೋಪಕಾರದಿಂದ ಬದುಕುತ್ತಿರುವಾಗ ಮನುಷ್ಯರಾದವರು ಸಹ ಸಮಾಜದಲ್ಲಿ ಇತರರಿಗೂ ಉಪಕಾರಿಯಾಗಿ ಬಾಳಬೇಕು.
ಬದುಕಿಗೊಂದು ಅರ್ಥವು ಇರಬೇಕಾದರೆ ತಾನು ಇತರರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಇಲ್ಲವಾದರೆ ತುಂಬ ಸ್ವಾರ್ಥಿಯಾಗುತ್ತಾನೆ. ಈ ಕಾರಣಕ್ಕಾಗಿ ಶರಣರು ಕಾಯಕ ಮತ್ತು ದಾಸೋಹ ತತ್ವಗಳನ್ನ ಅಳವಡಿಸಿಕೊಂಡರು. ಮನುಷ್ಯ ಬರುವಾಗ ಏನನ್ನು ತರಲಿಲ್ಲ ಹಾಗೆಯೇ ಹೋಗುವಾಗ ಏನನ್ನು ಒಯ್ಯಲಿಲ್ಲ. ಇರುವಾಗಲೇ ನಾಲ್ಕು ಜನಕ್ಕೆ ಸಹಾಯ ಮಾಡಬೇಕು ಎಂದರು.

ಡಾ. ಗಿರೀಶ ನೀಲಕಂಠಮಠ ಅವರು ಇದೇ ವಚನವನ್ನು ಕುರಿತು, ಮನುಷ್ಯ ಅಲ್ಪಸುಖಕ್ಕಾಗಿ ಅನಂತ ದುಃಖಕ್ಕೆ ಈಡಾಗುತ್ತಾನೆ. ಅಲ್ಪ ಪ್ರಮಾಣದ ಹಾಲಿನ ಆಸೆಗಾಗಿ ಎಮ್ಮೆಯನ್ನು ಸಾಕಿ, ಮತ್ತೊಂದು ಸಂಸಾರವನ್ನೇ ಹೊಂದಿ, ಅನಂತ ಕಷ್ಟಕ್ಕೆ ಒಳಗಾಗುವಂತೆ ಸ್ವಾರ್ಥಕ್ಕಾಗಿ ಲಾಭದ ದೃಷ್ಟಿಯನ್ನೇ ಮುಖ್ಯವಾಗಿಟ್ಟುಕೊಂಡು, ತುಂಬಾ ತಾಪತ್ರಯವನ್ನು ಹೊಂದುತ್ತಾನೆ.
ಮರವು ಹಣ್ಣು ಕಾಯಿ ಇತ್ಯಾದಿ ಏನನ್ನು ಕೊಡದಿದ್ದರೂ ನೆರಳನ್ನು ಮಾತ್ರ ಕೊಟ್ಟೇ ಕೊಡುತ್ತದೆ. ಅದು ಅದರ ಕನಿಷ್ಠ ಕೊಡುಗೆ. ಹಾಗೆಯೇ ಹಸುವಿನಿಂದ ಹಾಲನ್ನು ಅಪೇಕ್ಷಿಸುವುದು ಸಹಜ. ಈ ಗುಣಗಳಿಲ್ಲದಿದ್ದರೆ ಮರ ಹಸು ಇವುಗಳನ್ನು ಬರಡು ಎಂದು ಗುರುತಿಸುತ್ತಾರೆ.
ಹಾಗೆ ಮನುಷ್ಯನಿಗೆ ಜ್ಞಾನ ಬಹಳ ಮುಖ್ಯವಾದದ್ದು. ಜ್ಞಾನವೆಂದರೆ ತನ್ನನ್ನು ತಾನು ಅರಿತುಕೊಳ್ಳುವುದು. ಅದುವೇ ಮನುಷ್ಯ ಜೀವನದ ಸಾರ್ಥಕತೆ. ಇಂಥ ಸಾರ್ಥಕ ಬದುಕನ್ನು ಬದುಕಿ ಚೆನ್ನಮಲ್ಲಿಕಾರ್ಜುನನನ್ನು ಹೊಂದಿದ ಮಹಾತಾಯಿ ಅಕ್ಕಮಹಾದೇವಿ “ಎಂದು ಬಣ್ಣಿಸಿದರು.
ಪ್ರೊ. ಮಹದೇವಯ್ಯಸ್ವಾಮಿ ನೀಲಕಂಠಮಠ ಅವರು ವಚನದ ಚಿಂತನೆಗೆ ತೊಡಗಿ “ಜ್ಞಾನಕ್ಕೆ ಸಮಾನವಾದದ್ದು ಯಾವುದು ಇಲ್ಲ. ಈ ಜ್ಞಾನವೇ ಮನುಷ್ಯನನ್ನು ಇತರರಿಂದ ಬೇರ್ಪಡಿಸಿದೆ. ಆತನನ್ನು ಉನ್ನತ ವ್ಯಕ್ತಿಯನ್ನಾಗಿಸಿದೆ. ಮನುಷ್ಯನ ಸಂಬಂಧಕ್ಕೆ ಅರ್ಥವಿಲ್ಲದಿದ್ದರೆ ಸಂಸ್ಕಾರವೆನಿಸದು. ಹಸು ಹಾಲು ಕೊಡುವುದು ಹೇಗೆ ಪರೋಪಕಾರವೆಂದು ಎನಿಸುತ್ತದೆಯೋ ಹಾಗೆಯೇ ಮನುಷ್ಯನಿಗೆ ಬಂದಿರುವ ಈ ಶರೀರವು ಸಹ ಪರೋಪಕಾರಕ್ಕಾಗಿ ಇದೆ ಎಂಬುದನ್ನು ಎಲ್ಲರೂ ಅರಿಯಬೇಕು. ಈ ವಚನದಲ್ಲಿ ಬಂದಿರುವ ಉಪಮೆಗಳು ಇಂದಿಗೂ ಜನಪ್ರಿಯವಾಗಿವೆ ಬಾಹ್ಯ ಸೌಂದರ್ಯದ ರೂಪಕ್ಕಿಂತ ಆಂತರಿಕ ಸೌಂದರ್ಯವಾದ ಉತ್ತಮ ಗುಣ ಮುಖ್ಯವಾಗುತ್ತದೆ. ಬೇರೆ ಸ್ವಾರ್ಥದ ಉದ್ದೇಶಕ್ಕೆ ಮನುಷ್ಯನ ಬದುಕು ಈಡಾಗದೆ ಚೆನ್ನಮಲ್ಲಿಕಾರ್ಜುನನ್ನು ಅರಿಯುವುದಕ್ಕೆ ಈ ಬದುಕು ಮೀಸಲಾಗಬೇಕು” ಎಂದು ವಚನವನ್ನು ವಿವರಿಸಿದರು.
ಅನುಭಾವಿ ಸಿದ್ದಲಿಂಗಪ್ಪ ಬರಗುಂಡಿ ಅವರು ಈ ವಚನದ ಸಮಾರೋಪಗೈಯುತ್ತ, “ಅಕ್ಕಮಹಾದೇವಿ ತಾಯಿಯವರು ಈ ವಚನದಲ್ಲಿ ಜೀವನದ ಸಾಫಲ್ಯತೆಯನ್ನು ಎತ್ತಿ ಹೇಳುತ್ತಾ, ಕೆಲವು ಉದಾಹರಣೆಗಳೊಂದಿಗೆ ಆ ಮಹಾಲಿಂಗವಾದ ಚೆನ್ನಮಲ್ಲಿಕಾರ್ಜುನನನ್ನು ಕುರಿತ ಜ್ಞಾನವನ್ನು ಹೊಂದುವುದೇ ಮನುಷ್ಯ ಜೀವನದ ಸಾರ್ಥಕತೆ ಎನ್ನುತ್ತಾರೆ.
ಮರ ನೆರಳನ್ನುˌ ಹಸು ಹಾಲನ್ನು, ಧನ ಅಂತಸ್ತನ್ನು ˌ ರೂಪವು ಅಹಂ ಭಾವವನ್ನು ಸೌಂದರ್ಯವನ್ನು ಕೊಡುವುದು. ಮನುಷ್ಯನ ದೃಷ್ಟಿಯಿಂದ ಸಾರ್ಥಕತೆ ಎನಿಸಿದರೂ ಆಧ್ಯಾತ್ಮದ ದೃಷ್ಟಿಯಿಂದ ಸ್ವಾರ್ಥವೆನಿಸುತ್ತದೆ. ಇದರ ಜೊತೆಗೆ ಅಕ್ಕ ಆಯಾ ವಸ್ತುಗಳ ಬಗ್ಗೆ ಇರಬೇಕಾದ ಅಪೇಕ್ಷಣೀಯ ಗುಣಗಳನ್ನು ಇಲ್ಲಿ ಹೇಳುತ್ತಾರೆ.
ಮರವಾದ ಮೇಲೆ ನೆರಳನ್ನು ಕೊಡಬೇಕು,ˌ ಧನವಿದ್ದಾಗ ದಯಾಗುಣವಿರಬೇಕುˌ ಹಸುವಾದ ಮೇಲೆ ಹಯನನ್ನು ಈಯಬೇಕು, ರೂಪವಿದ್ದಾಗ ಒಳ್ಳೆ ಗುಣ ಹೊಂದಿರಬೇಕು, ನೈವೇದ್ಯದ ಪಾತ್ರೆ (ಅಗಲು) ಬೆಳ್ಳಿ, ಬಂಗಾರ ಯಾವುದೇ ಇರಲಿ ಅದು ಮುಖ್ಯವಾಗಿ ಅನ್ನವನ್ನು ಹೊಂದಿರಬೇಕು, ಹಾಗೆಯೇ ಮನುಷ್ಯನಾಗಿ ಬಂದಮೇಲೆ ಮನುಷ್ಯ ತನ್ನ ಸ್ವರೂಪವನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ ಆತನ ಬದುಕು ಶೂನ್ಯ ಈ ಜನುಮ ಬಳಿಕಿಲ್ಲ.

ಈಗಲೇ ತಾನು ಲಿಂಗ ಸ್ವರೂಪಿ ಎಂದು ಅರಿತು ಕೊಂಡಾಗˌ ಈ ಜಗತ್ತಿನಲ್ಲಿ ಯಾವ ಭಿನ್ನ ಭೇದವಿಲ್ಲದ ಸಮಾನ ಸಮಾಜ ಸೃಷ್ಟಿಯಾಗುತ್ತದೆ ಎಂಬುದನ್ನು ಈ ವಚನದಲ್ಲಿ ಕಾಣಬಹುದು” ಎಂದು ಅಭಿಪ್ರಾಯಪಟ್ಟರು.
ಪ್ರಾರಂಭದಲ್ಲಿ ಜಯಶ್ರೀ ಬರಗುಂಡಿ, ವಿಶಾಲಾಕ್ಷಿ ಗಾಳಿ, ಶ್ರೀದೇವಿ ಶೇಖಾ ಅವರಿಂದ ಸಾಮೂಹಿಕ ವಚನ ಪ್ರಾರ್ಥನೆ ನಡೆಯಿತು. ಮುರುಗೇಶ ಶೇಖಾ ನಿರೂಪಿಸಿದರು. ಶರಣಮ್ಮ ಕುಂದರಗಿ ಶರಣು ಸಮರ್ಪಣೆ ಮಾಡಿ ವಚನಮಂಗಲ ಹಾಡಿದರು.
ಕಾರ್ಯಕ್ರಮದಲ್ಲಿ ಬಸಲಿಂಗಯ್ಯ ಕಂಬಾಳಿಮಠ, ಮಹಲಿಂಗಪ್ಪ ಕರನಂದಿ, ಪಾಂಡಪ್ಪ ಕಳಸ, ಮಹಾಂತೇಶ ಸಿಂದಗಿ, ಬಸವರಾಜ ಖಂಡಿ, ಬಸವರಾಜ ಬರಗುಂಡಿ, ಪುತ್ರಪ್ಪ ಬೀಳಗಿ, ಸಿದ್ದಣ್ಣ ಅರಕಾಲಚಿಟ್ಟಿ, ದಾಕ್ಷಾಯಿಣಿ ತೆಗ್ಗಿ, ಲಲಿತ ನೀಲಕಂಠಮಠ, ಶಾಂತಾ ಕಣ್ಣೂರ, ಕುಂದರಗಿ ಬಂಧು ಬಳಗ ಅಲ್ಲದೆ ಆನ್ಲೈನ್ ಮೂಲಕ ಸಿ.ಎಸ್. ಮಂಗಳೂರು, ಕೃಷ್ಣಪ್ಪ ಶಿರೂರ, ಕೃಷ್ಣಾಜಿ ಮಹೇಂದ್ರಕರ್ ಮೊದಲಾದವರು ಉಪಸ್ಥಿತರಿದ್ದರು.
