ಚಿಕ್ಕಮಗಳೂರು:
ಮನೆ-ಮನಗಳಲ್ಲಿ ಬಸವಾದಿ ಶರಣರ ವಚನ ಸಾಹಿತ್ಯದ ಬೆಳಕು ಬಿತ್ತಬೇಕು ಎಂಬ ಸದುದ್ಧೇಶದಿಂದ ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕದಿಂದ ಸೆಪ್ಟಂಬರ್ 20 ರಂದು ನಗರದಲ್ಲಿ ಬಸವತತ್ವ ಜಿಲ್ಲಾ ಸಮಾವೇಶ ಹಮ್ಮಿಕೊಂಡಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗದ್ದೆಮನೆ ತಿಳಿಸಿದರು.
ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಮತ ಬೇಧ ಮರೆತು ಎಲ್ಲರೂ ಒಟ್ಟಾಗಿ ಬದುಕಬೇಕು ಎಂಬ ಬಸವಾದಿ ಶರಣರ ವಿಚಾರಗಳನ್ನಿಟ್ಟುಕೊಂಡು ಬಸವತತ್ತ್ವವನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಬಸವ ದಳ ನಿರಂತರ ಮಾಡುತ್ತಿದೆ. ದೇಶದ ಎಲ್ಲ ಕಡೆ ಬಸವತತ್ವ ವ್ಯಾಪಿಸಬೇಕು ಎಂಬ ವಿಚಾರದಲ್ಲಿ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ ಎಂದವರು ಹೇಳಿದರು.
ಅಂದು ನಗರದ ಶ್ರೀಮತಿ ಮೈತ್ರಾದೇವಿ ಬಿ.ಎಸ್. ಯಡಿಯೂರಪ್ಪ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ 2 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಬಸವಭಕ್ತರು, ಬಸವಾಭಿಮಾನಿಗಳು ಭಾಗವಹಿಸಲಿದ್ದಾರೆ. ದಲಿತ, ರೈತ, ಕನ್ನಡ ಪರ ಸಂಘಟನೆಗಳ ಎಲ್ಲ ಮುಖಂಡರು, ಕಾರ್ಯಕರ್ತರು ಸಹ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಅಂದು ಮೊದಲು ಬೆಳಿಗ್ಗೆ 10 ಗಂಟೆಗೆ ಪಥಸಂಚಲನ ನಡೆಯಲಿದೆ. ಸಮಾವೇಶದಲ್ಲಿ ಪೂಜ್ಯ ಡಾ. ಮಾತೆ ಗಂಗಾದೇವಿ ಮಾತಾಜಿ, ನಿಜಗುಣಾನಂದ ಮಹಾಸ್ವಾಮಿ, ಡಾ. ಬಸವಮರುಳ ಸಿದ್ಧ ಮಹಾಸ್ವಾಮಿ, ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಮಹಾಸ್ವಾಮಿ ಸಾನಿಧ್ಯ ವಹಿಸಲಿದ್ದು, ಶಾಸಕ ಹೆಚ್.ಡಿ. ತಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಶಾಸಕ ಬೆಳ್ಳಿ ಪ್ರಕಾಶ ಬಸವಣ್ಣನವರ ಭಾವಚಿತ್ರ ಅನಾವರಣ ಮಾಡಲಿದ್ದು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಎಸ್.ಎಲ್. ಬೋಜೇಗೌಡ, ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ಡಿ.ಎಸ್. ಸುರೇಶ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಚನಸಿರಿ ಪ್ರಶಸ್ತಿಯನ್ನು ಹಾಸನದ ನೀಲಾ ನಾಗಭೂಷಣ ಅವರಿಗೆ ಪ್ರದಾನ ಮಾಡಲಾಗುವುದು. ‘ಬಸವಯೋಗ’ ಪುಸ್ತಕ ಕೂಡ ಬಿಡುಗಡೆ ಆಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವದಳದ ಜಯಚನ್ನೇಗೌಡ, ಬಸವರಾಜು, ಪ್ರಕಾಶ, ಎಂ.ಸಿ. ಎಂ.ಸಿ. ಚನ್ನೇಗೌಡ, ಶಿವಮೂರ್ತಿ, ಮಮತ ಮತ್ತಿತರರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
