ರಾಯಚೂರು:
ಶರಣ ಬಸಪ್ಪ ಜಾಡಲದಿನ್ನಿ ಅವರ ಮಗಳು ಸೌಮ್ಯ ಪಾಟೀಲ ಅವರ ಸೀಮಂತ ಕಾರ್ಯವನ್ನು ಕಳೆದ ರವಿವಾರ ಶರಣತತ್ವ ನಿಜಾಚರಣೆಯಂತೆ ಬಸವ ಕೇಂದ್ರದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಅಕ್ಕನ ಬಳಗದ ಸದಸ್ಯರು, ಜಾಡಲದಿನ್ನಿ, ಪಾಟೀಲ ಬಂಧು-ಬಳಗ, ಬಸವ ಸಂಘಟನೆಗಳ ಸದಸ್ಯರು, ಬಸವಾಭಿಮಾನಿಗಳು ಸೇರಿಕೊಂಡು ಆಚರಿಸಿದರು.

ಶನಿವಾರ ಅವರ ಮನೆಯಲ್ಲಿ ಶರಣತತ್ವದಂತೆ ಸೌಮ್ಯ ಅವರ ಗರ್ಭಕ್ಕೆ ಲಿಂಗ ಸಂಸ್ಕಾರವನ್ನು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಪಿ. ರುದ್ರಪ್ಪ ನಡೆಸಿದರು.
ಕಾರ್ಯಕ್ರಮದಲ್ಲಿ ವಚನ ಪ್ರಾರ್ಥನೆಯೊಂದಿಗೆ ದಂಪತಿಗಳಿಗೆ ಮತ್ತು ನೆರೆದ ಬಸವ ಭಕ್ತರಿಗೆ ಸವಿಸ್ತಾರವಾಗಿ ವಿಭೂತಿ, ರುದ್ರಾಕ್ಷಿಗಳ ಮಹತ್ವದ ಬಗ್ಗೆ ತಿಳಿಸಿ, ಬಸವಾಂಕುರ ಅಂದರೆ ಹುಟ್ಟುವ ಮಗು ತಾಯಿ ಗರ್ಭದಲ್ಲಿ ಇರುವಾಲೇ ಅದಕ್ಕೆ ಶರಣತತ್ವದ ಬೀಜ ಬಿತ್ತುವುದು, ತಾಯಿಯ ನಡೆ, ನುಡಿಗಳೇ ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ಹುಟ್ಟಿದ ಮಗು, ಹೆಣ್ಣಿರಲಿ/ಗಂಡಿರಲಿ, ಮುಂದೆ ಅದು ಬಸವ ಮಗುವಾಗಿ ಉದಯಿಸುವುದು ಎಂಬುದು ಶರಣತತ್ವದ ಆಶಯ ಎಂದು ತಿಳಿಸಿದರು.

ನಂತರ ಗುರು, ಲಿಂಗ, ಜಂಗಮದ ಬಗ್ಗೆ ಹೇಳಿ ವಚನಗಳ ಮುಖಾಂತರ ಲಿಂಗ ಪೂಜಾ ವಿಧಾನ ತಿಳಿಸಿ, ತಾಯಿಯ ರಟ್ಟೆಗೆ ಬಟ್ಟೆಯಲ್ಲಿ ಲಿಂಗವಿಟ್ಟು ಕಟ್ಟುವ ಮೂಲಕ ಗರ್ಭಲಿಂಗಧಾರಣ ಕಾರ್ಯಕ್ರಮ ಮಾಡಲಾಯಿತು.

ಮೊದಲು ಸೌಮ್ಯ ಪಾಟೀಲ ಅವರ ತಂದೆ ಶರಣಬಸಪ್ಪ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯುತ್ತಾ, ನಾನು ಮನೆಯಲ್ಲಿ ಮಗಳಿಗೆ ವಚನ ಗಾಯನ ಕೇಳಿಸುತ್ತಿದ್ದೆ. ನಂತರ ಸಂಗೀತ ಕಲಿಯಲು ಅವಕಾಶ ನೀಡಿ, ವಚನ ಹಾಡಲು ಹೇಳಿದೆ. ಇಂದು ಆ ಬೀಜವೇ ಮಗಳು ಬಸವ ತತ್ವದಂತೆ ಮದುವೆಯಾಗಿ, ಮಗುವಿಗೆ ನಿಜಾಚರಣೆಯಂತೆ ಗರ್ಭಲಿಂಗಧಾರಣೆಗೆ ಮುಂದಾಗಿರುವುದೇ ಸಾಕ್ಷಿ. ಇದು ನಮ್ಮ ‘ಬಸವ ಬೆಳೆ’ ಎಂದು ಹೇಳಿದರು. ಹಾಗಾಗಿ ಎಲ್ಲರೂ ತಮ್ಮ ಮನೆಯ ಸದಸ್ಯರಿಗೆ ಪ್ರತಿದಿನ ವಚನ ಸಂಗೀತ ಕೇಳಿಸಲು ಮನವಿ ಮಾಡಿದರು.

ಕಾರ್ಯಕ್ರಮದ ಆಶಯ ನುಡಿ ಆಡಿದ ಮುಕ್ತಾ ನರಕಲದಿನ್ನಿ, ಬಸವಾಂಕುರ ಕಾರ್ಯಕ್ರಮದ ಅವಶ್ಯಕತೆ, ಇಂದು ಅದರ ಪ್ರಸ್ತುತತೆ ಕುರಿತು ವಚನಗಳ ಮೂಲಕ ತಿಳಿಸಿದರು.
ಡಾ. ಪ್ರಿಯಾಂಕ ಕೊನಿನ ಅವರಿಂದ ಮಕ್ಕಳಿಗೆ ವಾರದ ವಚನ ಪಾಠ ನಡೆಯಿತು. ರತ್ನಾಕರ, ನಾಗೇಶಪ್ಪ, ಜಗದೇವಿ ಚನ್ನಬಸವ ಮತ್ತು ಸೌಮ್ಯ ಪಾಟೀಲ ವಚನಗಳನ್ನು ಹಾಡಿದರು. ಪಾರ್ವತಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ನಾಗನಗೌಡ ಹರವಿ ಗೌರವಾಧ್ಯಕ್ಷರು, ಚನ್ನಬಸವ ಇಂಜಿನಿಯರ್, ಜೆ. ಬಸವರಾಜ, ಚನ್ನಬಸವಣ್ಣ ಮಹಾಜನಶೆಟ್ಟಿ, ರವಿ ಪಾಟೀಲ ಆಲ್ಕೋಡ, ಅಮರೇಶ ನಿಲೋಗಲ್ಲ, ವೆಂಕಟರಡ್ಡಿ ಕೊರ್ತಕುಂದ, ಬಸನಗೌಡ ಮಲ್ಲದಕಲ್ಲ ಮತ್ತು ಬಸವ ಬಳಗದವರು ಉಪಸ್ಥಿತರಿದ್ದರು.

ವಚನ ಗಾಯನ, ಪ್ರಸಾದ ದಾಸೋಹದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
