ಅನುಭವ ಮಂಟಪ ನಿರ್ವಹಣೆಗೆ ಸರ್ವ ಸಂಘಟನೆಗಳ ಸಭೆ ಕರೆಯಲು ನಿರ್ಣಯ

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ಬೆಳಗಾವಿ

ನೂತನ ಅನುಭವ ಮಂಟಪದ ಸಮರ್ಪಕ ನಿರ್ವಹಣೆಗೆ ಸರ್ವ ಸಂಘಟನೆಗಳ ಸಭೆಯನ್ನು ಕರೆಯಲು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ನಿರ್ಣಯಿಸಿದೆ.

ಮುಂದಿನ ವರ್ಷ ಬಸವಕಲ್ಯಾಣದಲ್ಲಿ ಲೋಕಾರ್ಪಣೆಯಾಗುತ್ತಿರುವ ನೂತನ ಅನುಭವ ಮಂಟಪ ಸ್ಥಾವರವಾಗದೆ ಜಂಗಮವಾಗುವಂತೆ ನಿರ್ವಹಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸದಸ್ಯರ ಹಾಗೂ ಎಲ್ಲಾ ಬಸವಪರ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗುವುದು.

ಈ ನಿರ್ಣಯವನ್ನು ಸೆಪ್ಟೆಂಬರ್ 19, 20 ನಗರದಲ್ಲಿ ನಡೆದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜೆಎಲ್ಎಂನ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಒಮ್ಮತದಿಂದ ತೆಗೆದುಕೊಂಡರು.

ಅನುಭವ ಮಂಟಪದ ಸಮರ್ಪಕವಾದ ನಿರ್ವಹಣೆಯ ಬಗ್ಗೆ ಸರ್ವ ಸಂಘಟನೆಗಳ ಸಭೆಯಲ್ಲಿ ವಿಸ್ತೃತವಾದ ಚರ್ಚೆಯನ್ನು ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

ನೂತನ ಅನುಭವ ಮಂಟಪದ ಸಂಪೂರ್ಣ ನಿರ್ವಹಣೆಯನ್ನು ಬಸವಪರ, ಲಿಂಗಾಯತಪರ ಸಂಘಟನೆಗಳಿಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು.

ಅನುಭವ ಮಂಟಪದ ಚಟುವಟಿಕೆಗಳನ್ನು ಬಸವಾದಿ ಶರಣರ ತತ್ವಸಿದ್ಧಾಂತಗಳ ಅಡಿಯಲ್ಲಿ ರೂಪಿಸುವ ಜವಾಬ್ದಾರಿಯನ್ನು ಜಾಗತಿಕ ಲಿಂಗಾಯತ ಮಹಾಸಭೆಗೆ ಬಿಡಬೇಕು ಎಂದೂ ಆಗ್ರಹಿಸಲಾಯಿತು.

ಸರ್ವ ಸಂಘಟನೆಗಳ ಸಭೆಯನ್ನು ಆಯೋಜಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅವರಿಗೆ ನೀಡಲಾಗಿದೆ.

ಸರ್ವ ಸಂಘಟನೆಗಳ ಸಭೆಯನ್ನು ಆಯೋಜಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅವರಿಗೆ ನೀಡಲಾಗಿದೆ.

ಸುವರ್ಣ ಮಂದಿರಕ್ಕೆ ಭೇಟಿ

ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ 12ನೇ ಶತಮಾನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಅನುಭಾವಿಗಳಿಂದ ಅನುಭವ ಮಂಟಪದಲ್ಲಿ ಮೌಲಿಕವಾದ ಚರ್ಚೆಗಳು ನಡೆಯುತ್ತಿದ್ದವು.

ಈಗಲೂ ಅದೇ ಮಾದರಿಯಲ್ಲಿ ಅನುಭವ ಮಂಟಪದ ಪಾವಿತ್ರ್ಯತೆ ಮತ್ತು ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅಲ್ಲಿ ಕಾರ್ಯಕ್ರಮಗಳು ನಡೆಯಬೇಕು ಎಂಬ ಕಳಕಳಿ ವ್ಯಕ್ತಪಡಿಸಿದರು.

ಸಿಖ್ ಧರ್ಮಿಯರ ಧರ್ಮಕ್ಷೇತ್ರವಾದ ಅಮೃತಸರದ ಸ್ವರ್ಣಮಂದಿರದಲ್ಲಿ ಯಾವ ರೀತಿ ನಿರಂತರ ಚಟುವಟಿಕೆಗಳು ನಡೆಯುತ್ತವೆಯೋ, ಅದೇ ಮಾದರಿ ಚಟುವಟಿಕೆಗಳು ಅನುಭವ ಮಂಟಪದಲ್ಲಿಯೂ ನಡೆಯಬೇಕು.

ಅದರ ಅಧ್ಯಯನಕ್ಕೆಂದೇ ಜಾಗತಿಕ ಲಿಂಗಾಯತ ಮಹಾಸಭೆಯ ಎಲ್ಲ ಜಿಲ್ಲಾಧ್ಯಕ್ಷರುಗಳ ಮತ್ತು ಪದಾಧಿಕಾರಿಗಳ “ಸುವರ್ಣ ಮಂದಿರ ಭೇಟಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

ಜೊತೆಗೆ ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಲಾಗುವುದು ಎಂದು ಹೇಳಿದರು.

ಪೂರ್ಣ ಕಟ್ಟಡ ಲೋಕಾರ್ಪಣೆಯಾಗಲಿ

ಎಂಟು ವರ್ಷಗಳ ಹಿಂದೆ ಆರಂಭವಾದ ಅನುಭವ ಮಂಟಪದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಈಗಾಗಲೇ 400 ಕೋಟಿ ರುಪಾಯಿಗಳ ಖರ್ಚಾಗಿದೆ.

ಕಟ್ಟಡ ಮುಕ್ತಾಯಗೊಳ್ಳಲು ಇನ್ನೂ ಕನಿಷ್ಠ 450 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಮುಂಬರುವ ಮಾರ್ಚ್ ಅಂತ್ಯದೊಳಗೆ ಕಟ್ಟಡ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೂ ಅದಕ್ಕೆ ಅಗತ್ಯವಿರುವ ಹಣವನ್ನು ಪ್ರಸ್ತುತ ಮುಂಗುಡ ಪತ್ರದಲ್ಲಿ ನೀಡಲಾಗಿಲ್ಲ. ಹೀಗಿದ್ದಾಗ ಮಾರ್ಚ್ ಅಂತ್ಯಕ್ಕೆ ಕಟ್ಟಡ ಪೂರ್ಣಗೊಳ್ಳುವುದು ಅಸಾಧ್ಯದ ಮಾತು ಎಂದು ಸಭೆ ಅಭಿಪ್ರಾಯಪಟ್ಟಿತು.

ಕಟ್ಟಡವನ್ನು ಅಪೂರ್ಣ ಸ್ಥಿತಿಯಲ್ಲಿ ಉದ್ಘಾಟನೆ ಮಾಡಲು ಅವಕಾಶ ನೀಡಬಾರದು ಎಂದು ಸಭೆಯು ನಿರ್ಣಯ ಕೈಗೊಂಡಿತು.

ಮೊದಲ ದಿನದ ಸಭೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಪ್ರಕಟಣೆಯಾದ “ಲಿಂಗಾಯತ ಧರ್ಮದ ಆಚರಣೆಗಳು” ಹಾಗೂ “ಅನುಭವ ಮಂಟಪ ಕಟ್ಟಡ ಮುಗಿದ ನಂತರ ಮುಂದೇನು?” ಎಂಬ ಎರಡು ಪುಸ್ತಕಗಳನ್ನು ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.

ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಾದೀಶ ಎನ್.ಎಸ್. ಕೆಂಪಗೌಡರ ವಹಿಸಿದ್ದರು. ಎಂ. ವಿ. ಗೊಂಗಡಶೆಟ್ಟಿ ನಿರ್ಣಯಗಳನ್ನು ಮಂಡಿಸಿದರು. ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ಕುಷ್ಟಗಿಯ ಮಾಜಿ ಶಾಸಕ ಕೆ. ಶರಣಪ್ಪ, ಪರಮೇಶ್ವರಪ್ಪ ಕಾಗಿನೆಲೆ, ಎಂ. ಮಹಾದೇವಪ್ಪ, ಬಸವರಾಜ ಹರನಾಳ, ಎಂ. ಶಿವಕುಮಾರ ಮುಂತಾಗಿ ಜಿಲ್ಲಾ ಅಧ್ಯಕ್ಷರುಗಳು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕೇರಳ ರಾಜ್ಯಗಳ ಅಧ್ಯಕ್ಷರಗಳು ವೇದಿಕೆಯ ಮೇಲಿದ್ದರು.

ರಾಜ್ಯಗಳ, ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ನೂರಾರು ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮ ನಿರ್ವಹಿಸಿದ ಅಶೋಕ ಮಳಗಲಿ, ಪ್ರವೀಣಕುಮಾರ ಚಿಕಲಿ, ಸಿ. ಎಂ. ಬೂದಿಹಾಳ, ಮರಿಗೆಪ್ಪ ಬಾಳಿ, ಬಸವರಾಜ ಮಿಂಡೊಳ್ಳಿ, ಎಫ್.ಆರ್. ಪಾಟೀಲ, ಈರಣ್ಣ ಚಿನಗುಡಿ, ಮುತ್ತಿಕೊಪ್ಪ ಕೆಂಪಣ್ಣ, ರತ್ನಾ ಬೆಣಚನಮರಡಿ, ಕಾವೇರಿ ಖಿಲಾರಿ, ಶೋಭಾ ಶಿವಳ್ಳಿ, ಅನುಸೂಯಾ ಬಶೆಟ್ಟಿ, ನೇತ್ರಾವತಿ ರಾಮಾಪುರಿ, ಭಾರತಿ ರಾಮಗುರುವಾಡಿ, ಭಾಗ್ಯಶ್ರೀ ಬೆಣಚನಮರಡಿ ಮುಂತಾದ ಸ್ಥಳೀಯ ಪದಾಧಿಕಾರಿಗಳು ಸಭೆಯ ಯಶಸ್ಸಿಗೆ ಶ್ರಮಿಸಿದರು.

ಕಾರ್ಯಕ್ರಮ ನಗರದ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಶ್ರೀ ಶಿವಕುಮಾರ ಸಂಬರ್ಗಿಮಠ ಸಭಾಂಗಣದಲ್ಲಿ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
1 Comment
  • ಬೆಳಗಾವಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಕಾರ್ಯರೂಪಕ್ಕೆ ಬರಲಿ. ಜೈ ಬಸವ

Leave a Reply

Your email address will not be published. Required fields are marked *