ಕಲಬುರಗಿಯಲ್ಲಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ

ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ ಹಾಗೂ ಅನುಭವ ಕೇಂದ್ರ ಸ್ಥಾಪನೆಗೆ ಚಿಂತನೆ

ಕಲಬುರಗಿ

ಕಲಬುರಗಿ ನಗರದ ಸಮೀಪದ ಕಪನೂರು ಗ್ರಾಮದ ಬಳಿ ಶರಣ-ಶರಣೆಯರ ವಚನ ಪರಂಪರೆ, ಸಾಮಾಜಿಕ ಕ್ರಾಂತಿ ಹಾಗೂ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಆಧುನಿಕ ವಚನ ಮಂಟಪವನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಸಂಬಂಧ ವಚನ ಮಂಟಪದ ವಿನ್ಯಾಸ, ನಿರ್ಮಾಣದ ರೂಪುರೇಷೆ ಹಾಗೂ ವಿವಿಧ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು, ಯೋಜನೆಯನ್ನು ಅರ್ಥಪೂರ್ಣವಾಗಿ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಚನ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ಹೆಸರಾಂತ ವಾಸ್ತುಶಿಲ್ಪಿಗಳು ಸಿದ್ಧಪಡಿಸಿ ಸಲ್ಲಿಸಿರುವ ವಿನ್ಯಾಸ ಹಾಗೂ ಪರಿಕಲ್ಪನಾ ವರದಿಗಳನ್ನು ಸಚಿವರು ವೀಕ್ಷಿಸಿದರು.

ಕಲಬುರಗಿ ತಾಲ್ಲೂಕಿನ ಕಪನೂರು ಗ್ರಾಮದ ಸರ್ವೆ ನಂ. 44/1ರಲ್ಲಿರುವ 6 ಎಕರೆ 6 ಗುಂಟೆ ಜಮೀನಿನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ವಚನ ಮಂಟಪದ ಜೊತೆಗೆ ಶರಣರ ಜೀವನ, ವಚನ ಸಾಹಿತ್ಯ ಮತ್ತು ವಚನ ಚಳವಳಿಯ ಇತಿಹಾಸವನ್ನು ಪರಿಚಯಿಸುವ ವಸ್ತುಸಂಗ್ರಹಾಲಯ, ವ್ಯಾಖ್ಯಾನ ಕೇಂದ್ರ (Interpretation Centre), ಅನುಭವ ಕೇಂದ್ರ (Experience Centre) ಹಾಗೂ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಪರಿಕಲ್ಪನೆಯೂ ಯೋಜನೆಯಲ್ಲಿದೆ.

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಸೇರಿದಂತೆ ವಚನ ಕ್ರಾಂತಿಯಲ್ಲಿ ಪಾಲ್ಗೊಂಡ ಎಲ್ಲ ಶರಣ-ಶರಣೆಯರ ಜೀವನ, ಸಾಧನೆ, ಭಾವಚಿತ್ರಗಳು ಹಾಗೂ ಅಮೂಲ್ಯ ವಚನಗಳನ್ನು ಇಲ್ಲಿ ಪರಿಚಯಿಸಲಾಗುವುದು. ವಚನ ಸಾಹಿತ್ಯದ ಆಶಯ, ಸಮಾನತೆ, ಕಾಯಕ, ದಾಸೋಹ ಹಾಗೂ ಸಾಮಾಜಿಕ ನ್ಯಾಯದ ಸಂದೇಶಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ರೀತಿಯಲ್ಲಿ ಮಂಟಪವನ್ನು ವಿನ್ಯಾಸಗೊಳಿಸಲಾಗುವುದು.

ಇದರೊಂದಿಗೆ ಚರ್ಚೆ, ಸಂವಾದ, ಉಪನ್ಯಾಸ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ತೆರೆದ ಸಭಾಂಗಣವನ್ನೂ ನಿರ್ಮಿಸುವ ಉದ್ದೇಶವಿದೆ. ವಚನ ಸಾಹಿತ್ಯದ ಕುರಿತು ಅಧ್ಯಯನ ನಡೆಸುವ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅಗತ್ಯ ಮಾಹಿತಿ ಮತ್ತು ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿಯೂ ಇದು ರೂಪುಗೊಳ್ಳಲಿದೆ.

ಕಲಬುರಗಿ ಜಿಲ್ಲೆಯ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಒತ್ತು

ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರವಾಸೋದ್ಯಮ, ಐತಿಹಾಸಿಕ ಪರಂಪರೆ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ತಾಣಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.

ಈ ನಿಟ್ಟಿನಲ್ಲಿ ಕಾಳಗಿ ತಾಲ್ಲೂಕಿನ ಸೂರ್ಯನಾರಾಯಣ ದೇವಾಲಯದ ಸಂರಕ್ಷಣಾ ಕಾಮಗಾರಿ, ಸೇಡಂ ತಾಲ್ಲೂಕಿನ ಐತಿಹಾಸಿಕ ಮಳಖೇಡ ಕೋಟೆಯ ಅಭಿವೃದ್ಧಿ, ಚಿತ್ತಾಪುರ ತಾಲ್ಲೂಕಿನ ನಾಗಾವಿ ಪಾರಂಪರಿಕ ಪ್ರದೇಶದಲ್ಲಿರುವ ಪ್ರಾಚ್ಯ ಕುರುಹುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಅದೇ ರೀತಿ ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿಯಲ್ಲಿರುವ ಐತಿಹಾಸಿಕ ಬೌದ್ಧ ನೆಲೆ ಹಾಗೂ ಪ್ರಾಚ್ಯ ಕುರುಹುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೂ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಲಬುರಗಿ ಜಿಲ್ಲೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ, ಈ ತಾಣಗಳನ್ನು ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಆಕರ್ಷಣೀಯವಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರೊಂದಿಗೆ ಸ್ಥಳೀಯ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಲ್ಲದೆ, ವಿಡಿಯೊ ಸಂವಾದದ ಮೂಲಕ ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹಾಗೂ ಜಿಲ್ಲೆಯ ಅಧಿಕಾರಿಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ ಶಾಖಾ

Leave a Reply

Your email address will not be published. Required fields are marked *