ಕೆ.ಎಂ. ವೀರೇಶ ಅವರಿಗೂ ಸಂತಾಪ
ಸಾಣೇಹಳ್ಳಿ:
ಇಲ್ಲಿನ ಶಿವಕುಮಾರ ರಂಗಪ್ರಯೋಗ ಶಾಲೆಯ ಅಂತರಂಗದಲ್ಲಿ ನಡೆದ ರಂಗಶಾಲಾ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕೆಯ ಕೋಲಾಟ ಪ್ರಸ್ತುತಿ ಹಾಗೂ ಈಚೆಗೆ ಅಗಲಿದ ರಂಗಕರ್ಮಿ ಜಂಬೆಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಮಾರಂಭ ಸೋಮವಾರ ನಡೆಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು; ಕಲಾವಿದರು ಕೇವಲ ರಂಗಕಲೆಯಲ್ಲಷ್ಟೇ ಅಲ್ಲದೆ, ತಮ್ಮ ಜೀವನದಲ್ಲೂ ಶಿಸ್ತು, ನೈತಿಕತೆ ಹಾಗೂ ಸನ್ಮಾರ್ಗವನ್ನು ಅಳವಡಿಸಿಕೊಂಡು ನೈಜ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು”.

“ಸಾಣೇಹಳ್ಳಿಯ ರಂಗಶಾಲೆಯನ್ನು ಆರಂಭಿಸುವ ಆರಂಭಿಕ ದಿನಗಳಲ್ಲಿ, ಸಂಸ್ಥೆಗೆ ಸೂಕ್ತ ಪ್ರಾಚಾರ್ಯರನ್ನು ಹುಡುಕುತ್ತಿದ್ದಾಗ ಹಿರಿಯರ ಸಲಹೆಯ ಮೇರೆಗೆ ಚಿದಂಬರರಾವ ಜಂಬೆಯವರನ್ನು ಕರೆಸಿಕೊಳ್ಳಲಾಯಿತು. ಸ್ವತಂತ್ರ ನಿರ್ಧಾರ, ಆರ್ಥಿಕ ಸೌಲಭ್ಯ ಹಾಗೂ ಶಿಸ್ತಿನ ವಾತಾವರಣದ ಶರತ್ತುಗಳನ್ನು ವಿಧಿಸಿ ರಂಗಶಾಲೆಯನ್ನು ಆರಂಭಿಸಿದ ಅವರು, ಸಂಸ್ಥೆಗೆ ಶಿಸ್ತು ಮತ್ತು ಗುಣಮಟ್ಟದ ಭದ್ರ ಬುನಾದಿಯನ್ನು ಹಾಕಿಕೊಟ್ಟರು.
ಸಂಸ್ಥೆಯ ಶಿಸ್ತಿಗೆ ಒಗ್ಗದ ಮತ್ತು ಕಲಿಯಲು ಸೋಮಾರಿತನ ತೋರಿಸುವ ವಿದ್ಯಾರ್ಥಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕುವ ಹಕ್ಕು ತಮ್ಮದಿರಬೇಕು ಎಂದು ಸ್ಪಷ್ಟಪಡಿಸಿದ್ದರು.
ರಂಗಶಾಲೆಯ ಆರಂಭದಲ್ಲಿ ಯಾವುದೇ ಭವ್ಯ ಕಟ್ಟಡ, ಊಟದ ಸರಿಯಾದ ವ್ಯವಸ್ಥೆ ಇಲ್ಲದಿದ್ದರೂ, ಬಯಲು ವಾತಾವರಣದಲ್ಲೇ ವಿದ್ಯಾರ್ಥಿಗಳೊಂದಿಗೆ ಕಷ್ಟಪಟ್ಟು ಶ್ರಮಿಸಿ ಸಂಸ್ಥೆಯನ್ನು ಕಟ್ಟಿದರು. ಬೋಧಿಸುವಾಗ ಕೋಲು ಹಿಡಿದು ಕಟ್ಟುನಿಟ್ಟಿನ ಮೇಷ್ಟ್ರಾಗಿದ್ದ ಜಂಬೆಯವರು, ಕಲ್ಪನೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ತಮ್ಮದೇ ಸ್ವಂತ ಮಗುವಂತೆ ಪ್ರೀತಿಯಿಂದ ಸಲಹುತ್ತಿದ್ದರು.

ನೀನಾಸಂ ಹಾಗೂ ಸಾಣೇಹಳ್ಳಿಯಲ್ಲಿ ಅವರು ನಿರ್ದೇಶಿಸಿದ ಯಾವುದೇ ನಾಟಕಗಳು ವಿಫಲವಾಗಲಿಲ್ಲ ಎಂಬುದು ಅವರ ಪ್ರತಿಭೆಗೆ ಸಾಕ್ಷಿ. ಕೊನೆಯವರೆಗೂ ರಂಗಭೂಮಿಯ ಹುಮ್ಮಸ್ಸನ್ನು ಅವರು ಕಾಯ್ದುಕೊಂಡಿದ್ದರು.
ಜಂಬೆಯವರಿಗೆ ಕೋಲಾಟವೆಂದರೆ ಅತ್ಯಂತ ಪ್ರಿಯವಾಗಿತ್ತು. ಕೋಲಾಟದ ಪ್ರದರ್ಶನದ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಕೆಯಾಗಿದೆ. ಒಬ್ಬ ಜಂಬೆ ಅಗಲಿದರೆ, ಅವರ ಹಾದಿಯಲ್ಲಿ ಹತ್ತು ಜಂಬೆಗಳು ಹುಟ್ಟಿಕೊಳ್ಳಬೇಕು; ಅದುವೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.
ಕಲಾವಿದರು ಕೇವಲ ರಂಗಕಲೆಯನ್ನು ಕಲಿಯುವುದಷ್ಟೇ ಅಲ್ಲದೆ, ವೈಯಕ್ತಿಕ ದುರಭ್ಯಾಸಗಳಿಗೆ ಬಲಿಯಾಗದೆ ನೈತಿಕ ನೆಲೆಗಟ್ಟಿನಲ್ಲಿ ಉತ್ತಮ ಮನುಷ್ಯರಾಗಿ ಜೀವನ ರೂಪಿಸಿಕೊಳ್ಳಬೇಕು.
ಶರೀರದಿಂದ ಬೆವರು ಹೊರಹೋದಾಗಷ್ಟೇ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಶಿಸ್ತು ಹಾಗೂ ಪರಿಶ್ರಮದಿಂದ ಮಾತ್ರ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.

ಚಿತ್ರದುರ್ಗದ ಬಾಪೂಜಿ ಸಂಸ್ಥೆಯ ಕಾರ್ಯದರ್ಶಿ ಕೆ. ಎಂ. ವೀರೇಶ ಅವರ ಅಕಾಲಿಕ ನಿಧನಕ್ಕೆ ಶ್ರೀಗಳು ತೀವ್ರ ಕಂಬನಿ ಮಿಡಿದರು.
ಈ ಸಂದರ್ಭದಲ್ಲಿ ರಂಗಶಾಲೆಯ ಪ್ರಾಚಾರ್ಯ ರಘು ಪುರಪ್ಪಮನೆ, ರಂಗಶಿಕ್ಷಕಿ ಸಂಗೀತ ಭಿಡೆ, ಮುಖ್ಯ ಶಿಕ್ಷಕ ಶಿವಕುಮಾರ ಬಿ.ಎಸ್, ರಂಗಶಾಲೆಯ ಎಲ್ಲಾ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
