ಬೀದರ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಬೇಕು: ಶಿವಯ್ಯ ಸ್ವಾಮಿ
ಬಸವಗಿರಿಯಲ್ಲಿ ಶರಣ ಸಂಗಮ
ಬೀದರ:
ಜೀವನದ ಗುರಿ ಮುಟ್ಟಲು ಗುರು ಕಾರುಣ್ಯಬೇಕು ಎಂದು ಬಸವಕಲ್ಯಾಣದ ಬಸವ ತತ್ವ ಪ್ರಚಾರಕರಾದ ಬಸವದೇವರು ಹೇಳಿದರು.
ಲಿಂಗಾಯತ ಮಹಾಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಈಚೆಗೆ ಆಯೋಜಿಸಿದ್ದ 279ನೇ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಅನುಭಾವ ಮಂಡಿಸಿದರು.
ಗುರು ತೋರಿದ ಮಾರ್ಗದಲ್ಲಿ ಭಕ್ತಿ ಮಾಡಬೇಕು. ಭಕ್ತಿಯಲ್ಲಿ ಅರೆಕ್ಷಣದ ಮರೆವು ಸಹ ಸಲ್ಲದು ಎಂದು ತಿಳಿಸಿದರು.

ತನು, ಮನ, ಭಾವಗಳ ಶುದ್ಧೀಕರಣವೇ ಸಾಧನೆಯ ಮೂಲ ಅಸ್ತ್ರ. ಅಂತರಂಗ ತೊಳೆದುಕೊಳ್ಳುವ ಬಗೆಯನ್ನು ಚನ್ನಬಸವಣ್ಣನವರು ತಮ್ಮ ಕರಣ ಹಸಿಗೆಯಲ್ಲಿ ಹೃದಯಂಗಮವಾಗಿ ವಿವರಿಸಿದ್ದಾರೆ ಎಂದು ಹೇಳಿದರು.
ಮೊದಲು ತನ್ನ ಮೂಲವನ್ನು ತಿಳಿಯಬೇಕು. ತನ್ನ ತಾನರಿಯದೆ ಏನು ತಿಳಿದರೂ ವ್ಯರ್ಥ. ತನ್ನ ತಾ ತಿಳಿದರೆ ದೇವರ ಸ್ವರೂಪ ಗೋಚರಿಸುವುದು. ದೇವನರಿದ ಬಳಿಕ ಮತ್ತೇನೂ ಬೇಕೆನಿಸದು ಎಂದು ತಿಳಿಸಿದರು.
ಸಾಧನೆಗೆ ಶಿವಯೋಗ ಅವಶ್ಯಕ. ಜನನ-ಮರಣವಿರಹಿತನಾಗಿ ಪರಮಾತ್ಮನದಲ್ಲಿ ಒಂದಾಗುವ ಪ್ರಕ್ರಿಯೆ ಶಿವಯೋಗ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ಮಾತನಾಡಿ, ಮಾನವನ ಪರಮ ಉದ್ಧೇಶ ಲಿಂಗಾಂಗ ಸಾಮರಸ್ಯ. ಈ ದಿಸೆಯಲ್ಲಿ ವಚನಗಳು ದಾರಿ ತೋರುತ್ತವೆ. ವಚನಗಳಿಂದ ನರ ನಾಡಿಗಳೆಲ್ಲ ರೋಮಾಂಚನಗೊಳ್ಳುತ್ತವೆ ಎಂದು ತಿಳಿಸಿದರು.
ಲಿಂಗಾಂಗ ಸಾಮರಸ್ಯಕ್ಕೆ ಸನ್ಯಾಸಿ- ಸಂಸಾರಿ ಎಂಬ ಭೇದ ಶರಣ ಧರ್ಮದಲ್ಲಿಲ್ಲ. ಸರ್ವರಿಗೂ ಸಮಾನ ಅವಕಾಶ ಇದೆ ಎಂದು ಹೇಳಿದರು.

ಗುರು-ಲಿಂಗ-ಜಂಗಮ ಬಸವ ತತ್ವದ ಮೂರು ಮುಖ್ಯ ತತ್ವಗಳು. ಇವು ಸತ್ಯದತ್ತ ಮುನ್ನಡೆಸುತ್ತವೆ. ಇಂಥ ಅರಿವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೇ ವಿನಃ ಅಜ್ಞಾನದ ದಾರಿ ತುಳಿಯಬಾರದು ಎಂದು ತಿಳಿಸಿದರು.
ಜಗತ್ತು ಪರಮಾತ್ಮನ ಮನೆ. ಎಲ್ಲ ಜೀವಿಗಳಲ್ಲಿ ಪರಮಾತ್ಮನಿರುವ ಕಾರಣ ಯಾರಿಗೂ, ಯಾವ ಜೀವಿಗೂ ನೋವು ಉಂಟು ಮಾಡಬಾರದು ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಬೀದರ ವಿಶ್ವವಿದ್ಯಾಲಯಕ್ಕೆ ಅನುಭವ ಮಂಟಪ ಸ್ಥಾಪಿಸಿ, ಪ್ರಜಾಪ್ರಭುತ್ವದ ಬೀಜ ಬಿತ್ತಿದ ಜಗಜ್ಯೋತಿ ಬಸವೇಶ್ವರರ ಹೆಸರಿಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಬೀದರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಪ್ರಯುಕ್ತ ಶಿವಯ್ಯ ಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೀದರ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಿಕ್ಷಕಿ ಸಂಧ್ಯಾರಾಣಿ ಮುತ್ತಂಗೆ ಅವರಿಗೆ ಅಭಿನಂದನಾ ಪತ್ರ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.
ಸಿ.ಎಸ್. ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತಕುಮಾರ ಪ್ರಭಾ ಮುಖ್ಯ ಅತಿಥಿಯಾಗಿದ್ದರು. ಸಾಹಿತಿ ರಮೇಶ ಮಠಪತಿ, ಪ್ರಮುಖರಾದ ಮಾಣಿಕಪ್ಪ ಗೋರನಾಳೆ, ಪ್ರಕಾಶ ಮಠಪತಿ, ರಾಜಕುಮಾರ ಪಾಟೀಲ ಮತ್ತಿತರರು ಇದ್ದರು.

ಬಸವಸಾಗರ, ನವ್ಯಾ, ಹರಳೇಶ ಗುರು ಪೂಜೆ ನೆರವೇರಿಸಿದರು. ರೇವಣಪ್ಪ ಮೂಲಗೆ, ಕದಳಿಶ್ರೀ ಹಾಗೂ ಶ್ಯಾಮಲಾ ವಚನ ಗಾಯನ ಮಾಡಿದರು. ಶಿವಲೀಲಾ ಸ್ವಾಗತಿಸಿದರು. ಈಶ್ವರಮ್ಮ ಕಾಶಿನಾಥ ಹೊಕ್ರಾಣೆ ಭಕ್ತಿ ದಾಸೋಹಗೈದರು.
