ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಒಳಪಂಗಡಗಳು ಒಂದಾಗಬೇಕು: ಸವದಿ

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ಬೆಳಗಾವಿ:

ಎಲ್ಲ ರೀತಿಯ ಭಿನ್ನಾಭಿಪ್ರಾಯ ಮರೆತು ಎಲ್ಲ ಒಳಪಂಗಡಗಳು ಒಂದಾದರೆ ಮಾತ್ರ ಲಿಂಗಾಯತ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಸಹಕಾರ ಸಚಿವ ಲಕ್ಷಣ ಸವದಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ರವಿವಾರ ನಡೆದ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಲಿಂಗಾಯತ ಒಳಪಂಗಡಗಳನ್ನು ಒಂದುಗೂಡಿಸುವುದಕ್ಕಾಗಿ ಬೆಳಗಾವಿಯಲ್ಲಿ ಆರಂಭವಾದ ಕಾರ್ಯಕ್ರಮ ರಾಜ್ಯದ ತುಂಬೆಲ್ಲ ವ್ಯಾಪಿಸಬೇಕು. ಸಣ್ಣ ಸಮುದಾಯಗಳಿಗೆ ಬಲ ನೀಡಬೇಕು. ಬೇರೆಯವರ ಅನ್ನಕ್ಕೆ ಕೈಹಾಕಬಾರದು. ನಮ್ಮ ಅನ್ನಕ್ಕೂ ಬೇರೆಯವರು ಕೈಹಾಕಲು ಬಿಡಬಾರದು. ಆಗ ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣನವರು ಆಶಿಸಿದ ಬದಲಾವಣೆ ಸಾಧ್ಯ ಎಂದರು.

ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ತಾವೆಲ್ಲ ಸೇರಿ ಸಮಾಜದ ಪರವಾಗಿ ನೀಡಿದ ಗೌರವ ನನಗೆ ಶ್ರೀರಕ್ಷೆ ಹಾಗೂ ಹೆಚ್ಚಿನ ಜವಾಬ್ದಾರಿ ನೀಡಿದಂತಾಗಿದೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಮಾಜಿ ಸಂಸದ ರಮೇಶ ಕತ್ತಿ ಮಾತನಾಡುತ್ತ, ಹಿಂದೆ ನಮ್ಮ ಸಮದಾಯ ರಾಜ್ಯದಲ್ಲಿ 94 ಶಾಸಕರನ್ನು ಹೊಂದಿತ್ತು. ಈಗ ಆ ಸಂಖ್ಯೆ 55ಕ್ಕೆ ಇಳಿದಿದೆ. ಇದಕ್ಕೆ ನಮ್ಮಲ್ಲಿನ ಭಿನ್ನಾಭಿಪ್ರಾಯ ಕಾರಣ. ಹಾಗಾಗಿ ಪ್ರತಿಯೊಬ್ಬರೂ ನಮ್ಮಲ್ಲಿನ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಮಸ್ತರಿಗೂ ಬಾಗಿಲು ತೆರೆದು ಉಪಚರಿಸುವ ಲಿಂಗಾಯತರು ಎಲ್ಲಿ ದಾರಿ ತಪ್ಪುತ್ತಿದ್ದಾರೆ ಎಂಬಂದನ್ನು ಚಿಂತನೆ ಮಾಡಬೇಕಿದೆ ಎಂದರು.

ಒಂದು ವೇಳೆ ನಾವೆಲ್ಲರೂ ಒಂದಾಗದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಮುಂದೆ ನಮ್ಮ ರಾಜಕೀಯ ಮತ್ತು ಸಾಮಾಜಿಕ ಅಸ್ತಿತ್ವಕ್ಕಾಗಿ ಹುಡುಕಾಡಬೇಕಾದ ಸ್ಥಿತಿ ಬರಲಿದೆ ಎಂದು ಎಚ್ಚರಿಕೆ ಕೊಟ್ಟರು.

ಶಾಸಕ ಅಶೋಕ ಪಟ್ಟಣ ಅವರು ಮಾತನಾಡಿ, ಇಡೀ ಸಮುದಾಯವನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ಮಠಾದೀಶರು ವಹಿಸಿಕೊಳ್ಳಬೇಕು. ದೊಡ್ಡ ಸಮುದಾಯ ನಮ್ಮದಾದರೂ ಸಮನ್ವಯತೆ ಇಲ್ಲದಂತಾಗಿದೆ ಎಂದರು.

ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮಿಗಳು ಆಶೀರ್ವಚನ ನೀಡಿದರು. ಬೆಳಗಾವಿಯ ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ಹಾಗೂ ಬೆಳಗಾವಿ – ನಾಗನೂರು ರುದ್ರಾಕ್ಷಿಮಠದ ಅಲ್ಲಮ ಪ್ರಭು ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹನುಮಂತ ಕೊಂಗಾಲಿ, ರಾಜ್ಯಸಭಾ ಮಾಜಿ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಂಸದೆ ಮಂಗಲಾ ಅಂಗಡಿ, ಶಾಸಕ ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಎಸ್.ಸಿ ಮಾಳಗಿ, ಮಲ್ಲಣ್ಣ ಯಾದವಾಡ, ಡಾ. ಮಹಾಂತೇಶ ಕಡಾಡಿ, ಮುರುಘೇಂದ್ರ ಪಾಟೀಲ, ಡಾ. ರವಿ ಪಾಟೀಲ, ಉಮೇಶ ಬಾಳಿ, ಗುಂಡು ಪಾಟೀಲ, ಪಂಚನಗೌಡ ದ್ಯಾಮನಗೌಡರ, ಶಂಕರ ಗುಡಸ, ಭೀಮಪ್ಪ ಗಡಾದ, ವಿನಯ ನಾವಲಗಟ್ಟಿ ಮುಂತಾದವರು ವೇದಿಕೆಯ ಮೇಲಿದ್ದರು.

ಉತ್ಸವ ಸಮಿತಿ ಸಂಚಾಲಕರಾದ ಬಸವರಾಜ ರೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಮಳಗಲಿ ಹಾಗೂ ಆನಂದ ಗುಡಸ ನಿರೂಪಿಸಿದರು. ರತ್ನಪ್ರಭಾ ಬೆಲ್ಲದ ಸ್ವಾಗತಿಸಿದರು. ಈರಣ್ಣ ದೇಯಣ್ಣವರ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
2 Comments
  • ವೀರಶೈವ ರನ್ನು ಲಿಂಗಾಯತ ಧರ್ಮ ಬಿಟ್ಟು ಹೊರಗೆ ಹಾಕಿದರೆ, ಉಳಿದ ಪಂಗಡದವರಲ್ಲಿ ಅನ್ಯೋನ್ಯತೆ ಗೆ ಸಮಸ್ಯೆ ಇಲ್ಲ.
    ಏಕೆಂದರೆ ಎಲ್ಲರೂ ಲಿಂಗಾಯತ ಧರ್ಮದವ ರೆ.
    ಅಯ್ಯಾ ಚಾ ರ , ಹೋಮ, ಹವನ ಮಾಡಿಕೊಳ್ಳುವವ ವೀರಶೈವರು ಲಿಂಗಾಯತರ ದಾರಿ ತಪ್ಪಿಸುತ್ತಿದ್ದಾರೆ.
    ಅವರು ದುಡಿದು ತಿನ್ನದೇ, ಬಿಕ್ಷೆ ಸಿಗಲಿ ಅಂತ ಹಿಂದೂ ಧರ್ಮದ ಸಂಪ್ರದಾಯಗಳನ್ನು ಲಿಂಗಾಯತರಿಗೆ ಪಾಲಿಸಲು ಹೇಳುತ್ತಿದ್ದಾರೆ.
    ಸಿದ್ಧಾಂತ ಶಿಖಾಮಣಿ ಮತ್ತು ರೇಣುಕಾ ಚಾರ್ಯನನ್ನು ಹೇರುತಿದ್ದಾರೆ.

  • ಒಳ್ಳೆಯ ವಿಚಾರ ಆದರೆ ವೀರಶೈವರನ್ನು ಬಿಟ್ಟು ಲಿಂಗಾಯತ ಧರ್ಮದ ಒಳಪಂಗಡಗಳು ಒಟ್ಟುಗುಡಿಸಬೇಕು ಆಗ ಮಾತ್ರ ಲಿಂಗಾಯತ ಜನಾಂಗದ ಅಭಿವೃದ್ಧಿ ಆಗುತ್ತದೆ. ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *