“ಬೇಡಲಾರದ ಜಂಗಮ, ಬೇಡಿಸಿ ಕೊಡಲಾಗದ ಭಕ್ತ” ತತ್ವದಡಿ ಮಠದ ಕಾರ್ಯನಿರ್ವಹಣೆ
ಸಾಣೇಹಳ್ಳಿ:
ಇಲ್ಲಿನ ಗುರುಬಸವ ಮಹಾಮನೆಯಲ್ಲಿ ‘ರಾಷ್ಟ್ರೀಯ ನಾಟಕೋತ್ಸವ -೨೬’ರ ಪೂರ್ವಭಾವಿ ಸಭೆ ನಡೆಯಿತು.
ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು; ನಮ್ಮ ಹಿರಿಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ತೋರಿದ ದಾರಿಯಲ್ಲಿ ಮಠದ ಚಟುವಟಿಕೆಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನೀಡುತ್ತಿರುವ ಸಹಕಾರ ಮರೆಯುವಂಥದ್ದಲ್ಲ.

ಹಿರಿಯ ಗುರುಗಳ ಕಾಲದಿಂದಲೂ ಮಠವು ಕಾಲ, ಕಾಸು, ಕಾಯಕಕ್ಕೆ ಹೆಚ್ಚು ಮಹತ್ವ ಕೊಡುತ್ತಾ ಬಂದಿದೆ. ಅಂದಿನಿಂದಲೂ ಗುರುಗಳು ಭಕ್ತರಿಗೆ ಕೊಡುವುದನ್ನು ಮತ್ತು ದುಡಿಯುವುದನ್ನು ಕಲಿಸಿಕೊಟ್ಟಿದ್ದಾರೆ. ಇಂದು ಮಠದ ಅಭಿವೃದ್ಧಿಗೆ ಭಕ್ತಾದಿಗಳು ಯಾವುದೇ ಒತ್ತಡವಿಲ್ಲದೆ, ತಾವಾಗಿಯೇ ಬಂದು ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ.
ನಮ್ಮ ಮಠದ ಪ್ರತಿಯೊಂದು ಕಾರ್ಯಕ್ರಮಕ್ಕೂ ಕೇವಲ ಒಂದು ಸಮುದಾಯ ಮಾತ್ರವಲ್ಲದೆ, ಎಲ್ಲಾ ವರ್ಗದ ಜನರು ತಮ್ಮ ಕೈಲಾದ ಸಹಾಯ ನೀಡುತ್ತಿರುವುದು ಮಠದ ಮೇಲಿರುವ ಗೌರವಕ್ಕೆ ಸಾಕ್ಷಿಯಾಗಿದೆ.
“ಬೇಡಲಾರದ ಜಂಗಮ, ಬೇಡಿಸಿ ಕೊಡಲಾಗದ ಭಕ್ತ” ಎಂಬ ತತ್ವದಡಿ ಮಠವು ಕಾರ್ಯನಿರ್ವಹಿಸುತ್ತಿದ್ದು, ಧನಸಹಾಯ ನೀಡಿದ ಪ್ರತಿಯೊಬ್ಬ ಭಕ್ತರೂ ರಸೀದಿಯನ್ನು ಪಡೆದುಕೊಳ್ಳಬೇಕು.
ಈ ಬಾರಿ ನವೆಂಬರ್ ೧ ರಿಂದ ೬ ರವರೆಗೆ ಒಟ್ಟು ೬ ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕಬ್ಬಿನಕೆರೆ ಹಾಗೂ ಸುತ್ತಮತ್ತ ಗ್ರಾಮಸ್ಥರು, ಭಕ್ತರು ಸೇರಿದಂತೆ ವಿವಿಧ ಗ್ರಾಮಗಳ ದಾಸೋಹಿಗಳು ಈಗಾಗಲೇ ಅನ್ನದಾನದ ವೆಚ್ಚವನ್ನು ವಹಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ನವೀನಕುಮಾರ ಮಾತನಾಡಿ; ಈ ವರ್ಷ ಎದುರಾಗಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ, ನಾಟಕೋತ್ಸವದ ಯಾವುದಾದರೂ ಒಂದು ದಿನ ನೀರಿನ ಸಂರಕ್ಷಣೆ, ಮಳೆ ನೀರಿನ ಕೊಯ್ಲು ಮತ್ತು ಬರಗಾಲದ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುವ ಕುರಿತು ರೈತರಲ್ಲಿ ಆತ್ಮವಿಶ್ವಾಸ ಹಾಗೂ ಜಾಗೃತಿ ಮೂಡಿಸುವಂತಹ ನಾಟಕವನ್ನು ಆಯ್ಕೆ ಮಾಡಿ ಪ್ರದರ್ಶಿಸಬೇಕೆಂದು ಪೂಜ್ಯರಲ್ಲಿ ವಿನಂತಿಸಿದರು.
ಬರಪೀಡಿತ ಪ್ರದೇಶಗಳಲ್ಲಿ ರೈತರು ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು, ಅತಿಯಾದ ನೀರು ಬೇಡುವ ಅಡಕೆಯಂತಹ ಬೆಳೆಗಳನ್ನು ನಂಬಿ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಹೀಗಾಗಿ, ಲಭ್ಯವಿರುವ ಭೂಮಿಯಲ್ಲಿ ಹಾಗೂ ಕಡಿಮೆ ನೀರಿನಲ್ಲಿ ವೈಜ್ಞಾನಿಕವಾಗಿ ಬೆಳೆ ಬೆಳೆಯುವ ಕುರಿತು ರೈತರಿಗೆ ಸರಿ ಹಾದಿ ತೋರಿಸುವ ಸಾಂಸ್ಕೃತಿಕ ಸಂದೇಶಗಳು ನಾಟಕದ ಮೂಲಕ ತಲುಪಬೇಕಿದೆ ಎಂದು ಅಭಿಪ್ರಾಯಪಡಲಾಯಿತು.
ಮಾಜಿ ಶಾಸಕ ಬೆಳ್ಳಿ ಪ್ರಕಾಶ ಮಾತನಾಡಿ; ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಂತೆ ಈ ಬಾರಿಯ ನಾಟಕೋತ್ಸವವನ್ನು ೬ ದಿನಗಳ ಕಾಲ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ. ನಮ್ಮ ಮಠದ ಭಕ್ತರ ಭಾವನೆಗೆ ಎಂದು ಬರಗಾಲ ಇಲ್ಲ. ಬರಗಾಲದ ನಡುವೆಯೂ ಸಾರ್ವಜನಿಕರಿಗೆ ಹಾಗೂ ರೈತರಿಗೆ ಮಾನಸಿಕ ನೆಮ್ಮದಿ ಮತ್ತು ಜಾಗೃತಿ ನೀಡುವ ನಿಟ್ಟಿನಲ್ಲಿ ನಾಟಕೋತ್ಸವ ಯಶಸ್ವಿಯಾಗಲಿ ಎಂದರು.
ನವೆಂಬರ್ 1 ರಿಂದ 6 ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕಗಳ ಪ್ರದರ್ಶನ ನಡೆಯಲಿವೆ. ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿವೆ. ನಾಟಕೋತ್ಸವದಲ್ಲಿ ಶಿವಸಂಚಾರದ ೩ ನಾಟಕಗಳು ಮತ್ತು ಬೇರೆ ಕಡೆಯಿಂದ ಮೂರು ನಾಟಕಗಳೂ ಸೇರಿದಂತೆ ಒಟ್ಟು 6 ನಾಟಕಗಳು ಪ್ರದರ್ಶನಗೊಳ್ಳುವವು.
ಪ್ರತಿದಿನದ ವಿಚಾರ ಮಾಲಿಕೆ, ವಚನ ಸಂಗೀತ, ನೃತ್ಯರೂಪಕ, ಸಾಧಕರಿಗೆ ಅಭಿನಂದನೆ, ರಾಜಕೀಯ ನೇತಾರರ, ವಿದ್ವಜ್ಜನರ, ಚಿಂತಕರ ಮಾತುಗಳು, ಸ್ವಾಮೀಜಿಗಳ ಆಶೀರ್ವಚನ, ‘ಶಿವಕುಮಾರ ಪ್ರಶಸ್ತಿ’ ಪ್ರದಾನ ಹಾಗೂ ‘ಗುರುಭವನ’ ಉದ್ಘಾಟನೆ ಮುಂತಾದ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿವೆ. ಕರೆಸಬಹುದಾದ ಅತಿಥಿಗಳು, ಸ್ವಾಮೀಜಿಗಳು, ಆಯ್ದುಕೊಳ್ಳಬಹುದಾದ ವಿಚಾರಗಳು, ನಾಟಕಗಳ ಬಗ್ಗೆ ಚರ್ಚಿಸಲಾಯಿತು.
ಸಿದ್ಧಪ್ಪ, ಅಜ್ಜಂಪುರದ ಎ ಸಿ ಚಂದ್ರಣ್ಣ, ಢಣಾಯಕಪುರದ ಗಂಗಾಧರಪ್ಪ, ಸಿದ್ದು ಯಾಪಲಪರವಿ, ಜಾನಕಲ್ ತಿಮ್ಮಜ್ಜ, ಕೆ.ಸಿ. ಶಿವಮೂರ್ತಿ, ಹೆಬ್ಬಳ್ಳಿ ಮಲ್ಲಿಕಾರ್ಜುನ, ದೃವಕುಮಾರ, ಶಾಲಾ ಕಾಲೇಜಿನ ಮುಖ್ಯಸ್ಥರು, ನೌಕರರು, ಸಾಣೇಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ತರೀಕೆರೆ, ಕಡೂರು, ಭದ್ರಾವತಿ, ಜಗಳೂರು, ದಾವಣಗೆರೆ, ಚಿತ್ರದುರ್ಗ ಹೊಸದುರ್ಗ ಶಿವಮೊಗ್ಗ, ಅರಸೀಕೆರೆ ಭಾಗದ ನೂರಾರು ಭಕ್ತರು, ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಲವರು ನಾಟಕೋತ್ಸದ ದೇಣಿಗೆಯನ್ನು ನೀಡಿದರು. ಆರಂಭದಲ್ಲಿ ಸಾಣೇಹಳ್ಳಿ ಅಕ್ಕನಬಳಗದವರು ವಚನಗೀತೆಗಳನ್ನು ಹಾಡಿದರು. ಕಲಾಸಂಘದ ಕಾರ್ಯದರ್ಶಿ ಎಸ್.ಕೆ. ಪರಮೇಶ್ಚರಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ನಿರೂಪಿಸಿ ವಂದಿಸಿದರು.
