‘ಜಗತ್ತಿನ ಶ್ರೇಷ್ಠ ಅನುಭಾವಿ ಅಲ್ಲಮಪ್ರಭು’

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ಅನುಭವಮಂಟಪ ವತಿಯಿಂದ ಪ್ರತಿ ತಿಂಗಳು ನಡೆಯುವ ತಿಂಗಳ ಅನುಭವಮಂಟಪ-21 ಕಾರ್ಯಕ್ರಮ ಸೋಮವಾರ ನಡೆಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡುತ್ತ, ಮನುಷ್ಯನು ತನ್ನ ದೇಹವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಶರಣರು ಇದಕ್ಕೆ ಪ್ರಸಾದ ಕಾಯ ಎಂದು ಕರೆದಿದ್ದಾರೆ. ನಮ್ಮ ದೇಹ ದೇಗುಲ ಮಾಡಿಕೊಳ್ಳಬೇಕೆಂಬುದು ಬಸವಣ್ಣನವರು ಹೇಳುತ್ತಾರೆ. ದೇಹ ದೇವಾಲಯ ಮಾಡಿಕೊಳ್ಳುವುದೆಂದರೆ, ನಮ್ಮ ಜೀವನ ನಿರ್ವ್ಯಸನವಾಗಿ ನಡೆಸುವುದು. ಒಳ್ಳೆಯ ಆಚಾರ-ವಿಚಾರ ಅಳವಡಿಸಿಕೊಳ್ಳುವುದು. ಸದಾಚಾರವೇ ಸ್ವರ್ಗ ಅನಾಚಾರವೇ ನರಕ ಎಂಬುದು ನಾವು ತಿಳದುಕೊಳ್ಳಬೇಕು.

ಅಲ್ಲಮಪ್ರಭುಗಳು ವಚನಗಳ ಹಾಗೂ ಸ್ವರವಚನಗಳ ಮೂಲಕ ನಮಗೆ ಬದುಕುವ ದಾರಿಯನ್ನು ತೋರಿಸಿದ್ದಾರೆ. ಡಾ. ಮೃತ್ಯುಂಜಯ ರುಮಾಲೆ ಅವರು ಅಲ್ಲಮರ ಸ್ವರವಚನ ಅರ್ಥಪೂರ್ಣವಾಗಿ ಅನುಭಾವಿಕ ನೆಲೆಯಲ್ಲಿ ನಿರೂಪಿಸಿದ್ದಾರೆ. ಹಾಗೂ ಅವರ ಉಳ್ಳವರ ಶಿವಾಲಯ, ದೇಹ ದೇಗುಲ ಎಂಬ ಕೃತಿ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಎಂದರು.

ಪೂಜ್ಯ ಶಿವಾನಂದ ಸ್ವಾಮಿಗಳು, ಪೂಜ್ಯ ಸುಗುಣಾತಾಯಿ ಅವರು ಸಮ್ಮುಖ ವಹಿಸಿದರು.

ಡಾ. ಮೃತ್ಯುಂಜಯ ರುಮಾಲೆ ಅವರು ಅನುಭಾವ ನೀಡುತ್ತ, ಅಲ್ಲಮರು ಜಗತ್ತಿನ ಶ್ರೇಷ್ಠ ಅನುಭಾವಿಗಳು. ಅವರ ಎತ್ತರ ನಾವು ಇನ್ನೂ ತಲುಪಲಿಕ್ಕೆ ಸಾಧ್ಯವಾಗಲಿಲ್ಲ. ವಚನಗಳನ್ನು ನಾವು ಅನುಭಾವಿಕ ನೆಲೆಯಲ್ಲಿ ತಿಳದುಕೊಳ್ಳಬೇಕು. ಅಲ್ಲಮರು, ಸಿದ್ಧರಾಮ, ಮುಕ್ತಾಯಕ್ಕ, ಗೊಗ್ಗಯ್ಯ, ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದವರ ಜೊತೆ ನಡೆಸಿದ ಸಂವಾದ ಜಗತ್ತಿನ ಅಧ್ಯಾತ್ಮ ಪರಂಪರೆಯ ಸರ್ವಶ್ರೇಷ್ಠ ಸಂವಾದವಾಗಿದೆ. ಈ ಸಂವಾದಕ್ಕೆ ಜಗತ್ತಿನ ದಾರ್ಶನಿಕರ ಸಂವಾದದ ಜೊತೆ ನಾವು ತೌಲನಿಕ ಅಧ್ಯಯನ ಮಾಡಬಹುದು.

ಅಲ್ಲಮನು ಮಾಯೆಯನ್ನು ಗೆದ್ದು ತಮ್ಮ ದೇಹದಲ್ಲಿ ವಿಕಾರಗಳು ಸುಟ್ಟು ಗುಹೇಶ್ವರ ಲಿಂಗಕ್ಕೆ ಆಗಿದ ಪರಿ ಅನುಭಾವದಿಂದಲೇ ಅನುಭವಿಸಬೇಕು. ಅಲ್ಲಮರ ಬಗ್ಗೆ ಗಂಭೀರ ಚಿಂತನೆ ನಡೆಸಿದಾಗ ಅವರ ಸ್ವರವಚನಗಳ ಆಳ ಅಗಲ ನಮಗೆ ಅರ್ಥವಾಗುತ್ತದೆ. ಅದನ್ನು ಅನುಭವಿಸಿದಾಗ ಅಂಗಾಂಗ ಸಾಮರಸ್ಯದ ಸುಖ ದೊರೆಯುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಡಾ. ಮೃತ್ಯುಂಜಯ ರುಮಾಲೆ ಅವರು ಬರೆದ ಉಳ್ಳವರ ಶಿವಾಲಯ, ದೇಹ ದೇಗುಲ ಕೃತಿಯ ಲೋಕಾರ್ಪಣೆ ಪೂಜ್ಯ ಗುರುಬಸವ ಪಟ್ಟದ್ದೇವರಿಂದ ನಡೆಯಿತು.

ಡಾ. ಸೋಮನಾಥ ಯಾಳವಾರ ಅವರು ಗ್ರಂಥ ಪರಿಚಯ ಮಾಡಿಕೊಟ್ಟರು.

ಸುರೇಶ ಅಕ್ಕಣ್ಣ, ಸೂರ್ಯಕಾಂತ ಪಾಟೀಲ, ನಾಗಪ್ಪ ನಿಣ್ಣೆ ಉಪಸ್ಥಿತರಿದ್ದರು.

ರಾಜು ಜುಬರೆ ಸ್ವಾಗತಿಸಿದರು. ಅಂಬರೀಷ ಭಿಮಾಣಿ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *