ಸಾಣೇಹಳ್ಳಿ ಸ್ವಾಮೀಜಿ ಸಾನಿಧ್ಯದಲ್ಲಿ ಗಿಡನಾಟಿ ಕಾರ್ಯಕ್ರಮ

ಸಾಣೇಹಳ್ಳಿ:

ಕಾಡನ್ನು ಕಡಿದು ನಾಡನ್ನು ಸುಧಾರಣೆ ಮಾಡಲು ಹೊರಟರೆ ಸಮಾಜದಲ್ಲಿ ನೆಮ್ಮದಿ ಸಿಗಲು ಸಾಧ್ಯವಿಲ್ಲ, ವೃಕ್ಷ ಸಂಪತ್ತನ್ನು ಬೆಳೆಸಿ ರಕ್ಷಿಸಿದರೆ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಇಲ್ಲಿನ ಶಿವಕುಮಾರ ವನದಲ್ಲಿ ಆಯೋಜಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹಾಲು ರಾಮೇಶ್ವರ ಯೋಜನಾ ಕಛೇರಿಯ ಆಶ್ರಯದಲ್ಲಿ ನಡೆದ ಸಾಮಾಜಿಕ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪರಿಸರ ನಾಶದಿಂದಲೇ ಇಂದು ದೇಶಾದ್ಯಂತ ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಸವಾಲುಗಳು ಎದುರಾಗುತ್ತಿವೆ. ಪಶ್ಚಿಮ ಘಟ್ಟಗಳಂತಹ ಜೀವವೈವಿಧ್ಯದ ತಾಣಗಳನ್ನು ಯಥಾವತ್ತಾಗಿ ರಕ್ಷಿಸಿದರೆ ಮಾತ್ರ ನಮ್ಮ ನದಿಗಳು ಮತ್ತು ಜೀವಜಂತುಗಳು ಜೀವಂತವಾಗಿರಲು ಸಾಧ್ಯ.

ಅಭಿವೃದ್ಧಿಯ ಹೆಸರಿನಲ್ಲಿ ಸುರಂಗ ತೋಡುವುದು ಹಾಗೂ ಕಾಡು ನಾಶ ಮಾಡುವುದರಿಂದ ಪ್ರಕೃತಿಗೆ ದೊಡ್ಡ ಮಟ್ಟದ ಧಕ್ಕೆಯಾಗಲಿದೆ. 

ಕಾಡು ಎಂದರೆ ಕೇವಲ ಮರಗಳಲ್ಲ, ಪ್ರಾಣಿ-ಪಕ್ಷಿಗಳು ಹಾಗೂ ವಿವಿಧ ಜೀವಜಂತುಗಳಿರುವ ಸಮೃದ್ಧ ವನ. ವನವಿದ್ದರೆ ಮಾತ್ರ ಭವಿಷ್ಯದ ಬದುಕಿಗೆ ರಕ್ಷಣೆ. 

ಪ್ರತಿಯೊಬ್ಬ ವಿದ್ಯಾರ್ಥಿಯೂ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನು ನೆಟ್ಟು, ಅದಕ್ಕೆ ನೀರು-ಗೊಬ್ಬರ ಹಾಕಿ ಸಂರಕ್ಷಿಸುವ ಸಂಕಲ್ಪ ಮಾಡಬೇಕು. ಗಿಡಗಳನ್ನು ಬೆಳೆಸಿದರೆ ಅವು ಮುಂದಿನ ಪೀಳಿಗೆಗೆ ಆಸರೆಯಾಗಲಿವೆ. 

ಶ್ರೀ ಧರ್ಮಸ್ಥಳ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ದಶಲಕ್ಷ ವೃಕ್ಷಾರೋಹಣ ಹಾಗೂ ಕೆರೆಗಳ ಹೂಳೆತ್ತುವ ಸೇವೆಯಂತಹ ಪರಿಸರ ಕಾಳಜಿಯ ಕಾರ್ಯಕ್ರಮಗಳು ಅಭಿನಂದನೀಯ. 

ಪ್ರಕೃತಿಯ ಮುಂದೆ ಮಾನವನ ಆಟ ನಡೆಯುವುದಿಲ್ಲ. ಪಂಚಭೂತಗಳಾದ ಭೂಮಿ, ನೀರು, ಗಾಳಿ, ಆಕಾಶ ಮತ್ತು ಬೆಂಕಿಯ ಸಮತೋಲನವನ್ನು ಕಾಯ್ದುಕೊಳ್ಳುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಎಸ್. ಸಿದ್ದಪ್ಪ; 1960ರ ದಶಕದಲ್ಲಿದ್ದ ಗ್ರಾಮದ ಸ್ಥಿತಿಗೆ ಹೋಲಿಸಿದರೆ ಇಂದು ಸಾಣೇಹಳ್ಳಿ ಸಾಕಷ್ಟು ಪ್ರಗತಿ ಕಂಡಿದೆ. ಹಿಂದೆ ಮುಳ್ಳುಕಂಠಿ ಹಾಗೂ ಹೂಳಿನಿಂದ ತುಂಬಿ ಕಲುಷಿತಗೊಂಡಿದ್ದ ಗ್ರಾಮದ ಕೆರೆಯನ್ನು ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹಾಗೂ ಪಂಡಿತಾರಾಧ್ಯ ಶ್ರೀಗಳ ಆಶೀರ್ವಾದದೊಂದಿಗೆ ಸಂಪೂರ್ಣವಾಗಿ ಹೂಳೆತ್ತಿ ಸ್ವಚ್ಛಗೊಳಿಸಲಾಗಿದೆ. 

ಯೋಜನಾಧಿಕಾರಿ ಚಂದ್ರಶೇಖರ ಮಾತನಾಡಿ; “ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗಿ ಕಾಂಕ್ರೀಟ್ ನಾಡು ಹೆಚ್ಚಾಗುತ್ತಿದೆ. ಕಾಡಿನಲ್ಲಿ ಹಣ್ಣಿನ ಗಿಡಮರಗಳ ಕೊರತೆಯಿಂದಾಗಿ ವನ್ಯಜೀವಿಗಳು ಹಾಗೂ ಮಂಗಗಳು ಆಹಾರ ಅರಸಿ ನಾಡಿಗೆ ಬಂದು ತೊಂದರೆ ನೀಡುತ್ತಿವೆ. ಈ ಸಮಸ್ಯೆಗೆ ಪರಿಹಾರವಾಗಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ‘ದಶಲಕ್ಷ ಸಸಿ ನೆಡುವ’ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ೬ ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ಹೊಸದುರ್ಗ ತಾಲೂಕಿನಲ್ಲೂ ಸಕ್ರಿಯವಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ” ಎಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಂಗರಾಜ; ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಸಾಮಾಜಿಕ ಅರಣ್ಯೀಕರಣ ಅತ್ಯಂತ ಅವಶ್ಯಕವಾಗಿದ್ದು, ಈ ಭಾಗದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಹೊಸದುರ್ಗ ತಾಲೂಕಿನಲ್ಲಿ ಸಾಣೇಹಳ್ಳಿ ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಮುಂಬರುವ ದಿನಗಳಲ್ಲೂ ಧರ್ಮಸ್ಥಳ ಸಂಘದ ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಮತ್ತು ಪೂಜ್ಯ ಪಂಡಿತಾರಾಧ್ಯ ಶ್ರೀಗಳ ಆಶೀರ್ವಾದದೊಂದಿಗೆ ಪೂರ್ಣ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ಕೆರೆ ಸಮಿತಿಯ ಅಧ್ಯಕ್ಷ ಎಸ್. ಆರ್. ಮಂಜುನಾಥ ಮಾತನಾಡಿ; “ಸಾಣೇಹಳ್ಳಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಡೆಯಬೇಕೆಂದರೂ ಪೂಜ್ಯರ ಆಶೀರ್ವಾದ ಮತ್ತು ಮಾರ್ಗದರ್ಶನವೇ ಮುಖ್ಯ ಕಾರಣ. ಧರ್ಮಸ್ಥಳ ಸಂಘದವರು ಹಾಗೂ ಪೂಜ್ಯ ಹೆಗ್ಗಡೆಯವರ ಸಹಕಾರದಿಂದ ಗ್ರಾಮದ ಕೆರೆಯನ್ನು ಅತ್ಯಂತ ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ” ಎಂದು ಹರ್ಷ ವ್ಯಕ್ತ ಪಡಿಸಿದರು.

ಕೃಷಿ ಮೇಲ್ವಚಾರಕ ಉಮೇಶ್ ಜಿ. ಸ್ವಾಗತಿಸಿ ನಿರೂಪಿಸಿದರು‌. ಅಕ್ಕನ ಬಳಗದ ಮಮತ, ಶಕುಂತಲ, ರತ್ನಮ್ಮ, ರಾಣಿ ವಚನಗೀತೆಗಳನ್ನು ಹಾಡಿದರು. ಸತೀಶ, ಷಡಾಕ್ಷರಿ, ಧನ್ಯ, ಪ್ರಜ್ವಲ್,  ಸಿದ್ದಮರಿ, ಮಂಜಯ್ಯ, ವಿರೂಪಾಕ್ಷಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *