‘ಬಯಲನ್ನೆ ಉಟ್ಟು ಸ್ತ್ರೀಕುಲದ ಸ್ವಾಭಿಮಾನದ ಪ್ರತೀಕವಾದ ಅಕ್ಕ’

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು:

ಪ್ರಥಮ ಮಹಾಕವಿ ಪಂಪ, ಪ್ರಥಮ ಶ್ರೇಷ್ಠ ಕವಯತ್ರಿ, ವೀರ ವಿರಾಗಿಣಿಯೆನಿಸಿದ ವೈರಾಗ್ಯ ನಿಧಿ ಅಕ್ಕಮಹಾದೇವಿ, ಕನ್ನಡ ಕಾವ್ಯಲೋಕದಲ್ಲಿ ಸದಾ ಸರ್ವದಾ ಪ್ರಾತಃಸ್ಮರಣೀಯರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ, ಕವಿ ಡಾ.ಜಯಪ್ಪ ಹೊನ್ನಾಳಿ ಹೇಳಿದರು.

ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನವು, ನಮನ ಕಲಾ ಮಂಟಪದಲ್ಲಿಂದು ಏರ್ಪಡಿಸಿದ್ದ ವಿಚಾರಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ವೈರಾಗ್ಯ ನಿಧಿ ಅಕ್ಕಮಹಾದೇವಿಯ ಕುರಿತು ಉಪನ್ಯಾಸ ನೀಡಿದರು.

ನಿರ್ವಾಣ ಶರೀರಿಯಾದ ಅಕ್ಕ, ಪುರುಷ ರಾಜಕಾರಣದ ವಿರುದ್ಧ ಪ್ರಥಮ ಬಂಡಾಯಗಾರ್ತಿಯಾಗಿ ಹೊರಹೊಮ್ಮಿ, ಬೆಳಕನ್ನೇ ತೊಟ್ಟು, ಬಯಲನ್ನೆ ಉಟ್ಟು ನಿಂತವಳು, ಈ ಸಂಸಾರದ ನೋಟ, ಕೂಟ, ಊಟ, ಆಟಗಳವಳಿಗೆ ಹಿಡಿಸಲಿಲ್ಲ, ಸ್ತ್ರೀಕುಲದ ಸ್ವಾಭಿಮಾನದ ಪರಮ ಪ್ರತೀಕವಾದ ಅವಳು, ತಾನು ಪ್ರತಿನಿಧಿಸುವ ಮಹಿಳಾಲೋಕದ ಉದ್ಧಾರಕ್ಕಾಗಿ ಉದಯಿಸಿದವಳು.

ಅವಳು ಅಕ್ಷರಶಃ ಕಾಲಾತೀತ ಚಿತ್ಕಳಾದೀಪ್ತಿ, ಸೌಂದರ್ಯದ ಹಂಗು ಹರಿದೊಗೆದು ಜಗ ಬೆಳಗಿದ ಕದಳಿಯ ಕರ್ಪೂರ ಎಂದರು.

ಕರುನಾಡ ಕನ್ನಡ ಜಗತ್ತು ತನ್ನ ಕೊರಳಿನಿಂದಲ್ಲದೆ ಕರುಳಿನಿಂದ ‘ಅಣ್ಣಾ’, ‘ಅಕ್ಕಾ,’ ಎಂದು ಕರೆದದ್ದು ಇದುವರೆಗೂ ಬಸವಣ್ಣ ಹಾಗೂ ಅಕ್ಕಮಹಾದೇವಿ ಈ ಇಬ್ಬರನ್ನೇ, ಈ ಇಬ್ಬರೂ ಅರಮನೆಯ ತೊರೆದು, ನೆರಮನೆಗಳ ಮನಗಳುದ್ಧಾರಕ್ಕೆ ತಮ್ಮನ್ನೇ ತಾವು ಸಮರ್ಪಿಸಿಕೊಂಡು, “ಶರಣ ಸತಿ, ಲಿಂಗ ಪತಿ” ಎಂಬುದನ್ನು ಸಂಪೂರ್ಣ ಬದುಕಿ-ಬರೆದವರು, ಮರ್ತ್ಯರ ಜೊತೆಗಿದ್ದೂ ಅಮರ್ತ್ಯರಾದವರೆಂದು ಶ್ಲಾಘಿಸಿದರು.

ಶ್ರೀ ಬಸವ ಜ್ಞಾನ ಮಂದಿರದ ಪೀಠಾಧ್ಯಕ್ಷರಾದ ಡಾ. ಮಾತೆ ಬಸವಾಂಜಲಿದೇವಿ ಸಾನಿಧ್ಯ ವಹಿಸಿದ್ದರು.

ವಿಶ್ರಾಂತ ಮುಖ್ಯ ಶಿಕ್ಷಕಿ ಮಂಗಳಾ ಮುದ್ದುಮಾದಪ್ಪ ಸಸಿಗೆ ನೀರೆರೆವ ಮೂಲಕ ಸಮಾರಂಭದ ಉದ್ಘಾಟನೆ ಮಾಡಿದರೆ, ಹಿರಿಯ ಸಮಾಜ ಸೇವಕರಾದ ಡಾ.ಕೆ. ರಘುರಾಂ ವಾಜಪೇಯಿ ಪುಷ್ಪಾರ್ಚನೆ ಮಾಡಿ ಶುಭಹಾರೈಸಿದರು. ವಿಶೇಷ ಆಹ್ವಾನಿತರಾಗಿ ಲಯನ್ ಗೋಲ್ಡನ್ ಟಿ. ಸುರೇಶ್ ಉಪಸ್ಥಿತರಿದ್ದರು.

ಹೇಮರೆಡ್ಡಿ ಮಲ್ಲಮ್ಮನ ಕುರಿತು ನಂಜನಗೂಡಿನ ಶರಣ ಸಂಸ್ಕೃತಿ ಚಿಂತಕ ಬಸವಯೋಗೇಶ, ಬೆಳವಾಡಿ ಮಲ್ಲಮ್ಮನ ಕುರಿತು ನಂಜನಗೂಡಿನ ವಿಶ್ರಾಂತ ಮುಖ್ಯ ಶಿಕ್ಷಕ ನೀಲಕಂಠಪ್ಪ, ಕೆಳದಿ ಚೆನ್ನಮ್ಮನ ಕುರಿತು ವಿಶ್ರಾಂತ ಉಪನ್ಯಾಸಕ ನಾಗಪ್ಪ ನಂಜನಗೂಡು, ರಾಣಿ ಚೆನ್ನಮ್ಮನ ಕುರಿತು, ನಂಜನಗೂಡಿನ ವಿಶ್ರಾಂತ ಮುಖ್ಯ ಶಿಕ್ಷಕ ರೇವಣ್ಣ ಮಾತನಾಡಿದರು.

ಸಾಧಕಿಯರಾದ ಶರಣ ತತ್ವ ಪ್ರಚಾರಕಿ ಎಸ್. ಜ್ಯೋತಿ ಸುರೇಶ, ಶಿಕ್ಷಣ ಕ್ಷೇತ್ರದ ಸಾಧಕಿಯರಾದ ವಸಂತಕುಮಾರಿ ರೇವಣ್ಣ, ಪ್ರೊ. ಪ್ರೇಮಲೀಲಾ ಮಲ್ಲಣ್ಣ, ಶ್ಯಾಮಲ ಎಸ್. ಕೃಷ್ಣ, ಸಮಾಜ ಸೇವಾಕ್ಷೇತ್ರದ ಲತಾ ಷಣ್ಮುಖಪ್ಪ ಇವರುಗಳಿಗೆ ಕ್ರಮವಾಗಿ, ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಬೆಳವಾಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ, ಮೈಸೂರು ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ನಿರೂಪಿಸಿದರು. ಆರ್. ಕೆ. ಸ್ವಾಮಿ ಸ್ವಾಗತಿಸಿದರು. ಚನ್ನಬಸಪ್ಪ ದಂಪತಿಗಳು ವಚನ ಗಾಯನ ಮಾಡಿದರು. ಪ್ರೊ. ಎಸ್. ಮಲ್ಲಣ್ಣ, ಗುರುಮಲ್ಲೇಶ, ಸುಶೀಲಾ, ಸುಮ, ವೀರಭದ್ರಸ್ವಾಮಿ, ರೇಖಾ, ಪಂಚಾಕ್ಷರಿ ಮೊದಲಾದವರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಮಹಿಳೆಯರಿಗೆ ಶರಣರ ವಿಚಾರಗಳು ಹೆಚ್ಚು ಹೆಚ್ಚು ತಿಳಿಯ ಬೇಕಿದೆ. ಇದೊಂದು ಉತ್ತಮ ಕಾರ್ಯಕ್ರಮ.

Leave a Reply

Your email address will not be published. Required fields are marked *