75 ತುಂಬಿದ ಪಂಡಿತಾರಾಧ್ಯ ಸ್ವಾಮೀಜಿ ಅವರ ‘ಅಮೃತ ಮಹೋತ್ಸವ’
ಚಿತ್ರದುರ್ಗ
75 ವರ್ಷ ತುಂಬಿದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ವಿವಿಧ ಮಠಾಧೀಶರು ಆಯೋಜಿಸಿದ್ದ ‘ಅಮೃತ ಮಹೋತ್ಸವ’ದಲ್ಲಿ ಅಭಿನಂದಿಸಲಾಯಿತು.
ಶುಕ್ರವಾರ ಪತ್ರಕರ್ತರ ಸಭಾಂಗಣದಲ್ಲಿ ಕಿಕ್ಕಿರಿದ ಭಕ್ತವೃಂದದ ಸಮ್ಮುಖದಲ್ಲಿ ಹೂಮಳೆ ಸುರಿಸಲಾಯಿತು. ಹೂವಿನ ಪುಟ್ಟಿಗಳ ಕೈಲಿಡಿದ ವಿವಿಧ ಮಠಾಧೀಶರು ಪೂಜ್ಯರ ಮೇಲೆ ಸುರಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸ್ವಾಮೀಜಿ ನೂರು ವರ್ಷ ಬದುಕಬೇಕು ಎನ್ನುವುದು ನಮ್ಮ ಉದ್ದೇಶವಲ್ಲ, ಸತ್ಕಾರ್ಯ ಮಾಡಲು ಸಾಧ್ಯವಾಗುವಷ್ಟು ಆರೋಗ್ಯ ಚೆನ್ನಾಗಿರುವವರೆಗೆ ಬದುಕಿದರೆ ಸಾಕು.

‘ಕಾವಿ ಧರಿಸಿದ ತಕ್ಷಣ ಯಾರೂ ಸ್ವಾಮಿಗಳಾಗುವುದಿಲ್ಲ, ದೇಹಕ್ಕೆ ಕಾವಿ ಬಟ್ಟೆ ಧರಿಸುವುದಕ್ಕಿಂತ ಮನಸ್ಸಿಗೆ ಕಾವಿ ತೊಡುವುದು ಮುಖ್ಯ. ಸ್ವಾಮೀಜಿಯಾದವರು ಸಮಾಜದ ನೋವುಗಳಿಗೆ ಸ್ಪಂದಿಸಿ, ಸೇವಾ ಕಾರ್ಯಗಳ ಮೂಲಕ ಸಮಾಜದ ಘನತೆ ಎತ್ತಿ ಹಿಡಿಯಬೇಕು.
ವ್ಯಕ್ತಿ ಎಷ್ಟು ವರ್ಷ ಬದುಕುತ್ತಾನೆ ಎನ್ನುವುದು ಮುಖ್ಯವಲ್ಲ ಹೇಗೆ ಬದುಕುತ್ತಾನೆ ಎನ್ನುವುದು ಮುಖ್ಯ ಎ೦ದರು.
ಪಿಯುಸಿ, ಡಿಗ್ರಿಯಲ್ಲಿ ಫೇಲಾಗಿದ್ದೆ. ಎಲ್ಲರೂ ಪಾಸಾದರೆ ಫೇಲಾಗುವವರು ಯಾರು ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ಮೈಸೂರು ವಿವಿಯಲ್ಲಿ ತತ್ವಶಾಸ್ತ್ರ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ನೆನಪು ಮಾಡಿಕೊಂಡರು.

ಹಿರಿಯ ಗುರುಗಳ ಆಶೀರ್ವಾದ ನನನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದು ಭಾವುಕರಾದ ಶ್ರೀಗಳು ಈವರೆಗಿನ ಆತ್ಮಾವಲೋಕನ ಮಾಡಿಕೊಂಡಾಗ ಸಾಧನೆ ಶೂನ್ಯ ಎನಿಸುತ್ತದೆ.
ಗುರುಗಳ ಪ್ರೀತಿಯಿಂದ ನಮ್ಮ ಜ್ಞಾನ ಭಂಡಾರ ವಿಸ್ತಾರವಾಯಿತು. ಎಂಥದ್ದೇ ಸಂದರ್ಭವನ್ನು ಧೈರ್ಯದಿಂದ ಎದುರಿಸುವ ಗಟ್ಟಿತನ ಮೈಗೂಡಿತು. ನ್ಯಾಯ, ನಿಷ್ಠೆ ಸದಾ ಆನಂದ ನೀಡುತ್ತದೆ. ಲೋಕವೇ ವಿರೋಧಿಸಿದರೂ ಶರಣರು ಯಾರಿಗೂ ಅಂಜಬೇಕಿಲ್ಲ. ಈ ಧೈರ್ಯ ಹಾಗೂ ಗಟ್ಟಿತನವನ್ನು ನಮಗೆ ಗುರುಗಳು ಮತ್ತು ಬಸವಾದಿ ಶಿವಶರಣರು ನೀಡಿದ್ದಾರೆ, ಎಂದು ಹೇಳಿದರು.
ವೇದಿಕೆಯ ಮೇಲೊಂದು ಹೊರಗಡೆ ಮತ್ತೊಂದಾಗದೆ ನೇರ ಮತ್ತು ನಿಷ್ಠುರ ನಡೆ ನಮ್ಮದಾಗಿದೆ. ನವೆಂಬರ್ 1 ರಿಂದ 6ರವರೆಗೆ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ ವಿಶೇಷವಾಗಿ ನಡೆಯಲಿದ್ದು ಡಾಕ್ಟರ್ ಗುರುಗಳು ಭಾಗವಹಿಲಿದ್ದಾರೆ ಎಂದು ಹೇಳಿದರು.

‘ಸಾಣೇಹಳ್ಳಿ ಶ್ರೀಗಳು ಎಲ್ಲ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಸರಳವಾಗಿ ಜನರಿಗೆ ಸಿಗುವ ಅವರು, ಬಂಡಾಯದ ಮೂಲಕ ಬೆಳೆದು ಬಂದವರು. ವಚನ ಝೇಂಕಾರ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ನಾಡಿನ ಗಮನ ಸೆಳೆದಿದ್ದಾರೆ’ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.
‘ಪಂಡಿತಾರಾಧ್ಯ ಶ್ರೀಗಳು ಅತ್ಯಂತ ಶಿಸ್ತಿನ ಮಠಾಧೀಶರಾಗಿದ್ದು, ವಿಚಾರ ಮತ್ತು ವ್ಯವಹಾರ ಎರಡರಲ್ಲೂ ಕಠಿಣ ತತ್ವಗಳನ್ನು ಪಾಲಿಸುತ್ತಾರೆ. ಪ್ರತಿದಿನ ಬರುವ ಕಾಣಿಕೆಯನ್ನೂ ಲೆಕ್ಕ ಹಾಕಿ ದಾಖಲಿಸುವ ಶಿಸ್ತನ್ನು ರೂಢಿಸಿಕೊಂಡಿದ್ದಾರೆ’ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ ಮಠ ಮತ್ತು ಗ್ರಾಮವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಬೆಳೆಸಿರುವ ಪಂಡಿತಾರಾಧ್ಯ ಶ್ರೀಗಳು ಕಷ್ಟದ ಸಂದರ್ಭಗಳಲ್ಲಿಯೂ ತತ್ವಗಳನ್ನು ಬಿಟ್ಟುಕೊಟ್ಟವರಲ್ಲ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

‘ಸಾಮಾಜಿಕ ಸುಧಾರಣೆ ಹಾಗೂ ಮಾನವೀಯ ಮೌಲ್ಯಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ತಲುಪಿಸಿದ ಶ್ರೀಗಳ ಸೇವೆ ಅವಿಸ್ಮರಣೀಯ. ರಂಗಭೂಮಿ ಮತ್ತು ನಾಟಕವನ್ನು ಸಮಾಜ ಸುಧಾರಣೆಯ ತಪಸ್ಸಿನಂತೆ ಬಳಸಿಕೊಂಡಿರುವ ಅವರ ವ್ಯಕ್ತಿತ್ವ ಮಾದರಿಯಾಗಿದೆ’ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಪೂಜ್ಯರ ಮೂರು ಕೃತಿಗಳನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಿದ್ದಯ್ಯನಕೋಟೆ ಬಸವಲಿಂಗ ಸ್ವಾಮೀಜಿ, ಯಾದವಾನಂದ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಅಪ್ಪಣ್ಣ ಸ್ವಾಮೀಜಿ, ವನಕಲ್ಲು ರಮಾನಂದ ಸ್ವಾಮೀಜಿ, ಬಸವಭೂಷಣ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಎ.ವಿ.ಉಮಾಪತಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಇದ್ದರು.
