ಬಿದರಿಗೆ ಸಭೆಯಲ್ಲೇ ವಿರೋಧ; ಎಂ ಬಿ ಪಾಟೀಲ್ ಜೊತೆ ಜಟಾಪಟಿ
ಬೆಂಗಳೂರು
“ನಾನು ವೀರಶೈವ ಮಹಾಸಭೆಯಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ, ಆದರೆ ರಾಜಿನಾಮೆ ಕೊಡಲು ಸಿದ್ದ,” ಎಂದು ವೀರಶೈವ ಮಹಾಸಭೆಯ ರಾಜ್ಯಧ್ಯಕ್ಷ ಶಂಕರ ಬಿದರಿ ಸೋಮವಾರ ಹೇಳಿದರು.
ಬಸವ ನಿಂದಕ ರವಿ ಹಂಜ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿ ವಿವಾದವೆಬ್ಬಿಸಿರುವ ಬಿದರಿ ತಮ್ಮ ಪ್ರತಿಕ್ರಿಯೆ ನೀಡಲು ಇಂದು ವೀರಶೈವ ಮಹಾಸಭಾದ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು.
ಸುದ್ದಿಗೋಷ್ಠಿ ಮುಗಿಯುತ್ತಿದ್ದ ಹಾಗೆಯೇ ಮಹಾಸಭೆ ರಾಜ್ಯ ಘಟಕದ ಉಪಾಧ್ಯಕ್ಷ ಹರೀಶ ಆರಾಧ್ಯ ಎದ್ದು ನಿಂತು ಪತ್ರಕರ್ತರ ನಡುವೆಯೇ ಬಿದರಿಯವರ ರಾಜೀನಾಮೆ ಕೇಳಿದರು.
“ನೀವು ಬಸವಣ್ಣನ ಅಭಿಮಾನಿಯಾಗಿದ್ದರೆ, ನಮ್ಮ ಸಮಾಜ ಉಳಿಯಬೇಕಿದ್ದರೆ, ನೀವು ತಕ್ಷಣ ರಾಜೀನಾಮೆ ಕೊಡಬೇಕು,” ಎಂದು ಕೂಗಿದರು.
ಈ ಅನಿರೀಕ್ಷಿತ ಬೆಳವಣಿಗೆಯಿಂದ ಗೊಂದಲಕ್ಕೊಳಗಾದ ಬಿದರಿ ‘ಆಯಿತು, ಆಯಿತು’ ಎಂದು ಹೇಳಿದರು.
ನಂತರ ಸಭಾಂಗಣದ ಹೊರಗಡೆ ಪತ್ರಕರ್ತರೊಂದಿಗೆ ಮಾತನಾಡುತ್ತಾ,”ನನ್ನನ್ನು ಆಗಿನ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಕರಪ್ಪ, ಪ್ರಧಾನ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರು ಅವಿರೋಧವಾಗಿ ಆರಿಸಿದ್ದಾರೆ.
ನನ್ನನ್ನು ಆರಿಸಿದವರು ಕೇಳಿದರೆ ತಕ್ಷಣ ರಾಜಿನಾಮೆ ಕೊಡ್ತೀನಿ. ನನಗೆ ಯಾವ ಪದವಿಯೂ ಬೇಕಾಗಿಲ್ಲ, ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿದ್ದೀನಿ, ಶಂಕರ್ ಬಿದರಿ ಅನ್ನೋ ಹೆಸರಿದ್ದರೆ ಸಾಕು.
ಮಹಾಸಭೆಯಲ್ಲಿ ಎಲ್ಲಿಯೂ ಒಡಕಿಲ್ಲ, ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ,” ಎಂದು ಹೇಳಿದರು.
ಎಂ.ಬಿ ಪಾಟೀಲ್ ವಿರುದ್ಧ ಕಿಡಿ
ಸುದ್ದಿಗೋಷ್ಠಿಯಲ್ಲಿ ಬಿದರಿ ಸಮಾಜ ಒಡೆದು ಮುಖ್ಯಮಂತ್ರಿ ಆಗಲು ಎಂ.ಬಿ ಪಾಟೀಲ್ ಹೊರಟ್ಟಿದ್ದಾರೆ ಎಂದು ಬಿದರಿ ಕಿಡಿಕಾರಿದರು.
ಎಂ.ಬಿ ಪಾಟೀಲ್ ನನ್ನನ್ನ ಕೊಂಡಿಮಂಚಣ್ಣ ಅಂತಾರೆ. 72 ವರ್ಷದಿಂದ ನಾನು ಬಸವಣ್ಣನ ಸೇವೆ ಮಾಡುತ್ತಾ ಬಂದಿದ್ದೇನೆ. ನನ್ನ ಕನಸಿನಲ್ಲೂ ನಾನು ಬಸವಣ್ಣನ ವಿರುದ್ದ ಮಾತನಾಡಿಲ್ಲ.
ನಾನು ಬಸವಣ್ಣರನ್ನ ಬಗ್ಗೆ ಕೆಟ್ಟದಾಗಿ ಬಯಸಿದ್ರೇ ನಾನು ಶರಣರ ಸಾಕ್ಷಿಯಾಗಿ ನಾಶವಾಗ್ತೀನಿ, ಅವರು ರಾಜಕೀಯ ಲಾಭಕ್ಕೆ ಮಾತನಾಡಿದ್ರೇ ಅವರು ಏನಾಗಬೇಕು ಅಂತ ಸಮಾಜ ನಿರ್ಧಾರ ಮಾಡಲಿ, ಎಂದರು.
ಈ ಬಸವ ಮಂಟಪ ಕೃತಿಯಲ್ಲಿ ವೀರಶೈವ, ಲಿಂಗಾಯತ ಎರಡೂ ಒಂದೇ ಎನ್ನುವ ವಿಚಾರ ಇದೆ. ಇದೇ ಕಾರಣಕ್ಕೆ ನಾನು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿದು ಬಂದ ಹಂಜ್ ಈ ರೀತಿ ಮಾತನಾಡಿದ್ದಾರೆ ಎಂದು ಗೊತ್ತಾಯ್ತು. ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಅಥವಾ ಬರೆಯುವುದು ಗಂಭೀರ ಅಪರಾಧವಾಗಿದ್ದು, ರವಿ ಹಂಜ್ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಪ್ರತ್ಯೇಕ ಲಿಂಗಾಯತ ಧರ್ಮವನ್ನು ಬಯಸುವವರು ತಮ್ಮ ಧರ್ಮವನ್ನು ಆಚರಿಸಲಿ. ಆದರೆ ಸಮಾಜದ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಬದಲು ಬಡತನ, ಅನಕ್ಷರತೆ ಮತ್ತು ದಾರಿದ್ರ್ಯದಂತಹ ಸಮಸ್ಯೆಗಳ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದರು.
ಬಸವಣ್ಣ ಅಂದ್ರೇ ನಾನು ಮುಂದಿರುತ್ತೇನೆ. ಬಸವಣ್ಣನ ತತ್ವಗಳು ಸಂವಿಧಾನದಲ್ಲಿ ಇವೆ. ಬಸವಣ್ಣ ಕೇವಲ ಲಿಂಗಾಯತದವ ಮಾತ್ರವಲ್ಲ, 800 ಕೋಟಿ ಜೀವರಾಶಿಗೆ ಬೇಕು.
ಬಿದರಿ ಅಪ್ಪಟ ಸುಳ್ಳುಗಾರ
ಬಿದರಿ ಸುದ್ದಿಗೋಷ್ಠಿ ಮುಗಿದ ನಂತರ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
“ಬಸವಣ್ಣನನ್ನು ಹೀಯಾಳಿಸಿರುವ ವ್ಯಕ್ತಿ ಜೊತೆ ಕೈಜೋಡಿಸಿರುವ ಇವರು, ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಉಳಿಸಿಕೊಳ್ಳುವ ಕನಿಷ್ಟ ಸೌಜನ್ಯವೂ ಇಲ್ಲದೆ ಅಸಂಬದ್ಧವಾಗಿ ಮಾತನಾಡುತ್ತಾರೆ.
ರಾಜಕಾರಣಿಗಳು ಏನು ಬೇಕಾದರೂ ಮಾತನಾಡುತ್ತಾರೆ ಎನ್ನುವ ಇವರು 3-4 ಪಕ್ಷಗಳನ್ನು ಬದಲಾಯಿಸಿ, ಚುನಾವಣೆಗೆ ನಿಂತು, ಠೇವಣಿ ಕಳೆದುಕೊಂಡಿರುವ ಹೀನ ಮನಸ್ಸಿನ ವ್ಯಕ್ತಿಯಿಂದ ನಮ್ಮ ಸಮಾಜಕ್ಕೆ ಉಪದೇಶದ ಅವಶ್ಯಕತೆಯಿಲ್ಲ.
ನಮ್ಮ ಪೂರ್ವಜರು ಸಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನೇ ಲಿಂಗರಾಜ ಫಂಡ್ ಮೂಲಕ ಸಮಾಜದ ಒಳಿತಿಗೆ-ಶಿಕ್ಷಣಕ್ಕೆ ದಾನ ನೀಡಿದವರು.
ಲಿಂಗರಾಜ ಫಂಡ್ ಮೂಲಕ ಶಿಕ್ಷಣ ಪಡೆದ ಬಿದರಿಯ ಎಲ್ಲಾ ದಾನಗಳೂ ಗೊತ್ತಿವೆ.
ವಚನಪಿತಾಮಹ ಫ.ಗು. ಹಳಕಟ್ಟಿಯವರ ಕುರಿತು ನಾನು ಮಾಡಿರುವ ಕಾರ್ಯಗಳನ್ನು ಇಡೀ ನಾಡೇ ಗಮನಿಸುತ್ತಿದೆ, ಇವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ.
ತಾನು ಸತ್ಯವಂತ, ಬಸವಣ್ಣ ಅನುಯಾಯಿ ಎಂದೆಲ್ಲಾ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಬಿದರಿ ಬಗ್ಗೆ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಇವರು ಮಾಡಿರುವ ಅನಾಚಾರಗಳು, ಅನೈತಿಕ ಅವಾಂತರಗಳು ಮತ್ತು ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಜನರಿಗೆ ತಿಳಿಸಲಿದ್ದೇನೆ.
ಸಿದ್ದಗಂಗಾ ಹಿರಿಯ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರದ ಸತ್ಯದರ್ಶನವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.
ಸಿದ್ದಗಂಗಾ ಹಿರಿಯ ಶ್ರೀಗಳನ್ನು ಭೇಟಿ ಮಾಡಿಸುವಂತೆ ಆ ಸಂದರ್ಭದಲ್ಲಿ ನಾನು ಬಿದರಿ ಆಫೀಸಿಗೆ ಹೋಗಿದ್ದೆ ಎಂದು ಹೇಳಿರುವುದು ಹಸಿಸುಳ್ಳು, ನಾನು ಅವರ ಆಫೀಸಿಗೆ ಹೋಗಿಯೇ ಇಲ್ಲ. ಇದು ಅಪ್ಪಟ ಕಟ್ಟುಕಥೆ.
ನಾನು ಯಾರ ಮನೆಯ ಬಾಗಿಲಿಗೂ ಹೋಗಿ ಸ್ವಾಭಿಮಾನ ಬಿಟ್ಟುಕೊಟ್ಟವನಲ್ಲ. ನನ್ನ ಆತ್ಮಗೌರವವನ್ನು ಬದಿಗಿಟ್ಟು ಯಾರ ಮುಂದೆಯೂ ತಲೆತಗ್ಗಿಸುವಂತಹ ಪ್ರಶ್ನೆಯೇ ಇಲ್ಲ,” ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
