‘ಸರ್ವ ಸಮಾಜ ಒಪ್ಪುವ ರೀತಿಯಲ್ಲಿ ಮಠ ಕಟ್ಟಿದ ಜಯದೇವ ಜಗದ್ಗುರುಗಳು’

ಬಸವ ಮೀಡಿಯಾ
ಬಸವ ಮೀಡಿಯಾ

ಸಮಾಜಕ್ಕೆ ಸಮರ್ಪಿಸಿಕೊಂಡಿದ್ದ ಅಪರೂಪದ ಚೇತನ ಜಯದೇವ ಜಗದ್ಗುರುಗಳು

ಚಿತ್ರದುರ್ಗ :

ಸುಮಾರು ೫೩ ವರ್ಷಗಳ ಕಾಲ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷರಾಗಿ ಒಂದು ಮಠ ಹೇಗಿರಬೇಕೆಂಬ ಕಲ್ಪನೆಯಿಂದ ಪೂರ್ವಾಲೋಚನೆಯಿಂದ ಸಂಘಟಿಸಿ ಅದು ಸರ್ವಸಮಾಜಕ್ಕೊಪ್ಪುವ ರೀತಿಯಲ್ಲಿ ಕಟ್ಟಿದ ಮಹಾಚೇತನ, ಒಂದು ರೀತಿಯ ವಿಸ್ಮಯ ಎಂದೆನಿಸಿದ್ದ ಜಯದೇವ ಮುರುಘರಾಜೇಂದ್ರ ಜಗದ್ಗುರುಗಳು ಗುರು ಎಂದರೆ ಹೇಗಿರಬೇಕೆಂಬುದಕ್ಕೆ ಸ್ಪಷ್ಟ ನಿದರ್ಶನವಾಗಿ ಬದುಕಿದವರು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಸ್ಮರಿಸಿಕೊಂಡರು.

ಶ್ರೀಗಳವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದ ತಾಣದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೭೦ನೇ ಸ್ಮರಣೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಗುರುಗಳ ಬಗ್ಗೆ ಹೇಳುತ್ತ ಹೋದರೆ ಸಮಯವೇ ಸಾಕಾಗುವುದಿಲ್ಲ. ಅವರು ದಣಿವರಿಯದೆ ಮಾಡಿದ ಕಾರ್ಯಗಳು ಒಂದಾ ಎರಡಾ, ಆರೋಗ್ಯ, ಶಿಕ್ಷಣ, ಪ್ರಸಾದ ನಿಲಯ, ಮಠಗಳ ಸ್ಥಾಪನೆ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕರ್ನಾಟಕ ಏಕೀಕರಣ ಸೇರಿದಂತೆ ನಾಡು ನುಡಿ ನೆಲ ಜಲ ವಿಷಯದಲ್ಲಿ ಅವರು ತೋರಿದ್ದು ಐತಿಹಾಸಿಕ ದಾಖಲೆ.

ರಾಷ್ಟ್ರಪತಿ, ಮಂತ್ರಿ, ಮುಖ್ಯಮಂತ್ರಿ, ರಾಷ್ಟ್ರಕವಿ ಹೀಗೆ ನಾನಾ ವಿಧದಲ್ಲಿ ಬೆಳೆಯಲು ಸಹಕಾರ, ಆಶ್ರಯ, ನೆರವು ನೀಡಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಹಲವಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದು ಶ್ರೀಗಳ ಹೆಗ್ಗಳಿಕೆ. ಜಯದೇವ ಹೃದ್ರೋಗ ಸಂಸ್ಥೆ ನಿರ್ಮಾಣಗೊಳ್ಳಲು ಶ್ರೀಗಳ ಸಹಕಾರವಿದೆ.

ಹಾವೇರಿಯಲ್ಲಿ ರಾಷ್ಟ್ರಪಿತ ಗಾಂಧೀಜಿಯವರ ಐತಿಹಾಸಿಕ ಭೇಟಿ, ಹೊರರಾಜ್ಯಗಳಲ್ಲಿ ಉಚಿತ ಪ್ರಸಾದ ನಿಲಯ, ಮಠ ಸ್ಥಾಪನೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ದೇಣಿಗೆ, ಸರ್ವಧರ್ಮದವರ ಹಿತಕ್ಕಾಗಿ ಶ್ರಮ ಮತ್ತು ಸಹಾಯ, ಬಿ. ಬಸವಲಿಂಗಪ್ಪ ಅವರು ನಾನು ನಿಮಗೆ ನಮಸ್ಕಾರ ಮಾಡುವುದಿಲ್ಲ ಆದರೆ ನನಗೆ ನಿಮ್ಮ ಸಹಾಯ ಬೇಕೆಂದಾಗ ನಿನ್ನ ನಮಸ್ಕಾರ ನನಗೆ ಬೇಡ ಮುಂದೆ ನೀನು ಬೇರೊಬ್ಬರಿಂದ ಗೌರವ ನಮಸ್ಕಾರ ಪಡೆಯುವ ರೀತಿ ಆಗುತ್ತೀಯಾ ಎಂದು ನೆರವು ನೀಡಿದ್ದನ್ನು ಅಂದಿನ ಸಚಿವರು ಅಧಿವೇಶನದಲ್ಲಿ ಪ್ರಸ್ತಾಪಿಸಿದ ಉದಾಹರಣೆಯಿದೆ.

ಕವಿ ಜಿ.ಎಸ್. ಶಿವರುದ್ರಪ್ಪ, ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ಜೆ.ಹೆಚ್. ಪಟೇಲ್ ಅವರಂತಹ ಪ್ರತಿಭಾನ್ವಿತರಿಗೆ ಆಶ್ರಯ, ಸಹಕಾರ ನೀಡಿದ್ದು, ಮೈಸೂರು ಮಹಾರಾಜರ ಒಟನಾಟ ಸೇರಿದಂತೆ ಹಲವು ವಿಧದಲ್ಲಿ ನೊಂದವರ, ಬಳಲಿದವರ, ಅಸಹಾಯಕರ ಆಶಾದೀಪವಾಗಿ, ಮಾರ್ಗದರ್ಶಿಯಾಗಿ ಸುದೀರ್ಘವಾಗಿ ದೇಶ ಸಂಚಾರ ಮಾಡುತ್ತ ಮಠವನ್ನು ವಿಸ್ತರಿಸಿ ಅಜರಾಮರರಾಗಿ ಚಿರಸ್ಥಾಯಿಯಾಗಿದ್ದಾರೆಂದು ನುಡಿದರು.

ಸಮ್ಮುಖ ವಹಿಸಿದ್ದ ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಅವರು ಮಾತನಾಡಿ, ಜಯದೇವ ಜಗದ್ಗುರುಗಳು ಈ ಪೀಠಕ್ಕೆ ಸುಲಭವಾಗಿ ಬಂದವರಲ್ಲ. ಚುನಾವಣೆ ಎದುರಿಸಿ ಗೆದ್ದು ಪೀಠ ಅಲಂಕರಿಸಿದರು. ಈ ಪೀಠ ಅಥವಾ ಸಿಂಹಾಸನ ಅದು ಹೂವಿನ ಹಾಸಿಗೆಯಾಗಿರಲಿಲ್ಲ ಕಷ್ಟ, ಸಮಸ್ಯೆ, ಸಾಲ ಇದ್ದಂತಹ ಸಮಯದಲ್ಲಿ ಪೀಠಾಧ್ಯಕ್ಷರಾಗುತ್ತಾರೆ.

ತಮ್ಮ ಕರ್ತೃತ್ವ ಶಕ್ತಿಯಿಂದ ಶ್ರೀಮಠದ ಚುಕ್ಕಾಣಿ ಹಿಡಿದ ಮೇಲೆ ಒಂದೊಂದೆ ಸಮಸ್ಯೆಗಳನ್ನು ಬಿಡಿಸುತ್ತ ನಾಡನ್ನು ಹಳ್ಳಿಗೆ ಏಕರಾತ್ರಿ; ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ಸುತ್ತಿದರು ಮತ್ತು ಕಟ್ಟಿದರು. ಅದಕ್ಕೆ ಶ್ರೀಮಠದ ಹಿಂದಿನ ಗುರುಗಳ ಆಜ್ಞೆ ಸುತ್ತು ಕಟ್ಟು ಎನ್ನುವ ವಾಕ್ಯವನ್ನು ಪರಿಪಾಲಿಸುತ್ತ ಹೋದ ಕಡೆಗಳಲ್ಲಿ ಬಂದ ದೇಣಿಗೆಯನ್ನು ಅಲ್ಲಿಯೇ ಬಿಟ್ಟು ಅಲ್ಲಿ ಪ್ರಸಾದ ನಿಲಯ, ಮಠ ಕಟ್ಟಲು ಪ್ರೇರಣೆ ನೀಡಿದರು.

ಅದರಂತೆ ತಮ್ಮ ಸಾಧನೆಯ ಮೂಲಕ ಸೂರ್ಯನಂತೆ ಬಂದರು ಎಂದರೆ ತಪ್ಪಾಗದು. ಅವರನ್ನು ಯಾವ ಹೋಲಿಕೆಗೂ ಬಣ್ಣನೆಗೂ ನಿಲುಕದ ವ್ಯಕ್ತಿತ್ವ ಎಂದು ಕೊಂಡಾಡಿದರು.

ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ತಮ್ಮ ದೂರದೃಷ್ಟಿಯಿಂದ ಮಠವನ್ನು ವಿಸ್ತರಿಸಿದರು. ತಮ್ಮ ಮಠದ ಶಾಖಾಮಠಗಳ ಸ್ವಾಮಿಗಳು ಧೈರ್ಯಗುಂದಿ ಹೆದರಿದಾಗ ನಿನಗಾಗಿ ನೇಸರನು ಪಡುವಣದಿ ಮೂಡುವನೆ? ಶಕ್ತಿಯಿರೆ ಗೆಲ್ ಅಥವಾ ಹೊಂದಿಕೊಳ್ ಎನ್ನುವ ತತ್ವ ಬೋಧಿಸಿದರು ಎಂದು ಶ್ರೀಗಳವರ ವ್ಯಕ್ತಿತ್ವ ಬಣ್ಣಿಸಿದರು.

ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವ ಮಹಾಂತ ಸ್ವಾಮೀಜಿ ಮಾತನಾಡುತ್ತ, ಹಸಿವು, ಬಡತನ, ನಿರುದ್ಯೋಗದಂತಹ ಸಮಸ್ಯೆಗಳು ಅಥವಾ ಅನುಭವಗಳು ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಾಗುವುದಿಲ್ಲ. ಅದನ್ನು ಮನಗಂಡ ಅಂದಿನ ಶಿರಸಂಗಿ ಮಹಾಲಿಂಗೇಶ್ವರ ಸ್ವಾಮೀಜಿ ಅವರು ಡೆಪ್ಯುಟಿ ಚೆನ್ನಬಸಪ್ಪ ಅವರ ಪ್ರೇರಣೆಯಂತೆ ಉಚಿತ ಪ್ರಸಾದ ನಿಲಯ ಸ್ಥಾಪನೆ ಮಾಡುತ್ತಾರೆ.

ಅದನ್ನು ಜಯದೇವ ಜಗದ್ಗುರುಗಳು ಮುಂದುವರೆಸಿದ್ದು ಸಮಾಜಕ್ಕೆ ನೀಡಿದ ಬಹುದೊಡ್ಡ ಕೊಡುಗೆ ಎಂದ ಶ್ರೀಗಳು, ಅಂದಿನ ಒಂದು ಪ್ರಸಂಗವನ್ನು ನೆನಪಿಸಿದ ಶ್ರೀಗಳು, ಮಠದಲ್ಲಿ ಕೆಲಸ ಮಾಡುವ ಗರ್ಭಿಣಿ ಸ್ತ್ರೀ ಮಠದಿಂದ ಹೆಚ್ಚಿಗೆ ದವಸ ತೆಗೆದುಕೊಂಡು ಹೋದ ಕಾರಣ ಮಠದ ಸಿಬ್ಬಂದಿ ಆಕೆಯೊಂದಿಗೆ ವಾಗ್ವಾದ ನಡೆಸಿದ ಸಂದರ್ಭವನ್ನು ಗಮನಿಸುವ ಸ್ವಾಮಿಗಳು ವಿಷಯ ಕೇಳಿ ಆಕೆ ಮಾಡಿದ್ದು ಸರಿ ಇದೆ. ಆಕೆಯ ಹೊಟ್ಟೆಯಲ್ಲಿ ಮಗುವಿದೆ ಅದಕ್ಕೊಂದು ಪಾಲು ಸಲ್ಲಲಿ, ತೆಗೆದುಕೊಂಡು ಹೋಗಲಿ ಎಂದು ಮಾನವೀಯತೆ ಕರುಣೆ ತೋರಿದ ಮಹಾಮೇರು ಎಂದು ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ಅತಿಥಿಯಾಗಿದ್ದ ಹೊಳಲ್ಕೆರೆ ಮಾಜಿ ಶಾಸಕ ಎ.ವಿ. ಉಮಾಪತಿ ಅವರು ಮಾತನಾಡಿ, ಮುರುಘಾಮಠದ ಪೀಠ ಪರಂಪರೆಯ ಎಲ್ಲಾ ಸ್ವಾಮಿಗಳವರ ಮಾತು ಅದು ಸತ್ಯ ಸಂದೇಶ. ಅವರುಗಳು ಆಡಿದ ಮಾತು ಎಂದೂ ಸುಳ್ಳಾಗುವುದಿಲ್ಲ. ನಮ್ಮ ಮನೆತನಕ್ಕೂ ಮುರುಘಾಮಠಕ್ಕೂ ಅವಿನಾಭಾವ ಸಂಬಂಧವಿದೆ. ಅದರಂತೆ ನಾನೂ ಸಹ ಶಾಸಕನಾಗಿದ್ದು ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರರ ಆಶೀರ್ವಾದ ಫಲದಿಂದ ಎಂಬಿತ್ಯಾದಿ ಹಲವು ಸಂದರ್ಭಗಳನ್ನು ಮೆಲುಕು ಹಾಕಿದರು.

ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ನ ಎಸ್. ಷಣ್ಮುಖಪ್ಪ ಅವರು ಮಾತನಾಡಿ, ಜಯದೇವ ಜಗದ್ಗುರುಗಳು ಆರಂಭಿಸಿದ ಅನೇಕ ಪ್ರಸಾದ ನಿಲಯಗಳು ಶಿಥಿಲಗೊಂಡಿವೆ. ಅವನ್ನು ಜೀರ್ಣೋದ್ಧಾರ ಮಾಡಲು ಆಡಳಿತ ಮಂಡಳಿಯವರಲ್ಲಿ ಕೋರಿದರು.

ಈ ಸಂದರ್ಭದಲ್ಲಿ ವಿವಿಧ ಮಠಗಳ ಮಠಾಧೀಶರಾದ ಶಿರಸಿಯ ಮಲ್ಲಿಕಾರ್ಜುನ ಶ್ರೀಗಳು, ಸಾಯಗಾಂವ ಮಠದ ಶಿವಾನಂದ ಶ್ರೀಗಳು, ಬಸವಮುರುಘೇಂದ್ರ ಶ್ರೀ, ಡಾ. ಬಸವಚೇತನ ಶ್ರೀ, ನಿಪ್ಪಾಣಿಯ ಮಲ್ಲಿಕಾರ್ಜುನ ಶ್ರೀ, ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಜಯದೇವಿತಾಯಿ, ಚಿನ್ಮಯಿತಾಯಿ ಅವರು ಹಾಗೂ ಎಸ್.ಜೆ.ಎಂ. ವಿಶ್ವವಿದ್ಯಾಲಯ ಕುಲಪತಿ ಡಾ. ಕೆ.ಬಿ. ಗುಡಸಿ, ಪಟೇಲ್ ಶಿವಕುಮಾರ, ಎಸ್. ಪರಮೇಶ, ಪ್ರೊ. ಸಿ. ಬಸವರಾಜಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ ಅವರುಗಳು ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ವಿವಿಧ ಸಮಾಜ ಸಂಘಟನೆಗಳ ಪದಾಧಿಕಾರಿಗಳಾದ ಗೌಳಿರುದ್ರಪ್ಪ, ನಾಗರಾಜ ಸಂಗಂ, ಇಟಗಿ ರಾಜಶೇಖರ ದಂಪತಿ, ಜವಳಿ ರಾಜಶೇಖರಮೂರ್ತಿ, ಎಸ್. ವೀರೇಶ, ವಕೀಲರಾದ ಎನ್.ಬಿ. ವಿಶ್ವನಾಥ, ಹೊಸಳ್ಳಿ ಹನುಮಂತಪ್ಪ, ಬಸವರಾಜ ಕಟ್ಟಿ, ಎಸ್.ವಿ. ಗುರಮೂರ್ತಿ, ಶ್ರಮಜೀವಿ ಚಂದ್ರಣ್ಣ, ಮಹಾಂತಮ್ಮ, ಗೀತಾರುದ್ರೇಶ, ಮಲ್ಲಿಕಾರ್ಜುನಪ್ಪ, ಎಸ್.ವಿ. ಕೊಟ್ರೇಶ, ಕಂಠೇಶ್ವರ ತಿಪ್ಪೇಸ್ವಾಮಿ, ಎಸ್.ಜೆ.ಎಂ. ವಿದ್ಯಾಸಂಸ್ಥೆಯ ಶಾಲಾಕಾಲೇಜುಗಳ ಮುಖ್ಯಸ್ಥರುಗಳಾದ ಡಾ. ಹರಿಣಿ, ಡಾ.ಎಸ್.ದಿನೇಶ, ಆಶಾರಾಣಿ, ಪಿ.ಎಂ.ಜಿ. ರಾಜೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಸ್.ಜೆ.ಎಂ. ಸ್ವತಂತ್ರ ಪದವಿಪೂರ್ವ ಕಾಲೇಜು ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಉಮೇಶ ಪತ್ತಾರ ಜಯದೇವ ಶ್ರೀಗಳ ಕುರಿತಾದ ಗೀತೆಗಳನ್ನು ಹಾಡಿದರೆ, ಪ್ರಾಚಾರ್ಯ ತಿಪ್ಪೇಸ್ವಾಮಿ ಸ್ವಾಗತಿಸಿದರು.

ಉಪನ್ಯಾಸಕಿ ರವಿಕಲಾ ನಿರೂಪಿಸಿ, ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *