ಯುವ ವೈಜ್ಞಾನಿಕ ಸಮಾವೇಶ ಮತ್ತು ಸಂವಾದ
ಬಸವಕಲ್ಯಾಣ :
ಆವಿಷ್ಕಾರಗಳು ನಡೆಯದಿದ್ದರೆ ಮಾನವ ಜನಾಂಗ ವಿನಾಶವಾಗುತ್ತದೆ. ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ ಬಸವಕಲ್ಯಾಣ ಅತ್ಯಂತ ಪವಿತ್ರ ನಾಡಾಗಿದೆ ಎಂದು ಬೆಂಗಳೂರು ಯು.ಆರ್. ರಾವ್ ಉಪಗ್ರಹ ಕೇಂದ್ರದ ಮಾಜಿ ಸಹಾಯಕ ನಿರ್ದೇಶಕರಾದ ಡಾ. ರಾಮನಗೌಡ ನಾಡಗೌಡ ಹೇಳಿದರು.
ಅವರು ಅಂತರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ನಿಮಿತ್ಯ ನಡೆದ ‘ಯುವ ವೈಜ್ಞಾನಿಕ ಸಮಾವೇಶ ಮತ್ತು ಸಂವಾದ’ ಕಾರ್ಯಕ್ರಮ’ಯದಲ್ಲಿ ಮಾತನಾಡುತ್ತಿದ್ದರು.
ಸಂಶೋಧನೆಗಳು ಇಲ್ಲದಿದ್ದರೆ ಮಾನವ ಜೀವನಕ್ರಮ ವಿನಾಶವಾಗುತ್ತದೆ. ಬಸವಕಲ್ಯಾಣ ಜಗತ್ತಿಗೆ ಸಮಾನತೆ ಮತ್ತು ಅಗಾಧ ಜ್ಞಾನ ನೀಡಿದ ನೆಲೆ. ಬಸವಾದಿ ಶರಣರ ತತ್ವಗಳ ಕುರಿತು ಇಂದು ಜಗತ್ತಿನ ಹಲವು ಕಡೆ ಚರ್ಚೆಗಳು ನಡೆಯುತ್ತಿವೆ.

ಸಮಗ್ರವಾಗಿ ದೇಶದ ಬೆಳವಣಿಗೆಗೆ ಯುವಕರು ಹೊಸ ಸಂಶೋಧನೆಯ ಕ್ಷೇತ್ರದಲ್ಲಿ ಬರಬೇಕು. ಇಸ್ರೋ ದೇಶದ ಏಳ್ಗೆಗಾಗಿ ಹತ್ತಾರು ಕಾರ್ಯಗಳನ್ನು ಮಾಡಿದೆ. ದೇಶದಲ್ಲಿ ವಿಪುಲ ಅವಕಾಶಗಳಿವೆ. ಜಗತ್ತಿನ ಐದು ಪ್ರಮುಖ ಸಂಸ್ಥೆಗಳಲ್ಲಿ ಇಸ್ರೋ ಒಂದಾಗಿದೆ.
ಜಗತ್ತಿನ ಅನೇಕ ಸಂಸ್ಥೆಗಳು ಇಸ್ರೋ ಜೊತೆ ಕೆಲಸ ಮಾಡಲು ಆಸಕ್ತಿ ತೋರಿಸಿವೆ. ಯಾವುದೇ ಕೆಲಸವನ್ನು ಆಸಕ್ತಿಯಿಂದ ಮಾಡಿ ದೇಶವನ್ನು ಬಲಿಷ್ಠಗೊಳಿಸಬೇಕು. ಇದರ ಮುಖ್ಯ ಉದ್ದೇಶ ಬಾಹ್ಯಾಕಾಶ ತಂತ್ರಜ್ಞಾನವನ್ನು ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಬಳಸುವುದಾಗಿದೆ ಎಂದರು.
ಹೈದ್ರಾಬಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಡಾ. ತೆಜಸ್ವಿ. ಕೆ. ಮಾತನಾಡಿ, ಇಂದು ಪದವಿ ಓದುವ ವಿದ್ಯಾರ್ಥಿಗಳು ಮುಂದೆ ವೈಜ್ಞಾನಿಕ ಸಂಶೋಧನಾ ಕ್ಷೇತ್ರಕ್ಕೆ ಬರುವಂತಾಗಬೇಕು. ಕುತೂಹಲ, ತಾಳ್ಮೆ, ಶೃದ್ಧೆ ಇರುವ ಜ್ಞಾನಿಗಳು ಆ ಕ್ಷೇತ್ರದ ಜ್ಞಾನ ಅರಿಯಬೇಕು. ವೈಜ್ಞಾನಿಕ ಸಂಶೋಧನಾ ಹಲವು ಜ್ಞಾನ ಶಾಖೆಗಳ ಸಹಯೋಗದಲ್ಲಿ ನಡೆಯುತ್ತದೆ.
ಆತ್ಮನಿರ್ಭರ ಕಲ್ಪನೆಯನ್ನು ಡಿಆರ್ಡಿಓ ಅನುಷ್ಠಾನಕ್ಕೆ ತರುತ್ತಿದ್ದಾರೆ. ತಂತ್ರಜ್ಞಾನದ ಉತ್ಪಾದನೆ, ವಿನ್ಯಾಸ, ವೆಚ್ ಪರಿಕ್ಷಣೆಗಳು ಇವೆಲ್ಲವೂ ಅರಿಯಬೇಕು. ತಂತ್ರಜ್ಞಾನದ ಪೂರ್ಣ ಮಾಹಿತಿ ಮತ್ತು ಜ್ಞಾನ ಕಡ್ಡಾಯವಾಗಿ ಗೊತ್ತಿರಬೇಕು. ಜ್ಞಾನ, ಅರ್ಹತೆ, ಶ್ರಮ ಬಯಸುವ ಕ್ಷೇತ್ರ ಸಂಶೋಧನೆಯಾಗಿದೆ ಎಂದರು.
ಸಾನಿಧ್ಯ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ವಚನಗಳು ಕೇವಲ ಭಕ್ತಿಯ ಅಭಿವ್ಯಕ್ತಿಗಳಲ್ಲ. ಅವುಗಳಲ್ಲಿ ಪ್ರಶ್ನಿಸುವ ಮನೋಭಾವ, ವಿಚಾರಶೀಲತೆ, ಅನುಭವ, ಮಾನವೀಯತೆ ಮತ್ತು ಸಾಮಾಜಿಕ ಸುಧಾರಣೆಯ ಆಶಯಗಳಿವೆ. ಮನುಷ್ಯ ತನ್ನ ವಿವೇಕದಿಂದ ಸತ್ಯವನ್ನು ಅರಿಯಬೇಕು. ಎಂಬ ಚಿಂತನೆಗೆ ವಚನ ಸಾಹಿತ್ಯದಲ್ಲಿ ಮಹತ್ವವಿದೆ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯ ಕುಲಪತಿ ಡಾ. ಸಿ.ವೀರಣ್ಣ ಮಾತನಾಡಿ, ವೈಜ್ಞಾನಿಕ ನೆಲೆಗಟ್ಟಿನ ಮೇಲೆ ವಚನ ಸಾಹಿತ್ಯ ಹುಟ್ಟಿದೆ. ಪ್ರತಿಯೊಂದು ವಚನದಲ್ಲಿ ವೈಚಾರಿಕ, ವೈಜ್ಞಾನಿಕ ಜ್ಞಾನವಿದೆ. ಪ್ರತಿಯೊಬ್ಬರು ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ ನಿವೃತ್ತ ಡೀನ್ ಡಾ. ಅಮರನಾಥ ಸೋಲಪುರೆ ಮಾತನಾಡಿದರು. ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಿ.ಎಸ್. ರಗಟೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿಯ ನಿರ್ದೇಶಕ ಡಾ. ಬಸವರಾಜ ಯವಳೆ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ರವೀಂದ್ರ ಕೋಳಕುರ, ಶಿವಕುಮಾರ ಬಿರಾದಾರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೊಂದಿಗೆ ಸಂವಾದ:
ವಿದ್ಯಾರ್ಥಿಗಳಾದ ವೈಶಾಲಿ, ನೀಲಾಂಬಿಕಾ, ಶ್ವೇತಾ ಮಹಾಗಾಂವೆ, ದಿಪೀಕಾ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು.
ಎಸ್.ಎಸ್.ಕೆ.ಬಿ. ಬಸವೇಶ್ವರ ಮಹಾವಿದ್ಯಾಲಯ, ಸರಸ್ವತಿ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು. ಸಂಕಲ್ಪ ಕಾಲೇಜು, ಡೈಮಂಡ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
ಶರಣ ವಿಜ್ಞಾನಿ ಪುರಸ್ಕಾರ:
ಇಸ್ರೋದ ವಿವಿಧ ಯೋಜನೆಗಳ ಯಶಸ್ವಿಗಾಗಿ ಶ್ರಮಿಸಿದ ಡಾ. ರಾಮನಗೌಡ ನಾಡಗೌಡ ಹಾಗೂ ಡಿಆರ್ಡಿಓ ವಿವಿಧ ಯೋಜನೆಗಳ ಯಶಸ್ವಿಗಾಗಿ ಶ್ರಮಿಸಿದ ಡಾ. ತೆಜಸ್ವಿ ಕೆ. ಅವರಿಗೆ ‘ಶರಣ ವಿಜ್ಞಾನಿ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಕಾಶ ಖಂಡಾಳೆ ಸ್ವಾಗತಿಸಿದರು, ಅಂಬ್ರೀಷ ಭಿಮಾಣೆ ನಿರೂಪಿಸಿದರು.
