ಬಸವಶಕ್ತಿ: ಅಕ್ಟೋಬರ್ 19 ಚಿತ್ರದುರ್ಗದಲ್ಲಿ ಪ್ರಾಂತೀಯ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಒಂದು ದಿನದ ಬಸವಶಕ್ತಿ ಪ್ರಾಂತೀಯ ಶಿಬಿರ ಅಕ್ಟೋಬರ್ 19ರಂದು ನಗರದಲ್ಲಿ ನಡೆಯಲಿದೆ.

ಬೃಹನ್ಮಠ ಹಾಗು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳ ಸಾನಿಧ್ಯದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ವಿವರಗಳನ್ನು ಚರ್ಚಿಸಲಾಯಿತು.

‘ನಾಡು ನುಡಿಗೆ ಬಸವ ಸಂಘಟನೆಗಳು ಸ್ಪಂದಿಸಲಿ’ ವಿಷಯದ ಮೇಲೆ ನಡೆಯಲಿರುವ ಬಸವಶಕ್ತಿ ಶಿಬಿರದಲ್ಲಿ ನಾಲ್ಕು ಗೋಷ್ಠಿಗಳಿರುತ್ತವೆ.

ಮೊದಲ ಎರಡು ಗೋಷ್ಠಿಗಳಲ್ಲಿ ನಾಡಿನಾದ್ಯಂತ ಸಕ್ರಿಯವಾಗಿರುವ ಬಸವ ಸಂಘಟನೆಗಳ ಸಾಮಾಜಿಕ ಬಾಧ್ಯತೆಯ ಬಗ್ಗೆ ಚರ್ಚೆಯಾಗಲಿದೆ.

ಇಂದಿನ ಶಿಕ್ಷಣದ ದುಸ್ಥಿತಿಯ ಬಗ್ಗೆ, ಮತ್ತು ಅವುಗಳಿಗೆ ಬಸವ ಸಂಘಟನೆಗಳು ಸ್ಪಂದಿಸಬಹುದಾದ ಸಾಧ್ಯತೆಯ ಬಗ್ಗೆ ತಜ್ಞ ನಿರಂಜನಾರಾಧ್ಯ ಮಾತನಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ವಿವೇಕಾನಂದ ಗೌಡ ಪಾಟೀಲ, ನಿವೃತ ಪ್ರಾಧ್ಯಾಪಕರಾದ ಜಿ ಏನ್ ಮಲ್ಲಿಕಾರ್ಜುನಪ್ಪ ಪ್ರತಿಕ್ರಿಯೆ ನೀಡಲಿದ್ದಾರೆ.

ನಂತರ ಲಿಂಗಾಯತರ ಧರ್ಮ ಹಾಗೂ ಮಾತೃ ಭಾಷೆಯಾಗಿರುವ ಕನ್ನಡದ ಮುಂದಿರುವ ಸವಾಲುಗಳ ಬಗ್ಗೆ, ಅವುಗಳನ್ನು ಸಂಘಟಿತವಾಗಿ ಎದುರಿಸುವ ಅನಿವಾರ್ಯತೆಯ ಬಗ್ಗೆ, ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್ ಜಾವಗಲ್ ಮಾತನಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸುರೇಶ ಚನ್ನಶೆಟ್ಟಿ, ಚಿಂತಕ ಡಾ. ರಾಜಶೇಖರ ನಾರನಾಳ ಪ್ರತಿಕ್ರಿಯೆ ನೀಡಲಿದ್ದಾರೆ.

ಮಧ್ಯಾಹ್ನದ ಎರಡು ‘ಮುಖಾಮುಖಿ’ ಗೋಷ್ಠಿಗಳಲ್ಲಿ ವಿವಿಧ ಜಿಲ್ಲೆಗಳ ಬಸವ ಸಂಘಟನೆಗಳ ನಡುವೆ ವಿಚಾರ ವಿನಿಮಯ, ಅನುಭವ ಹಂಚಿಕೆ ನಡೆಯಲಿದೆ.

ಮೊದಲನೇ ಗೋಷ್ಠಿಯಲ್ಲಿ ಕಳೆದ 25 ವರ್ಷಗಳ ಸಂಘಟನೆಯ ಅನುಭವವನ್ನು ಕಲಬುರ್ಗಿಯ ಪೂಜ್ಯ ಕೋರಣೇಶ್ವರ ಸ್ವಾಮೀಜಿ, ಚಾಮರಾಜನಗರದ ಎನ್ರಿಚ್ ಮಹದೇವಸ್ವಾಮಿ, ರಾಯಚೂರಿನ ರುದ್ರಪ್ಪ ಕುರಕುಂದಿ, ಕೊಪ್ಪಳದ ಸಂಗಮೇಶ ಕಲಹಾಳ ಹಂಚಿಕೊಳ್ಳಲಿದ್ದಾರೆ.

ನಂತರದ ಗೋಷ್ಠಿಯಲ್ಲಿ ಮುಂದಿನ 25 ವರ್ಷ ಬಸವ ಸಂಘಟನೆಗಳು ಮಾಡಬೇಕಾದ ಕೆಲಸದ ಬಗ್ಗೆ ಯುವ ಕಾರ್ಯಕರ್ತರಾದ ಕಿರಣ್ ಬೆಲ್ಲದ, ಬೆಂಗಳೂರು, ಅಕ್ಕಿ ಬಸವೇಶ, ವಿಜಯನಗರ, ಸಿ ಜಿ ಪಾಟೀಲ್, ಧಾರವಾಡ, ಸುಮಾ ಸುನಿಲ್, ಭದ್ರಾವತಿ, ಮಾತನಾಡಲಿದ್ದಾರೆ.

ಇವೆರಡೂ ಕಾರ್ಯಕ್ರಮಗಳನ್ನು ಟಿ ಎಚ್ ಬಸವರಾಜ್, ಹೊಸಪೇಟೆ, ಎಚ್ ಎಂ ಸೋಮಶೇಖರಪ್ಪ, ಹೊಸದುರ್ಗ, ನಿರ್ವಹಿಸಲಿದ್ದಾರೆ.

ಬಸವರಾಜ ಮಾವಿನಹಳ್ಳಿ ಸ್ವಾಗತ ಮಾಡಲಿದ್ದಾರೆ, ಟಿ ಆರ್ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಬಸವ ಮೀಡಿಯಾದ ಎಂ ಎ ಅರುಣ್ ಸಮಾರೋಪ ನುಡಿಗಳನ್ನು ಹೇಳಲಿದ್ದಾರೆ, ರವೀಂದ್ರ ಹೊನವಾಡ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ಪ್ರಾಂತೀಯ ಶಿಬಿರ

“ಎಲ್ಲಾ ಜಿಲ್ಲೆಗಳಲ್ಲಿ ಬಸವ ಸಂಘಟನೆಗಳು ಸಕ್ರಿಯವಾಗಿದ್ದರೂ, ಎಲ್ಲರೂ ಸಾಮಾನ್ಯವಾಗಿ ಪ್ರತ್ಯೇಕ ದ್ವೀಪಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಜಿಲ್ಲೆಗಳ ಬಸವ ಸಂಘಟನೆಗಳ ನಡುವೆ ನಿರಂತರ ಸಂಪರ್ಕ, ಸಂವಾದ ನಿರ್ಮಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ,” ಎಂದು ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ ಆರ್ ಚಂದ್ರಶೇಖರ್ ಹೇಳಿದರು.

“ಇಲ್ಲಿಯವರೆಗೆ ಐದು ಬಸವಶಕ್ತಿ ಶಿಬಿರಗಳು ನಡೆದಿವೆ. ಈ ಎಲ್ಲಾ ಜಿಲ್ಲೆಗಳ ಅನುಭವದ ಆಧಾರದ ಮೇಲೆ ಪ್ರಾಂತೀಯ ಶಿಬಿರ ಆಯೋಜಿಸಿದ್ದೇವೆ. ಜಿಲ್ಲೆ, ತಾಲೂಕುಗಳಲ್ಲಿ ಬಸವಶಕ್ತಿ ಶಿಬಿರಗಳು ಮುಂದುವರೆಯುತ್ತವೆ. ಮುಂದೆ ರಾಜ್ಯಮಟ್ಟದ ಸಮಾವೇಶ ನಡೆಸಲೂ ಸಜ್ಜಾಗುತ್ತೇವೆ,” ಎಂದು ಬಸವಶಕ್ತಿ ಸಂಚಾಲಕ ಸಮಿತಿ ಅಧ್ಯಕ್ಷ ಬಸವರಾಜ ಮಾವಿನಹಳ್ಳಿ ಹೇಳಿದರು.

ನಗರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹೆಚ್. ಎಂ. ಸೋಮಶೇಖರಪ್ಪ, ಬಸವರಾಜ ಮಾವಿನಹಳ್ಳಿ, ಬಸವರಾಜ ಟಿ. ಹೆಚ್, ಅಕ್ಕಿ ಮಲ್ಲಿಕಾರ್ಜುನ, ಬಸವರಾಜ ಕಟ್ಟಿ,, ರಾಗಿ ಶಿವಲಿಂಗಪ್ಪ, ಶೈಲಜಾ ಬಾಬು, ಮಲ್ಲೇಶಪ್ಪ ರೇಷ್ಮೆ ರಾಜ, ನಾಗರಾಜಪ್ಪ, ರಂಗನಾಥ್ ನಾಯಿಗೆರೆ, ಮತ್ತು ಇತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
3 Comments
  • ಬಸವ ಶಕ್ತಿ ಹೆಮ್ಮರವಾಗಿ ಬೆಳೆಯಲಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ 🙏

  • ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *