‘ಶರಣರ ಮನಸ್ಥಿತಿಗೆ ಏರಲು ಬಸವಣ್ಣನವರ ಪಂಚಶೀಲ ತತ್ವಗಳನ್ನು ಪಾಲಿಸಿ’

ಬೀದರ :

ಶರಣರ ಮನೋಸ್ಥಿತಿಗೆ ಏರಲು ಭಕ್ತರು ಬಸವಣ್ಣನವರ ಪಂಚಶೀಲ ತತ್ವಗಳನ್ನು ಪಾಲಿಸಬೇಕು ಎಂದು ಸಾಹಿತಿ ಉಮಾದೇವಿ ಎಚ್. ಬಾಪುರೆ ಹೇಳಿದರು.

ಇಲ್ಲಿಯ ಬಸವಗಿರಿಯಲ್ಲಿ ಮರಣವೇ ಮಹಾನವಮಿ ಮಹೋತ್ಸವದ ಎರಡನೇ ದಿನವಾದ ಸೋಮವಾರ ನಡೆದ ಭಕ್ತನ ಪಂಚಶೀಲಗಳು ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣರು ಮರಣವೇ ಮಹಾನವಮಿ ಎಂದಿದ್ದರು. ಮರಣವನ್ನು ಹಬ್ಬದಂತೆ ಸಂಭ್ರಮಿಸಿದ್ದರು ಎಂದು ತಿಳಿಸಿದರು. ದೇವರಲ್ಲಿ ಅಚಲ ನಂಬಿಕೆ ಇಟ್ಟು ಶರಣಾಗತನಾಗುವವನೇ ಭಕ್ತ ಎಂದು ಹೇಳಿದರು.

ಜೀವನದಲ್ಲಿ ಕಳಬೇಡ, ಕೊಲಬೇಡ ಎಂಬ ಒಂದು ವಚನ ಪಾಲಿಸಿದರೂ ಶರಣ ತತ್ವ ಅಳವಡುತ್ತದೆ ಎಂದು ತಿಳಿಸಿದರು.

ಪ್ರತಿನಿತ್ಯ ಭಸ್ಮ ಹಚ್ಚಿಕೊಳ್ಳುವುದು, ರುದ್ರಾಕ್ಷಿ ಧರಿಸುವುದು, ಲಿಂಗಾರ್ಚನೆ ಮಾಡುವುದು, ಜಂಗಮವೇ ಲಿಂಗವೆಂದರಿತು ನಡೆಯುವುದು ಹಾಗೂ ಸತ್ಯ ಸದ್ಭಕ್ತರ ಸಂಗದಲ್ಲಿ ಇರುವುದೇ ಭಕ್ತನ ಪಂಚಶೀಲಗಳು ಎಂದು ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಮನವೊಲಿದು ಲಿಂಗವ ಪೂಜಿಸಬೇಕು. ಮನವೊಲಿದು ಪೂಜಿಸದಿದ್ದರೆ ಅದು ಚಿತ್ರದ ಸತಿಯಂತೆ. ಚಿತ್ರದ ಕಬ್ಬಿನಂತೆ. ಅಪ್ಪಿದರೆ ಸುಖವಿಲ್ಲ, ಮೆಲ್ಲಿದರೆ ರುಚಿಯಿಲ್ಲ. ಅಂಥ ಪೂಜೆಯಿಂದ ಸುಖ, ಫಲವಿಲ್ಲ. ಮನ ಮಗ್ನವಾಗಿ ಪೂಜಿಸಿದರೆ ಫಲ ಸಾಧ್ಯ ಎಂದು ತಿಳಿಸಿದರು.

ಪಂಚಶೀಲಗಳನ್ನು ಆಚರಿಸುವುದು ಬಲಿದಾನಗೈದ ಶರಣರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.

ಸತ್ಯವೆಂಬ ಕೊರಲಗು ಹಿಡಿದುಕೊಂಡು ಸದ್ಭಕ್ತರು ಗೆದ್ದರೆಂಬ ಬಸವವಾಣಿಯಂತೆ ಅಕ್ಕ ಅನ್ನಪೂರ್ಣ ಅವರು ಪರಿಪೂರ್ಣ ಗುರುವಾಗಿ ನಮ್ಮ ಒಳ-ಹೊರಗೂ ಶುದ್ಧಗೈದರು ಎಂದು ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ನೀಲಮ್ಮ ರೂಗನ್ ಹೇಳಿದರು.

ನಮ್ಮ ನರ- ನಾಡಿಗಳಲ್ಲಿ ಅಕ್ಕ ತುಂಬಿದ್ದಾರೆ. ಅಕ್ಕನವರು ಇಲ್ಲವೆಂಬ ಭಾವನೆ ನಮಗಿಲ್ಲ. ಅವರು ಬರೆದ ಪುಸ್ತಕಗಳಲ್ಲಿ, ಪ್ರವಚನಗಳಲ್ಲಿ ಜೀವಂತವಾಗಿದ್ದಾರೆ. ಈಗಲೂ ದಾರಿ ದೀಪವಾಗಿ ಬೆಳಗುತ್ತಿದ್ದಾರೆ ಎಂದರು.

ನಾನು ಸಾಹಿತಿಯಾಗಿ ರೂಪುಗೊಳ್ಳಲು ಅಕ್ಕ ಅನ್ನಪೂರ್ಣತಾಯಿ ಅವರೇ ಕಾರಣ. ಅವರು ನನ್ನಂಥ ಮಹಿಳೆಯರ ಬಾಳಿನಲ್ಲಿ ದಿವ್ಯ ಬೆಳಕಾಗಿರುವರು. ಅವರ ಉಪದೇಶದಂತೆ, ತನು, ಮನ, ಭಾವ ಶುದ್ಧವಾಗಿ ಬದುಕಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಹೇಳಿದರು.

ಬದುಕು ಹಸನಗೊಳಿಸಿದ ಬಸವಣ್ಣ:

ಬಸವಣ್ಣನವರು ಅರಿವು ಮತ್ತು ಆಚಾರ ಕಲಿಸಿ ಬದುಕು ಹಸನಗೊಳಿಸಿದವರು. ಅಂತೆಯೇ ಶರಣರು ಅವರನ್ನು ಕಣ್ಣಿಲ್ಲದವರಿಗೆ ಕಣ್ಣು ಕೊಟ್ಟೆ ಬಸವ, ಕಾಲಿಲ್ಲದವರಿಗೆ ಕಾಲು ಕೊಟ್ಟೆ ಬಸವ ಎಂದು ನೆನೆದಿದ್ದಾರೆ ಎಂದು ಚಿಂತಕಿ ಶ್ರೀದೇವಿ ಶರಣಬಸವ ಮಠಪತಿ ಹೇಳಿದರು.

ಬಸವಣ್ಣನವರ ಪ್ರತಿನಿಧಿಯಾಗಿ ಅಕ್ಕ ಅನ್ನಪೂರ್ಣತಾಯಿ ಅವರು ನಮ್ಮೆಲ್ಲರ ಹಿತೈಷಿಯಾಗಿ, ತಾಯಿಯಾಗಿ ಕುಟುಂಬ ನಿರ್ವಹಣೆ, ಅಡುಗೆ ಮಾಡುವ, ಊಟ ಮಾಡುವ ವಿಧಾನ ಮೊದಲ್ಗೊಂಡು ಬದುಕುವ ಪರಿ ಕಲಿಸಿದ್ದಾರೆ ಎಂದು ತಿಳಿಸಿದರು.

ಅಕ್ಕ ಅನ್ನಪೂರ್ಣತಾಯಿ ಹಂಬಲಕ್ಕೆ ದೊರೆತ ಮಾಣಿಕ್ಯವೇ ಪ್ರಭುದೇವರು. ಅಕ್ಕನಿಲ್ಲದ ತವರು ಬಸವಗಿರಿ ಎಂಬ ಭಾವನೆ ಬರದಂತೆ ಪ್ರಭುದೇವರು ನಮಗೆಲ್ಲ ತಂಪು ನೀಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಶೀಲಾ ಆರ್. ಮಾಳಗೆ, ನೀಲಮ್ಮನ ಬಳಗದ ಜಗದೇವಿ ಚಿಮಕೋಡೆ, ರಾಜಮ್ಮ ಚಿಕ್ಕಪೇಟೆ, ಶೋಭಾ ಕೆ. ಡಿಗ್ಗೆ, ನೀಲಾಂಬಿಕೆ ಎಸ್. ಪಾಖಾಲ್ ಉಪಸ್ಥಿತರಿದ್ದರು.

ಮಲ್ಲಮ್ಮ ಸಿ. ಹೆಬ್ಬಾಳೆ ವಚನ ಗಾಯನ ಮಾಡಿದರು. ಸನ್ನಿಧಿ ಹಾಗೂ ವೈಷ್ಣವಿ ಅಭಿಷೇಕ ಆಕರ್ಷಕ ವಚನ ನೃತ್ಯ ಪ್ರದರ್ಶಿಸಿದರು.

ಚನ್ನಬಸವನಗರದ ನೀಲಮ್ಮನ ಬಳಗದ ಶರಣೆಯರು ವಿಭೂತಿ ಗೀತೆಯ ಮೇಲೆ ಸಮೂಹ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಸಂತೋಷಿ ವೀರೇಂದ್ರ ನಿರೂಪಿಸಿದರು. ವೈಷ್ಣವಿ ಅ. ಮಠಪತಿ ಸ್ವಾಗತಿಸಿದರು. ಅನೀಶ್ ಶಿವಕುಮಾರ ಪಾಖಾಲ್ ಭಕ್ತಿ ದಾಸೋಹಗೈದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *