‘ಬಸವಣ್ಣನವರ ಚಿಂತನೆಯ ಒಂದಂಶ ಅರಿಯಲು ಸಾಧ್ಯವಾಗಿಲ್ಲ’

ಬಸವಗಿರಿಯಲ್ಲಿ ಮಾಸಿಕ ಶರಣ ಸಂಗಮ ಕಾರ್ಯಕ್ರಮ

ಬೀದರ :

ಬಸವನೆಂದರೆ ಮುಗಿಯಲಾರದ ತತ್ವ-ಮಹಾಜ್ಞಾನ. ಅದಕ್ಕಿಂತ ದೊಡ್ಡದು ಮತ್ತೇನೂ ಇಲ್ಲ ಎಂದು ಪ್ರೌಢಶಾಲೆ ಶಿಕ್ಷಕ ಡಾ. ಶಿವಲಿಂಗ ಹೇಡೆ ಹೇಳಿದರು.

ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಶುಕ್ರವಾರ ಆಯೋಜಿಸಿದ್ದ 280ನೇ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂಬೈನೂರು ವರ್ಷಗಳಿಂದ ಬಸವಣ್ಣನವರ ಬಗ್ಗೆ ಚಿಂತನೆ ನಡೆದಿದೆ. ಆದರೂ, ಅವರ ಒಂದಂಶ ಅರಿಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಬಸವಣ್ಣ ವೈರಾಗ್ಯದ ನಿಧಿ, ಪ್ರಪಂಚದ ವಸ್ತು, ವಿಷಯಗಳಲ್ಲಿ ವ್ಯಾಮೋಹ ಇಲ್ಲದಿರುವುದೇ ವೈರಾಗ್ಯ ಎಂದು ಹೇಳಿದರು.

ಅರಿವು-ಆಚಾರ ಒಂದಾಗುವಿಕೆಯೇ ಬಸವ ಧರ್ಮದ ತಿರುಳು. ಇಲ್ಲಿ ಉಪದೇಶಕ್ಕಿಂತ ಆಚರಣೆಗೆ ಮಹತ್ವವಿದೆ ಎಂದು ತಿಳಿಸಿದರು.

ತನ್ನೊಳಗಿನ ದಿವ್ಯ ಚೇತನವೇ ದೇವರು. ದೇವರನ್ನು ಅಲ್ಲಿ, ಇಲ್ಲಿ ಹುಡುಕಾಡುತ್ತಾ ಕಷ್ಟಪಡಬೇಡಿರೆಂದು ಹಿಡಿದಿಡಲು ಸಾಧ್ಯವಿಲ್ಲದ ದೇವನನ್ನು ಚುಳುಕಾಗಿ ಇಷ್ಟಲಿಂಗದ ರೂಪದಲ್ಲಿ ಅಂಗೈಗೆ ಕೊಟ್ಟ ಮಹಾಗುರು ಬಸವಣ್ಣ ಎಂದು ಬಣ್ಣಿಸಿದರು.

ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ಮಾತನಾಡಿ, ವಚನಗಳಲ್ಲಿ ವೈಚಾರಿಕ ಭಕ್ತಿ ಇದೆ. ಭಕ್ತಿ ಇಲ್ಲದ ವೈಚಾರಿಕತೆ ವ್ಯರ್ಥ ಎಂದು ನುಡಿದರು. ಬಸವಣ್ಣನವರು ಭಕ್ತಿ ಭಂಡಾರಿಯಾಗಿದ್ದರು. ಬಂದವರನ್ನೆಲ್ಲ ಇವ ನಮ್ಮವ ಇವ ನಮ್ಮವನೆಂದು ಇಂಬಿಟ್ಟುಕೊಂಡರು ಎಂದು ತಿಳಿಸಿದರು.

ಒಳಗೆ ಕುಟಿಲ, ಹೊರಗೆ ವಿನಯ ತೋರುವವರು ಭಕ್ತರಲ್ಲ. ಅವರು ನಯ ವಂಚಕರು. ಒಳ-ಹೊರಗೆ ಶುದ್ಧವಾದವನೆ ಶರಣ ಎಂದು ಹೇಳಿದರು.

ಸೂರ್ಯನ ಪ್ರಖರತೆಯನ್ನು ಮೋಡ ಮರೆ ಮಾಡುವಂತೆ, ಅಹಂಕಾರವು ಮನುಷ್ಯನ ಸಾಧನೆಯನ್ನು ಮರೆ ಮಾಡುತ್ತದೆ. ಕಾರಣ, ಅಹಂಕಾರ ಅಳಿದು ವಿನಯತೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪತ್ರಕರ್ತ ರಾಜೇಶ ಮುಗಟೆ ಕಾರ್ಯಕ್ರಮ ಉದ್ಘಾಟಿಸಿದರು. ಈಶ್ವರಮ್ಮ ಹೊಕ್ರಾಣಿ ಅಧ್ಯಕ್ಷತೆ ವಹಿಸಿದ್ದರು. ವನೀತಾ ವೈಜಿನಾಥ ಹುಣಸಗೇರಿ ವಿಶೇಷ ಆಮಂತ್ರಿತರಾಗಿದ್ದರು.

ಪತ್ರಿಕಾ ರಂಗಕ್ಕೆ ನೀಡಿದ ಕೊಡುಗೆಗಾಗಿ ರಾಜೇಶ ಮುಗಟೆ, ಶಿಕ್ಷಕ ಸೇವೆಯಿಂದ ನಿವೃತ್ತರಾದ ಪ್ರಯುಕ್ತ ರಾಜೇಂದ್ರ ಮೈನಾಳೆ ಹಾಗೂ ಶೀಲಾ ಮೈನಾಳೆ ಅವರನ್ನು ಅಭಿನಂದಿಸಲಾಯಿತು.

ಪರುಷಕಟ್ಟೆ ಚನ್ನಬಸವಣ್ಣ, ಶ್ಯಾಮಲಾ ಎಲಿ, ವಚನಶ್ರೀ ಸುಮಧುರವಾಗಿ ವಚನ ಗಾಯನ ಮಾಡಿದರು. ಬಸವಶ್ರೀ ಪುರಾಣಿಕ ಮಠದ ಆಕರ್ಷಕ ನೃತ್ಯ ಪ್ರಸ್ತುತಪಡಿಸಿದರು.

ಬಸವಶ್ರೀ, ಬಸವಪ್ರಸಾದ, ವಚನಶ್ರೀ ಹಾಗೂ ಚನ್ನಬಸವ ಗುರು ಪೂಜೆ ನೆರವೇರಿಸಿದರು.

ಕಲ್ಲಪ್ಪ ಡಿಗೆ ಸ್ವಾಗತಿಸಿದರು. ಸಂಧ್ಯಾರಾಣಿ ನಿರೂಪಿಸಿದರು. ಚಿನ್ನಮ್ಮ ನಾಗಶೆಟ್ಟಿ ಸಿರ್ಸಿ ಭಕ್ತಿ ದಾಸೋಹಗೈದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *