ನರಗುಂದ ಮಠದಲ್ಲಿ ಕಿತ್ತೂರು ಚೆನ್ನಮ್ಮ ಜಯಂತಿ, ಮಹಿಳಾ ದಿನಾಚರಣೆ

ನರಗುಂದ :

ಮಹಿಳೆ ತ್ಯಾಗದ ಪ್ರತೀಕ ಎಲ್ಲ ನಿರ್ವಹಿಸುವ ಶಕ್ತಿ ತಾಯಿಗೆ ಇದೆ. ಮಹಿಳೆಯರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಅವರು ಕೌಟುಂಬಿಕ ಜವಾಬ್ದಾರಿಗಳನ್ನು ಮೊದಲ ಆದ್ಯತೆಯಾಗಿ ನೋಡಿಕೊಳ್ಳಬೇಕು ಎಂಬ ಸಾಂಪ್ರದಾಯಿಕ ಮನಸ್ಥಿತಿ ಸ್ವಲ್ಪ ಪ್ರಮಾಣದಲ್ಲಿದೆ.

ಭಾರತವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ೨೦೩೦ ರ ವೇಳೆಗೆ, ಭಾರತವು ಅಮೆರಿಕ ಮತ್ತು ಚೀನಾ ನಂತರ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಮುನ್ಸೂಚನೆ ಬಲವಾಗಿ ಇದೆ ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಶಿಕ್ಷಕಿ ದೀಪಾ ಗವಿಮಠ ಅವರು ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ನಿಮಿತ್ಯ, ಕರ್ನಾಟಕ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಿತ್ತೂರು ಚನ್ನಮ್ಮಾಜಿಯ ವಂಶಸ್ಥರಾದ ಪಾರ್ವತಿ ಮಲ್ಲಸರ್ಜ ದೇಸಾಯಿ ಅವರು ಮಾತನಾಡಿ, ೨೦೦ ವರ್ಷಗಳ ಹಿಂದೆಯೇ ತನ್ನ ರಾಜ್ಯದ ರಕ್ಷಣೆಗಾಗಿ, ಜನಸಾಮಾನ್ಯರ ಹಕ್ಕುಗಳಿಗಾಗಿ ಬಲಾಢ್ಯ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಚನ್ನಮ್ಮ ದೇಶಪ್ರೇಮ, ಸ್ವಾಭಿಮಾನದ ಸಂಕೇತ. ನಮ್ಮ ಆತ್ಮಗೌರವಕ್ಕೆ ಧಕ್ಕೆಯಾದರೆ ಸಹಿಸೆವು ಎಂಬ ಎಚ್ಚರಿಕೆಯ ಸಂದೇಶವನ್ನು ಬ್ರಿಟಿಷರಿಗೆ ನೀಡಿದ ದಿಟ್ಟ ಮಹಿಳೆ ಎಂದರು.

ಪಾಶ್ಚಿಮಾತ್ಯರ ದಬ್ಬಾಳಿಕೆ, ದೌರ್ಜನ್ಯ, ಹಪಿಹಪಿತನದ ವಿರುದ್ಧ ಬಂಡೆದ್ದ ಧೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಶೌರ್ಯ ಪರಾಕ್ರಮ ಇಂದಿನ ಮಹಿಳೆಯರಿಗೆ ಸ್ಪೂರ್ತಿ ಎಂದು ಹೇಳಿದರು.

ಬ್ರಿಟಿಷರಿಂದ ಬಂಧಿಸಲ್ಪಟ್ಟು, ಜೈಲಿನಲ್ಲಿಯೇ ವೀರ ಮರಣ ಹೊಂದುವ ಮೂಲಕ ತನ್ನ ಕೊನೆ ಉಸಿರು ಇರುವವರೆಗೂ ಬ್ರಿಟಿಷರ ವಿರುದ್ಧ ಹೋರಾಡಿದ ಮಹಿಳೆ, ಅವರ ಆತ್ಮಗೌರವ ತ್ಯಾಗ ಬಲಿದಾನಗಳು ಇಂದಿನ ಮಹಿಳೆಯರಿಗೆ ಆದರ್ಶ ಎಂದು ಹೇಳಿದರು.

ಇತ್ತೀಚೆಗೆ ವೈದ್ಯಕೀಯ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ನಿಮಿತ್ಯ ಡಾ. ವಿನೂತಾ ಬ. ನಾಗನೂರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ವೇದಿಕೆ ಮೇಲೆ ಪೂಜ್ಯ ಶಾಂತಲಿಂಗ ಶ್ರೀಗಳು ಸಾನಿದ್ಯ ವಹಿಸಿದ್ದರು. ಅವರು ಮಾತನಾಡುತ್ತ, ಮೊಟ್ಟಮೊದಲು ಸ್ವಾತಂತ್ರ‍್ಯದ ಕಿಚ್ಚನ್ನು ಹೊತ್ತಿಸಿದ ವೀರರಾಣಿ ಕಿತ್ತೂರ ಚನ್ನಮ್ಮಾಜಿ ಈ ದೇಶದ ಮೊಟ್ಟ ಮೊದಲ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿ. ಹೀಗಾಗಿ ಕಿತ್ತೂರ ಚನ್ನಮ್ಮಾಜಿ ಈ ದೇಶದ ಪ್ರಥಮ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿ ಎಂದು ಕೇಂದ್ರ ಸರಕಾರ ಅಧಿಕೃತ ಗೆಜೆಟ್ ಹೊರಡಿಸಬೇಕು ಎಂದರು.

ಕುಳಗೇರಿ ಕ್ರಾಸ್ ಶಿವಶರಣೆ ಶಿವಾಣಿ ಮಾತಾಜಿ, ಭಾವನಾ ಪಾಟೀಲ, ಸುಮಾ ಗೊಡಚಿ, ಉಮಾ ಕುರಿ, ಈರಮ್ಮ ಮುದಕವಿ, ಬಿ.ಬಿ.ಕುರಿ, ಅಕ್ಷರ ದಾಸೋಹ ಸಹಾಯಕ ನಿರ್ಧೇಶಕರಾದ ಮಾರುತಿ ಅಸುಂಡಿ ಹಾಗೂ ಶ್ರದ್ಧಾನಂದ ಅಕ್ಕನ ಬಳಗದ ಸದಸ್ಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರೊ. ಆರ್. ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮಠದ ವ್ಯವಸ್ಥಾಪಕರಾದ ಮಹಾಂತೇಶ ಹಿರೇಮಠ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *