‘ಸತ್ಯಕ್ಕ ಪಾಲಿಸಿದ ನಿಯಮಗಳನ್ನು ಜಾರಿಗೆ ತಂದರೆ ಸಂತೃಪ್ತ ಜೀವನ ಸಾಧ್ಯ’

ರಾಯಚೂರು :

ನಗರದ ಬಸವಕೇಂದ್ರದ ಅಕ್ಕನ ಬಳಗದವರಿಂದ ಅಕ್ಕನ ಬಳಗದ ಅಧ್ಯಕ್ಷೆ ಜಗದೇವಿ ಚನ್ನಬಸವಣ್ಣ ಅವರ ನೇತೃತ್ವದಲ್ಲಿ ವೆಂಕಟೇಶ್ವರ ಕಾಲೊನಿಯ ಮಲ್ಲಮ್ಮ ಶರಣಬಸವ ಜಾಡಲದಿನ್ನಿ ಅವರ ಮನೆಯಲ್ಲಿ ನವರಾತ್ರಿ ಅಂಗವಾಗಿ ಶಿವಶರಣೆ ಸತ್ಯಕ್ಕ ಇವರ ಕುರಿತು ಈಚೆಗೆ ಅನುಭಾವ ಚಿಂತನೆ ನಡೆಯಿತು.

ಸತ್ಯಕ್ಕ ಶರಣೆಯ ಬಗ್ಗೆ ಚಿನ್ಮಯಿ ಮೃತ್ಯಂಜಯ ಮಾತನಾಡಿ, ಶರಣೆಯ ವಚನದ ಅಂಕಿತನಾಮ ಶಂಭುಜಕ್ಕೇಶ್ವರ ಎಂದಿದ್ದು, ಆಕೆ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಸತ್ಯಕ್ಕಳ ಪ್ರಕಾರ ಪೂಜೆ ಅರ್ಚನೆ ಧೂಪ ದೀಪಾರ್ತಿ ಮಂತ್ರ ಹೇಳುವದು ಆಡಂಬರದ ಪೂಜೆಯಷ್ಟೇ ಆಗಿವೆ. ಇವು ಯಾವವು ಪೂಜೆಗಳಲ್ಲ, ಪರಧನ ಪರಸ್ತ್ರೀ ಬಯಸುವುದು ಮತ್ತು ಪರಾಧೈವಕ್ಕೆ ಎರಗದೆ ಇರುವುದೇ ಪೂಜೆ ಎಂದರಲ್ಲದೆ, ನಾವಿಂದು ಸತ್ಯಕ್ಕ ಪಾಲಿಸಿದ ನಿಯಮಗಳನ್ನು ಜಾರಿಗೆ ತಂದರೆ ಸಂತೃಪ್ತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

ಲಂಚ ವಂಚನಕ್ಕೆ ಕೈಯಾನದ ಭಾಷೆ ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ಧಿದಡೇ ನಾನು ಕೈ ಮುಟ್ಟಿ ಎತ್ತಿದೇನಾದಡೆ ಅಯ್ಯಾ ನಿಮ್ಮ ಆಣೆ ಪ್ರಮಥರಾಣೆ ಎಂದು ಪ್ರಾಮಾಣಿಕ ನುಡಿಗಳನ್ನು ಆಡಿದ್ದಾರೆ. ಆದ್ದರಿಂದ ನಮಗೆ ಶರಣ ಧರ್ಮ ಅನುಕರಣೆ ಇಂದಿನ ಅವಶ್ಯ ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯ ತಳವರ್ಗದಲ್ಲಿ ಹುಟ್ಟಿದವಳಾದರೂ ಕಸಗುಡಿಸುವಾಗ ಬಂಗಾರದ ವಸ್ತು, ರೇಷ್ಮೆಯ ವಸ್ತುಗಳೇನಾದರೂ ಬಿದ್ದಿದ್ದರು ಕೈಯಿಂದ ಮುಟ್ಟದೆ ಪೊರಕೆಯಿಂದ ಸರಿಸುತ್ತಿದ್ದಳು ಎನ್ನುವುದನ್ನು ಅವಲೋಕನ ಮಾಡಿದರೆ, ಆಕೆ ತನ್ನ ಕಾಯಕದಿಂದ ಬಂದ ದ್ರವ್ಯದಿಂದ ಬದುಕು ಸಾಗಿಸುವ ಮನೋಧರ್ಮ ಹೊಂದಿದ್ದಳು ಎಂದು ತಿಳಿಯುತ್ತದೆ ಎಂದು ಹೇಳಿದರು.

ಶಿವಯೋಗದ  ಪ್ರಾತ್ಯಕ್ಷಿಕೆಯನ್ನು ವಿಜಯಲಕ್ಷ್ಮಿ ವಡಗೆರೆ ನಡೆಸಿಕೊಟ್ಟರು. ವಚನ ಪ್ರಾರ್ಥನೆ ಪ್ರಿಯಾಂಕ, ಸ್ವಾಗತವನ್ನು ಮಲ್ಲಮ್ಮ ಶರಣಬಸವ, ನಿರೂಪಣೆಯನ್ನು ಮುಕ್ತಾ, ವಚನ ಸಂವಿಧಾನ ಪ್ರತಿಜ್ಞೆಯನ್ನು ಚಂದ್ರಕಲಾ ಪಾಟೀಲ ಬೋಧಿಸಿದರು. ಪೂರ್ಣಿಮ ಶರಣು ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಸರೋಜಮ್ಮ,  ಅನ್ನಪೂರ್ಣಮ್ಮ ಹರವಿ ಸೇರಿದಂತೆ ಹಲವಾರು ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *