ಸಿಂಧನೂರಿನ ಅಂಗಡಿಗಳಲ್ಲಿ ಬಸವ ಪೂಜೆಯೊಂದಿಗೆ ನಡೆದ ದೀಪಾವಳಿ
ಸಿಂಧನೂರು :
” ದೀಪಾವಳಿ ಹಬ್ಬ ಜ್ಞಾನಪ್ರಭೆಯನ್ನು ಹೆಚ್ಚಿಸುವ ಹಬ್ಬವಾಗಬೇಕೆ ಹೊರತು, ಕಾರ್ಬನ್ ಮೋನಾಕ್ಸೈಡ್ ಅನಿಲವನ್ನು ಹೆಚ್ಚಿಸುವ ಹಬ್ಬ ಆಗಬಾರದು ” ಎಂದು ಅನುಭಾವಿ ಪಿ. ರುದ್ರಪ್ಪ ಅವರು ಹೇಳಿದರು.
ಎಪಿಎಂಸಿ ಯಾರ್ಡ್ ನಲ್ಲಿ ಹಮ್ಮಿಕೊಂಡಿದ್ದ ವರ್ತಕರಾದ ಮಲ್ಲಿಕಾರ್ಜುನ ಅವರ ಅಂಗಡಿಯಲ್ಲಿ ಜರುಗಿದ ಪೂಜಾ ಹಾಗೂ ಚೆನ್ನಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಹಬ್ಬಗಳು ಪರಿಸರ ಪೂರಕವಾಗಿರಬೇಕು. ಆಚರಣೆಗಳಿಗೆ ಅರ್ಥವಿರಬೇಕು. ಹಬ್ಬಗಳನ್ನು ಸಂತೋಷ, ಸಡಗರ ಸಂಭ್ರಮದಿಂದ ಆಚರಿಸುವುದು ತಪ್ಪಲ್ಲ. ಆದರೆ ನಾವು ಆಚರಿಸುವ ಹಬ್ಬಗಳು ಸೃಷ್ಟಿಗೆ ಮತ್ತು ಸಕಲ ಜೀವಿಗಳಿಗೆ ಲೇಸನ್ನೇ ಉಂಟುಮಾಡುವಂತೆ ಇರಬೇಕು ಎಂದರು.
ಬದಲಾಗಿ ಇಂದು ನಮ್ಮವರು ಆಚರಿಸುತ್ತಿರುವ ಹಬ್ಬ ಕಾರ್ಬನ್ ಮೋನಾಕ್ಸೈಡ್ ಎಂಬ ವಿಷ ಅನಿಲವನ್ನು ಹೆಚ್ಚು ಮಾಡುತ್ತಿದೆ. ಇದರಿಂದ ಪರಿಸರದಲ್ಲಿನ ಪ್ರಾಣಿ ಮತ್ತು ಪಕ್ಷಿಗಳು ಜೀವಭಯದಿಂದ ಹೊರಗೆ ಬರುತ್ತಿಲ್ಲ. ಪಟಾಕಿ ಸುಡುವುದು ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ಸುಟ್ಟಂತೆ. ಇದರಿಂದ ದೇಶದಲ್ಲಿ ನೂರಾರು ಮಕ್ಕಳು ಮತ್ತು ಯುವಕರು ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವಘಡಗಳನ್ನು ತಂದುಕೊಳ್ಳುತ್ತಿದ್ದಾರೆ ಎಂದರು.

ಅವಿರಳ ಜ್ಞಾನಿ ಚನ್ನಬಸವಣ್ಣನವರು ಷಟಸ್ಥಳ ಚಕ್ರವರ್ತಿ, ಚಿನ್ಮಯ ಜ್ಞಾನಿ ಎನಿಸಿಕೊಂಡು ಅನುಭವ ಮಂಟಪದ ಎರಡನೆಯ ಅಧ್ಯಕ್ಷರಾಗಿದ್ದವರು. ಜ್ಞಾನಕ್ಕೆ ಹಿರಿದು, ಕಿರಿದು ಎಂಬ ಭೇದ ಭಾವವಿಲ್ಲ. ಅವರು ಚಿಕ್ಕ ವಯಸ್ಸಿನಲ್ಲಿ ಅದ್ಭುತವಾದ ಜ್ಞಾನವನ್ನು ಸಂಪಾದನೆ ಮಾಡಿದ್ದರು.
ಅವರು ರಚಿಸಿದ ಮಂತ್ರಗೊಪ್ಯಾ, ಕರಣಹಸಿಗೆ, ಉಪಲಬ್ಧವಾಗಿರುವ ಸಾವಿರದ ಏಳುನೂರಕ್ಕಿಂತ ಹೆಚ್ಚಿನ ವಚನಗಳು ಅವರ ಮಹಾಜ್ಞಾನಕ್ಕೆ ಇಳಿದ ಕನ್ನಡಿಯಾಗಿವೆ. ನಮ್ಮ ನಮ್ಮ ಮನೆಗಳಲ್ಲಿ ನಮ್ಮ ಯುವಕರಿಗೆ ಮತ್ತು ಮಕ್ಕಳಿಗೆ ಚೆನ್ನಬಸವಣ್ಣನವರ ವ್ಯಕ್ತಿತ್ವದ ಪರಿಚಯವನ್ನು ಮಾಡಿಕೊಡಬೇಕಾಗಿದೆ ಎಂದರು.
ಅವಿರಳ ಜ್ಞಾನಿ ಚನ್ನಬಸವಣ್ಣನವರು ಮಹಾ ಶಿವಯೋಗಿ ಸಿದ್ದರಾಮೇಶ್ವರರಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡುವುದರ ಮೂಲಕ ಅವರನ್ನು ಅನುಭವ ಮಂಟಪಕ್ಕೆ ಬರಮಾಡಿಕೊಂಡದ್ದು ವಿಶೇಷಯೆನ್ನಬಹುದು.
ಇದೇ ಸಂದರ್ಭದಲ್ಲಿ ತಾಲೂಕಿನ ಕಿಡಿಗೋಳ ಗ್ರಾಮದಲ್ಲಿ ನಡೆದ ಜಾತಿ ಗಲಭೆಯ ಕುರಿತು ಖೇದ ವ್ಯಕ್ತಪಡಿಸಿದರು. ಇದಕ್ಕೆ ಕಾರಣ ಬಸವಾದಿ ಶರಣರ ವಿಚಾರಗಳನ್ನು ಇಂದಿನ ಲಿಂಗವಂತ ಸಮಾಜ ಹಾಗೂ ದಲಿತ ಸಮುದಾಯ ಅರ್ಥಮಾಡಿಕೊಳ್ಳದೆ ಇರುವುದು ಎಂದರು.

ಬಸವ ತಂದೆ ಸ್ಥಾವರವನ್ನು ಧಿಕ್ಕರಿಸಿ ಇಷ್ಟಲಿಂಗವನ್ನು ದಯಪಾಲಿಸಿದರು. ಇದರಿಂದ ಸಮಾನತೆ ತರಲು ಆ ಕಾಲಘಟ್ಟಕ್ಕೆ ಯಶಸ್ವಿಯು ಆಗಿದ್ದರು. ಆದರೆ ಇಂದಿನ ಕಾಲದ ನಾವು ಅವರ ಸಂದೇಶ ಮರೆತಿರುವುದರಿಂದ ಇಂತಹ ಆಚಾತುರ್ಯಗಳು ಸಂಭವಿಸುತ್ತಿವೆ ಎಂದು ನುಡಿದರು.
ಪ್ರಾಸ್ತಾನಿಕವಾಗಿ ಬಸವಲಿಂಗಪ್ಪ ಬಾದರ್ಲಿ ಅವರು ಮಾತನಾಡುತ್ತಾ, ದೀಪಾವಳಿ ಎಂದರೆ ಲಿಂಗವಂತರಿಗೆ ಕಾಯಕದ ಹಬ್ಬ. 12ನೇ ಶತಮಾನದ ಶರಣರು ಕಾಯಕ ಜೀವಿಗಳು. ಬಸವಣ್ಣ ನಮಗೆ ನಡೆಯ ಕಲಿಸಿದ, ನುಡಿಯ ಕಲಿಸಿದ, ಉಡಲು ಕಲಿಸಿದ, ಉಣಲು ಕಲಿಸಿದ. ಅದೇ ರೀತಿ ಕಾಯಕ ಮಾಡುವುದನ್ನು ಹಾಗೂ ಅದರ ಮಹತ್ವವನ್ನು ಕಲಿಸಿದ ಎಂದರು.
ಯಾರು ಸತ್ಯಶುದ್ಧ ಕಾಯಕವ ಮಾಡಿ ಕಾಯಕವನ್ನೇ ದೇವರೆಂದು ನಂಬಿ, ಸದಾ ಕಾಯಕದಲ್ಲಿ ನಿರತನಾಗಿರುತ್ತಾರೋ ಅವರಿಗೆ ಬಡತನವಿಲ್ಲ, ದಾರಿದ್ರ್ಯವಿಲ್ಲ. ಎತ್ತ ನೋಡಿದಡತ್ತ ಸಂಪತ್ತು ಬರುತ್ತದೆ ಎನ್ನಬಹುದು.
ನಮ್ಮೆಲ್ಲಾ ದಾರಿದ್ರಕ್ಕೆ, ಬಡತನಕ್ಕೆ ಮತ್ತು ಬದುಕಿನ ಸಮಸ್ಯೆಗಳಿಗೆ ನಾವು ಕೆಲಸ ಮಾಡದೆ ಮೈಗಳ್ಳರಾಗಿರುವುದೇ ಕಾರಣ. ದುಡಿವವನನ್ನು ಕಂಡು ಬಡತನ ಓಡಿ ಹೋಗುತ್ತದೆ. ನಾವು ಸದಾ ಒಂದಿಲ್ಲ ಒಂದು ಕೆಲಸದಲ್ಲಿ ನಿರತರಾಗಿರಬೇಕು. ಇಂಥ ಕಾಯಕದ ಮಹತ್ವವನ್ನು ಹೇಳಿಕೊಟ್ಟ ಬಸವ ತಂದೆಯ ರೂಪ ಚಿತ್ರವನ್ನು ಇಂದು ನಾವು ಪೂಜಿಸುವ ಮೂಲಕ ನಾವು ಮಾಡುವ ಕಾಯಕಕ್ಕೆ ಗೌರವ ಮತ್ತು ಭಕ್ತಿ ಸಮರ್ಪಣೆಯನ್ನು ಮಾಡುತ್ತಿದ್ದೇವೆ.
ದೀಪಾವಳಿ ಎಂದರೆ ಕೇವಲ ಹೊರಗಿನ ಕತ್ತಲೆಯನ್ನು ದೂರ ಮಾಡುವುದು ಎಂದು ಅಲ್ಲ. ಬದಲಾಗಿ ನಮ್ಮ ಅಂತರಂಗದ ಅಜ್ಞಾನವನ್ನು, ಮೂಢನಂಬಿಕೆಯನ್ನು, ಅಂದಾಚರಣೆಗಳನ್ನು ದೂರ ಮಾಡಿಕೊಳ್ಳುವುದು.
ನಾವು ಯಾವುದೇ ಕಾರಣಕ್ಕೂ ಮಾಡಲು ಜ್ಞಾನ ಬೇಕು, ಆ ಜ್ಞಾನವೇ ಮಹಾ ಬೆಳಕು. ಅಂತರಂಗದ ಬೆಳಕನ್ನು ಹೆಚ್ಚಿಸಿಕೊಂಡಾಗ ಮಾತ್ರ ನಾವು ಜೀವನದಲ್ಲಿ ಯಶಸ್ಸನ್ನ ಸಾಧಿಸುತ್ತೇವೆ. ಜ್ಞಾನಿಯಾದವನು ವ್ಯಾಪಾರದಲ್ಲಿ ಮತ್ತು ವ್ಯವಹಾರದಲ್ಲಿ ಮಹತ್ವವಾದದ್ದನ್ನು ಸಾಧಿಸುತ್ತಾನೆ.

ಅಜ್ಞಾನಿಯಾದವನು ಹಾಗೂ ಸ್ಥಾವರಗಳಲ್ಲಿ ನಂಬಿಕೆ ಇಟ್ಟವನು ಯಾವ ಕಾರಣಕ್ಕೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಅದಕ್ಕಾಗಿ ನಮ್ಮ ಮನೆಯ ಮಕ್ಕಳಿಗೆ ದೇವರ ಬಗ್ಗೆ, ಕಾಯಕದ ಮಹತ್ವದ ಬಗ್ಗೆ, ಸಂಸ್ಕಾರದ ಬಗ್ಗೆ ಚಳುವಳಿಕೆಯನ್ನು ಮೂಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ನಾವು ದೇಶ ಸುಧಾರಿಸುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ರಾಜ್ಯ ಸುಧಾರಣೆ ಮಾಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಗ್ರಾಮವನ್ನು ಸುಧಾರಣೆ ಮಾಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ನಮ್ಮ ಕುಟುಂಬಗಳನ್ನು ಸುಧಾರಣೆ ಮಾಡಿದ್ದಾದರೆ ಈ ದೇಶ, ನಾಡು ಸುಧಾರಣೆಯಾಗುತ್ತದೆ ಎಂದು ಹೇಳಬಹುದು ಎಂದು ಬಾದರ್ಲಿ ನುಡಿದರು.
ಬಸವರಾಜಪ್ಪ ವರದಾಪುರ ಅವರಿಂದ ಪ್ರಾರ್ಥನೆ ನೆರವೇರಿತು. ಸ್ವಾಗತವನ್ನು ಅಂಗಡಿಯ ಮಾಲೀಕರಾದ ಮಲ್ಲಿಕಾರ್ಜುನ ಅವರನಾಡು ನಿರ್ವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರೇಗೌಡ ಹರೇಟನೂರ ಪೂರೈಸಿ ಕೊಟ್ಟರು.
ವೇದಿಕೆಯಲ್ಲಿ ಮುರಿಗೆಮ್ಮ ಅಕ್ಕನವರು ಅಧ್ಯಕ್ಷತೆ ವಹಿಸಿದ್ದರು. ಬಸವ ಕೇಂದ್ರದ ಅಧ್ಯಕ್ಷರಾದ ಕರೆಗೌಡ ಪೊಲೀಸಪಾಟೀಲ ಉಪಸಿತರಿದ್ದರು.
ಕಾರ್ಯಕ್ರಮದಲ್ಲಿ ವೀರಭದ್ರಗೌಡ ಅಮರಾಪುರ, ನಾಗಭೂಷಣ ನವಲಿ, ಮಹಾದೇವಪ್ಪ ಚಿಂಚರಕಿ ಅನೇಕ ಶರಣ ಶರಣೆಯರು ಹಾಜರಿದ್ದರು.
ಇದಕ್ಕೂ ಮೊದಲು ಸಿಂಧನೂರು ನಗರದ ಹತ್ತಾರು ಅಂಗಡಿಗಳಲ್ಲಿ ಬಸವ ಪೂಜೆಯೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಆ ಎಲ್ಲಾ ಅಂಗಡಿಗಳಲ್ಲಿ ಟಿ. ಬಸವರಾಜ ಕುರುಕುಂದ ಅವರ ನೇತೃತ್ವದಲ್ಲಿ ಲಿಂಗಾಯತ ಧರ್ಮದ ನಿಜಾಚರಣೆಯ ಪ್ರಕಾರ ವಚನ ಪಠಣದೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಪೂಜಾ ಕಾರ್ಯಕ್ರಮಗಳು ನೆರವೇರಿದವು.
