ಶರಣ ಚರಿತಾಮೃತ ಯುಟ್ಯೂಬ್ ಚಾನೆಲ್ ಬಿಡುಗಡೆ
ಚಿತ್ರದುರ್ಗ :
ಸಮಾಜದಲ್ಲಿ ಈ ಮೊದಲೆಲ್ಲ ಸಂಬಂಧಿಕರು, ಸ್ನೇಹಿತರು, ಹಿರಿಯರನ್ನು ಗೌರವದಿಂದ ಕಾಣಲಾಗುತ್ತಿತ್ತು. ಆದರೆ ಇಂದಿನ ದಿನಮಾನಗಳಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ನಡವಳಿಕೆಗಳಿದ್ದು ಆಧುನಿಕ ಸೋಂಕಿನಿಂದಾಗಿ ದುಡಿದು ತಿನ್ನುವವನಿಗಿಂತ ದುಂದುವೆಚ್ಚ ಮಾಡುವವರೇ ಆದರ್ಶ ವ್ಯಕ್ತಿಗಳಾಗಿ ಕಾಣುತ್ತಿರುವುದು ವಿಪರ್ಯಾಸವೇ ಸರಿ.

ಇಂಥ ಪ್ರವೃತ್ತಿ ಸಮಾಜದ ಅಧಃಪತನಕ್ಕೆ ನಾಂದಿಯಾಗುತ್ತಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಹೇಳಿದರು.
ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ ೩೬ನೇ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨ ಜತೆ ಅಂತರ್ಜಾತಿ ವಿವಾಹ ಸೇರಿದಂತೆ ೧೩ ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದರು.
ಯಾರು ಸಮಾಜದಲ್ಲಿ ಸದ್ಗತಿ, ಸರಳತೆಯಿಂದ ನಡೆಯುತ್ತಾರೋ ಅಂಥವರನ್ನು ಅನೇಕರು
ತಿರಸ್ಕರಿಸುತ್ತಾರೆ. ಇಂದು ಟ್ರೆಂಡಿಂಗ್ಗೋಸ್ಕರ ಬಂಗಲೆ, ಅರಮನೆ ಮುಂತಾದೆಡೆ ವಿವಾಹವಾಗುತ್ತ ದುಂದುವೆಚ್ಚಕ್ಕೆ ಕಾರಣೀಭೂತರಾಗುತ್ತಿದ್ದಾರೆ. ಅದನ್ನು ತಡೆಯುವ ನಿಟ್ಟಿನಲ್ಲಿ ನೀವುಗಳು ಈ ಸಾಮೂಹಿಕ ವಿವಾಹದಲ್ಲಿ ಶರಣಸಂಸ್ಕೃತಿಯ ಪರಂಪರೆಯ ಆಧಾರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೀರಿ. ನಿಮ್ಮಲ್ಲಿ ಹಣ ಅಥವಾ ಜ್ಞಾನಭಂಡಾರವಿಲ್ಲದಿರಬಹುದು. ಆದರೆ ನಿಮ್ಮ ತಂದೆ-ತಾಯಿ, ಅತ್ತೆ-ಮಾವ, ಅಣ್ಣ-ತಮ್ಮ ಹೀಗೆ ಒಂದು ಕುಟುಂಬದಲ್ಲಿ ಸಂತೋಷಕರವಾದ ವಾತಾವರಣವನ್ನು ಸೃಷ್ಟಿಸಿಕೊಂಡು ಪ್ರೀತಿ-ವಿಶ್ವಾಸದಿಂದ ಆರೋಗ್ಯಪೂರ್ಣ ಬದುಕನ್ನು ಸಾಗಿಸಿರಿ ಎಂದು ಹಿತವಚನ ಹೇಳಿದರು.

ಶ್ರೀಮಠದಲ್ಲಿ ಕಳೆದ ೩೬ ವರ್ಷಗಳಿಂದ ವಿವಾಹ ಕಾರ್ಯ ಮಾಡುತ್ತಿದ್ದು, ವಿವಿಧ ಜಿಲ್ಲೆಗಳಿಂದ ವಧುವರರು ಬಂದು ವಿವಾಹವಾಗುತ್ತಿದ್ದಾರೆ. ನಾಡಿನ ಮಠ-ಮಾನ್ಯಗಳಲ್ಲದೆ ಇಂದು ಅನೇಕ ಸಂಘ-ಸಂಸ್ಥೆಗಳು ಈ ರೀತಿಯ ವಿವಾಹ ಕಾರ್ಯ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ಶಿರಸಂಗಿ ಶ್ರೀ ಮುರುಘರಾಜೇಂದ್ರ ಮಹಾಲಿಂಗೇಶ್ವರ ಮಠದ ಶ್ರೀ ಬಸವ ಮಹಾಂತ ಸ್ವಾಮಿಗಳು ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮದುವೆಗಾಗಿ ಕಷ್ಟಪಟ್ಟು ಸಾಲ ಮಾಡಿ ವಿವಾಹಗಳನ್ನು ಮಾಡುತ್ತಾರೆ. ಆದರೆ ಶ್ರೀಮಠವು ಇಂಥ ಸಾಲ ಶೂಲವನ್ನು ತಪ್ಪಿಸಲು ಬಡವರು ದೀನ ದಲಿತರು ಶ್ರೀಮಂತರೆನ್ನದೆ ಕಳೆದ ೩೬ ವರ್ಷಗಳಿಂದ ಸರಳವಾಗಿ ಸಾಮೂಹಿಕ ಕಲ್ಯಾಣ ಮಹೋತ್ಸವ ಮಾಡುತ್ತ ಬಂದಿರುವುದು ಹೆಮ್ಮೆಯ ಸಂಗತಿ.
ಮನೆ ಕಟ್ಟಿ ನೋಡು; ಮದುವೆ ಮಾಡಿ ನೋಡು ಎನ್ನುವ ಗಾದೆಯಿದೆ. ಇಂದು ಬರಗಾಲದ ಪರಿಸ್ಥಿತಿಯಲ್ಲೂ ಶ್ರೀಮಠವು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಸಾಮೂಹಿಕ ಕಲ್ಯಾಣ ಮಾಡುತ್ತಿದೆ. ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಬಂದಾಗಿನಿಂದ ಪ್ರೋತ್ಸಾಹಪೂರ್ವವಾಗಿ ಚಪ್ಪಾಳೆ ತಟ್ಟುವುದನ್ನು ಬಿಟ್ಟಿದ್ದಾರೆ. ಮೊಬೈಲ್ ಇಟ್ಟುಕೊಳ್ಳಬೇಕೇ ಹೊರತು ಅದರೊಳಗೆ ಇಳಿಯಬಾರದು. ಅದರ ಮೋಹದಿಂದ ದೂರ ಇರಬೇಕಾಗುತ್ತದೆ.

ವಿವಾಹಿತರು ತಂದೆ-ತಾಯಿ, ಹೆಂಡತಿ-ಮಕ್ಕಳ ಕಣ್ಣಲ್ಲಿ ನೀರು ತರಿಸಬಾರದು. ನಿಮ್ಮ ಆರೋಗ್ಯ ಚೆನ್ನಾಗಿದ್ದರೆ ಇಡೀ ಕುಟುಂಬ ಸೌಖ್ಯವಾಗಿರುತ್ತದೆ ಹಾಗಾಗಿ ದುಶ್ಚಟಗಳಿಗೆ ಒಳಗಾಗದಂತೆ ಎಚ್ಚರ ವಹಿಸಬೇಕೆಂದರು.
ಬಿಜೆಪಿ ಸಹಪ್ರಭಾರಿ ಎ. ಮುರಳಿ ಮಾತನಾಡಿ, ಹೆಣ್ಣು ಅಥವಾ ಗಂಡಾಗಲಿ ಮತ್ತೊಂದು ಮನೆಗೆ ಹೋಗುವಾಗ ಮಾನಸಿಕ ನೆಮ್ಮದಿಯೊಂದಿಗೆ ಹೋಗಬೇಕು. ಕುಟುಂಬದ ಸದಸ್ಯರಲ್ಲಿ ಉತ್ತಮ ಸಂಸ್ಕಾರ ಇದ್ದರೆ ಸಮಾಜದಲ್ಲಿ ನೆಮ್ಮದಿಯನ್ನು ಕಾಣಬಹುದು. ಅತ್ತೆ-ಸೊಸೆ ಇಬ್ಬರೂ ತಾಯಿ – ಮಗಳಂತೆ ಇರಬೇಕೆಂದರು.
ಶರಣ ಚರಿತಾಮೃತ ಯುಟ್ಯೂಬ್ ಚಾನೆಲ್ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಕೆ. ಮಂಜುನಾಥ, ಮುರುಘಾಮಠ ಎಂದರೆ ಸರ್ವಜನಾಂಗದ ಶಾಂತಿಯ ತೋಟದಂತೆ ಭಾಸವಾಗುತ್ತದೆ. ಇಂದು ಬಿಡುಗಡೆಯಾಗಿರುವ ಶರಣ ಚರಿತಾಮೃತ ಯುಟ್ಯೂಬ್ ಚಾನಲ್ನಿಂದ ಬಸವಾದಿ ಶರಣರ ವಚನಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ಧೇಶವನ್ನು ಹೊಂದಲಾಗಿದೆ.

ನಮ್ಮನ್ನು ನೋಡಿ ನಾಲ್ಕುಜನ ನಗುವಂತಾಗಬಾರದು, ನಾಲ್ಕುಜನ ನಮ್ಮಿಂದ ನಗಬೇಕು. ಆ ರೀತಿಯ ಜೀವನಶೈಲಿ ನಿಮ್ಮದಾಗಲಿ ಎಂದು ವಧು-ವರರಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಹುಣಸೇಕಟ್ಟೆ ಮಾರುತಿ ಅವರನ್ನು ಸನ್ಮಾನಿಸಲಾಯಿತು. ಧನಂಜಯ ಹಂಪಯ್ಯನಮಾಳಿಗೆ, ಪೈಲ್ವಾನ್ ತಿಪ್ಪೇಸ್ವಾಮಿ, ರೈತಸಂಘದ ಕಾಂತರಾಜ್, ಸೂರಪ್ಪ ಮೊದಲಾದವರಿದ್ದರು.
ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಗೀತೆ ಹಾಡಿದರು. ಪ್ರಾರಂಭದಲ್ಲಿ ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಚಿನ್ಮಯದೇವರು ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಪ್ರೊ. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿ, ಕೊನೆಯಲ್ಲಿ ಶರಣು ಸಮರ್ಪಿಸಿದರು.

