ಭಾಲ್ಕಿ :
ಭಾಲ್ಕಿ ತಾಲೂಕಿನ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನ ಸಮಾರಂಭ ಜರುಗಿತು.
ಸಾನಿಧ್ಯ ವಹಿಸಿದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ಅಪಾರ ಕಾಯಕನಿಷ್ಠೆ, ಸತ್ಯಶುದ್ಧ ನಡೆ ಮತ್ತು ನಿರಂತರ ಪರಿಶ್ರಮದ ಫಲವಾಗಿ ಇಂದು ತಾವೆಲ್ಲರೂ ಈ ಉನ್ನತ ಸಾಧನೆಯ ಶಿಖರವನ್ನು ತಲುಪಿರುವುದು ನಮಗೆ ಅತ್ಯಂತ ಸಂತೋಷವಾಗಿದೆ.
ವಿಶ್ವಗುರು ಬಸವಣ್ಣನವರು ಹೇಳಿದಂತೆ ‘ಸತ್ಯವ ನುಡಿಯುವುದೇ ದೇವಲೋಕ, ಮಿಥ್ಯವ ನುಡಿಯುವುದೇ ಮರ್ತ್ಯಲೋಕ’ ನೀವು ಸತ್ಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಡೆದು ಇಡೀ ಸಮಾಜಕ್ಕೆ ಮಾದರಿಯಾಗಿದ್ದೀರಿ. ನಿಮ್ಮ ಈ ಸಾಧನೆಯು ಕೇವಲ ವೈಯಕ್ತಿಕ ಯಶಸ್ಸಲ್ಲ, ಅದು ಇಡೀ ಶರಣ ಸಂಕುಲಕ್ಕೆ ಮತ್ತು ನಾಡಿಗೆ ಸಂದ ಗೌರವವಾಗಿದೆ.

‘ಇವನಾರವ ಇವನಾರವ ಎಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ’ ಎಂಬ ಬಸವಗುರುವಿನ ವಚನದಂತೆ ನಿಮ್ಮ ಕಾಯಕ ಮತ್ತು ಸೇವೆಯ ಮೂಲಕ ನೀವು ಸಮಾಜದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದೀರಿ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳ ತತ್ವದಂತೆ ನಿಮ್ಮ ಬದುಕು ಮತ್ತಷ್ಟು ಬೆಳಗಲಿ. ನಿಮ್ಮ ಜ್ಞಾನ ಮತ್ತು ಅನುಭವವು ಮುಂದಿನ ಪೀಳಿಗೆಯ ಯುವಕರಿಗೆ ದಾರಿದೀಪವಾಗಲಿ ಎಂದು
ಪೂಜ್ಯರು ಆಶೀರ್ವಚನ ನೀಡಿದರು.
ಪೂಜ್ಯ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಕುಲಸಚಿವರಾದ ಡಾ. ಸಂದೀಪ ಹರ್ಷಂಗಿ, ಉಪಕುಲಸಚಿವರಾದ ಡಾ. ರೇವಣಸಿದ್ಧಪ್ಪ ಬಿ. ಪಾಟೀಲ, ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಜಗನ್ನಾಥ ಹಲಮಡಗಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಸೋಮಶೆಟ್ಟಿ, ಶಾಂತಾಬಾಯಿ ಕಾಂಬಳೆ ಅವರಿಗೆ ಗೌರವಿಸಿ, ಸನ್ಮಾನ ಮಾಡಲಾಯಿತು.
ಪೂಜ್ಯರು ಗಡಿಭಾಗದಲ್ಲಿ ಮಾಡುತ್ತಿರುವ ಶೈಕ್ಷಣಿಕ ಸೇವೆ ಅನನ್ಯವಾಗಿದೆ. ಪೂಜ್ಯರು ಈ ಭಾಗದಲ್ಲಿ ಶಿಕ್ಷಣದ ದೊಡ್ಡ ಮರವನ್ನು ಬೆಳೆಸಿದ್ದಾರೆ. ಈ ನೆರಳಿನಲ್ಲಿ ಎಲ್ಲ ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದು
ಉಪಕುಲಸಚಿವರಾದ ಡಾ.ರೇವಣಸಿದ್ದಪ್ಪ ಪಾಟೀಲ ಅವರು ಸನ್ಮಾನಿತರ ಪರವಾಗಿ ಮಾತನಾಡಿದರು.
ಮಕ್ಕಳ ಹಕ್ಕುಗಳ ಆಯೋಗದ ನಿಕಟಪೂರ್ವ ಅಧ್ಯಕ್ಷರಾದ ಶಶಿಧರ ಕೋಸಂಬೆ ಅವರಿಂದ ಬಸವಗುರುಪೂಜೆ ನಡೆಯಿತು. ಆಡಳಿತಾಧಿಕಾರಿಗಳಾದ ಮೋಹನರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯರಾದ ಬಸವರಾಜ ಮೋಳಕೆರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳಿಗೆ ಸ್ವಾಗತಿಸಿದರು. ಎನ್.ಡಿ.ಎ. ಸಾಧಕರಾದ ಅಂಕಿತರೆಡ್ಡಿ ರವೀಂದ್ರರೆಡ್ಡಿ, ನರೇಂದ್ರರೆಡ್ಡಿ ಸತ್ಯನಾರಾಯಣರೆಡ್ಡಿ, ಸುದರ್ಶನ ಸುಧಾಕರ, ಅಭಿಷೇಕ ಹಾಗೂ ಆರ್.ಎಂ.ಓ. ಸಾಧಕ ಪ್ರಿಯಾಂಶು ರಾಜು ಅವರಿಗೆ ಪೂಜ್ಯರಿಂದ ಸನ್ಮಾನಿಸಲಾಯಿತು.

ಮದನ ಗಾಂವಕರ ಅವರು ನಿರೂಪಿಸಿದರು. ಸಿದ್ರಾಮ ಗೊಗ್ಗಾ ಶರಣು ಸಮರ್ಪಣೆ ಮಾಡಿದರು.ವಚನ ವಚನ ಗಾಯನ ಗಾನವಿ ನಟೇಶ ಅವರಿಂದ ನಡೆಯಿತು. ಸಮೀಕ್ಷಾ ಬಸವರಾಜ ಹೊಸಪೇಟ ಅವರ ವಚನ ನೃತ್ಯ ನೋಡುಗರ ಮನರಂಜಿಸಿತು.
