ಗುಳೇದಗುಡ್ಡ :
ಬಸವ ಕೇಂದ್ರದ ವತಿಯಿಂದ ಶನಿವಾರ ಉಮೇಶ ಶಿವನಗೌಡರ ಅವರ ಮನೆಯಲ್ಲಿ ಮಹಾಮನೆ ಸಾಪ್ತಾಹಿಕ ಕಾರ್ಯಕ್ರಮ ನಡೆಯಿತು.
ಅಂದು ಚಿಂತನೆಗಾಗಿ ಚಿನ್ಮಯಜ್ಞಾನಿ ಚೆನ್ನಬಸವಣ್ಣ ಅವರ ವಚನವನ್ನು ಆಯ್ದುಕೊಳ್ಳಲಾಗಿತ್ತು.
ಜಂಗಮ ಘನವೆಂಬನೆ ? ಬೇಡಿ ಕಿರಿದಾಯಿತ್ತು.
ಲಿಂಗ ಘನವೆಂಬೆನೆ ಕಲ್ಲುಕುಟಿಗರ ಕೈಯಲ್ಲಿ ಮಾಡಿಸಿಕೊಂಡು ಕಿರಿದಾಯಿತ್ತು.
ಭಕ್ತ ಘನವೆಂಬೆನೆ ? ತನುಮನ ಧನ ವಂಚನೆಯಿಂದ ಕಿರಿದಾಗಿತ್ತು.
ಇಂತೀ ತ್ರಿವಿಧ ನಿಷ್ಪತ್ತಿಯಾಗದನ್ನಕ್ಕರ
ಕೂಡಲ ಚನ್ನಸಂಗಮದೇವನೆಂತೊಲಿವನೋ?

ಈ ವಚನದ ಚಿಂತನೆಯನ್ನು ಮಾಡುತ್ತಾ ಪ್ರೊ ಶ್ರೀಕಾಂತ ಗಡೇದ ಅವರು, “ಅವಿರಳ ಜ್ಞಾನಿ ಚನ್ನಬಸವಣ್ಣನವರ ಈ ವಚನದಲ್ಲಿ ಜಂಗಮ ಲಿಂಗ ಭಕ್ತ ಎಂಬ ತ್ರಿವಿಧದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅಂದಿನ ಕಾಲದಲ್ಲಿ ಧಾರ್ಮಿಕ ಅಸಮಾನತೆಯನ್ನು ಹೋಗಲಾಡಿಸಲೆಂದೇ ಶರಣರು ಸಾಕಷ್ಟು ಶ್ರಮಿಸಿದರು. ಅದರ ಫಲ ವಚನಗಳಲ್ಲಿ ಕಾಣಿಸಿಕೊಂಡಿತು. ಅದೇ ರೀತಿ ಸರ್ವ ಸಮಾನತೆಯ ಧರ್ಮವಾದ ಲಿಂಗಾಯತ ಧರ್ಮದಲ್ಲಿನ ಮೂಲ ತತ್ವಗಳಾದ ಜಂಗಮ ಲಿಂಗ ಹಾಗೂ ಭಕ್ತರು ಹೇಗೆ ತಾತ್ವಿಕವಾಗಿ ಹಿರಿದಾಗುತ್ತಾರೆ ಮತ್ತು ಕಿರಿದಾಗುತ್ತಾರೆ” ಎಂಬುದನ್ನು ಚನ್ನಬಸವಣ್ಣನವರು ಸೂಚಿಸಿದ್ದಾರೆ.
“ಸ್ಥಾವರ ಆರಾಧನೆಗಿಂತ ಜಂಗಮ ಆರಾಧನೆ ಶ್ರೇಷ್ಠ. ವಿಶ್ವವ್ಯಾಪಿ ಚೈತನ್ಯವನ್ನು ಸ್ಥಾವರಗೊಳಿಸಲಾಗದು. ಹಾಗೆಯೇ ಮೌಢ್ಯಾಧಾರಿತ ಪೂಜೆ ಭಕ್ತನಿಗೆ ಸಲ್ಲದು. ಈ ತ್ರಿವಿಧಗಳ ಜ್ಞಾನವಾಗದಿದ್ದರೆ ಕೂಡಲ ಚನ್ನಸಂಗಮದೇವ ಒಲಿಯಲಾರ ” ಎಂದರು .
ಮಹಾಲಿಂಗಪ್ಪ ಕರನಂದಿ ಅವರು ಮಾತನಾಡುತ್ತಾ, “ಚೆನ್ನಬಸವ ತಂದೆಗಳು ಮಹಾಜ್ಞಾನಿಯಾಗಿದ್ದು, ˌಈ ವಚನದಲ್ಲಿ ಜಂಗಮ ಲಿಂಗ ಹಾಗೂ ಭಕ್ತ ಎಂಬವುಗಳು ನಡತೆಯಿಂದ ಘನವಾಗಬೇಕು. ಸ್ಥಾವರಕ್ಕಿಂತ ಜಂಗಮ ಶ್ರೇಷ್ಠ; ಜಂಗಮ ಕ್ರಿಯಾಶೀಲ ಚೈತನ್ಯವಸ್ತು ಆಗಬೇಕು. ಅದು ಬೇಡಿ ಬಿಕ್ಷುಕನಂತಾಗಬಾರದು. ಲಿಂಗವೆಂಬುವುದು ಅರುಹಿನ ಕುರುಹಾಗಬೇಕೇ ವಿನ: ಕಲ್ಲಾಗಬಾರದು. ಹಾಗೆಯೇ ಭಕ್ತನಾದವನು ಅಹಂಕಾರಿಯಾಗದೆ ಅರ್ಪಣಾ ಮನೋಭಾವ ಹೊಂದಿರಬೇಕು. ಇದಿಲ್ಲವಾದರೆ ಗುರುತ್ವ ಹೊಂದಿದವುಗಳು ಲಘುವಾಗಿ ಬಿಡುತ್ತವೆ . ಮೂಲಪ್ರಜ್ಞೆಯನ್ನು ಜಾಗೃತಗೊಳಿಸಿದರೆ ಮಾನವ ಮಹದೇವನಾಗುತ್ತಾನೆ ” ಎಂಬುದಾಗಿ ವಿವರಿಸಿದರು.

ಪ್ರೊ. ಸುರೇಶ ರಾಜನಾಳ ಅವರು ತಮ್ಮ ಅನುಭಾವವನ್ನು ಹಂಚಿಕೊಳ್ಳುತ್ತಾ, ಗುರು ಅರುಹಿನ ಮೂರ್ತಿ. ಆದರೆ ಲಿಂಗವು ಅಂಗೈಗೆ ಚುಳುಕಾಗಿ ಬಂದ ತನ್ನ ಅರವಿನ ಕುರುಹಾಗಿದೆ. ಚೈತನ್ಯಶೀಲ ಆನಂದ ಮೂರ್ತಿ ಆಗಿರುವುದೇ ಜಂಗಮ. ಈ ಮೂರೂ ವ್ಯಕ್ತಿ ವಸ್ತುಗಳ ಆಚೆ ಇರುವ ಜ್ಞಾನ ದೀವಿಗೆಗಳು. ಈ ಗುರುಲಿಂಗ ಜಂಗಮಕ್ಕೆ ಭಕ್ತನಾದವನು ತನುಮನ ಭಾವಗಳನ್ನು ನೀಡುವುದರ ಮೂಲಕ ಶುದ್ಧನಾಗಬೇಕು. ಈ ತತ್ವಗಳನ್ನು ಅರಿಯದೆ ಮಾಡಿದ ಭಕ್ತಿ ವ್ಯರ್ಥವಾಗುತ್ತದೆ .” ಎಂದರು.
ಹಿರಿಯ ಅನುಭಾವಿಗಳಾದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮಹಾದೇವಯ್ಯ ನೀಲಕಂಠಮಠ ಅವರು “ಶರಣರಲ್ಲಿಯೇ ವಯಸ್ಸಿನಲ್ಲಿ ಕಿರಿಯನೆನಿಸಿದರೂ ಜ್ಞಾನದಲ್ಲಿ ಅಪ್ರತಿಮರು ಈ ಚನ್ನಬಸವಣ್ಣನವರು. ಅಂದಿನ ಸಮಾಜದಲ್ಲಿನ ಆಚರಣೆಗಳಲ್ಲಿಯ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ˌ ಜಂಗಮ, ಲಿಂಗˌ ಭಕ್ತರ ಮೂಲ ಅರ್ಥವನ್ನು ತಿಳಿಯದೆ ಕೇವಲ ಸಾಂಪ್ರದಾಯಕವಾಗಿ ಆಚರಿಸಿದರೆ ಯಾವ ಉಪಯೋಗವೂ ಇಲ್ಲ. ಇಂದು ನಾವು ಸರಿಯಾದ ಅರ್ಥಗ್ರಹಿಸದೆ ಕೇವಲ ಹೇಗೆ ರೂಡಿ ಮಾಡಿಕೊಂಡಿದ್ದೇವೆಯೋ ಹಾಗೆಯೇ ಅಂದೂ ಸಹ ಕೆಲವರಾದರೂ ಅರ್ಥವಿಲ್ಲದ ಆಚರಣೆಯಲ್ಲಿ ತೊಡಗಿರಬಹುದು. ಅದಕ್ಕೆಂದೇ ಇಲ್ಲಿ ತ್ರಿವಿಧಗಳನ್ನು ತ್ರಿವಿಧಗಳು ನಡೆದುಕೊಳ್ಳಬೇಕಾದ ಪರಿˌ ಅವುಗಳನ್ನು ತನ್ನಲ್ಲಿ ಅಡವಳಿಸಿಕೊಳ್ಳಬೇಕಾದ ಭಕ್ತನ ರೀತಿಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.
ಪರಿಪೂರ್ಣ ಜ್ಞಾನಿಯಾಗಿˌ ಚಲಿಸುವ ಅನುಭಾವ ಮೂರ್ತಿಯಾಗಿ, ಕತ್ತಲನ್ನು ಹೊಡೆದೋಡಿಸುವ ಸೂರ್ಯನಂತೆ ಸದಾ ಸಂತೃಪ್ತ ಆಗಿರಬೇಕಾದ ಜಂಗಮನಿಗೆ ಲಿಂಗಾಯತ ಧರ್ಮದಲ್ಲಿ ಅತ್ಯಂತ ಪೂಜ್ಯನೀಯ ಸ್ಥಾನವಿದೆ. ಜಂಗಮ ಎನ್ನುವುದು ಜಾತಿಯಲ್ಲ ; ಅದೊಂದು ತತ್ವ. ಹೀಗಾಗಿ ಜಂಗಮ ವೇಷದಲ್ಲಿ ˌಬೇಡುವ ಭಿಕ್ಷುಕನಂತೆ ವರ್ತಿಸಿದರೆ ಜಂಗಮತ್ವ ಮಸಕಾಗುತ್ತದೆ. ಮೌಲ್ಯ ಕಿರಿದಾಗುತ್ತದೆ. ಶರಣರು ಜಂಗಮವನ್ನು ಕೇವಲ ವ್ಯಕ್ತಿ ದೃಷ್ಟಿಯಿಂದ ನೋಡಲಿಲ್ಲ ˌ ಇಡೀ ಸಮಾಜದೊಂದಿಗೆ ಸಮೀಕರಿಸಿದರು. ಮುಂದುವರೆದು ಚಲನಶೀಲ ವಿಶ್ವವ್ಯಾಪಕ ಚೈತನ್ಯಕ್ಕೆ ಹೋಲಿಸಿದ್ದಾರೆ. ಇದನ್ನು ಅನೇಕ ಶರಣರ ವಚನಗಳಲ್ಲಿ ಕಾಣಬಹುದಾಗಿದೆ.
ಅದೇ ರೀತಿ ಲಿಂಗವೆನ್ನುವುದು ಸೃಷ್ಟಿ ಮೂಲಕ್ಕೂ ಮೊದಲಿರುವ ಮಹಾಲಿಂಗ. ಅದು ಕಲ್ಲುಕುಟಿಗನಿಂದ ಮಾಡಿದ ಲಿಂಗವಲ್ಲ. ಈ ದಿಸೆಯಲ್ಲಿಯೇ ಸ್ಥಾವರ ಲಿಂಗಕ್ಕೂ ˌಇಷ್ಟಲಿಂಗ ರೂಪದಿಂದ ಪ್ರಕಟವಾಗುವ ಮಹಾಲಿಂಗಕ್ಕೂ ವ್ಯತ್ಯಾಸವಿದೆ. ಇಲ್ಲಿಯ ಲಿಂಗ ತನ್ನ ಅರಿವಿನ ಕುರುಹು. ಅದು ತನಗಿಂತ ಭಿನ್ನವಾದ ಸ್ಥಾವರ ಲಿಂಗವಲ್ಲ ; ಇದನ್ನು ಅರಿತು ಆಚರಿಸದಿದ್ದರೆ ಲಿಂಗವನ್ನೇ ಹೊಂದಲಾಗುವದಿಲ್ಲ. ಇನ್ನು ಭಕ್ತನಾದವನು ವಿಕಾಸ ಹೊಂದುತ್ತ ಲಿಂಗದಲ್ಲಿ ಬೆರೆಯಬೇಕು. ಇದಕ್ಕಾಗಿ ತನ್ನದೆಲ್ಲವನ್ನು ಲಿಂಗದ ಸೊಮ್ಮು ಎಂದರಿಯಬೇಕು. ತನುಮನ ಭಾವಗಳನ್ನು ಗುರುಲಿಂಗ ಜಂಗಮಕ್ಕೆ ಅರ್ಪಿಸಬೇಕು. ಮಾಡುವ ಮಾಟದಲ್ಲಿ ತಾನಿಲ್ಲದಂತೆ ಇರಬೇಕು. ಹಾಗಿಲ್ಲದೆ ಅಹಂಕಾರ ಒಡಮೂಡಿತೋ ಭಕ್ತಿಯೆಲ್ಲ ವ್ಯರ್ಥ.
ಈ ವಚನದಲ್ಲಿ ಚನ್ನಬಸವಣ್ಣನವರು ಇದನ್ನೇ ಸ್ಪಷ್ಟವಾಗಿ ತಿಳಿಸುತ್ತಾ ˌ ಜಂಗಮ ಲಿಂಗ ಹಾಗೂ ಭಕ್ತ ಎನ್ನುವ ತ್ರಿವಿಧಗಳು ನಿಜಕ್ಕೂ ಘನವಾದವುಗಳೆ! ಅದರಲ್ಲಿ ಯಾವ ಸಂಶಯವೂ ಇಲ್ಲ. ಈ ತತ್ವಗಳು ನಿಷ್ಪನ್ನವಾಗದೆ (ಒಡಮೂಡದೇ) ನಿಷ್ಪನ್ನವಾಗದೆ, ಜಂಗಮ ಜಾತಿಯಾಗಿˌ ಸಂತೃಪ್ತ ಭಾವತೊಲಗದೆ ಆಸೆಯ ಬೇಡುವ ಭಾವ ಹೊಂದಿದರೆ ಲಿಂಗದಲ್ಲಿ ಮಹಾಲಿಂಗ ಸ್ವರೂಪಿಯಾದ ತನ್ನ ಅರುಹಿನ ಕುರುಹೆಂದು ಭಾವಿಸದೆˌ ಕಲ್ಲಾಗಿ ಭಾವಿಸಿದರೆ ಅಂಗಗುಣವಳಿದು ಲಿಂಗಗುಣ ಸಂಪನ್ನನಾಗಿ ಗುರುಲಿಂಗ ಜಂಗಮವೆಂಬ ತ್ರಿವಿಧಕ್ಕೆ ತನು ಮನ ಭಾವವನ್ನರ್ಪಿಸದೆ ಅಹಂ ಭಾವ ಬೆಳೆಸಿಕೊಂಡರೆˌ ಇವು ಮೂಲತತ್ವದಿಂದ ಸಿಡಿದು ಕಿರಿದಾಗಿ ಮಹಾಲಿಂಗದಲ್ಲಿ ಸಮರಸವಾಗದೆ ಉಳಿಯುತ್ತಾರೆಂದು ಚೆನ್ನಬಸವಣ್ಣನವರು ಎಲ್ಲರನ್ನೂ ಎಚ್ಚರಿಸಿದ್ದಾರೆ.” ಎಂದು ನೀಲಕಂಠಮಠ ಅವರು ವಚನ ವಿಶ್ಲೇಷಣೆ ಮಾಡಿದರು.

ಕಾರ್ಯಕ್ರಮವು ಶ್ರೀದೇವಿ ಶೇಖಾ ಅವರಿಂದ ವಚನ ಪ್ರಾರ್ಥನೆಯ ಮೂಲಕ ಪ್ರಾರಂಭವಾಯಿತು. ಉಮೇಶ ಶಿವನಗೌಡರ ಸ್ವಾಗತಿಸಿದರು. ಮುರಿಗೆಪ್ಪ ಶೇಖಾ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಶರಣು ಸಮರ್ಪಣೆಗೆೈದರು.
ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ರಾಚಣ್ಣ ಕೆರೂರ, ಬಸವರಾಜ ಖಂಡಿ, ರಾಚಪ್ಪ ಎಂಡಿಗೇರಿ, ಸುರೇಖಾ ಗೆದ್ದಲಮರಿ, ದಾಕ್ಷಾಯಿಣಿ ಮೊದಲಾದವರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
