ಕುಷ್ಟಗಿ :
ಬಸವ ಮಂಟಪ ಕೃತಿಯಲ್ಲಿ ರವಿ ಹಂಜ್ ಅವರು ವಿಶ್ವಗುರು ಬಸವಣ್ಣನವರ ಬಗ್ಗೆ ಬರೆದಿರುವ ನಿಂದನಾತ್ಮಕ, ಅವಹೇಳನಕಾರಿ ವಿಚಾರಗಳ ವಿರುದ್ಧ, ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ಟ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಸವಪರ, ಲಿಂಗಾಯತ ಸಂಘಟನೆಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಂಜ್ ಹಾಗೂ ಭಟ್ಟರ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಭಾವಚಿತ್ರಗಳನ್ನುದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಜಗತ್ತಿಗೆ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ಕುರಿತು ವಿವಾದಾತ್ಮಕವಾಗಿ ಬರೆಯುವ ಮೂಲಕ ಪ್ರಚಾರ ಪಡೆಯುವ ಪ್ರವೃತ್ತಿ ಖಂಡನೀಯ. ರವಿ ಹಂಜ್ ಅವರ ವಿಚಾರಗಳು ಬಸವಾಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿವೆ ಎಂದರು.
ಮಾಜಿ ಸಚಿವ, ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಬಸವಣ್ಣನವರಿಗೆ ಮಾಡಿದ ಅಪಚಾರ ಮಾನವೀಯ ಮೌಲ್ಯಗಳಿಗೆ ಹಾಗೂ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ತತ್ವ ಚಿಂತನೆಗಳಿಗೆ ಮಾಡಿದ ಅವಮಾನವಾಗಿದೆ ಎಂದರು.
ಸರ್ಕಾರ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರೂ ರಾಜ್ಯದ ವಿವಿಧೆಡೆ ಇರುವ ಎಲ್ಲ ಪ್ರತಿಗಳನ್ನು ವಶಪಡಿಸಿಕೊಳ್ಳಬೇಕು. ಲೇಖಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ವಿದ್ವಾಂಸರನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಬಯ್ಯಾಪುರ ಆಗ್ರಹಿಸಿದರು.
ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಮಾತನಾಡಿ, ಬಸವಣ್ಣನವರ ಕುರಿತು ಬರೆಯುವವರು ಮೊದಲು ಅವರ ವಚನ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ಎಂದರು.
ದಾಸೋಹಕ್ಕಾಗಿ ಬಿಜ್ಜಳನ ಸಂಪತ್ತನ್ನು ಬಳಸದೆ, ದಾಸೋಹಿಗಳಿಂದ ಬಂದ ದಾಸೋಹದ ಮುಖಾಂತರ ದಾಸೋಹ ನಡೆಸುತ್ತಿದ್ದುದನ್ನು ವಚನಗಳಲ್ಲಿ ತಿಳಿಸಿದ್ದಾರೆ.

ಬಸವಣ್ಣನವರ ತತ್ವಾದರ್ಶಗಳನ್ನು ಅರಿಯದೆ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸಿ ಸೂಕ್ತ ಶಿಕ್ಷೆ ವಿಧಿಸಲಿ ಎಂದು ಶರಣಪ್ಪ ಒತ್ತಾಯಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ ಮತ್ತಿತರ ಬಸವಪರ ಸಂಘಟನೆಗಳ ಪ್ರಮುಖರಾದ ಟಿ. ಬಸವರಾಜ, ಮಹಾದೇವಪ್ಪ ಮಹಾಲಿಂಗಪೂರ, ಉಮಾಪತಿ ಅಕ್ಕಿ, ಬಸವರಾಜ ಹೂಗಾರ, ಶಿವಸಂಗಪ್ಪ ಬಿಜಕಲ್ಲ, ಲಾಡ್ಲೆಮಷಾಕ ದೋಟಿಹಾಳ, ಮುರ್ತುಜಾ ಪೇಂಟರ್, ಶಶಿಧರ ಕವಲಿ, ಶಿವಾಜಿ ಹಡಪದ, ವಿರೇಶ ಬಂಗಾರಶೆಟ್ಟರ,ರಾಮನಗೌಡ ಪಾಟೀಲ, ದೇವೆಂದ್ರಪ್ಪ ಬಳೂಟಗಿ, ಫಕೀರಪ್ಪ ಚಳಗೇರಿ, ಸಂಗನಗೌಡ ಪಾಟೀಲ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.
